ಬೈಲಹೊಂಗಲ 09: ಗುರುವನ್ನು ನಂಬಿ ಬರುವ ಭಕ್ತರು ಸುಖ ಶಾಂತಿ ಸಂತಪೃತ್ತಿಯಿಂದ ಬಾಳುವಂತೆ ಆಶೀರ್ವದಿಸಲು ಗುರುವಿನಲ್ಲಿ ತಪಶ್ಯಕ್ತಿ ಪೂಜಾ ಶಕ್ತಿ ಇರಬೇಕಾದ ಅವಶ್ಯಕತೆ ಇದೆ ಎಂದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪೀಠದ ಜಗದ್ಗರು ಡಾ.ವೀರಸೋಮೆಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಅವರು ತಾಲೂಕಿನ ದೊಡವಾಡ ಗ್ರಾಮದ ಲೋಕ ಕಲ್ಯಾಣಾರ್ಥವಾಗಿ ಹಿರೇಮಠದ ಶ್ರೀ ಜಡಿಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಜಿಯವರು ನಿರಂತರ 96 ದಿನಗಳ ಪರ್ಯಂತ ಕೈಗೊಂಡಿರುವ ಮೌನ ತಪೋನುಷ್ಠಾನ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ನಡೆದ ಧರ್ಮ ಸಭೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿ, ಇಂದಿನ ದಿನಮಾನದಲ್ಲಿ ಸಮಾಜದಲ್ಲಿ ಜಾತಿ ಜಾತಿಗಳ ಮಧ್ಯೆ ವ್ಯಕ್ತಿ ವ್ಯಕ್ತಿಗಳ ಮಧ್ಯೆ ಸಂಘರ್ಷ ಏರ್ಪಟ್ಟು ಸಮಾಜದ ಸ್ವಾಸ್ಥ್ಯ ಕೆಡಬಾರದೆಂಬ ಸದುದ್ದೇಶ ಹೊಂದಿ ಸ್ವಾಮಿಜಿಗಳಾದವರು ಪೂಜಾನುಷ್ಠಾನದಂತ ವೃತಾಚರಣೆ ಕೈಗೊಳ್ಳುವುದು ಶ್ರೇಷ್ಠ ಕಾರ್ಯ.
ಜನರಿಗೆ ಒಳಿತುಂಟಾಗಬೇಕು ಲೋಕಕಲ್ಯಾಣವಾಗಬೇಕು ಎಂಬ ಸಂಕಲ್ಪದಿಂದ ಕಠಿಣ ಮೌನ ತಪೋನುಷ್ಠಾನ ಪೂಜೆ ಕೈಗೊಂಡಿರುವ ದೊಡವಾಡ ಹಿರೇಮಠದ ಪಟ್ಟಾಧ್ಯಕ್ಷರಾದ ಜಡಿಸಿದ್ದೇಶ್ವರ ಶ್ರೀಗಳು ಕಾರ್ಯ ಶ್ಲಾಘನೀಯ ಎಂದರು.
ಮುಂಬರುವ ಜನೇವರಿ 3 ರಂದು ಮೌನ ತಪೋನುಷ್ಠಾನ ಮಂಗಲ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂಬ ಸದಿಚ್ಚೆ ಜಗದ್ಗುರುಗಳಿಗಿದ್ದರೂ ಕೂಡ ತೆಲಂಗಾಣದ ಕೊಲ್ಲಿಪಾಕಿಯಲ್ಲಿ ಜಗದ್ಗುರುಗಳ ಜನ್ಮ ದಿನಾಚರಣೆ ನಿಮಿತ್ತ ನಾನಾ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಾದ ಕಾರಣದಿಂದ ತಾವು ಬರಲಾಗುತ್ತಿಲ್ಲ. ಆದ್ದರಿಂದ ಜ.3 ರಂದು ನಡೆಯುವ ಅನುಷ್ಠಾನ ಮಂಗಲದ ಸಮಾರಂಭವನ್ನು ಈ ಭಾಗದ ಅಪಾರ ಭಕ್ತರು ಸೇರಿ ಯಶಸ್ವಿಗೊಳಿಸಬೇಕು ಎಂದರು.
ಸುಳ್ಳ ಪಂಚಗ್ರಹ ಹಿರೇಮಠದ ಶ್ರೀ ಶಿವಸಿದ್ದರಾಮೇಶ್ವರ ಶ್ರೀಗಳು, ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿದರು.
ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ವೀರರಾಣಿ ಬೆಳವಡಿ ಮಲ್ಲಮ್ಮ ಸೌಹಾರ್ಧ ಸಹಕಾರಿ ಅಧ್ಯಕ್ಷ ಡಾ.ಆರ್.ಬಿ.ಪಾಟೀಲ, ಚನ್ನಪ್ಪ ಧಾರವಾಡ, ಶಿವಪುತ್ರಪ್ಪ ಸಂಗೊಳ್ಳಿ ಸೇರಿದಂತೆ ದೊಡವಾಡ ಹಾಗೂ ಸುತ್ತಲಿನ ಗ್ರಾಮಗಳ ಭಕ್ತರು ಇದ್ದರು.