ಸಿದ್ದರಾಮಯ್ಯಗೆ ನಾನು ತಿರುಗೇಟು ನೀಡಿಲ್ಲ : ಡಿಕೆ ಶಿವಕುಮಾರ್ ಸ್ಪಷ್ಟನೆ

ಬೆಂಗಳೂರು        ಪಕ್ಷದ ಹುದ್ದೆ ವಿಚಾರವಾಗಿ ತಾವು ಕೊಟ್ಟ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ ತಾವು ಸಿದ್ದರಾಮಯ್ಯ ಅವರ ಕೈಕೆಳಗೆ ಕೆಲಸ ಮಾಡಿದ್ದು ಅವರಿಗೆ ತಿರುಗೇಟು ನೀಡುವ ಅಗತ್ಯ ತಮೆಗೆ ಇಲ್ಲ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. 

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೂರು ದಿನಗಳ ಹಿಂದೆ ನಾನು ಪಕ್ಷದ ಹುದ್ದೆ ವಿಚಾರವಾಗಿ ಕೊಟ್ಟ ಹೇಳಿಕೆಯನ್ನು ಸಿದ್ದರಾಮಯ್ಯ ಅವರಿಗೆ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ ಎಂದು ತಿರುಚಿ ಗೊಂದಲ ಮೂಡಿಸಲಾಗಿದೆ. ನಮ್ಮ ಪಕ್ಷದ ನಾಯಕರಿಗೆ ತಿರುಗೇಟು ಕೊಡುವ ಅಗತ್ಯ ತಮಗಿಲ್ಲ.ನನಗೆ ಅಷ್ಟೂ ಸಾಮಾನ್ಯ ಪ್ರಜ್ಞೆ ಇಲ್ಲವೇ? ನಾನು ಒಬ್ಬ ನಾಯಕರ ಕೈಕೆಳಗೆ ಕೆಲಸ ಮಾಡಿದರೆ ಅವರನ್ನು ಗೌರವಿಸುತ್ತೇನೆ. ಬಂಗಾರಪ್ಪ, ಎಸ್.ಎಂ ಕೃಷ್ಣ, ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಯಾರೇ ಆದರೂ ಅವರ ಬಗ್ಗೆ ನನಗೆ ಉಪಕಾರ ಸ್ಮರಣೆ ಇದೆ. ನನಗೆ ಯಾರು ಸಹಾಯ ಮಾಡಿರುತ್ತಾರೋ ಅವರಿಗೆ ದ್ರೋಹ ಮಾಡುವುದು ನನ್ನ ಜಾಯಮಾನದಲ್ಲಿಲ್ಲ ಎಂದು ಅವರು ತಿಳಿಸಿದರು. 

ತಮ್ಮ ರಾಜಕೀಯ ಏನೇ ಇದ್ದರು ವಿರೋಧ ಪಕ್ಷದವರ ಮೇಲೆ ಮಾಡುತ್ತೇನೆ. ನಮ್ಮ ಪಕ್ಷದ ನಾಯಕರ ಕೆಳಗೆ ಕೆಲಸ ಮಾಡಿ ಅವರಿಗೆ ತಿರುಗೇಟು ಕೊಡುವ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯನವರಿಗೆ ಕಾರು, ಮನೆ,ರಾಜಕೀಯ ಇಲ್ಲವೇ ? 10 ವರ್ಷಗಳ ಕಾಲ ವಿರೋಧ ಪಕ್ಷದ ನಾಯಕರಾಗಿ, ಮುಖ್ಯಮಂತ್ರಿಗಳಾಗಿ, ಶಾಸಕಾಂಗ ಪಕ್ಷದ ನಾಯಕರಾಗಿ ನಮ್ಮ ಜತೆ ಕೆಲಸ ಮಾಡಿದ್ದಾರೆ. ಅವರಿಗೆ ನಾನೇಕೆ ತಿರುಗೇಟು ನೀಡಲಿ? ವಿರೋಧ ಪಕ್ಷದಲ್ಲಿ ನಾನು ಯಾರಿಗೆ ತಿರುಗೇಟು ಕೊಡಬೇಕೋ ಅವರಿಗೆ ಕೊಟ್ಟಿದ್ದೇನೆ. ಕುಮಾರಸ್ವಾಮಿ ಮತ್ತು ದೇವೇಗೌಡರ ವಿರುದ್ಧ ನಮಗೆ ಭಿನ್ನಾಭಿಪ್ರಾಯ ಇತ್ತು. ಆಗ ಹೋರಾಟ ಮಾಡಿದ್ದೇವೆ. ಈಗ ಅವರ ಜತೆ ಸೇರಿ ಕೆಲಸ ಮಾಡಿದ ಮೇಲೆ ಅವರ ಬಗ್ಗೆ ಮಾತನಾಡಲು ತಲೆ ಕೆಟ್ಟಿದೆಯಾ? ನಮ್ಮ ನಡುವೆ ಏನೇ ರಾಜಕೀಯ ವ್ಯತ್ಯಾಸ ಬಂದರೂ ನಮ್ಮ ಪಕ್ಷದ ನಾಯಕರ ಬಗ್ಗೆ ನಾನು ಆ ರೀತಿ ಮಾತನಾಡುವುದಿಲ್ಲ ಎಂದು ಅವರು ತಿಳಿಸಿದರು.