ಶಿರಹಟ್ಟಿ ತಾಲೂಕಾಸ್ಪತ್ರೆ: ಮುಂಜಾಗೃತವಾಗಿ ವೈರಸ್ ಶಂಕಿತರಿಗೆ ಪ್ರತ್ಯೇಕ ವಾರ್ಡ್ ವ್ಯವಸ್ಥೆ

ಶಶಿಧರ ಶಿರಸಂಗಿ

ಶಿರಹಟ್ಟಿ 06: ಇಡೀ ಜಗತ್ತಿನಾದ್ಯಂತ ಭಯ ಹುಟ್ಟಿಸಿರುವ ಮಹಾಮಾರಿ ಕೊರೊನಾ ವೈರಸ್ಗೆ ಎಲ್ಲರೂ ಹೆದರುವಂತಾಗಿದೆ. ನೆರೆಯ ದೇಶ ಚೀನಾದಿಂದ ಹಿಡಿದು ರಾಷ್ಟ್ರವನ್ನೇ ವ್ಯಾಪಿಸುತ್ತಿರುವ ಈ ವೈರಸ್ನಿಂದ ದೂರವಿರಲು ಹಲವಾರು ಮುನ್ನಚ್ಚರಿಕಾ ಕ್ರಮವಾಗಿ ಒಂದು ವೇಳೆ ಶಂಕಿತ ರೋಗಿಗಳು ಪತ್ತೆಯಾದ ಕೂಡಲೇ ಆ ರೋಗಿಗಳಿಗೆ ತಪಾಸಣೆ ಮತ್ತು ಚಿಕಿತ್ಸೆಗಾಗಿ ಪಟ್ಟಣದ ಸರಕಾರಿ ತಾಲೂಕಾಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ ವ್ಯವಸ್ಥೆ ಮಾಡಲಾಗಿದೆ.

ಜಗತ್ತಿನಾದ್ಯಂತ ಅನೇಕ ಜೀವಗಳನ್ನು ಬಲಿ ಪಡೆದು ಭಾರತಕ್ಕೂ ಪ್ರವೇಶಿಸಿರುವ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಾರಣ ತಾಲೂಕ ಮತ್ತು ಜಿಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಚಿಕಿತ್ಸೆಗಾಗಿ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಅದರಂತೆ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿಯೂ ಕೂಡಾ ಕೊರೊನಾ ವೈರಸ್ ರೋಗಿಗಳ ಚಿಕಿತ್ಸೆಗಾಗಿ ಒಂದು ವಾರ್ಡನ್ನು ಸಿದ್ದಪಡಿಸಲಾಗಿದೆ.

ಶಂಕಿತರಿಗೆ ಪ್ರತ್ಯೇಕ ವಾರ್ಡ: ಆಸ್ಪತ್ರೆಗೆ ರೋಗಿಗಳು ಚಿಕಿತ್ಸೆಗಾಗಿ ಬಂದಲ್ಲಿ ಕೊರೊನಾ ವೈರಸ್ ಇರುವ ಅನುಮಾನ ವ್ಯಕ್ತವಾದಲ್ಲಿ ಕೂಡಲೆ ಅವರನ್ನು ಎಡ್ಮಿಟ್ ಮಾಡಿಕೊಂಡು ಹೆಚ್ಚಿನ ತಪಾಸಣೆಗೆ ಒಳಪಡಿಸಲು ಪ್ರತ್ಯೇಕ ವಾರ್ಡನ್ನು ಸಿದ್ದ ಪಡಿಸಲಾಗಿದೆ. ಈ ವಾರ್ಡ ಹವಾನಿಯಂತ್ರಣ ಕೊಠಡಿಯಾಗಿದ್ದು, ಇಂದಿನಿಂದ ಬೇರೆ ರೋಗಿಗಳಿಗೆ ಅಲ್ಲಿ ಸ್ಥಳಾವಕಾಶ ನೀಡದೆ ಕೇವಲ ಕೊರೊನಾ ವೈರಸ್ ಶಂಕಿತ ರೋಗಿಗಳಿಗಾಗಿ ಸ್ಥಳವನ್ನು ಕಾಯ್ದಿರಿಸಲಾಗಿದೆ. 

ವಾಟ್ಸ್ಪ್ ವದಂತಿ ಹರಿದಾಡುತ್ತಿರುವದು: ಕೊರೊನಾ ವೈರಸ್ ಭಾರತಕ್ಕೂ ಹಬ್ಬುತಿದ್ದಂತೆಯೇ ಪಟ್ಟಣದಲ್ಲಿನ ಜನರ ವಾಟ್ಸ್ಪ್ ನಲ್ಲಿ "ಬಣ್ಣದ ಹಬ್ಬವನ್ನು ಆಚರಿಸಬೇಡಿ ಎಕೆಂದರೆ ನೀವು ಉಪಯೋಗಿಸುವ ಬಣ್ಣ ಚೀನಾ ದೇಶದವರು ತಯಾರಿಸಿದ್ದು, ಇದರಿಂದ ನಿಮಗೆ ಕೊರೊನಾ ವೈರಸ್ ತಗಲಬಹುದು" ಎಂಬ ಸಂದೇಶ ಹರಿದಾಡಲು ಪ್ರಾರಂಭಿಸಿದೆ. ಇದು ಸುಳ್ಳು ಸುದ್ದಿಯೋ ಅಥವಾ ಸತ್ಯಕ್ಕೆ ಸನಿಹವಾದುದೊ ಎಂಬ ಅಂಶವನ್ನು ಜಿಲ್ಲಾಡಳಿತ ದೃಢಪಡಿಸಬೇಕಾಗಿರುವದು ಅವಶ್ಯವಾಗಿದೆ.