ಹ್ಯಾಮಿಲ್ಟನ್, ಫೆ 5 : ಟಿ-20 ಸರಣಿಯಲ್ಲಿ ವೈಟ್‌ವಾಶ್ ಅನುಭವಿಸಿದ್ದ ನ್ಯೂಜಿಲೆಂಡ್ ತಂಡ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ಭಾರತದ ವಿರುದ್ಧ ನಾಲ್ಕು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಇದರೊಂದಿಗೆ ಏಕದಿನ ಕ್ರಿಕೆಟ್ ವೃತ್ತಿ ಜೀವನದಲ್ಲಿ ಚೊಚ್ಚಲ ಶತಕ ಸಿಡಿಸಿದ್ದ ಶ್ರೇಯಸ್ ಅಯ್ಯರ್ ಆಟ ವ್ಯರ್ಥವಾಯಿತು. ಮೂರು ಪಂದ್ಯಗಳ ಸರಣಿಯಲ್ಲಿ ಆತಿಥೇಯರು 1-0 ಮುನ್ನಡೆ ಪಡೆದರು.
ಕಳೆದ ಚುಟುಕು ಸರಣಿಯ ಮೂರು ಮತ್ತು ನಾಲ್ಕನೇ ಪಂದ್ಯಗಳಲ್ಲಿ ನ್ಯೂಜಿಲೆಂಡ್ ತಂಡವನ್ನು ಗೆಲುವಿನ ಸಮೀಪ ತಂದಿದ್ದ ಅನುಭವಿ ಬ್ಯಾಟ್ಸ್‌ಮನ್ ರಾಸ್ ಟೇಲರ್ ಕೊನೆಯ ಹಂತದಲ್ಲಿ ಎಡವಿದ್ದರು. ಇದರ ಫಲವಾಗಿ ಗೆಲ್ಲಬಹುದಾದ ಎರಡೂ ಪಂದ್ಯಗಳಲ್ಲಿ ಕಿವೀಸ್ ಸೋಲು ಅನುಭವಿಸಿತ್ತು. ಆದರೆ, ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಅಂಥ ತಪ್ಪನ್ನು ರಾಸ್ ಟೇಲರ್ ಮಾಡಲೇ ಇಲ್ಲ. ಬಹಳ ಎಚ್ಚರಿಕೆಯಿಂದ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಶ್ರಮಿಸಿ ಯಶಸ್ವಿಯಾದರು. ಭಾರತ ನೀಡಿದ್ದ 348 ರನ್ ಹಿಂಬಾಲಿಸಿದ ನ್ಯೂಜಿಲೆಂಡ್ 48.1 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆೆ 348 ರನ್ ಗಳಿಸಿ ಇನ್ನೂ 11 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು.
ಮಧ್ಯಮ ಕ್ರಮಾಂಕದಲ್ಲಿ ಅಮೋಘ ಬ್ಯಾಾಟಿಂಗ್ ಪ್ರದರ್ಶನ ತೋರಿದ ರಾಸ್ ವೃತ್ತಿ ಜೀವನದ 21ನೇ ಏಕದಿನ ಶತಕ ಬಾರಿಸಿ ತಂಡಕ್ಕೆೆ ಜಯ ತಂದಿತ್ತರು. ಅತ್ಯುತ್ತಮ ಬ್ಯಾಟಿಂಗ್ ಮಾಡಿದ ರಾಸ್ ಟೇಲರ್ 139 ಎಸೆತಗಳಲ್ಲಿ 109 ರನ್ ಗಳಿಸಿದರು. ಇವರ ಆಕರ್ಷಕ ಇನಿಂಗ್‌ಸ್‌ನಲ್ಲಿ ನಾಲ್ಕು ಸಿಕ್ಸರ್ ಹಾಗೂ 10 ಬೌಂಡರಿಗಳು ಒಳಗೊಂಡಿವೆ. ಅಲ್ಲದೇ, ನಾಯಕ ಟಾಮ್ ಲಥಾಮ್ ಅವರೊಂದಿಗೆ ಟೇಲರ್ 138 ರನ್ ಜತೆಯಾಟವಾಡಿದ್ದರು.
ಟಾಮ್ ಲಥಾಮ್ ಕೇವಲ 48 ಎಸೆತಗಳಲ್ಲಿ 69 ರನ್ ಚಚ್ಚಿ ಔಟಾಗಿದ್ದರು. ಇವರು ಎರಡು ಸಿಕ್ಸರ್ ಹಾಗೂ ಎಂಡು ಬೌಂಡರಿ ಸಿಡಿಸಿದ್ದರು. ಇದಕ್ಕೂ ಮುನ್ನ ಆರಂಭಿಕರಾಗಿ ಕಣಕ್ಕೆೆ ಇಳಿದಿದ್ದ ಹೆನ್ರಿ ನಿಕೋಲ್ಸ್ ಹಾಗೂ ಮಾರ್ಟಿನ್ ಗುಪ್ಟಿಲ್ ಜೋಡಿ ತಂಡಕ್ಕೆೆ ಉತ್ತಮ ಆರಂಭ ನಿಡಿತ್ತು. ಗುಪ್ಟಿಿಲ್ 32 ರನ್ ಹಾಗೂ ನಿಕೋಲ್ಸ್ 78(11 ಬೌಂಡರಿಗಳು) ರನ್ ಗಳಿಸಿದ್ದರು. ಭಾರತದ ಕುಲ್ದೀಪ್ ಯಾದವ್ ಎರಡು ಮತ್ತು ಶಮಿ, ಶಾರ್ದೂಲ್ ತಲಾ ಒಂದೊಂದು ವಿಕೆಟ್ ಪಡೆದರು. ಭಾರತ ತಂಡ ಇತರೆ ರನ್‌ಗಳಾಗಿ ಒಟ್ಟು 29 ರನ್ ಕೊಡುಗೆಯಾಗಿ ನ್ಯೂಜಿಲೆಂಡ್‌ಗೆ ನೀಡಿತ್ತು. ಇದರಲ್ಲಿ 24 ವೈಡ್ ಎಸೆತಗಳು ಒಳಗೊಂಡಿವೆ.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಾಟಿಂಗ್ ಮಾಡಿದ್ದ ಭಾರತದ ಪರ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕನ್ನಡಿಗ ಮಯಾಂಕ್ ಅಗರ್ವಾಲ್ ಹಾಗೂ ಪೃಥ್ವಿ ಶಾ ಜೋಡಿ ನಿರಾಸೆ ಮೂಡಿಸಲಿಲ್ಲ. ಈ ಜೋಡಿ ಮುರಿಯದ ಮೊದಲನೇ ವಿಕೆಟ್ ಗೆ 50 ರನ್ ಕಲೆಹಾಕಿತು. 20 ರನ್ ಗಳಿಸಿ ಆಡುತ್ತಿದ್ದ ಪೃಥ್ವಿ ಶಾ, ಕಾಲಿನ್ ಡಿ ಗ್ರಾಂಡ್ಹೋಮ್‌ಗೆ ವಿಕೆಟ್ ಒಪ್ಪಿಸಿದರು. 31 ಎಸೆತಗಳಲ್ಲಿ 32 ರನ್ ಗಳಿಸಿ ಭರವಸೆ ಮೂಡಿಸಿದ್ದ ಮಯಾಂಕ್ ಕೂಡ ಹೆಚ್ಚು ಹೊತ್ತು ಉಳಿಯಲಿಲ್ಲ.
ಕೊಹ್ಲಿ-ಅಯ್ಯರ್ ಅದ್ಭುತ ಜತೆಯಾಟ:
ಮೂರನೇ ವಿಕೆಟ್‌ಗೆ ಜತೆಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಜೋಡಿ ಮನಮೋಹಕ ಬ್ಯಾಟಿಂಗ್ ಮಾಡಿತು. ಈ ಜೋಡಿ 102 ರನ್ ಜತೆಯಾಟ ಕಾಣಿಕೆಯನ್ನು ತಂಡಕ್ಕೆೆ ನೀಡಿತು. 63 ಎಸೆತಗಳಲ್ಲಿ ಆರು ಬೌಂಡರಿಯೊಂದಿಗೆ ಕೊಹ್ಲಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ನಂತರ, ಇಶ್ ಸೋಧಿಗೆ ಕ್ಲೀನ್ ಬೌಲ್ಡ್ ಆದರು.
ನಾಲ್ಕನೇ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡಿದ ಶ್ರೇಯಸ್ ಅಯ್ಯರ್ ಸಮಯೋಜಿತ ಬ್ಯಾಟಿಂಗ್ ಮಾಡಿದರು. ಎದುರಿಸಿದ 107 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 11 ಬೌಂಡರಿಯೊಂದಿಗೆ 103 ರನ್ ಗಳಿಸಿ ವೃತ್ತಿ ಜೀವನದ ಚೊಚ್ಚಲ ಶತಕ ಸಿಡಿಸಿ ನಾಲ್ಕನೇ ಕ್ರಮಾಂಕಕ್ಕೆೆ ಹೊಸ ಭರವಸೆ ಮೂಡಿಸಿದರು. ಅಲ್ಲದೇ, ಕೆ.ಎಲ್ ರಾಹುಲ್ ಅವರೊಂದಿಗೆ 136 ರನ್ ಜತೆಯಾಟವಾಡಿ 300ರ ಸಮೀಪ ತಂಡವನ್ನು ಕೊಂಡೊಯ್ದರು.
ಚುಟುಕು ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಕನ್ನಡಿಗ ಕೆ.ಎಲ್ ರಾಹುಲ್ ಕೂಡ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದರು. ಕೇವಲ 64 ಎಸೆತಗಳಲ್ಲಿ 88 ರನ್ ಸಿಡಿಸಿದರು. ಇವರ ಸ್ಫೋಟಕ ಇನಿಂಗ್ಸ್‌ನಲ್ಲಿ ಬರೋಬ್ಬರಿ ಆರು ಸಿಕ್ಸರ್ ಹಾಗೂ ಮೂರು ಬೌಂಡರಿಗಳು ಒಳಗೊಂಡಿವೆ. ಕೊನೆಯಲ್ಲಿ ಕೇದಾರ್ ಜಾಧವ್ ಕೇವಲ 15 ಎಸೆತಗಳಲ್ಲಿ 26 ರನ್ ಚಚ್ಚಿದರು. ಟಿಮ್ ಸೌಥಿ 85 ರನ್ ನೀಡಿ ಎರಡು ವಿಕೆಟ್ ಪಡೆದರು. ಗ್ರಾಂಡ್ಹೋಮ್ ಮತ್ತು ಇಶ್ ಸೋಧಿ ತಲಾ ಒಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಭಾರತ: ನಿಗದಿತ 50 ಓವರ್ ಗಳಿಗೆ 347/4 (ಶ್ರೇಯಸ್ ಅಯ್ಯರ್ 103, ಕೆ.ಎಲ್ ರಾಹುಲ್ ಔಟಾಗದೆ 88, ವಿರಾಟ್ ಕೊಹ್ಲಿ 51, ಕೇಧಾರ್ ಜಾಧವ್ ಔಟಾಗದೆ 26; ಟಿಮ್ ಸೌಥಿ 85 ಕ್ಕೆೆ 2, ಕಾಲಿನ್ ಡಿ ಗ್ರಾಂಡ್ಹೋಮ್ 41 ಕ್ಕೆೆ 1, ಇಶ್ ಸೋಧಿ 27 ಕ್ಕೆೆ 1)
ನ್ಯೂಜಿಲೆಂಡ್: 48.1 ಓವರ್‌ಗಳಿಗೆ 348/6 (ರಾಸ್ ಟೇಲರ್ ಔಟಾಗದೆ 109, ಹೆನ್ರಿ ನಿಕೋಲ್ಸ್ 78, ಟಾಮ್ ಲಥಾಮ್ 69; ಕುಲ್ದೀಪ್ ಯಾದವ್ 84 ಕ್ಕೆೆ 2,ಮೊಹಮ್ಮದ್ ಶಮಿ 63 ಕ್ಕೆೆ 1)