ಹಾಸನ, ಮೇ 17, ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿದ್ದು, ಇಂದು ಒಂದೇ ದಿನ ಆರು ಹೊಸ ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.ಸೋಂಕಿತರಲ್ಲರೂ ಮಹಾರಾಷ್ಟ್ರದಿಂದ ವಿವಿಧ ದಿನಗಳಲ್ಲಿ ಜಿಲ್ಲೆಗೆ ಪ್ರಯಾಣ ಮಾಡಿದವರಾಗಿದ್ದು ಅವರೆಲ್ಲರನ್ನೂ ಗಡಿ ಭಾಗದಲ್ಲಿಗೆ ಪತ್ತೆ ಮಾಡಿ ಕ್ವಾರಂಟೈನ್ ಮಾಡಲಾಗಿತ್ತು ಸೇವಾ ಸಿಂಧು ಆ್ಯಪ್ ಮೂಲಕ ಅರ್ಜಿ ಸಲ್ಲಿಸಿ ಮಹಾರಾಷ್ಟ್ರದಿಂದ ಹಾಸನಕ್ಕೆ ಬರುತ್ತಿರುವವರಲ್ಲಿ ಸೋಂಕು ಪತ್ತೆ ಹೆಚ್ಚಾಗಿದೆ.ನಿನ್ನೆ ಪರೀಕ್ಷಾ ವರದಿ ಬಾಕಿ ಇದ್ದ 31 ಜನರಲ್ಲಿ ಆರು ಮಂದಿಗೆ ಸೋಂಕು ಧೃಡಪಟ್ಟಿದೆ, ಇನ್ನುಳಿದ 25 ಮಂದಿಯ ವರದಿಗಾಗಿ ಕಾಯಲಾಗುತ್ತಿದೆ
ಇಂದು ಪತ್ತೆಯಾದ ಪಾಸಿಟಿವ್ ಪ್ರಕರಣಗಳಲ್ಲಿ ಇಬ್ಬರು ಚನ್ನರಾಯಪಟ್ಟಣದ ಮೂಲದವರಾದರೆ ಮೂವರು ಆಲೂರು ತಾಲ್ಲೂಕು, ಹಾಗೂ ಒಬ್ಬರು ಹೊಳೆನರಸಿಪುರ ತಾಲೂಕಿಗೆ ಸೇರಿದವರಾಗಿದ್ದಾರೆ .ಆಲೂರು ತಾಲೂಕಿನಲ್ಲಿ ಒಂದೇ ಕುಟುಂಬದ ಗಂಡ ಹೆಂಡತಿ ಮತ್ತು ಮಗುವಿನಲ್ಲಿ ಸೋಂಕು ಪತ್ತೆಯಾಗಿದ್ದು ಅವರೆಲ್ಲರೂ ತರಕಾರಿ ವಾಹನದಲ್ಲಿ ಜಿಲ್ಲೆಗೆ ಬಂದಿದ್ದರು.
ಹಾಸನಕ್ಕೆ ಬಂದಿರುವ ಟಿಟಿ ವಾಹನದಲ್ಲಿ ಬಂದಿದ್ದ 15 ಮಂದಿಯಲ್ಲಿ ಇಬ್ಬರಲ್ಲಿ ಸೋಂಕು ಪತ್ತೆಯಾದರೆ ಇನ್ನೊಂದು ವಾಹನದಲ್ಲಿ ಬಂದಿರುವ 13 ಮಂದಿಯಲ್ಲಿ ಇಬ್ಬರಿಗೆ ಪಾಸಿಟಿವ್ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ವಿವರ ನೀಡಿದ್ದಾರೆಜಿಲ್ಲೆಯಲ್ಲಿ ಚನ್ನರಾಯಪಟ್ಟಣ ತಾಲ್ಲೂಕಿಗೆ ಅಗಮಿಸಿದವರಲ್ಲಿ ಹೆಚ್ಚು ಸೋಂಕು ಪ್ರಕರಣಗಳು ಬೆಳಕಿಗೆ ಬಂದಿದೆ, ಒಟ್ಟಾರೆ ಜಿಲ್ಲೆಯಲ್ಲಿ ಈ ವರಗೆ 26 ಪ್ರಕರಣಗಳು ದಾಖಲಾಗಿವೆ.ಎಲ್ಲಾ ಸೋಂಕಿತರನ್ನು ಹಾಸನದ ಕೋವಿಡ್ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಶಂಕಿತರನ್ನು ಆಯಾಯ ತಾಲ್ಲೂಕಿನ ಮುರಾರ್ಜಿ ದೇಸಾಯಿ ವಸತಿ ಶಾಲೆ, ವಿದ್ಯಾರ್ಥಿ ನಿಲಯಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ಎಲ್ಲರೂ ನೇರವಾಗಿ ಆಸ್ಪತ್ರೆ, ಕ್ವಾರಂಟೈನ್ ಕೇಂದ್ರಗಳಿಗೆ ಬಂದಿದ್ದರಿಂದ ಜಿಲ್ಲೆಯಲ್ಲಿ ಸೋಂಕು ಹರಡಿರುವ ಯಾವುದೇ ಆತಂಕವಿಲ್ಲ ಎಂದು ಜಿಲ್ಲಾಧಿಕಾರಿ ಅರ್ ಗಿರೀಶ್ ತಿಳಿಸಿದ್ದಾರೆ.