ಇಂಫಾಲ್, ನವೆಂಬರ್ 5: ಇಲ್ಲಿನ ತಂಗಲ್ ಬಜಾರ್ನಲ್ಲಿ ಇಂದು ಪ್ರಬಲ ಬಾಂಬ್ ಸ್ಫೋಟಗೊಂಡು ಐವರು ಪೊಲೀಸರು ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ. ಸ್ಫೋಟ ಸಂಭವಿಸಿದಾಗ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ ಪೊಲೀಸ್ ತಂಡ ಇಲ್ಲಿನ ಜನಜಂಗುಳಿಯ ಮಾರುಕಟ್ಟೆ ಪ್ರದೇಶದಲ್ಲಿತ್ತು. ಗಾಯಾಳುಗಳನ್ನು ಇಲ್ಲಿನ ರಾಜ್ ಮೆಡಿಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರದೇಶದಲ್ಲಿ ನಿಲ್ಲಿಸಿದ್ದ ಹಲವು ವಾಹನಗಳಿಗೆ ಸಂಪೂರ್ಣ ಹಾನಿಯಾಗಿದೆ. ಪೊಲೀಸರು ತಕ್ಷಣ ಪ್ರದೇಶವನ್ನು ಸುತ್ತುವರಿದು ಆರೋಪಿಗಳಿಗಾಗಿ ಶೋಧ ಕಾರ್ಯ ಕೈಗೊಂಡಿದ್ದರೆ. ಸ್ಫೋಟಕ್ಕೆ ಯಾರು ಕಾರಣ ಎಂದು ಇನ್ನೂ ತಿಳಿದುಬಂದಿಲ್ಲ. ಐಇಡಿ ಇಟ್ಟು ಈ ಸ್ಫೋಟ ನಡೆಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಗಾಯಾಳುಗಳನ್ನು ಲಂಗ್ತಾಬಲ್ನ ಲಮಾಬಾಮ್ ಅಮರ್ಜಿತ್ (ಹೆಚ್ಚುವರಿ ಎಸ್ಪಿ ), ತೊಂಗಮ್ ದೇವನ್, (ಸಿಡಿಒ ಎಸ್ಐ), ನಿಂಗ್ಥೌಜಮ್ ಇಬೋಟೊಂಬಾ ಸಿಂಗ್ (ಸಿಟಿ ಪಿಎಸ್ನ ಎಎಸ್ಐ), ಸಿಂಗ್ಜಮೈ ಚಿಂಗಮಾಥಕ್ನ ಖುರೈಜಮ್ ಬೋನಿ (ಸಿಡಿಒ ಎಎಸ್ಐ), ಥೌಬಲ್ ನಿಂಗೋಂಬಮ್ನ ಹುಯಿರೊಂಗ್ಬಾಮ್ ಬೊಬಾಯ್ ಮತ್ತು ನಾಗರಿಕ ಕೃಷ್ಣ ಗುರುಂಗ್ ಗಾಯಗೊಂಡವರು ಎಂದು ಗುರುತಿಸಲಾಗಿದೆ. ಇದಕ್ಕೂ ಮುನ್ನ ಭಾನುವಾರ ಮಧ್ಯರಾತ್ರಿ ಇಂಫಾಲ್ ಪೂರ್ವದ ತೆಲಿಪತಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೂವರು ಬಿಎಸ್ಎಫ್ ಯೋಧರು ಗಾಯಗೊಂಡಿದ್ದರು.