ಕ್ಯಾಮರೂನ್ ಸಮುದ್ರದಲ್ಲಿ ಸೇನೆಯ ದಾಳಿಗೆ ಆರು ಕಡಲ್ಗಳ್ಳರು ಬಲಿ

ಯೌಂಡೆ, ಜೂನ್ 14, ದಕ್ಷಿಣ ಕ್ಯಾಮರೂನ್ ಪಟ್ಟಣವಾದ ಇಡಬಾಟೊಗೆ ಕೆಲ ಮೈಲುಗಳ ದೂರದ ಸಮುದ್ರದಲ್ಲಿ ಸೇನೆ ಮತ್ತು ನೌಕಾಪಡೆ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಆರು ಮಂದಿ ಶಸ್ತ್ರಸಜ್ಜಿತ ಕಡಲ್ಗಳ್ಳರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಕ್ಯಾಮರೂನ್ ಸೇನೆ ಶನಿವಾರ ಸಂಜೆ ತಿಳಿಸಿದೆ.ಅಟ್ಲಾಂಟಿಕ್ ಮಹಾಸಾಗರದ ಈಶಾನ್ಯ ಭಾಗದಲ್ಲಿರುವ ಉಷ್ಣವಲಯದ ಗಿನಿಯಾ ಕೊಲ್ಲಿಯಲ್ಲಿ ಶುಕ್ರವಾರ ರಾತ್ರಿ ಕಡಲ್ಗಳ್ಳರು ಹಾಯಿ ದೋಣಿಯಲ್ಲಿದ್ದಾಗ ಗಸ್ತು ತಿರುಗುತ್ತಿದ್ದ ಕ್ಯಾಮರೂನಿಯನ್ ಪಡೆಗಳು ಅವರ ಮೇಲೆ ಗುಂಡು ಹಾರಿಸಿವೆ, ಹತರಾದ ಕಡಲ್ಗಳ್ಳರ ಬಳಿ ಇದ್ದ ನೈಜೀರಿಯಾ ಮತ್ತು ಕ್ಯಾಮರೂನ್‍ ಕರೆನ್ಸಿಗಳು, ಶಸ್ತ್ರಾಸ್ತ್ರಗಳು, ಮಾದಕವಸ್ತು ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನೆ ತಿಳಿಸಿದೆ.ಗಿನಿಯಾ ಕೊಲ್ಲಿಯಲ್ಲಿ ಹೆಚ್ಚುತ್ತಿರುವ ಕಡಲ್ಗಳ್ಳತನದ ವಿರುದ್ಧದ ಹೋರಾಟದಲ್ಲಿ ಶನಿವಾರ ನಡೆದ ಕಡಲ್ಗಳ್ಳರ ಹತ್ಯೆಯು ಮಹತ್ವದ ಹೆಜ್ಜೆಯಾಗಿದೆ ಎಂದು ಸೇನೆ ಹೇಳಿದೆ.ಸರಕುಗಳನ್ನು ಖರೀದಿಸಲು ನೈಜೀರಿಯಾಕ್ಕೆ ಸಾಗರದಲ್ಲಿ  ಪ್ರಯಾಣಿಸುವ ಕ್ಯಾಮರೂನ್‍ ಉದ್ಯಮಿಗಳು ಆಗಿಂದಾಗ್ಗೆ ಕಡಲ್ಗಳ್ಳರ ದಾಳಿ ತುತ್ತಾಗುತ್ತಿದ್ದಾರೆ ಎಂದು ಭದ್ರತಾ ವರದಿಗಳು ತಿಳಿಸಿವೆ.