ಮಹಾಲಿಂಗಪುರ 13: ನಗರದ ಪುರಸಭೆ ವ್ಯಾಪ್ತಿಯ ಕೆಂಗೇರಿಮಡ್ಡಿಯ ಸಾಯಿ ಮಂದಿರದ ಹಿಂದುಗಡೆ ಕೆರೆ ಹತ್ತಿರ ಪುರಸಭೆಯ ಸರ್ವೇ ನಂ.29/1ರ 3 ಎಕರೆ 6 ಗುಂಟೆ ಜಾಗದಲ್ಲಿ ವಾಸಿಸುವ ಕೆಲ ನಿವಾಸಿಗಳು ದಯಾಮರಣ ಕೋರಿ ಮುಖ್ಯಮಂತ್ರಿಗೆ ಗುರುವಾರ ಪತ್ರ ಬರೆದಿದ್ದಾರೆ.
'ಈ ಖಾಲಿ ಜಾಗದಲ್ಲಿ ಗುಡಿಸಲು ಕಟ್ಟಿಕೊಂಡು ಅಂದಾಜು 20 ವರ್ಷಗಳಿಂದ ಕುಟುಂಬ ಸಮೇತ ವಾಸಿಸುತ್ತಿದ್ದೇವೆ. ಕೂಲಿ ಮಾಡಿ ಜೀವನ ನಡೆಸುತ್ತಿದ್ದೇವೆ. ಸಾಲ ಮಾಡಿ ಶೆಡ್ ನಿರ್ಮಿಸಿಕೊಂಡಿದ್ದೇವೆ. ಆದರೆ, ಈಗ ಇದ್ದಕ್ಕಿದ್ದಂತೆ ಸರ್ಕಾರದ ಜಾಗವೆಂದು ತಮ್ಮನ್ನು ತೆರವುಗೊಳಿಸಲು ಸಿದ್ಧತೆ ನಡೆದಿದೆ. ಜಾಗ ತೆರವುಗೊಳಿಸುವಂತೆ ಈಗಾಗಲೇ ಪುರಸಭೆ ಮುಖ್ಯಾಧಿಕಾರಿ ಸೂಚಿಸಿದ್ದಾರೆ' ಎಂದು ನಿವಾಸಿಗಳು ಪತ್ರದಲ್ಲಿ ತಿಳಿಸಿದ್ದಾರೆ.
ಈ ಜಾಗದಿಂದ ಯಾವಾಗ ಹೊರಹಾಕುತ್ತಾರೆ ಎಂಬ ಆತಂಕದಲ್ಲೇ ಜೀವನ ಸಾಗಿಸುತ್ತಿದ್ದೇವೆ. ಒಂದು ಹೊತ್ತಿನ ಊಟಕ್ಕೂ ಪರದಾಡುವ ತಮಗೆ ಇಲ್ಲಿಂದ ಹೊರಹಾಕಿದರೆ ಅಕ್ಷರಶಃ ಬೀದಿಪಾಲಾಗುತ್ತೇವೆ. ಸಾವೇ ಗತಿಯಾಗುತ್ತದೆ. ಆದ್ದರಿಂದ ಈ ಜಾಗದಿಂದ ತೆರವು ಮಾಡದಂತೆ ತಡೆದು ತಮ್ಮನ್ನು ಕಾಪಾಡಬೇಕು. ಇಲ್ಲದಿದ್ದರೆ ದಯಾಮರಣ ನೀಡಬೇಕು ಎಂದು ಅವರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಆರ್.ಬಿ.ಚಿಚಖಂಡಿ, ಎಫ್.ಎಂ.ನದಾಫ್, ಸಿ.ವಿ.ಹುಣಶ್ಯಾಳ, ಎಚ್.ಆರ್.ಪೆಂಡಾರಿ, ಭಾರತಿ ಜಯನ್ನವರ, ವಿಜಯ ಜಯನ್ನವರ, ಮಮತಾಜ ನದಾಫ್, ಮಲ್ಲಿಕಾರ್ಜುನ ಬೀಳಗಿ, ರೂಪಾ ಮೋಪಗಾರ, ಎಚ್.ಆರ್.ಬಂಡಿವಡ್ಡರ, ಐ.ಎಸ್.ನದಾಫ,ಲಕ್ಷ್ಮಿ ಬಡಿಗೇರ, ನೇತ್ರಾವತಿ ಬೀಳಗಿ, ಎಸ್.ಆರ್.ಕಂಪು, ಅಪಸನಾ ನದಾಫ ಇತರರು ಪತ್ರಕ್ಕೆ ಸಹಿ ಹಾಕಿದ್ದಾರೆ.