ಬೆಂಗಳೂರು, ಏ.1, ತುಮಕೂರಿನ ಸಿದ್ದಗಂಗಾ ಮಠದ ದಿ. ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜಯಂತಿಗೆ ಪ್ರಧಾನಿ, ಮುಖ್ಯಮಂತ್ರಿ ಸೇರಿ ಗಣ್ಯರು ಶುಭಕೋರಿ, ಸ್ವಾಮೀಜಿಯ ಕೊಡುಗೆಯನ್ನು ಸ್ಮರಿಸಿದ್ದಾರೆ. ಪರಮಪೂಜ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜಯಂತಿ ಅಂಗವಾಗಿ ಅವರಿಗೆ ಗೌರವ ನಮನಗಳು. ಸಮಾಜಕ್ಕೆ ಸ್ವಾಮೀಜಿ ನೀಡಿರುವ ಉತ್ಕೃಷ್ಟ ಕೊಡುಗೆ ಸದಾ ಸ್ಮರಣೀಯ ಎಂದು ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದ್ದಾರೆ.ಈ ಬಗ್ಗೆ ಕನ್ನಡದಲ್ಲೇ ಟ್ವೀಟ್ ಮಾಡಿ ಪ್ರಧಾನಿ ಸ್ವಾಮೀಜಿಯವರನ್ನು ಸ್ಮರಿಸಿದ್ದಾರೆ.ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿ, ಕಾಯಕ ಯೋಗಿ, ಲಕ್ಷಾಂತರ ಮಕ್ಕಳಿಗೆ ತ್ರಿವಿಧ ದಾಸೋಹದ ಮೂಲಕ ಬದುಕು ಕೊಟ್ಟ ಮಹಾ ಪುರುಷಸಿದ್ದಗಂಗೆಯ ಸಿದ್ಧಿಪುರುಷ, ಲಿಂಗೈಕ್ಯ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರ ಜಯಂತಿಯಂದು ಅವರ ಚರಣಗಳಿಗೆ ಕೋಟಿ ನಮನಗಳು ಎಂದು ಸ್ಮರಿಸಿದ್ದಾರೆ.
ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಟ್ವೀಟ್ ಮಾಡಿ, ಸಿದ್ಧಗಂಗಾ ಮಠದ ಕಾಯಕಯೋಗಿ, ನಾಡಿನ ನಡೆದಾಡುವ ದೇವರು ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರ ಜಯಂತಿಯಂದು ನನ್ನ ಕೋಟಿ ಪ್ರಣಾಮಗಳು. ತ್ರಿವಿಧ ದಾಸೋಹ, ನಿರಂತರ ಸಮಾಜ ಸೇವೆ ಮೂಲಕ ಸದಾ ಜನರ ಏಳಿಗೆಗಾಗಿ ದುಡಿದ ಇವರ ಮಾದರಿ ಜೀವನ ನಮಗೆ ದಾರಿದೀಪ ಎಂದು ಸ್ಮರಿಸಿದ್ದಾರೆ.ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿ, ನಾಡು ಕಂಡ ಶ್ರೇಷ್ಠ ಸಂತರು, ಕಾಯಕಯೋಗಿ, ತ್ರಿವಿಧ ದಾಸೋಹಿ, ಕರ್ನಾಟಕ ರತ್ನ, ಪದ್ಮಭೂಷಣ, ಸಿದ್ದಗಂಗಾ ಮಠದ ಪರಮಪೂಜ್ಯ ಡಾ.ಶಿವಕುಮಾರ ಸ್ವಾಮೀಜಿಗಳ ಜಯಂತಿಯಂದು ಆ ಸಾರ್ಥಕ ಜಗದ್ಗುರುಗಳಿಗೆ ಕೋಟಿ ಕೋಟಿ ನಮನಗಳು. ಕೊರೋನಾ ಕರಿನೆರಳು ಸರಿದು ಆರೋಗ್ಯಪೂರ್ಣ ಸಮಾಜ ಬೆಳಗುವಂತೆ ಗುರುಗಳು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.