ಸುಗಮ ಸಂಚಾರ ವ್ಯವಸ್ಥೆ: ಕ್ರಮಕ್ಕೆ ಆಗ್ರಹ

ಗುಳೇದಗುಡ್ಡ 02: ಗುಳೇದಗುಡ್ಡ ಹೊಸ ತಾಲೂಕಾ ಕೇಂದ್ರವನ್ನಾಗಿ ಘೋಷಣೆ ಮಾಡಿ 3 ವರ್ಷಗಳೇ ಗತಿಸಿದರೂ  ಇಲ್ಲಿ ವಿಶಾಲವಿಲ್ಲದ ಹಾಗೂ ಫುಟ್ಪಾತ್ಗಳಿಲ್ಲದ  ರಸ್ತೆಗಳು, ಕಂಡಕಂಡಲ್ಲಿ ವಾಹನ ಪಾರ್ಕಿಂಗ್, ಪಾದಚಾರಿಗಳಿಗೆ ರಸ್ತೆದಾಟುವ ಆತಂಕ, ಮಕ್ಕಳಿಗೆ ಶಾಲೆಗೆ ಹೋಗಲು ಭಯ, ಮೇಲಿಂದ ಮೇಲೆ ರಸ್ತೆ ಅಪಘಾತಗಳು ನಾಗರಿಕರನ್ನು ನಿತ್ಯ ಭಯದ ವಾತಾವರಣದಲ್ಲಿ ಚಿಂತೆಗೀಡು ಮಾಡಿದದೆ.  ಪಟ್ಟಣದಲ್ಲಿ ಪ್ರಮುಖ ಜನದಟ್ಟಣೆಯ ಸ್ಥಳಗಳಲ್ಲಿ ಫುಟ್ಪಾತ್ ಇಲ್ಲದಿರುವುದು ತಾಲೂಕಾ ಕೇಂದ್ರದ ಅಭಿವೃದ್ಧಿ ಶೂನ್ಯತೆಯನ್ನು  ಎತ್ತಿ ತೋರಿಸುತ್ತದೆ.  

     ಕೆಲವು ಕಡೆ ರಸ್ತೆಗಳೇ ಮಾಯ! ಪಟ್ಟಣದ ಬಸ್ ನಿಲ್ದಾಣದಿಂದ ಕಮತಗಿ ರಸ್ತೆ ಕಡೆ ರಸ್ತೆ ಇಕ್ಕಟ್ಟಾಗಿದ್ದೂ ಕಟ್ಟಡಗಳು ರಸ್ತೆಯ ಅಕ್ಕಪಕ್ಕ ಅತಿಕ್ರಮಣ ಮಾಡಿವೆ. ಇದು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ಇಂದಿಗೂ ಬಾರದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇಕ್ಕಟ್ಟಾದ ರಸ್ತೆಗಳಲ್ಲಿಯೇ ವಾಹನಗಳು, ಬೈಕ್, ಸೈಕಲ್, ಪಾದಚಾರಿಗಳ ಓಡಾಟ ನಡೆದಿರುತ್ತದೆ. ಇದು ಅವ್ಯವಸ್ಥೆಗೆ ಹಾಗೂ ನಿಯಮ ಬಾಹೀರತೆಗೆ ಹಿಡಿದ ಕೈಗನ್ನಡಿಯಾಗಿದೆ. ತಾಲೂಕ ಕೇಂದ್ರವಾಗಿರುವ ಗುಳೇದಗುಡ್ಡ ಪಟ್ಟಣದ ಈ ಸ್ಥಿತಿ ಚುನಾಯಿತ ಜನಪ್ರತಿನಿದಿಗಳಿಗೆ ಗಮನಕ್ಕೆ ಬರುತ್ತಿಲ್ಲವಲ್ಲವೆಂಬುದು ಆಶ್ಚರ್ಯದ ಸಂಗತಿ.

ಬೀದಿ ವ್ಯಾಪಾರ ರಸ್ತೆ ಮೇಲೆಯೇ: ಭಂಡಾರಿ ಕಾಲೇಜಿನ ಕಂಪೌಂಡ್ಗೆ ಹೊಂದಿಕೊಂಡು ಬಾಗಲಕೋಟ ಪಟ್ಟಣಕ್ಕೆ ಹೋಗುವ ಬಸ್ ನಿಲುಗಡೆ ಇದೆ. ಆದರೆ ಇಲ್ಲಿ ಎಗ್ರೈಸ್, ಚಿಕನ್  ಮಾರುವ ಒತ್ತುಗಾಡಿಗಳು ನಿತ್ಯ ಮದ್ಯಾಹ್ನದಿಂದ ಅಲ್ಲಿಗೆ ಬಂದು ರಾತ್ರಿವರೆಗೆ ಠಿಕಾಣಿ ಹಾಕುತ್ತವೆ. ಇದರಿಂದ ಆ ಸ್ಥಳದಲ್ಲಿ ಪ್ರಯಾಣಿಕರು ನಿಲ್ಲಲು ಸ್ಥಳವೇ ಇರುವುದಿಲ್ಲ. ಕುಡುಕರು ಇಂತಹ ಗಾಡಿಗಳ ಮುಂದೆ ಜಮಾಯಿಸುವುದರಿಂದ ಮಹಿಳಾ ಪ್ರಯಾಣಿಕರು ಇಲ್ಲಿ ನಿಲ್ಲಲು ಭಯಪಡುವಂತಾಗಿದೆ. ದೊಡ್ಡ ಚರಂಡಿ ಮೇಲೆ ಹಾಕಿದ ಸಿಮೆಂಟ್ ಛಾವಣಿಯ ಮೇಲೆಯೇ ಹೂವಿನ ಅಂಗಡಿ, ಬೀಡಾ ಅಂಗಡಿ ಹಾಗೂ  ಇನ್ನಿತರ ಗೂಡಂಗಡಿಗಳಿವೆ. ಪಾದಚರಿಗಳಿಗೆ ಮಾಡಬೇಕಿದ್ದ ಫುಟ್ಪಾತ್ ಇವುಗಳೇ ನುಂಗಿವೆ. ಬಸ್ ನಿಲ್ದಾಣದ ಹೊರಗಡೆ ಇಂತಹ ಅಂಗಡಿಗಳಿಂದ ರಸ್ತೆ ಇಕ್ಕಟ್ಟಾಗಿ ಪದಚರಿಗಳಿಗೆ, ಬಸ್ ಸೇರಿದಂತೆ ವಾಹನ ಸಂಚಾರಕ್ಕೆ ಅಡತಡೆಯಾದರೂ ಅಧಿಕಾರಿಗಳು ಮಾತ್ರ ನೋಡಿಯೂ ನೋಡದಂತಿದ್ದಾರೆ.

ಬೀದಿ ವ್ಯಾಪಾರಿಗಳಿಗೆ ಬೇಕು ಪರ್ಯಾಯ ವ್ಯವಸ್ಥೆ: ರಸ್ತೆ ಪಕ್ಕದಲ್ಲಿ ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ ರಸ್ತೆ ಪಕ್ಕದಲ್ಲಿ ಸರಿಯಾದ ಸ್ಥಳದ ವ್ಯವಸ್ಥೆ ಇಲ್ಲದ ಕಾರಣ ರಸ್ತೆ ಮೇಲೆಯೇ ವ್ಯಾಪಾರ ಮಾಡುತ್ತಿರುವುದರಿಂದ ವಾಹನ ಸಂಚಾರಕ್ಕೆ ಹಾಗೂ ಪಾದಚಾರಿಗಳಿಗೆ ಸಾಕಷ್ಟು ಅನಾನುಕೂಲವಾಗುತ್ತಿದ್ದರೂ ಪುರಸಭೆ ಮಾತ್ರ ಇದಕ್ಕೆ ಪಯರ್ಾಯ ವ್ಯವಸ್ಥೆ ಕಲ್ಪಿಸುತ್ತಿಲ್ಲವೆಂದು ಬೀದಿ ವ್ಯಾಪಾರಿಗಳು ಹೇಳುತ್ತಾರೆ. ರಸ್ತೆಗಳನ್ನು ಅಗಲೀಕರಣ ಮಾಡದಿರುವುದೂ ಇದಕ್ಕೆ ಕಾರಣವೆನ್ನುತ್ತಾರೆ ಸಾರ್ವಜನಿಕರು.

ಟಂಟಂ ನಿಲುಗಡೆಗೆ ಇಲ್ಲ ಸ್ಥಳ: ಪಟ್ಟಣದ ಕೆಲ ಪ್ರಮುಖ ಸ್ಥಳಗಳಲ್ಲಿ ಟಂಟಂಗಳ ನಿಲುಗಡೆಗೆ ಪುರಸಭೆ ಸ್ಥಳ ಗುತರ್ಿಸಿ ಕೋಡಬೇಕು. ಆದರೆ ಸದ್ಯ ನೀಡಿರುವ ಕಮತಗಿ ಸರ್ಕಲ್ ಹತ್ತಿರದ ಸ್ಥಳ ಬಹಳ ಇಕ್ಕಟ್ಟಾಗಿದೆ. ಇದರಿಂದ ಜನರ ಸಂಚಾರಕ್ಕೆ, ವಾಹನ ನಿಲುಗಡೆಗೆ ಸಾಕಷ್ಟು ಅನಾನೂಕೂಲವಾಗುತ್ತಿದೆ. ಶಾಲಾ ಮಕ್ಕಳು, ವೃದ್ಧರು ರಸ್ತೆ ದಾಟುವುದು ಅಪಾಯದ ಸೂಚನೆಯೇ ಹೌದು. ಕಾನೂನುಬಾಹೀರವಾದ ಬೈಕ್ಗಳ ಅತೀವೇಗದ ಓಡಾಟವೂ ಪ್ರಮುಖ ರಸ್ತೆಗಳ ಮೇಲೆ ಭಯ ಹುಟ್ಟಿಸುತ್ತದೆ. ಅಲ್ಲದೇ ನಿತ್ಯ ಸಣ್ಣಪುಟ್ಟ ಅಪಘಾತಗಲೂ ಕಂಡು ಬರುತ್ತಿವೆ.   

ವೇಗ ತಡೆಗಳಿಲ್ಲದ ರಸ್ತೆಗಳು:  ಪ್ರಮುಖ ಸಾರಿಗೆ ರಸ್ತೆಯಲ್ಲದ 6 ನೇ ವಾರ್ಡನ ಬಸವೇಶ್ವರ ನಗರದ ರಸ್ತೆಗೆ ಹತ್ತಾರು ಕಡೆ ವೇಗ ತಡೆಗಳನ್ನು ಹಾಕಿದ ಅಧಿಕಾರಿಗಳು ಪ್ರಮುಖ ರಸ್ತೆ ಕಡೆಗೆ ಯಾಕೆ ಅಧಿಕಾರಿಗಳು ಗಮನಕೊಟ್ಟಿಲ್ಲ ಎನ್ನುತ್ತಾರೆ ಸಾರ್ವಜನಿಕರು. ಪಟ್ಟಣದಲ್ಲಿ ಹಾಯ್ದು ಹೋಗಿರುವ ಹುಬ್ಬಳ್ಳಿ-ಇಲಕಲ್ ಪ್ರಮುಖ ರಸ್ತೆಗೆ ಯಾವ ಕಡೆಯೂ  ವೇಗ ತಡೆ ನಿರ್ಮಿಸಿಲ್ಲ. ಹೀಗಾಗಿ ಸಾರಿಗೆ ಬಸ್ಗಳ ವೇಗದ ಬದಲಾಗಿ ದ್ವಿ ಚಕ್ರವಾಹನ, ಟಂಟಂ, ಟ್ರ್ಯಾಕ್ಟರ್ ಗಳ ವೇಗದ ಭರಾಟೆಯೇ ಹೆಚ್ಚಾಗಿರುತ್ತದೆ. ಇದರಿಂದ ರಸ್ತೆ ಅಪಘಾತಗಳು ನಿತ್ಯ ಕಂಡು ಬರುತ್ತಿವೆ. ಪವಾರ ಕ್ರಾಸ್ ದಿಂದ ಪಟ್ಟಣದಲ್ಲಿ ಹಾಯ್ದು ಹೋಗುವ ರಸ್ತಗಳಿಗೆ ವೇಗ ತಡೆಗಳಿಲ್ಲ. ಇಲ್ಲಿ ರಸ್ತೆಗಳು ಹಲವು ಕಡೆ ಸಾಕಷ್ಟು ಇಕ್ಕಟ್ಟಾಗಿದ್ದರಿಂದ ಪಾದಚಾರಿಗಳಿಗೆ ಸಂಚಾರಕ್ಕೆ ನಿತ್ಯ ಸಂಚಕಾರ ಕಾದಿದೆ.

ಫುಟ್ಪಾತ್ ನಿರ್ಮಿಸಲು ಆಗ್ರಹ: ಮತಕ್ಷೇತ್ರದ ಶಾಸಕರಾದ ಮಾಜಿ ಸಿಎಂ ಸಿದ್ದರಾಮಯ್ಯನವರ ಹೈವೋಲ್ಟ ಕ್ರೇತ್ರವೆಂದೇ ಪರಿಗಣಿತವಾದ ಬಾದಾಮಿ ಮತಕ್ಷೇತ್ರದಲ್ಲಿ ಬಾದಾಮಿ ಹಾಗೂ ಕೆರೂರ ಪಟ್ಟಣಗಳು ಅಭಿವೃದ್ಧಿ ಕಾಣುತ್ತಿದ್ದರೂ ಗುಳೇದಗುಡ್ಡ ಪಟ್ಟಣ ಮಾತ್ರ ಅಭಿವೃದ್ಧಿಯಲ್ಲಿ ಹಿನ್ನೆಡೆಯಾಗಿದೆ. ಇದನ್ನು ಶಾಸಕರು ಆದಷ್ಟು ಬೇಗ ಸರಿಪಡಿಸಿ ಪಟ್ಟಣದಲ್ಲಿ ಹಾಯ್ದು ಹೋಗಲಿರುವ ಸಂಕೇಶ್ವರ-ಸಂಗಮ ರಸ್ತೆ ಪಕ್ಕ ಫುಟ್ಪಾತ್ ನಿರ್ಮಿಸಬೇಕು  ಹಾಗೂ  ಪಟ್ಟಣದ ಜನನಿಬಿಡ ಸ್ಥಳಗಳಲ್ಲಿ ಪಾದಚಾರಿಗಳಿಗೆ ಫುಟ್ಪಾತ್ ನಿರ್ಮಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.