ಬೆಂಗಳೂರು,ಜ 12: ನಿರೀಕ್ಷಿತ ಕೆಪಿಸಿಸಿ ಸಾರಥ್ಯ ಬದಲಾವಣೆ ವಿಚಾರ ಅಂತಿಮಘಟ್ಟ ತಲುಪಿದ್ದು, ಇನ್ನೆರಡು ದಿನಗಳಲ್ಲಿಯೇ ಪ್ರದೇಶ ಕಾಂಗ್ರೆಸ್ಗೆ ಹೊಸ ಅಧ್ಯಕ್ಷರ ನೇಮಕಾತಿಯಾಗಲಿದೆ.ರಾಜ್ಯ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಚಾರ ಸಂಬಂಧ ಚರ್ಚಿಸಲು ಸೋಮವಾರ ಸಂಜೆ ರಾಜ್ಯರಾಜಧಾನಿಗೆ ಬರುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯಗೆ
ಹೈಕಮಾಂಡ್ ಸೂಚನೆ ನೀಡಿದೆ.
ಈ ಹಿನ್ನೆಲೆ ಮಾಜಿ ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ. ಅಧ್ಯಕ್ಷರ ನೇಮಕ ಸಂಬಂಧ ದಿಲ್ಲಿಗೆ ಬರಲು ಆಯ್ದ ರಾಜ್ಯ ನಾಯಕರಿಗೆ ಹೈಕಮಾಂಡ್ ಬುಲಾವ್ ನೀಡಿದೆ.
ಶನಿವಾರ ರಾತ್ರಿ ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ ಅವರನ್ನು ಕರೆಯಿಸಿಕೊಂಡು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಪಕ್ಷ ಸಂಘಟನೆ, ಕೆಪಿಸಿಸಿ ಹುದ್ದೆ ಬದಲಾವಣೆ ಕುರಿತು ಚರ್ಚೆ ನಡೆಸಿದ್ದಾರೆ.
ಇದರ ಆಯ್ದ ಭಾಗವಾಗಿ ಸಿದ್ದರಾಮಯ್ಯರಿಗೆ ಬುಲಾವ್ ನೀಡಲಾಗಿದೆ. ಮಂಗಳವಾರದಿಂದ ಸೋನಿಯಾಗಾಂಧಿ 10 ದಿನಗಳ ಕಾಲ ವಿದೇಶ ಪ್ರವಾಸ ಮಾಡಲಿದ್ದಾರೆ. ಅಷ್ಟರೊಳಗೆ ಕೆಪಿಸಿಸಿ ನಾಯಕ ಹುದ್ದೆ ಅಂತಿಮಗೊಳಿಸುವ ಇರಾದೆ ಕಾಂಗ್ರೆಸ್ನದ್ದು. ಉಪಚುನಾವಣೆ ಬಳಿಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ನೀಡಿರುವ ರಾಜೀನಾಮೆ ವಿಚಾರದಲ್ಲೂ ವರಿಷ್ಠರ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಕೆಪಿಸಿಸಿ ಸ್ಥಾನಕ್ಕೆ ಮುಖಂಡರಾದ ಡಾ.ಜಿ.ಪರಮೇಶ್ವರ್, ಡಿ.ಕೆ.ಪರಮೇಶ್ವರ್, ಎಂ.ಬಿ.ಪಾಟೀಲ್, ಈಶ್ವರ್ ಖಂಡ್ರೆ ಹಾಗೂ ಸತೀಶ್ ಜಾರಕಿಹೊಳಿ ರೇಸ್ನಲ್ಲಿದ್ದಾರೆ. ಈ ಪೈಕಿ ಪರಮೇಶ್ವರ್, ಶಿವಕುಮಾರ್,ಎಂ.ಬಿ.ಪಾಟೀಲ್ ಹೆಸರುಗಳು ಮುಂಚೂಣಿಯಲ್ಲಿವೆ.
ಬಿಜೆಪಿಗೆ ವಿರುದ್ಧವಾಗಿ ಪಕ್ಷ ಸಂಘಟಿಸಿ ಕೆಪಿಸಿಸಿಯನ್ನು ಚುರುಕುಗೊಳಿಸಬಲ್ಲ ನಾಯಕರ ಅವಶ್ಯಕತೆ ಹಾಗೂ ಮೂಲ ವಲಸೆ ಎಂಬ ಬೇಧ ತೋರದೇ ಎಲ್ಲರನ್ನು ಕರೆದುಕೊಂಡು ಸಾಗುವ ಸಾಮಥ್ರ್ಯವುಳ್ಳ ನಾಯಕನ ಅನಿವಾರ್ಯತೆಯೂ ಇದೆ.
ಹೀಗಾಗಿ ಅಳೆದುತೂಗಿ ಜಾತಿ ಸಮುದಾಯ ಹಾಗೂ ಸಾಮಥ್ರ್ಯದ ಆಧಾರದ ಮೇಲೆ ಸಾರಥಿಯ ನೇಮಕವಾಗಲಿದೆ. ಅಧ್ಯಕ್ಷ ಸ್ಥಾನದ ಪಟ್ಟಿಯಲ್ಲಿರುವವರ ಬಗ್ಗೆ ಸಿದ್ದರಾಮಯ್ಯ ಅವರ ಅಭಿಪ್ರಾಯ ಇದರಿಂದ ಪಕ್ಷಕ್ಕಾಗಬಹುದಾದ ಲಾಭನಷ್ಟಗಳ ಕುರಿತ ಸಮಗ್ರ ಚರ್ಚೆ ಸಿದ್ದರಾಮಯ್ಯ ಹೈಕಮಾಂಡ್ ಭೇಟಿ ಮಾಡಲಿದ್ದಾರೆ.
ಶಾಸಕಾಂಗ ಸ್ಥಾನಕ್ಕೆ ಹೆಚ್.ಕೆ.ಪಾಟೀಲ್ ಹೆಸರೂ ಸಹ ಇದೆ. ಮಧುಸೂದನ್ ಮಿಸ್ತ್ರಿ ನೀಡಿದ ವರದಿ, ಇತ್ತೀಚೆಗೆ ಪರಮೇಶ್ವರ್ ಸಲ್ಲಿಸಿದ ಮಾಹಿತಿಯನ್ನು ಕ್ರೂಢೀಕರಿಸಿರುವ ಹೈಕಮಾಂಡ್ ಸಿದ್ದರಾಮಯ್ಯ ಅವರಿಂದಲೂ ವಿವರ ಪಡೆಯಲಿದೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ ಗುರುವಾರದೊಳಗೆ ಕೆಪಿಸಿಸಿಯಲ್ಲಿ ಮಹತ್ತರ ಬದಲಾವಣೆಯಾಗಲಿದೆ.