ನವದೆಹಲಿ, ೧೧ ಪೌರತ್ವ ತಿದ್ದುಪಡಿ ವಿಧೇಯಕ
ಕುರಿತು ಕೆಲ ರಾಜಕೀಯ ಪಕ್ಷಗಳು ಪಾಕಿಸ್ತಾನ ದಾಟಿಯಲ್ಲಿ ಮಾತನಾಡುತ್ತಿವೆ
ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಟೀಕಿಸಿದ್ದಾರೆ. ಇತಿಹಾಸದಲ್ಲಿ ಸುವರ್ಣ
ಅಕ್ಷರಗಳೊಂದಿಗೆ ದಾಖಲಿಸಬೇಕಾದ ವಿಧೇಯಕವನ್ನು ವಿರೋಧಿಸುವುದು ಸೂಕ್ತವಲ್ಲ ಎಂದು ಅವರು
ಸಲಹೆ ನೀಡಿದ್ದಾರೆ. ವಿವಾದಾತ್ಮಕ ಪೌರತ್ವ ತಿದ್ದುಪಡಿ
ಮಸೂದೆಯನ್ನು ಸೋಮವಾರ ಲೋಕಸಭೆ ಅಂಗೀಕರಿಸಿದೆ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ದೇಶಗಳಲ್ಲಿ ಧಾರ್ಮಿಕ ಕಿರುಕುಳದಿಂದ ಭಾರತಕ್ಕೆ ವಲಸೆ ಬಂದಿರುವ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ ಕಲ್ಪಿಸಲು
ವಿಧೇಯಕ ಅನುವು ಮಾಡಿಕೊಡುತ್ತದೆ.
ಆದರೆ, ಕಾಂಗ್ರೆಸ್ ಸೇರಿದಂತೆ ಇತರ ವಿರೋಧ ಪಕ್ಷಗಳು ವಿಧೇಯಕ ಜಾತ್ಯತೀತ ಭಾರತ ದೇಶದ ಪರಿಕಲ್ಪನೆಗೆ ಭಂಗ ತಂದಿದೆ ಎಂದು ಟೀಕಿಸಿದ್ದಾರೆ.ಈ ಎಲ್ಲ ವಿರೋಧಗಳ ನಡುವೆ ಪೌರತ್ವ ತಿದ್ದುಪಡಿ ಮಸೂದೆಯನ್ನು ಇಂದು ಅಪರಾಹ್ನ ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ.
ಈ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಸಂಸದೀಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡುತ್ತಿದ್ದರು. ... ಪೌರತ್ವ ತಿದ್ದುಪಡಿ ವಿಧೇಯಕ ಮೂಲಕ ವಿದೇಶಗಳಲ್ಲಿ ಆಶ್ರಯ ಪಡೆದಿರುವ ಎಷ್ಟೋ ಮಂದಿಗೆ ಪರಿಹಾರ ಸಿಗಲಿದೆ ಇದು ಸುವರ್ಣ ಅಕ್ಷರಗಳಲ್ಲಿ ದಾಖಲಿಸಬೇಕಾದ ಮಸೂದೆ. ಆದರೆ, ಕೆಲವು ರಾಜಕೀಯ ಪಕ್ಷಗಳು ಪಾಕಿಸ್ತಾನದ ದ್ವನಿಯಲ್ಲಿ ಮಾತನಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಲೋಕಸಭೆಯಲ್ಲಿ ಭಾರಿ ಬಹುಮತ ಹೊಂದಿರುವ ಬಿಜೆಪಿಗೆ, ರಾಜ್ಯಸಭೆಯಲ್ಲಿ ಸಂಖ್ಯಾ ಬಲ ಕಡಿಮೆಯಿದೆ. ಇದರಿಂದಾಗಿ ಮಸೂದೆ ಅಂಗೀಕಾರವಾಗಲಿದೆಯೇ ಎಂಬ ಬಗ್ಗೆ ತೀವ್ರ ಕುತೂಹಲ ಕೆರಳಿಸಿದೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಪೌರತ್ವ ತಿದ್ದುಪಡಿ ಮಸೂದೆಗೆ ಆಕ್ಷೇಪ ಎತ್ತಿದ್ದಾರೆ. ಪೌರತ್ವ ತಿದ್ದುಪಡಿ ವಿಧೇಯಕದ ಮೂಲಕ ಪಾಕಿಸ್ತಾನದೊಂದಿಗಿನ ದ್ವಿಪಕ್ಷೀಯ ಒಪ್ಪಂದವನ್ನು ಭಾರತ ಉಲ್ಲಂಘಿಸಿದೆ ಎಂದು ಅವರು ಟೀಕಿಸಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ, ಮಸೂದೆ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ.