“ಇತಿಹಾಸ ಎನ್ನುವುದು ಒಮ್ಮೆ ಓದಿ ಬಿಡುವ ಕಥೆಯಲ್ಲ, ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಜೀವನ ಸೂತ್ರವಾಗಿದೆ”. ಇದನ್ನು ಅರಿತುಕೊಳ್ಳದ ನಾವುಗಳು ಕೇವಲ ಮನರಂಜನೆಗಾಗಿ ಓದುವ ಕಥೆಯಾಗಿ ಮಾಡಿಕೊಂಡಿದ್ದೇವೆ. ಅದರ ಬದಲು ಇತಿಹಾಸದಲ್ಲಿ ದಾಖಲಾದ ವ್ಯಕ್ತಿಗಳ ಬದುಕಿನ ಚಿತ್ರಣವನ್ನು ಆಂತರ್ಯದ ಮನಸ್ಸಿನಿಂದ, ಅನನ್ಯವಾದ ಭಾವದಿಂದ ಕಂಡರೆ ನಮ್ಮ ಬದುಕಿನ ಚಿತ್ರಣವನ್ನೇ ಬದಲಿಸಿಕೊಳ್ಳಬಹುದಾಗಿದೆ. “ಇತಿಹಾಸವನ್ನು ಅರಿಯದವರು ಇತಿಹಾಸವನ್ನು ನಿರ್ಮಾಣ ಮಾಡಲು ಸಾಧ್ಯವಿಲ್ಲ” ಎಂದು ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ಹೇಳಿದ್ದು ನೂರಕ್ಕೆ ನೂರು ಸತ್ಯ. ಹಾಗೆಯೇ “ಚಾರಿತ್ರ್ಯವಿರದವನಿಂದ ಚರಿತ್ರೆಯನ್ನು ಸೃಷ್ಠಿಸಲು ಸಾಧ್ಯವಿಲ್ಲ” ಎನ್ನುವುದನ್ನು ಸಹ ನಾವು ಒಪ್ಪಿಕೊಳ್ಳಲೇಬೇಕು. ಆದರೆ ಕೆಲವು ಜನಗಳು ಇತಿಹಾಸವನ್ನು ರಚನೆ ಮಾಡುವಾದ ಅವರು ನೋಡುವ ಋಣಾತ್ಮಕ ದೃಷ್ಠಿಕೋನದ ಫಲವಾಗಿ ಲಕ್ಷಾಂತರ ಜನಗಳ ಹೃದಯಲ್ಲಿ ಸಾಮ್ರಾಟನಾಗಬೇಕಾದವನು ಕೇವಲ ಬಂಡಾಯಗಾರನಾಗುತ್ತಾನೆ. ಇದೇ ಯಡವಟ್ಟಿನ ಫಲವಾಗಿಯೇ ದೇಶವನ್ನು ಕದಿಯಲು ಬಂದ ಕಳ್ಳರು ಇಂದು ಇತಿಹಾಸದ ಹೀರೋವಾಗಿದ್ದಾರೆ. ಅವರನ್ನು ಮೆಟ್ಟಿ ನಿಲ್ಲಲು ಯತ್ನಿಸಿದ ನಮ್ಮ ಸೇನಾನಿಗಳು ದಂಗೆಕೋರರಾಗಿದ್ದಾರೆ. ಹೀಗಾಗಿ ಇತಿಹಾಸವನ್ನು ಓದುವ ನಾವುಗಳು ಕೇವಲ ಯಾರೋ ಕಟ್ಟಿಕೊಟ್ಟ ಕಥೆಗಳ ಬೆನ್ನಟ್ಟಿ ಸಾಗುವ ಬದಲು ನಮ್ಮ ಹೃದಯ ಕೂಗಿಗೆ ಓಗೊಟ್ಟು ಸಾಗಿದರೆ ಸತ್ಯ ಏನೆಂಬುದನ್ನು ನಾವು ಸುಲಭವಾಗಿ ಅರಿಯುವುದಕ್ಕೆ ಸಾಧ್ಯವಾಗುತ್ತದೆ. ಸ್ವಾರ್ಥವನ್ನಿಟ್ಟುಕೊಂಡು ರಚಿಸಿದ ಕೆಟ್ಟ ಪುಟಗಳನ್ನು ತಿರುವುತ್ತ ಸಾಗುವ ಬದಲಿಗೆ ಸತ್ಯದ ಮಾರ್ಗವನ್ನು ಅನುಸರಿಸಿ ನಡೆದರೆ ವಾಸ್ತವದಲ್ಲಿ ನಮ್ಮ ಚಾರಿತ್ರಿಕ ವೀರರು ಈ ನಾಡಿಗಾಗಿ ಸಲ್ಲಿಸಿದ ಸೇವೆ, ಅರ್ಿಸಿದ ತ್ಯಾಗ, ಸಮರ್ಿಸಿದ ಪ್ರಾಣ ಎಲ್ಲವೂ ಮನದಟ್ಟಾಗುತ್ತದೆ. ಆ ನಿಟ್ಟಿನಲ್ಲಿ ಇತಿಹಾಸದ ಪುಟಗಳನ್ನು ತಿರುವಿದಾಗ ಒಂದೊಂದು ಹೆಮ್ಮೆಯ ಚರಿತ್ರೆ ನಮ್ಮ ಕಣ್ಣಿಗೆ ರಾಚುತ್ತವೆ. ಓದುತ್ತ ಓದುತ್ತ ಸಾಗಿದಂತೆ ಭಾವನೆಗಳ ಬೆನ್ನೇರಿ ನಮ್ಮನ್ನು ಇನ್ನಿಲ್ಲದಂತೆ ಕಾಡುತ್ತವೆ. ಕೆಣಕುತ್ತವೆ. ಹಾಗೇಯೇ ಭಾರತದ ಇತಿಹಾಸದ ಪುಟಗಳನ್ನು ತಿರುವುತ್ತ ಸಾಗಿದಂತೆ ಮಧ್ಯಯುಗೀನ ಭಾರತದಲ್ಲಿ ಬಿಜಾಪುರದ ಆದಿಲ್‌ಶಾಹಿಗಳಿಗೂ, ದೆಹಲಿಯ ಮೊಘಲರಿಗೂ, ಡಚ್ಚರಿಗೂ, ಫ್ರೆಂಚರಿಗೂ ಹಾಗೂ ಬ್ರಿಟೀಷರಿಗೂ ತನ್ನ ಖಡ್ಗದ ರುಚಿ ತೋರಿಸಿ ದಾಸ್ಯದ ಸಂಕೋಲೆಗಳಲ್ಲಿ ಬದುಕು ನಡೆಸುತ್ತಿದ್ದವರ ಪಾಲಿಗೆ ಸ್ವಾತಂತ್ರ್ಯ ಸಿಹಿಯನ್ನು ತೋರಿಸಿ ಸ್ವರಾಜ್ಯ ಸ್ಥಾಪಿಸಿದ ಧೀಮಂತ ವ್ಯಕ್ತಿ ಛತ್ರಪತಿ ಶಿವಾಜಿ ಮಹಾರಾಜ್ ನಮ್ಮನ್ನು ಕಾಡುತ್ತಾರೆ. ಈ 21ನೇ ಶತಮಾನದಲ್ಲೂ ನಮ್ಮನ್ನು ಬೆನ್ನುಬಿಡದೇ ಕೆಣಕುತ್ತ ಅಂದು ನಾನು ಹಾಕಿಕೊಟ್ಟ ಮಾರ್ಗ ಇಂದು ಎಷ್ಟು ಪ್ರಸ್ತುತವಾಗಿದೆ ನೋಡು ಎಂದು ನಮಗೇ ಬೋಧನೆ ಮಾಡುತ್ತಾರೆ.
ಶಿವಾಜಿ ಎಂದರೆ ಏನು? ಶಿವಾಜಿ ಎಂಥಹ ದೂರದೃಷ್ಠಿ ಉಳ್ಳ ರಾಜನಾಗಿದ್ದನು? ಶಿವಾಜಿ ನಡೆದ ದುರ್ಗಮ ದಾರಿ ಹೇಗಿತ್ತು? ಎನ್ನುವುದರ ಕುರಿತು ಅನೇಕ ದಾರ್ಶನಿಕರು ಹಾಗೂ ಇತಿಹಾಸ ಕಾರರು ಬರೆಯುತ್ತಾರೆ. ಅದರಲ್ಲೂ ಭಾರತ ಪುರುಷ ಸಿಂಹ, ಸಿಡಿಲ ಸನ್ಯಾಸಿ ಸ್ವಾಮಿ ವಿವೇಕಾನಂದರಿಗೆ ಶಿವಾಜಿ ಎಂದರೇ ಅಭಿಮಾನ, ಶಿವಾಜಿ ಎಂದರೆ ಸ್ವಾಭಿಮಾನದ ಮತ್ತೊಂದು ರೂಪ. ಶಿವಾಜಿ ಇಲ್ಲದೇ ಅವರು ಎಂದು ಮಾತನಾಡಿಲ್ಲ. ಶಿವಾಜಿಯ ಹೊರತು ಸ್ವಾಭಿಮಾನವೇ ಇಲ್ಲ, ಶಿವಾಜಿ ಇಲ್ಲದೇ ಇದ್ದಲ್ಲಿ ಈ ದೇಶದಲ್ಲ ಸಂಸ್ಕಾರವೇ ಉಳಿಯುತ್ತಿರಲಿಲ್ಲ ಎಂದು ಹೇಳುತ್ತಲೇ ಶಿವಾಜಿಯ ಕುರಿತು ಅಭಿಮಾನದಿಂದ ತಿಳಿಸುತ್ತಾರೆ.
“ದಾವಾ ದ್ರುಮದಂಡ ಪರ ಚಿತ್ತಾ ಮೃಗಝಂಡ ಪರ
ಭೂಷಣ ಬಿತಂಡ ಪರ ಜೈಸೇ ಮೃಗರಾಜ ಹೈ!
ತೇಜ ತಮ ಅಂಶ ಪರ ಕಾನ್ಹ ಜಿಮ ಕಂಸ ಪರ
ತ್ಯೋ ಮ್ಲೇಚ್ಛವಂಶ ಪರ ಶೇರ ಶಿವರಾಜ ಹೈ!”
ಅಂದರೆ “ಕಾಡಿನ ಮೃಗಗಳಿಗೆ ಕಾಳ್ಗಿಚ್ಚಿನಂತೆ, ಚಿಗುರೆಯ ಗುಂಪಿಗೆ ಚಿರತೆಯಂತೆ, ಮದ್ದಾನೆ ಹಿಂಡಿಗೆ ಮೃಗರಾಜನಂತೆ, ಇರುಳ ಕತ್ತಲಿಗೆ ಸೂರ್ಯನಂತೆ, ಕಂಸನಿಗೆ ಕೃಷ್ಣನಿದ್ದಂತೆ, ಮ್ಲೆಚ್ಛರ ವಂಶಕ್ಕೆ ಈ ಸಿಂಹ ಸದೃಶ ರಾಜನಿದ್ದಾನೆ” ಎಂದು ಅವರು ಹೇಳುವ ಮಾತಿನ ಕುರಿತು ಆಲೋಚನಿಸಿದರೆ ಶೂರ ಶಿವಾಜಿಯು ಯಾವ ರೀತಿಯಾಗಿ ತನ್ನ ಘರ್ಜನೆಯ ಮೂಲಕ ಶತ್ರು ಸೈನ್ಯಕ್ಕೆ ನಡುಕ ಹುಟ್ಟಿಸಿದ್ದನೆಂಬುದು ಅರ್ಥವಾಗುತ್ತದೆ.
ಶಿವನೇರಿದುರ್ಗದಿಂದ ಹಿಡಿದು ರಾಯಗಡದ ಸಿಂಹಾಸನದ ವರೆಗಿನ ಅವರ ಬದುಕು ಹಾಗೂ ಹೋರಾಟದ ಹಾದಿ ರಣರೋಚಕವಾಗಿ ಗೋಚರವಾದರೆ, ಅವರು ಬದುಕಿದ ಆದರ್ಶದ ಬದುಕು ನಮ್ಮನ್ನು ವಿಸ್ಮಯಗೊಳಿಸುತ್ತದೆ. 350 ವರ್ಷಗಳ ಹಿಂದೆ ಆಗಿಹೋದ ಕಥೆ ಇಂದು ಇತಿಹಾಸವಾಗಿ, ಓದುತ್ತ ಓದುತ್ತ ನಮಗೆ ವಾಸ್ತವದ ಮಾರ್ಗದರ್ಶಕನಾಗಿ, ಭವಿಷ್ಯದ ಕನಸಾಗಿ ಕಾಡುತ್ತದೆ. ಸ್ವಾಭಿಮಾನದ ಪ್ರತೀಕವಾಗಿ ಸಿಡಿದೆದ್ದ ಶಿವಾಜಿ ಅದೇ ಸ್ವಾಭಿಮಾನದವನ್ನೇ ಅಸ್ತ್ರವಾಗಿಸಿಕೊಂಡು ಮರಾಠಾ ಸಾಮ್ರಾಜ್ಯವನ್ನೇ ಹುಟ್ಟುಹಾಕಿ, ವಿದೇಶಿಯ ದಾಳಿಯಲ್ಲಿ ನಲುಗಿ ನೆಲಕಚ್ಚಿದ್ದ ಭಗವಧ್ವಜವನ್ನು ಮತ್ತೋಮ್ಮೆ ಮುಗಿಲೆತ್ತರಕ್ಕೆ ಹಾರಿಸಿದ್ದು ಸಾಮಾನ್ಯವಾದ ಮಾತಲ್ಲ. ಆದರೆ ಇತಿಹಾಸದ ಗಂಧಗಾಳಿಯು ಗೊತ್ತಿರದವರಿಗೆ ಶಿವಾಜಿ ಕೇವಲ ಒಬ್ಬ ಹಿಂದೂ ರಾಜನಾಗಿ ಮಾತ್ರ ಕಾಣಿಸುತ್ತಾನೆ. ಕೋಟೆ ಕೊತ್ತಲುಗಳನ್ನು ಗೆಲ್ಲುವುದಕ್ಕಾಗಿ “ಗನಿಮಕಾವಾ” ಅಂದರೆ “ಗೆರಿಲ್ಲಾ” ಯುದ್ಧವನ್ನು ಹೂಡಿದ್ದು, ಮ್ಲೆಚ್ಚರನ್ನು ಲೂಟಿ ಮಾಡಿದ್ದು, ಮೋಸಕ್ಕೆ ಪ್ರತಿ ಮೋಸ, ತಂತ್ರಕ್ಕೆ ಪ್ರತಿತಂತ್ರವನ್ನು ಹೂಡಿದ್ದನ್ನು ನೋಡಿ ಕೇವಲ ಅವನೊಬ್ಬ ಬಂಡುಕೋರ ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ಆದರೆ ಆ ವ್ಯಕ್ತಿಯ ಹೋರಾಟದ ಹಿಂದಿರುವ ಸಾರ್ಥಕ ಉದ್ಧೇಶವನ್ನು ಅರಿತುಕೊಳ್ಳುವ ಕಾರ್ಯವನ್ನು ಮಾಡಲೇ ಇಲ್ಲ. ಇವರಿಗೆ ಅವರ ಹೋರಾಟ ಮಾತ್ರ ಕಾಣುತ್ತದೆಯೇ ಹೊರತು ಅವರ ಆದರ್ಶಗಳು ಅವರಿಗೆ ಕಾಣಿಸುವುದಿಲ್ಲ. ಹಿಂದು ರಾಜ ಎನ್ನುವ ಸೀಮಿತ ಚೌಕಟ್ಟಿನಡಿಯಲ್ಲಿ ಅವರನ್ನು ಬಂಧಿಸಿ ಜಗತ್‌ಪ್ರಕಾಶವಾಗಬೇಕದವರನ್ನು ಕೇವಲ ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತಗೊಳಿಸುವ ಹುನ್ನಾರದಲ್ಲಿ ಅಲ್ಪ ಯಶಸ್ಸು ಕಂಡಿದ್ದಾರೆ. ಅಕ್ಷರಶಃ ಶಿವಾಜಿಯ ಕುರಿತು ಅವರಲ್ಲಿರುವ ಭಾವನೆಯೇ ಹಾಗಿದ್ದಾಗ ಬದಲಾವಣೆ ಬಯಸುವುದರಲ್ಲಿ ಅರ್ಥವೇ ಇಲ್ಲ. ಆದರೂ ಶಿವಾಜಿ ಚರಿತ್ರೆಯನ್ನು ಓದುತ್ತಿದ್ದರೆ ಈಗಲೂ ನಮ್ಮನ್ನು ಕಾಡುತ್ತಾರೆ. ಒಂದೆಡೆ ಅವರ ಶೌರ್ಯದಿಂದ, ಮತ್ತೊಂದೆಡೆ ಅವರ ಯುದ್ಧ ತಂತ್ರಗಳಿಂದ, ಎಲ್ಲಕ್ಕೂ ಹೆಚ್ಚಾಗಿ ಅವರಲ್ಲಿದ್ದ ಆದರ್ಶ ವ್ಯಕ್ತಿತ್ವದಿಂದ ಬಿಟ್ಟು ಬಿಡದೇ ನಮ್ಮನ್ನು ಕೆಣಕುತ್ತಾರೆ. ಆಗಿದ್ದ ಶಿವಾಜಿ ಮಹರಾಜರು ಈಗಿದ್ದಿದ್ದರೆ..? ಎನ್ನುವ ಪ್ರಶ್ನೆಯನ್ನು ಮುಂದಿಟ್ಟು ಮಾಯವಾಗುತ್ತಾರೆ.
ಹೌದು ಹದಿನಾರನೇ ಶತಮಾನದಲ್ಲಿ ಬಿಜಾಪುರದ ಆದಿಲ್‌ಷಾಹಿಗಳಿಗೂ ಹಾಗೂ ದೆಹಲಿಯ ಮೊಗಲರಿಗೂ ಮಗ್ಗಲು ಮುಳ್ಳಾಗಿ ಕಾಡಿದ ಶಿವಾಜಿ ನಿಜವಾಗಲು ಶಿವಾಂಶ ಸಂಬೂತನೇ ಸರಿ. ಈಗೇನೋ ನಾವು ಅವರನ್ನು ಇತಿಹಾಸದಲ್ಲಿ ಜೂಲಿಯಸ್ ಸೀಜರ್‌ನಿಗೆ, ಅಲೆಕ್ಸಾಂಡರನಿಗೆ, ನೆಪೊಲಿಯನ್ ಬೋನಾಪಾರ್ಟೆಗೆ ಹೋಲಿಸಿ ಮಾತಾಡುತ್ತೇವೆ. ಆದರೆ ಒಂದು ವಾಸ್ತವ ಅಂಶವನ್ನು ಮರೆತು ಬಿಡುತ್ತೇವೆ. ಈ ಎಲ್ಲ ರಾಜರು ವಂಶಪಾರಂಪರ್ಯ ರಾಜಕೀಯ ಮಾಡಿದ ಮನೆತನದವರು. ಸುಸಜ್ಜಿತ ಸೇನೆಯನ್ನು ಪಡೆದವರು. ಆದರೆ ಶಿವಾಜಿ ಝೀರೊದಿಂದ ಹೀರೋ ಆಗಿ ಬೆಳೆದವರು. ಬಿಜಾಪುರದ ಸೇನೆಯಲ್ಲಿ ಸರದಾರನಾಗಿದ್ದ ತಂದೆಯಂತೆ ಮಗನು ಮುಂದೆ ಜಹಗೀರುದಾರನಾಗುತ್ತಾನೆಂದೇ ಎಲ್ಲರ ನಂಬಿಕೆ ಆಗಿತ್ತು. ಆದರೆ ಬಾಲ ಶಿವಾಜಿ ತಾಯಿ ಜೀಜಾಬಾಯಿಯ ಮಾತುಗಳಿಂದ ಪ್ರೇರಿತನಾದ ಶಿವಾಜಿ ಮಾಹಾರಾಜನಾಗುತ್ತಾನೆ ಎಂದು ಯಾರು ನಂಬಿದ್ದಿಲ್ಲ. ಯಾರಿಂದ ತಿರಸ್ಕಾರಕ್ಕೆ ಒಳಗಾಗಿದ್ದರೋ ಅಂತ ಜನರ ಬಳಿ ಹೋದ ಶಿವಾಜಿ ಜಾತಿಯತೆಯ ಧಮನಕ್ಕೆ ಮೊದಲ ಹೆಜ್ಜೆ ಇಟ್ಟಿದ್ದು ಇಂದಿನವರಿಗೂ ಮಾದರಿಯಾಗಬೇಕು. ತಿರಸ್ಕಾರಕ್ಕೆ ಒಳಗಾದ ಮಾವಳಿಯ ಪೋರರಲ್ಲಿ ಸ್ವಾಭಮಾನದ ಬೀಜ ಬಿತ್ತು ಸ್ವಾತಂತ್ರ್ಯ ಬೆಳೆ ಬೆಳೆಯುವುದಕ್ಕೆ ಸನ್ನದ್ಧವನ್ನಾಗಿ ಮಾಡುತ್ತಾನೆಂದರೆ ಅದೇನು ಸಾಮಾನ್ಯ ಸಾಧನೆಯೇ? ದನಗಾಹಿಗಳನ್ನು ಸೈನಿಕರನ್ನಾಗಿ ಸಜ್ಜುಗೊಳಿಸಿದ ಶಿವಾಜಿಯ ಸಾಹಸ ಚಿರಶಾಶ್ವತ. ‘ಏಕ ಮರಾಠಾ ಲಾಕ ಮರಾಠಾ’ ಅನ್ನೋ ಮಾತನ್ನು ಅಕ್ಷರಶಃ ಸತ್ಯ ಎನ್ನುವಂತೆ ಸಾಬೀತು ಪಡಿಸಿದ ಶಿವಾಜಿ ಮಹಾರಾಜರು ಸಾಮಾನ್ಯರನ್ನೇ ಸೈನಿಕರನ್ನಾಗಿ ಮಾಡಿ ಗೆಲುವು ಸಾಧಿಸಿದ್ದು ಭಾರತದ ಇತಿಹಾಸದಲ್ಲಿ ಎಂದು ಮರೆಯದ ಸಾಧನೆಯಾಗಿ ಗುರುತಿಸಿಕೊಳ್ಳುತ್ತದೆ. ತೋರಣ, ಚಾಕಣ, ಪನ್ಹಾಳ, ಪುರಂದರ, ವಿಶಾಲಗಡ, ಪ್ರತಾಪಗಡ, ರಾಯಗಡ, ಸಿಂಹಗಡ ಸೇರಿದಂತೆ ಹಲವಾರು ಕೋಟೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಶಿವಾಜಿ “ಗನಿಮಕಾವಾ” ಅಥವಾ “ಗೆರಿಲ್ಲಾ” ಎನ್ನುವ ಹೊಸ ತಂತ್ರವನ್ನೇ ತೋರಿಸಿಕೊಟ್ಟರು. ಭಾರತೀಯ ಸೇನೆ ಮಾಡಿದ ಸರ್ಜಿಕಲ್ ಸ್ಟ್ರೈಕನ್ನು ಅಂದು ಶಿವಾಜಿ ತನ್ನ ಶತ್ರುಗಳ ವಿರುದ್ಧ ಮಾಡುತ್ತಿದ್ದರು. ಅದು ನಮ್ಮ ಶೌರ್ಯದ ಪ್ರತೀಕ ಹಾಗೂ ಮುಳ್ಳನ್ನು ಮುಳ್ಳಿಂದಲೇ ತೆಗೆಯಬೇಕು ಎನ್ನುವ ಮಾತಿಗೆ ಉದಾಹರಣೆಯಾಗುತ್ತಿತ್ತು. ಇದೆಲ್ಲಕ್ಕಿಂತ ಶಿವಾಜಿ ನನ್ನನ್ನು ಕಾಡುತ್ತಿರುವುದೇ ಬೇರೆಯ ವಿಷಯಕ್ಕಾಗಿ.
ಆಧುನಿಕ ಭಾರತದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅನ್ಯಾಯ ಅತ್ಯಾಚಾರ ಕಂಡಾಗ ಮನಸ್ಸು ವ್ಯಘ್ರಕೊಳ್ಳುತ್ತಿತ್ತು. ಹೆಣ್ಣನ್ನು ದೇವತೆ ಎಂದು ಪೂಜಿಸಿದ ದೇಶದಲ್ಲಿ ಕಾಮಾಂದರು ತಮ್ಮ ಆಸೆ ಈಡೇರಿಕೆಗಾಗಿ ಮಹಿಳೆಯರ ಬದುಕನ್ನೇ ಹಾಳು ಮಾಡುತ್ತಿರುವುದನ್ನು ಕಂಡಾಗ ಆಗುತ್ತಿದ್ದ ವ್ಯಥೆ ಅಷ್ಟಿಷ್ಟಲ್ಲ. ಆದರೆ ಅದರ ಮಧ್ಯದಲ್ಲಿಯೇ ಶಿವಾಜಿಯಂತ ರಾಜ ಈಗಲು ಇದ್ದಿದ್ದರೇ ಭಾರತದ ಭವಿಷ್ಯವೇ ಬೇರೆಯಾಗಿರುತ್ತಿತ್ತು ಎನ್ನುವ ಭಾವನೆ ನನ್ನನ್ನು ಹಲವು ಬಾರಿ ಕೆಣಿಕಿ ಕಾಡಿಸಿದೆ. ಹೌದು ಶಿವಾಜಿ ಎಂದರೆ ಸದ್ಗುಣ ಸಂಪನ್ನ. ಕೇವಲ ರಾಜ್ಯ ವಿಸ್ತಾರ ನೀತಿಯನ್ನು ಮಾತ್ರ ಮೈಗೂಡಿಸಿಕೊಳ್ಳದೇ ಆದರ್ಶಗಳನ್ನು ಪರಿಪಾಲಿಸಿಕೊಂಡು ಬಂದ ಧೀಮಂತ. ಪರಸ್ತ್ರೀಯರನ್ನು ಕಂಡಾಗ ತಾಯಿ ಎನ್ನುವ ಭಾವನೆಯನ್ನು ವ್ಯಕ್ತಪಡಿಸುತ್ತಿದ್ದ ಪರಿಯಂತು ಹೇಳತೀರದು. ಹಿಂದೂ ಸರದಾರರುಗಳೇ ಇಸ್ಲಾಂ ರಾಜಗುರಗಳ ಜನಾನಾ ಅಂದರೆ ಮಲಗುವ ಕೋಣೆಗೆ ತಮ್ಮ ಮನೆಯ ಹೆಣ್ಣುಮಕ್ಕಳನ್ನು ಕಳುಹಿಸಿ ರಾಜನ ಕೃಪೆಗೆ ಪಾತ್ರರಾಗುತ್ತಿದ್ದ ದರಿದ್ರ ಕಾಲದಲ್ಲಿ ಶಿವಾಜಿಯಂಥಹ ಸಂಸ್ಕಾರವಂತ ಹಿಂದೂ ರಾಜ ಹೇಗೆ ನಡೆದುಕೊಳ್ಳುತ್ತಾನೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆಯನ್ನು ನಾವು ನೋಡಬೇಕು. ಶಿವಾಜಿಯ ಅಧಿಪಥ್ಯಕ್ಕೆ ಒಳಪಟ್ಟ ಓರ್ವ ಸರದಾರ ಇಸ್ಲಾಂ ರಾಜರುಗಳನ್ನು ಸಂತುಷ್ಟಪಡಿಸಿದವಂತೆ ಶಿವಾಜಿ ಮಹಾರಾಜರನ್ನು ಸಂತುಷ್ಟಪಸಿವುದಕ್ಕೆಂದು ತನ್ನ ಅಪ್ರತಿಮ ಸುಂದರಿ ಸೊಸೆಯನ್ನು ಶಿವಾಜಿಗೆ ನಜರಾನಾ(ಸ್ರ್ತೀಯನ್ನು ಕಾಣಿಕೆಯಾಗಿ ನೀಡುವ ಪದ್ಧತಿ) ನೀಡಲು ಕರೆದುಕೊಂಡ ಬಂದಾಗ ಇಡೀ ರಾಜಸಭೆಯ ದಿಗ್ಭ್ರಾಂತವಾಗಿತ್ತು. ಆ ಮಹಿಳೆಯ ಸೌಂದರ್ಯಕ್ಕೆ ಮನಸೋತ ಸಭೀಕರು ಶಿವಾಜಿ ಪುಣ್ಯ ಮಾಡಿದ್ದಕ್ಕೆ ಇಂಥ ಸುಂದರಿ ಸಿಗುತ್ತಿದ್ದಾಳೆ ಎಂದು ತಮ್ಮ ಮನದಲ್ಲೇ ಅಂದುಕೊಳ್ಳುತ್ತಿದ್ದರು. ಮತ್ತೆ ಕೆಲವರು ಆದರ್ಶಗಳನ್ನೇ ಮಾತನಾಡುವ ಶಿವಾಜಿ ಈ ಕ್ಷಣ ಹೇಗೆ ನಡೆದುಕೊಳ್ಳುತ್ಥಾನೆ ಎನ್ನುವುದನ್ನು ನಾವು ನೋಡೇ ಬಿಡೋಣ ಎಂದು ತಮ್ಮ ತಮ್ಮಲ್ಲೇ ಪಿಸುಮಾತಿನಲ್ಲಿ ಗುಸುಗುಸು ಆಡಿಕೊಳ್ಳುತ್ತಿದ್ದರು. ಆದರೆ ಆ ಸುಂದರಿಯನ್ನು ಕಂಡ ಶಿವಾಜಿ “ಅಮ್ಮ ನೀನು ಅಪ್ರತಿಮ ಸುಂದರಿ. ನನ್ನ ತಾಯಿಯು ನಿನ್ನಷ್ಟು ಸುಂದರಿಯಾಗಿದ್ದರೆ ನಾನು ಇನ್ನೂ ಸುಂದರವಾಗುತ್ತಿದೆ. ಮುಂದಿನ ಜನ್ಮದಲ್ಲಿ ಆದರು ನಿನ್ನ ಮಡಿಲಲ್ಲಿ ಮಗನಾಗಿ ಹುಟ್ಟುತ್ತೇನೆ” ಎಂದು ಹೇಳಿ ಉಡಿ ತುಂಬಿ, ಬಾಗೀನ ನೀಡಿ ,ಗೌರವಿಸಿದ ಶಿವಾಜಿ ಈ ಶತಮಾನದಲ್ಲಿ ಕಾಡದೆಯೇ ಇರಲು ಸಾಧ್ಯವೇ? ಹೆಣ್ಣಿನ ವಿಷಯದಲ್ಲಿ ಶಿವಾಜಿ ನಡೆದುಕೊಳ್ಳುತ್ತಿದ್ದ ರೀತಿ ಎಂದು ಮರೆಯಲು ಸಾಧ್ಯವಿಲ್ಲ. ಇದು ಇತಿಹಾಸಕ್ಕೆ ಶಿವಾಜಿ ನೀಡಿದ ಶ್ರೇಷ್ಠವಾದ ಕೊಡುಗೆಯಾಗಿದೆ. ಇನ್ನೂ ರಾಂಝೆ ಪಾಟೀಲ ಎನ್ನುವ ವ್ಯಕ್ತಿ ರೈತನ ಮಗಳ ಮೇಲೆ ಅತ್ಯಾಚಾರ ಮಾಡಿದಾಗ ಆತನ ಕೈಯನ್ನು ಕತ್ತರಿಸಿ ಹಾಕಿ ಅತ್ಯಾಚಾರಿಗಳಿಗೆ ಎಚ್ಚರಿಕೆ ನೀಡಿದ ಶಿವಾಜಿ ರಾಜೆ ಪ್ರಸ್ತುತ ಸನ್ನಿವೇಶದಲ್ಲಿ ನಮ್ಮನ್ನು ಹೇಗೆ ತಾನೆ ಕಾಡದೇ ಇರುತ್ತಾನೆ ಹೇಳಿ? ಸೇನಾಪತಿಯಾದ ಸುಖಜಿ ಗಾಯಕವಾಡ ಕರ್ನಾಟಕದ ಗದಗ ಬಳಿಯ ಬೆಲವಾಡಿ ಕೋಟೆಗೆ ಮುತ್ತಿಗೆ ಹಾಕಿದ ಆದರೆ ಅದರ ವಾರಸುದಾರೆಯಾದ ಸಾವಿತ್ರಿಬಾಯಿ ದೇಸಾಯಿ ಅವಳಿಗಿದ್ದ ಇನ್ನೊಂದು ಹೆಸರು ಮಲ್ಲಮ್ಮ. ವಾರಗಟ್ಟಲೇ ಹೋರಾಟ ಮಾಡಿ ಕೊನೆಗೆ ಶರಣಾದಳು. ವಾರದಿಂದ ಅವಳನ್ನು ಸೋಲಿಸಲು ಹೆಣಗಾಡಿ ಹುಚ್ಚನಂತಾಗಿದ್ದ ಗಾಯಕವಾಡನು ಅವಳ ಮೇಲೆ ದೌರ್ಜನ್ಯ ಮಾಡಿದ್ದನ್ನು ಸಹಿಸಿಕೊಳ್ಳದ ಶಿವಾಜಿ ಅವನು ದಂಡನಾಯಕನಿದ್ದರೂ ಆ ಕೋಟೆಯನ್ನು ಕೈವಶ ಮಾಡಿಕೊಂಡಿದ್ದರೂ ಸಹ ಅವನ ಕಣ್ಣು ಕೀಳಿಸಿ ಸೆರೆಮನೆಗೆ ತಳ್ಳಿದ ಶಿವಾಜಿಯಂತ ಆಡಳಿತಗಾರ ಇದ್ದಿದ್ದರೆ ನಮ್ಮ ದೇಶದ ಮಹಿಳೆಯರು ಮತ್ತಷ್ಟು ಸುರಕ್ಷಿತರಾಗುತ್ತಿದ್ದರಲ್ಲ ಎನ್ನುವ ಮಾತು ಸದಾ ಕಾಡುತ್ತಲೇ ಇರುತ್ತದೆ. ಬೆಳವಡಿ ಕೋಟೆಗೆ ಮುತ್ತಿಗೆ ಹಾಕಿದಾಗ ಅದನ್ನಾಳುತ್ತಿರುವುದು ಹೆಣ್ಣು ಎಂದು ತಿಳಿಯುತ್ತಲೇ ಆಕೆಯ ಪಾದಗಳಿಗೆ ಎರಗಿ ಕ್ಷಮೆ ಕೇಳಿದ ಆ ವಿನಮ್ರತೆಯ ಗುಣ ಇಂದು ಯಾರಿಗೂ ಇಲ್ಲ. ಎಲ್ಲೆ ದಾಳಿ ಮಾಡಿದರೂ ಸಹ ಶಿವಾಜಿ ತನ್ನ ಸೈನಿಕರಿಗೆ ಹೇಳುತ್ತಲಿದ್ದ ಮಾತು ಒಂದೇ. “ಯಾವುದೇ ಕಾರಣಕ್ಕೂ ಮಹಿಳೆ ಹಾಗೂ ಮಕ್ಕಳು ಮತ್ತು ವೃದ್ಧರು ಹಾಗೂ ಸಾಮಾನ್ಯ ಜನಗಳ ಮೇಲೆ ಕೈ ಮಾಡಬಾರದು. ಅವರ ಆಸ್ತಿಗಳಿಗೆ ಕೈ ಹಚ್ಚಬಾರದು” ಎಂದು ಹೇಳುತ್ತಿದ್ದ ಮಾತು ಕೇಳಿದರೆ ಶಿವಾಜಿ ಅದೆಂತ ಅದ್ಭುತವಾದ ವ್ಯಕ್ತಿತ್ವ ಹೊಂದಿದ್ದನ್ನು ನೆನೆಯುತ್ತಲೇ ಹೃದಯ ತುಂಬಿ ಬರುತ್ತದೆ.
ಅದೇ ರೀತಿ ಧರ್ಮಾತ್ಮನಾದ ಶಿವಾಜಿ ಯಾವತ್ತು ಮತಾಂದನಾಗಲಿಲ್ಲ. ಹಿಂದು ಹೃದಯ ಸಾಮ್ರಾಟನಾಗಿ ವಿರಾಜಮಾನನಾದ ಮಹಾರಾಜ ಯಾವತ್ತೂ ಇಸ್ಲಾಂನ್ನು ದ್ವೇಷಿಸಲಿಲ್ಲ. ಹೋರಾಟದ ಹಾದಿಯಲ್ಲಿ ಸಿಕ್ಕ ಖುರಾನನ್ನು ಹಾಗೂ ಇಸ್ಲಾಂ ಮಹಿಳೆಯರನ್ನು ಗೌರವ ಹಾಗೂ ಭಕ್ತಿಯಿಂದ ಕಂಡಿದ್ದನ್ನು ಓದಿದರೇ ಸಾಕು ಈಗೇಕೆ ನೀನಿಲ್ಲದೇ ಹೋದೆ ಎಂದು ಹೃದಯ ಆರ್ದ್ರವಾಗುತ್ತದೆ. ಶಿವಾಜಿಯ ಮಗ ಸಂಬಾಜಿಯನ್ನು ಸೆರೆ ಹಿಡಿದು ಓರಂಗ ಜೇಬ ತಲೆ ಕಡಿಸುತ್ತಾನೆ. ಶಿವಾಜಿಯನ್ನು ಮೋಸದಿಂದ ಸಾಯಿಸಿ ಅವನ ತೆಲೆಯನ್ನು ಕಡಿದು ಇಡುವುದಕ್ಕಾಗಿ ಬೆಳ್ಳಿಯ ಸಂದೂಕವನ್ನು ಮಾಡಿಸುತ್ತಾನೆ. ಆದರೆ ಅದೇ ಶಿವಾಜಿಯು ತನ್ನಿಂದ ಹತ್ಯೆಯಾದ ಅಫ್ಜಲ್‌ಖಾನ್‌ನ ತೆಲೆಗೆ ಗೌರವ ನೀಡಿ ಅವರ ಶರೀರನ್ನು ಕೋಟೆಗೆ ಕೊಂಡೊಯ್ದು ಇಸ್ಲಾಂ ಸಂಪ್ರದಾಯದಂತೆ ಸಂಸ್ಕಾರ ಮಾಡಿದ್ದು ಶಿವಾಜಿಯ ಹೃದಯ ವೈಶಾಲ್ಯತೆಯನ್ನು ಎತ್ತಿ ತೋರಿಸುತ್ತದೆ. ಬಡವರ, ರೈತರ, ತಿರಸ್ಕಾರಕ್ಕೆ ಒಳಗಾದವರನ್ನು ಕಂಡಾಗ ಶಿವಾಜಿಯ ಹೃದಯ ಮಿಡಿಯುತ್ತಿತ್ತು. ಸದಾ ಅವರ ಏಳಿಗೆಗಾಗಿ ಶ್ರಮಿಸುತ್ತಿದ್ದ ಶಿವಾಜಿ ಕೇವಲ ಸಾಮ್ರಾಜ್ಯ ವಿಸ್ತಾರದ ನೀತಿಯನ್ನು ಹೊಂದಿರದೇ ಅತ್ಯುತ್ತಮ ಆಡಳಿತವನ್ನು ನಡೆಸಿದ್ದು ಈಗಿನ ನಾಯಕರುಗಳಿಗೆ ಮಾದರಿಯಾಗಿ ನಿಲ್ಲುತ್ತದೆ. ಚಿಕ್ಕವರನ್ನು ದೊಡ್ಡವರನ್ನಾಗಿ ಕಂಡ ಶಿವಾಜಿಯನ್ನು ಚಿಕ್ಕವರೇ ದೊಡ್ಡವನನ್ನಾಗಿಸಿದರು. ಇದರ ಪರಿಣಾಮವಾಗಿಯೇ ಇತಿಹಾಸದಲ್ಲಿ ವಿರಾಜಮಾನನಾಗಿ ಕುಳಿತಿದ್ದಾರೆ. ಮಂದಿರವಾಗಲಿ ಮಸಿದಿಯಾಗಲಿ ಅದು ಅವರ ಭಕ್ತಿಗೆ ಬಿಟ್ಟಿದ್ದು ಎಂದು ಹೇಳುತ್ತಿದ್ದ ಶಿವಾಜಿ ಸರ್ವರಿಗೂ ಸಹಾಯ ಮಾಡುತ್ತಲಿದ್ದುದು ಅವರಿಗಾಗಿ ಮಡಿಯುವುದಕ್ಕು ಸಾಮಾನ್ಯನು ಸಿದ್ಧನಾಗುತ್ತಿದ್ದನು. ನೇರವಾಗಿ ಶಿವಾಜಿಯ ಮುಖವನ್ನು ನೋಡದೇ ಇರುವ ಮಾವಳಿಯ ಪೋರರು, ರೈತರ ಮಕ್ಕಳು ಶಿವಾಜಿಗಾಗಿ ಪ್ರಾಣಕೊಡಲು ಸಿದ್ಧರಾಗುತ್ತಿದ್ದರೆಂದರೆ ಅರ್ಥ ಮಾಡಿಕೊಳ್ಳಬೇಕು ಅವನೆಂತ ಜನನಾಯಕನಾಗಿರಬೇಕು ಎಂದು. ಇದು ಇಂದು ನನ್ನನ್ನು ಬಿಟ್ಟು ಬಿಡದೇ ಕಾಡುತ್ತಿದೆ.
ನೇತಾಜಿ ಸುಭಾಶ್ಚಂದ್ರ ಬೋಸ, ವಿವೇಕಾನಂದ, ವೀರ ಸಾವರಕರ್ ಅವರಂತ ಶ್ರೇಷ್ಠ ಭಾರತೀಯರು ಕೂಡ ಶಿವಾಜಿ ಎಂದರೆ ಅಪ್ರತಿವಾದ ಅಭಿಮಾನ ತೋರಿಸುತ್ತಾರೆ. ಅದಕ್ಕೆ ಕಾರಣ ಅವನ್ನೊಬ್ಬ ಹಿಂದೂ ರಾಜನೆಂದಲ್ಲ. ಬದಲಿಗೆ ಅವರು ಮಾಡಿದ ಶ್ರೇಷ್ಠವಾದ ಅಢಳಿತಕ್ಕಾಗಿ. ಎಲ್ಲಕ್ಕಿಂತ ಹೆಚ್ಚಾಗಿ ಅವರಲ್ಲಿನ ಆದರ್ಶಗಳಿಗಾಗಿ. ಇದನ್ನು ಅರಿತುಕೊಂಡೇ ಆಗಿನ ಕಾಲದಲ್ಲಿ ಓರಂಗಜೇಬನಲ್ಲಿ ರಾಜಾಶ್ರಯ ಪಡೆದು ನಂತರ ಶಿವಾಜಿಯ ಸಾಹಸ ಕಾರ್ಯಕ್ಕೆ ಶರಣು ಬಂದು ಕವಿತೆ ಬರೆದ ಭೂಷಣ ಕವಿಯು ಶಿವಾಜಿಯನ್ನು ಕುರಿತು “ಶಿವಭೂಷಣ” ಎನ್ನುವ ಗ್ರಂಥವನ್ನು ಬರೆಯುತ್ತ ಈ ಸಾಲುಗಳನ್ನು ಉಲ್ಲೇಖಿಸುತ್ತಾನೆ.
“ಶ್ರೀಗಂಧದಲ್ಲಿ ನಾಗಸರಿ್ವದೆ. ಇಂದ್ರನ ಗಜೇಂದ್ರನಲ್ಲಿ ಮದ ದೋಷವಿದೆ.
ಶೇಷನಲ್ಲಿ ವಿಷ ತುಂಬಿದೆ. ಶುಭ್ರವರ್ಣದ ಶಂಕರನ ಕೊರಳು ನೀಲಿಯಾಗಿದೆ.
ಕಮಲವು ಕೆಸರಿನಲ್ಲಿದೆ. ಸಮುದ್ರದಲ್ಲೂ ಕೆಸರಿದೆ.
ಚಂದ್ರನು ಕಲಾ ಸುಂದರನಿದ್ದರೂ ಅವನಲ್ಲೂ ಕಲಂಕವಿದೆ.
ರಾಜಾ ಶಿವಾಜಿ! ನಿನ್ನ ನಿಷ್ಕಳಂಕ ಯಶಸ್ಸಿನಂತೆ ನಿರ್ದೋಷವಾಗಿರುವುದು ಯಾವುದಿದೆ?”
ಹೀಗೆ ಶಿವಾಜಿಯ ಕುರಿತು ಉಲ್ಲೇಖ ಮಾಡಿದ ಮಾತುಗಳು ನಮಗೆ ಶಿವಾಜಿಯ ಆದರ್ಶದ ಬದುಕು ಎಂಥದು ಎಂದು ತಿಳಿಸುವುದು. ಇಂಥ ಶಿವಾಜಿ ಭಾರತ ಮಣ್ಣಿನಲ್ಲಿ ಜನಿಸಿದ್ದರಲ್ಲ ಎನ್ನುವುದೇ ನಮಗೆ ಹೆಮ್ಮೆಯ ವಿಷಯವಾಗುತ್ತದೆ. ಇವರ ಸಾಹಸ, ಸಾಮ್ರಾಜ್ಯ ನೀತಿ, ಧಾರ್ಮಿಕತೆ, ತತ್ವ ಆದರ್ಶಗಳು ನಮ್ಮ ಆಧುನಿಕ ಭಾರತಿಯರಿಗೆ ಸ್ಫೂರ್ತಿಯಾಗಬೇಕೆ ಹೊರತು ಕೇವಲ ಮರಾಠರ ಪಾಲಿನ ಪ್ರೀತಿಯಾಗಬಾರದು. ಭಾರತ ವಿಶ್ವಗುರು ಆಗಬೇಕು ಎಂದು ಹೇಳಿಕೊಳ್ಳುತ್ತ ತಿರುಗಾಡಿದರೆ ಆ ಕನಸು ಈಡೇರಲು ಸಾಧ್ಯವಿಲ್ಲ. ಬದಲಿಗೆ ಶಿವಾಜಿ ಮಹಾರಾಜರಂತ ಆದರ್ಶ ಗುಣಗಳನ್ನು ನಾವು ಮೈಗೂಡಿಸಿಕೊಂಡು ಮುನ್ನಡೆದರೆ ಮಾತ್ರ ವಿಶ್ವ ಗುರು ಭಾರತದ ಕನಸು ನನಸಾಗುತ್ತದೆ. ಅದೇನೆ ಇರಲಿ ಪ್ರಸ್ತುತ ಸನ್ನಿವೇಶದಲ್ಲಿ ಭಾರತದ ಎದುರಿಸುತ್ತಿರುವ ಸಮಸ್ಯೆಗಳನ್ನು ಕಣ್ಣಾರೆ ಕಂಡಾಗ ಶಿವಾಜಿಯಂತಹ ಧಿಮಂತ ವ್ಯಕ್ತಿತ್ವದ ಮಹಾನ್ ನಾಯಕನ ಅಗತ್ಯತೆ ಎಷ್ಟಿದೆ ಎನ್ನುವುದು ನಮ್ಮನ್ನು ಕಾಡುತ್ತದೆ. ಅದಕ್ಕೆ ನಾನು ಹೇಳಿದ್ದು ಆತ ಹದಿನಾರನೇ ಶತಮಾನದಲ್ಲಿ ಜನಿಸಿದ್ದರೂ ಕೂಡ ಅವರ ಆದರ್ಶಗಳು ಇಪ್ಪತ್ತೊಂದನೇ ಶತಮಾನದಲ್ಲೂ ನಮ್ಮನ್ನು ಬೆಂಬಿಡದೇ ಕಾಡುತ್ತವೆ ಎಂದರೆ ಆ ವ್ಯಕ್ತಿತ್ವ ಹೇಗಿರಬೇಕು ಒಮ್ಮೇ ಊಹಿಸಿ.
- * * * -