ಔರಂಗಾಬಾದ್ 14: ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಜಿಲ್ಲಾ ಪರಿಷತ್ ಶಾಲೆಯೊಂದರ ಅಡುಗೆ ಕೋಣೆಯಲ್ಲಿ 60 ಅತ್ಯಂತ ಭಯಾನಕವಾದ ವಿಷಕಾರಿ ಹಾವುಗಳು ಕಂಡುಬಂದವೆಂದು ಶಾಲಾಧಿಕಾರಿ ಇಂದು ಶನಿವಾರ ತಿಳಿಸಿದರು.
ಹಿಂಗೋಲಿ ಜಿಲ್ಲೆಯ ಪಾಂಗ್ರಾ ಬೋಖರೆ ಗ್ರಾಮದಲ್ಲಿನ ಜಿಲ್ಲಾ ಪರಿಷತ್ ಶಾಲೆಯಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ಅತ್ಯಂತ ವಿಷಕಾರಿ ಹಾವುಗಳು ಇದ್ದುದನ್ನು ಕಂಡು ಶಾಲೆಯ ವಿದ್ಯಾಥರ್ಿಗಳು, ಶಿಕ್ಷಕ ವರ್ಗದವರು ಭಯಭೀತರಾಗಿ ಕಂಗಾಲಾದರು. ಮರಾಠವಾಡ ಪ್ರಾಂತ್ಯದ ಈ ಶಾಲೆ ಇಲ್ಲಿಂದ 225 ಕಿ.ಮೀ.ದೂರದಲ್ಲಿದೆ.
ಶಾಲೆಯ ಅಡುಗೆ ಕೋಣೆಯಲ್ಲಿ ಉರುವಲುಗಳನ್ನು ಸಂಗ್ರಹಿಸಿಡಲಾಗಿದ್ದ ಮೂಲೆಯಲ್ಲಿ ಎರಡು ವಿಷಯುಕ್ತ ರಸೆಲ್ಸ್ ವೈಪರ್ ಹಾವುಗಳು ಇದ್ದುದನ್ನು ಮೊದಲಾಗಿ ಅಡುಗೆಯವಳು ಕಂಡಳು. ನಿಧಾನವಾಗಿ ಆಕೆ ದೂರದಲ್ಲಿ ನಿಂತು ಇನ್ನಷ್ಟು ಕಟ್ಟಿಗೆಗಳನ್ನು ಎಳೆದು ಸರಿಸಿದಾಗ ಇನ್ನೂ 58 ಭಯಾನಕ ವಿಷಕಾರಿ ಹಾವುಗಳಿರುವುದನ್ನು ಕಂಡು ಹೌಹಾರಿದಳು.
"ಶಾಲೆಯ ಅಡುಗೆ ಕೋಣೆಯಲ್ಲಿ ಇಷ್ಟೊಂದು ಭಯಾನಕ ವಿಷಯುಕ್ತ ಹಾವುಗಳು ಇರುವುದನ್ನು ಕಂಡು ನಾವೆಲ್ಲ ಭಯಭೀತರಾದೆವು; ಸುದ್ದಿ ತಿಳಿದು ದೊಣ್ಣೆ ಕಲ್ಲುಗಳೊಂದಿಗೆ ಸಜ್ಜಿತರಾಗಿ ಶಾಲೆಗೆ ಧಾವಿಸಿ ಬಂದ ಗ್ರಾಮಸ್ಥರು ಹಾವುಗಳನ್ನು ಕೊಲ್ಲದಂತೆ ನಾವು ತಡೆದೆವು. ಒಡನೆಯೇ ನಾವು ಹಾವು ಹಿಡಿಯುವ ವಿಕ್ಕಿ ದಲಾಲ್ ಎಂಬ ಪರಿಣತರನ್ನು ಶಾಲೆಗೆ ಕರೆಸಿಕೊಂಡೆವು; ಅವರು ಎಲ್ಲ ಹಾವುಗಳನ್ನು ಒಂದರ ಬಳಿಕ ಒಂದರಂತೆ ಹಿಡಿದು ಅವುಗಳನ್ನು ಪ್ರತೇಕ ಬಾಟಲುಗಳಲ್ಲಿ ಬಂಧಿಸಿಟ್ಟರು' ಎಂದು ಶಾಲೆಯ ಮುಖ್ಯೋಪಾದ್ಯಾಯ ತ್ರ್ಯಂಬಕ ಭೋಸ್ಲೆ ಹೇಳಿದರು.
'ವಿಕ್ಕಿ ದಲಾಲ್ ಹಿಡಿದ ಹಾವುಗಳನ್ನು ನಾವು ಅನಂತರ ಅರಣ್ಯಾಧಿಕಾರಿ ಜೆ ಡಿ ಕಚ್ವೆ ಅವರಿಗೆ ಹಸ್ತಾಂತರಿಸಿದೆವು' ಎಂದು ಶಾಲಾ ಆಡಳಿತಗಾರ ಭೀಮರಾವ್ ಬೋಖರೆ ಹೇಳಿದರು.
ಅಂತೂ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಭಯಾನಕ ವಿಷಕಾರಿ ಹಾವುಗಳನ್ನು ಕಂಡು ತಲ್ಲಣಗೊಂಡಿದ್ದ ಶಾಲಾ ಮಕ್ಕಳು, ಶಿಕ್ಷಕರು, ಹಾವುಗಳನ್ನು ಪರಿಣತ ದಲಾಲ್ ನೀಟಾಗಿ ಹಿಡಿದು ಬಂದಿಗೊಳಿಸಲಾದ ಬಳಿಕ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಇಷ್ಟಕ್ಕೂ ಇಷ್ಟೊಂದು ದೊಡ್ಡ ಸಂಖ್ಯೆಯ ಈ 60 ವಿಷಯುಕ್ತ ಹಾವುಗಳು ಬಂದದ್ದಾದರೂ ಎಲ್ಲಿಂದ, ಹೇಗೆ, ಯಾವಾಗ ಎಂಬುದು ನಿಗೂಢವಾಗಿದೆ.