ಹೆಡಿಂಗ್ಲಿ, ಆ 20, ಭರ್ಜರಿ ಲಯದಲ್ಲಿರುವ ಹಾಗೂ ನೂತನವಾಗಿ ಬಿಡುಗಡೆಗೊಂಡ ಟೆಸ್ಟ್ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿರುವ ಆಸ್ಟ್ರೇಲಿಯಾದ ಅನುಭವಿ ಸ್ಟೀವನ್ ಸ್ಮಿತ್, ಲಾಡ್ರ್ಸ ಟೆಸ್ಟ್ ವೇಳೆ ಗಾಯಕ್ಕೆ ತುತ್ತಾಗಿದ್ದರಿಂದ ಮೂರನೇ ಟೆಸ್ಟ್ ನಿಂದ ಹೊರ ನಡೆದಿದ್ದಾರೆ.
ಆ್ಯಷಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯದ ನಾಲ್ಕನೇ ದಿನ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಅವರು ಎಸೆದ 148.7 ಕಿ.ಮಿ ವೇಗದ ಶಾರ್ಟ್ ಪಿಚ್ ಎಸೆತ, ಅವರ ಕುತ್ತಿಗೆಗೆ ಬಡಿದು ಪೆಟ್ಟಾಗಿತ್ತು. ಆಗ ಸ್ಮಿತ್ ಮೈದಾನದಲ್ಲಿ ಬಿದ್ದು ಬಿಟ್ಟರು. ಅಲ್ಲದೆ ಅವರನ್ನು ಅಂಗಳದಿಂದ ಹೊರಗೆ ಕರೆದುಕೊಂಡು ಹೋಗಲಾಯಿತು. ಆಸ್ಟ್ರೇಲಿಯಾ ಎರಡನೇ ಟೆಸ್ಟ್ ನಲ್ಲಿ ಡ್ರಾ ಸಾಧಿಸುವಲ್ಲಿ ಸಫಲವಾಗಿದ್ದು, ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ. ಮೂರನೇ ಟೆಸ್ಟ್ ಪಂದ್ಯ ಗುರುವಾರದಿಂದ ಆರಂಭವಾಗಲಿದೆ.
ಸ್ಮಿತ್ ಅವರಿಗೆ ಗಾಯ ಜೊತೆ ತಲೆ ನೋವು, ತಲೆ ತಿರುಗಿದಂತೆ ಆಗುವುದು, ಸುಸ್ತು ಸಹ ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಿಂದ ಕೈ ಬಿಡಲಾಗಿತ್ತು. ಅಲ್ಲದೆ ಇವರನ್ನು ಸ್ಕ್ಯಾನಿಂಗ್ ಗೆ ಒಳಪಡಿಸಲಾಗಿತ್ತು. ಇವರ ಗಾಯ ಮೂರು ದಿನಗಳಲ್ಲಿ ಗುಣವಾಗದ ಹಿನ್ನೆಲೆ ಮಂಗಳವಾರ ಮೂರನೇ ಟೆಸ್ಟ್ ನಲ್ಲಿ ಸ್ಮಿತ್ ಆಡುವುದಿಲ್ಲ ಎಂದು ತಿಳಿಸಲಾಯಿತು.
ಗುರುವಾರದಿಂದ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಸ್ಮಿತ್ ಹೊರ ನಡೆದಿದ್ದರಿಂದ ಇವರ ಸ್ಥಾನವನ್ನು ಲಾಬುಶೆನ್ ತುಂಬಲಿದ್ದಾರೆ. ಸ್ಮಿತ್ ಅವರು ಪಿಚ್ ಪರಿಶೀಲಿಸಿದ ಬಳಿಕ ಅಭ್ಯಾಸ ನಡೆಸಿ, ಕೋಚ್ ಜಸ್ಟಿನ್ ಲ್ಯಾಂಗರ್ ಅವರೊಂದಿಗೆ ಮಾತುಕತೆ ನಡೆಸಿ ಹೊರ ನಡೆದರು. ಹೊರ ಬಂದ ಬಳಿಕ ತಂಡದ ವೈದ್ಯರೊಂದಿಗೆ ಮಾತನಾಡಿದರು. ಕೊನೆಗೂ ಆಸ್ಟ್ರೇಲಿಯಾ ಸ್ಮಿತ್ ಗಾಯ ಗುಣಮುಖವಾಗಿಲ್ಲ ಎಂದು ತಿಳಿಸಿದೆ.