ನವದೆಹಲಿ, ನವೆಂಬರ್ 15 : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಕರ್ನಾಟಕದ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರಿಗೆ ನೀಡಿದ್ದ ಜಾಮೀನು ರದ್ದುಗೊಳಿಸುವಂತೆ ಕೋರಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಇದರಿಂದ ಕಾನೂನು ಹೋರಾಟದಲ್ಲಿ ಶಿವಕುಮಾರ್ ಅವರಿಗೆ ಜಯ ದೊರಕಿದಂತಾಗಿದೆ.
ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠ ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ಸಲ್ಲಿಸಲಾಗಿದ್ದ ಇಡಿ ಮನವಿಯನ್ನು ವಜಾ ಮಾಡಿ, ಆದಾಯ ತೆರಿಗೆ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದೆ .
ದೆಹಲಿ ಹೈಕೋರ್ಟ್ 2019 ರ ಅಕ್ಟೋಬರ್ 23 ರಂದು ಶಿವಕುಮಾರ್ ಅವರಿಗೆ ಜಾಮೀನು ನೀಡಿತ್ತು, ಇದನ್ನು ಪ್ರಶ್ನೆ ಮಾಡಿ , ಇಡಿ ಜಾಮೀನು ರದ್ದುಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು . ಈ ಪ್ರಕರಣದಲ್ಲಿಸಾಕ್ಷಿ, ಪುರಾವೆಗಳನ್ನು ಕಾಂಗ್ರೆಸ್ ನಾಯಕರು ಹಾಳುಮಾಡಬಹುದು ಎಂಬ ಶಂಕೆಯನ್ನು ಜಾರಿ ನಿರ್ದೇಶನಾಯಲದ ಅಧಿಕಾರಿಗಳು ವ್ಯಕ್ತಪಡಿಸಿದ್ದರು.
ಅಕ್ರಮ ಹಣಕಾಸು ವರ್ಗಾವಣೆ ತಡೆ ಕಾಯ್ದೆಯನ್ವಯ ಶಿವಕುಮಾರ್ ಮತ್ತು ನವದೆಹಲಿಯ ಕರ್ನಾಟಕ ಭವನದ ಉದ್ಯೋಗಿ ಹನುಮಂತಯ್ಯ ವಿರುದ್ಧ ಪ್ರಕರಣ ದಾಖಸಲಾಗಿತ್ತು.