ಮೆಲ್ಬೋೋರ್ನ್, ಫೆ 1- ಪ್ರಸಕ್ತ ವರ್ಷದ ಮೊದಲ ಗ್ರ್ಯಾನ್ ಸ್ಲ್ಯಾನ್ ಟೆನಿಸ್ ಟೂರ್ನಿಯಾದ ಆಸ್ಟ್ರೇಲಿಯಾ ಓಪನ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅಮೆರಿಕದ 21ರ ಯುವ ಪ್ರತಿಭೆ ಸೋಫಿಯಾ ಕೆನಿನ್ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಇಲ್ಲಿನ ರಾಡ್ ಲೇವರ್ ಅರೆನಾದಲ್ಲಿ ಶನಿವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ 14ನೇ ಶ್ರೇಯಾಂಕಿತೆ ಸೋಫಿಯಾ ಎರಡು ಗಂಟೆಗಳ ಕಾಲ ನಡೆದ ದೀರ್ಘ ಕಾಳಗದಲ್ಲಿ ವಿಶ್ವದ ಮಾಜಿ ಅಗ್ರ ಶ್ರೇಯಾಂಕಿತೆ ಗಾರ್ಬಿನಿಯಾ ಮುಗುರುಜ ಅವರನ್ನು 4-6, 6-2, 6-2 ಅಂತರದಲ್ಲಿ ಮಣಿಸಿ ಆಸ್ಟ್ರೇಲಿಯಾ ಓಪನ್ ತನ್ನದಾಗಿಸಿಕೊಂಡರು.
ಅಮೆರಿಕದ ಯುವ ಪ್ರತಿಭೆ ಇದಕ್ಕೂ ಮುನ್ನ ಫ್ರೆೆಂಚ್ ಓಪನ್ ಟೂರ್ನಿಯಲ್ಲಿ ನಾಲ್ಕನೇ ಸುತ್ತು (2019ರಲ್ಲಿ) ಪ್ರವೇಶಿಸಿರುವುದು ಅವರ ಶ್ರೇಷ್ಠ ಪ್ರದರ್ಶನವಾಗಿತ್ತು. ಇದೀಗ ಚೊಚ್ಚಲ ಗ್ರ್ಯಾನ್ ಸ್ಲ್ಯಾಮ್ ಮುಡಿಗೇರಿಸಿಕೊಂಡಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ ಹಾಲಿ ನಂ.1 ಆಟಗಾರ್ತಿ ಆಷ್ಲೇ ಬಾರ್ಟಿಗೆ ಸೋಲುಣಿಸಿ ಪ್ರಶಸ್ತಿ ಸುತ್ತು ತಲುಪಿದ್ದರು.
ಮತ್ತೊಂದೆಡೆ 2016ರಲ್ಲಿ ಫ್ರೆೆಂಚ್ ಓಪನ್ ಮತ್ತು 2017ರಲ್ಲಿ ವಿಂಬಲ್ಡನ್ ಗೆದ್ದ ಸಾಧನೆ ಮಾಡಿರುವ 26 ವರ್ಷದ ಆಟಗಾರ್ತಿ ಮುಗುರುಜಾ, ಗಾಯದ ಸಮಸ್ಯೆೆಯಿಂದ ಚೇತರಿಸಿ ಕಮ್‌ಬ್ಯಾಕ್ ಮಾಡಿದ್ದರಲ್ಲದೇ ಹಲವು ವರ್ಷಗಳ ಬಳಿಕ ಇದೇ ಮೊದಲ ಬಾರಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಶ್ರೇಯಾಂಕ ರಹಿತರಾಗಿ ಕಣಕ್ಕಿಳಿದಿದ್ದರು. ಮುಗುರುಜಾ ಆಸ್ಟ್ರೇಲಿಯನ್ ಓಪನ್‌ನಲ್ಲಿ ಇದೇ ಮೊದಲ ಬಾರಿ ಫೈನಲ್ ತಲುಪಿದ ಸಾಧನೆ ಮಾಡಿದ್ದರು.
ಇನ್ನು ಭಾನುವಾರ ನಡೆಯಲಿರು ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ 7 ಬಾರಿಯ ಚಾಂಪಿಯನ್ ಸರ್ಬಿಯಾದ ನೊವಾಕ್ ಜೊಕೊವಿಚ್ ಮತ್ತು ಆಸ್ಟ್ರಿಯಾ ತಾರೆ ಹಾಗೂ ಚೊಚ್ಚಲ ಗ್ರ್ಯಾನ್ ಸ್ಲ್ಯಾಮ್ ಗೆಲ್ಲುವತ್ತ ಕಣ್ಣಿಟ್ಟಿರುವ ಡೊಮಿನಿಕ್ ಥೀಮ್ ಪ್ರಶಸ್ತಿಗಾಗಿ ಕಾದಾಟ ನಡೆಸಲಿದ್ದಾರೆ.