ನವದೆಹಲಿ, ಫೆ 6, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಪುತ್ರ ರಾಹುಲ್ ಗಾಂಧಿ ಸಂವಿಧಾನದ ನಿಬಂಧನೆಗಳಿಗೆ ಅಗೌರವ ತೋರುತ್ತಿದ್ದಾರೆಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.‘ಕಾಂಗ್ರೆಸ್ ಪಕ್ಷ, ‘ಸಂವಿಧಾನ ಉಳಿಸಿ ಎಂಬ ಘೋಷಣೆಯನ್ನು ಪ್ರತಿದಿನ ನೂರು ಬಾರಿ ಹೇಳಬೇಕು. ಯಾಕೆಂದರೆ, ಕಾಂಗ್ರೆಸ್ ಹೊರತುಪಡಿಸಿ ಬೇರೆ ಯಾರೂ ಸಾಂವಿಧಾನಿಕ ನಿಬಂಧನೆಗಳನ್ನು ಹತ್ತಿಕ್ಕಲು ಪ್ರಯತ್ನಿಸಿರಲಿಲ್ಲ ಎಂದು ಮೋದಿ ಲೋಕಸಭೆಯಲ್ಲಿ ಹೇಳಿದ್ದಾರೆ.‘ತುರ್ತು ಸಂದರ್ಭದಲ್ಲಿ ಸಂವಿಧಾನವನ್ನು ರಕ್ಷಿಸುವ ಕೆಲಸವನ್ನು ನೆನಪಿಸಿಕೊಳ್ಳದವರು ಇದೇ ಜನರಾಗಿದ್ದಾರೆ.’ ಎಂದು ಅವರು ಹೇಳಿದರು.
‘ಭಾರತೀಯ ಸಂವಿಧಾನಕ್ಕೆ ಹೆಚ್ಚು ತಿದ್ದುಪಡಿಗಳನ್ನು ತಂದಿದ್ದು ಕಾಂಗ್ರೆಸ್ ಪಕ್ಷ. ಚುನಾಯಿತ ರಾಜ್ಯ ಸರ್ಕಾರಗಳನ್ನು ಹಲವು ಬಾರಿ ವಜಾಗೊಳಿಸಿದೆ. ಕೇಂದ್ರ ಸಚಿವ ಸಂಪುಟ ಅಂಗೀಕರಿಸಿದ ಸುಗ್ರೀವಾಜ್ಞೆಯ ನಕಲನ್ನು ಹರಿದು ಹಾಕಿದ್ದು ಇದೇ ಪಕ್ಷದವರೇ ಆಗಿದ್ದಾರೆ.’ ಎಂದು ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ರಾಹುಲ್ ಗಾಂಧಿಯವರ ನಡವಳಿಕೆಯನ್ನು ಉಲ್ಲೇಖಿಸಿ ನರೇಂದ್ರಮೋದಿ ಹೇಳಿದ್ದಾರೆ. ಯುಪಿಎ ಅಧಿಕಾರಾವಧಿಯಲ್ಲಿ ಸೋನಿಯಾ ಗಾಂಧಿಯವರಿಗೆ ನೀಡಲಾಗಿದ್ದ ಹೆಚ್ಚುವರಿ ಸಾಂವಿಧಾನಿಕ ಅಧಿಕಾರಗಳನ್ನು ಉಲ್ಲೇಖಿಸಿದ ನರೇಂದ್ರಮೋದಿ, ‘ಕಾಂಗ್ರೆಸ್ ನವರು ಭಾರತೀಯ ಸಂವಿಧಾನದ ಪಾವಿತ್ರ್ಯದ ಮಹತ್ವದ ಬಗ್ಗೆ ಪಾಠ ಕಲಿಯಬೇಕಿದೆ. ಪ್ರಧಾನ ಮಂತ್ರಿ ಮತ್ತು ಪ್ರಧಾನಮಂತ್ರಿ ಕಾರ್ಯಾಲಯಕ್ಕಿಂತ ಹೆಚ್ಚಿನ ಅಧಿಕಾರ ರಾಷ್ಟ್ರೀಯ ಸಲಹಾ ಮಂಡಳಿಗೆ ಇತ್ತು. ರಿಮೋಟ್ ಕಂಟ್ರೋಲ್ ನಿಂದ ಸರ್ಕಾರ ನಡೆಯುತ್ತಿತ್ತು.’ ಎಂದು ಹೇಳಿದರು.
ಸಂಸತ್ ನಲ್ಲಿ ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣ ಮೇಲಿನ ವಂದನಾ ನಿರ್ಣಯ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ, ‘ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸಂವಿಧಾನ ಜಾರಿಗೊಳಿಸಲು ತಡೆ ಒಡ್ಡಿದವರು ಯಾರು?’ ಎಂದು ಕಾಂಗ್ರೆಸ್ ಪಕ್ಷವನ್ನು ಪರೋಕ್ಷವಾಗಿ ಟೀಕಿಸಿದರು. ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರ ವಿರುದ್ಧವೂ ವಾಗ್ದಾಳಿ ನಡೆಸಿದ ಪ್ರಧಾನಿಯವರು, ಶಶಿ ತರೂರ್ ಅವರು ಜಮ್ಮು ಮತ್ತು ಕಾಶ್ಮೀರದ ಅಳಿಯನಂತೆ ನಡೆದುಕೊಳ್ಳುತ್ತಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಸಂವಿಧಾನವನ್ನು ಜಾರಿಗೆ ತರುವ ಮಹತ್ವವನ್ನು ತರೂರ್ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ಕಾಂಗ್ರೆಸ್ ಸಭಾ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನೂ ತರಾಟೆಗೆ ತೆಗೆದುಕೊಂಡ ಪ್ರಧಾನಿ, ಹಿರಿಯ ಸದಸ್ಯರೂ ಆದ ಚೌಧರಿ ಅವರು 'ಫಿಟ್ ಇಂಡಿಯಾ ಆಂದೋಲನ’ ದ ಬ್ರಾಂಡ್ ಅಂಬಾಸಿಡರ್ ಆಗಿರುವಂತೆ ತುಂಬಾ ಉತ್ಸಾಹ ತೋರುತ್ತಿದ್ದಾರೆ.’ ಎಂದು ವ್ಯಂಗ್ಯವಾಡಿದರು. ಮುಸ್ಲೀಂ ಸಮುದಾಯವನ್ನು ಓಲೈಸುವ ರಾಜಕಾರಣವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದ ಪ್ರಧಾನಿಯವರು, ಕಾಂಗ್ರೆಸ್ ನವರಿಗೆ ಈ ಸಮುದಾಯ ಮುಸ್ಲಿಮರಷ್ಟೇ ಆಗಿದ್ದಾರೆ. ಆದರೆ ನಮಗೆ ಈ ಜನರು ಭಾರತೀಯರಾಗಿದ್ದಾರೆ.’ ಎಂದು ಮೋದಿ ಹೇಳಿದರು. ಈ ಹಿನ್ನೆಲೆಯಲ್ಲಿ, ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಮತ್ತು ಸ್ವಾತಂತ್ರ್ಯ ಹೋರಾಟಗಾರ ಅಬ್ದುಲ್ ಘಫಾರ್ ಖಾನ್ ಅವರಂತೆಯೇ, ಬಿಜೆಪಿ ಮತ್ತು ಎನ್‌ಡಿಎ ಸರ್ಕಾರಕ್ಕೆ ಪ್ರತಿಯೊಬ್ಬರೂ ಮೊದಲು ಭಾರತೀಯರಾಗಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.