ಪ್ರತಿಮೆ ಅನಾವರಣ : ಗಾಂಧಿವಾದಿಗಳಿಗೆ ಸನ್ಮಾನ ಬದಲು ಅವಮಾನ : ಎಳೆ ಬಿಸಿಲಿಗೆ ಬೆಂದ 90ರ ಜೀವಗಳು

Shame instead of honor for real Gandhians: Lives of 90s exposed to the hot sun

ಬೆಳಗಾವಿ : ಬೆಳಗಾವಿಯ ಸುವರ್ಣ ವಿಧಾನ ಸೌಧದ ಮುಂಭಾಗದಲ್ಲಿ ಮಂಗಳವಾರ ನಡೆದ ಗಾಂಧಿಜೀ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಅಪ್ಪಟ ಗಾಂಧಿವಾದಿ ಗಳಾದ ಸ್ವಾತಂತ್ರ್ಯ ಯೋಧರಿಗೆ ಸನ್ಮಾನದ ಬದಲು ಅವಮಾನ ಮಾಡಲಾಗಿದೆ. ಅಲ್ಲದೆ 90 ವರ್ಷದ ಜೀವಗಳಿಗೆ ಎಳೆ ಬಿಸಿಲಿನಲ್ಲಿ ಬೆಂದು ಹೋಗುವ ರೀತಿ ನಡೆದುಕೊಂಡಿರುವದು ಆಕ್ರೋಶಕ್ಕೆ ಕಾರಣವಾಗಿದೆ.

   ಗಾಂಧಿಜೀ ಅವರ ಅಧ್ಯಕ್ಷತೆಯಲ್ಲಿ 1924ರಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನಕ್ಕೆ ನೂರು ವರ್ಷಗಳು ಪೂರ್ಣ ಗೊಂಡ ಹಿನ್ನೆಲೆಯಲ್ಲಿ ಬೆಳಗಾವಿಯ ಸುವರ್ಣ ವಿಧಾನ ಸೌಧದ ಮುಂಭಾಗದಲ್ಲಿ ಸವಿ ನೆನಪಿಗಾಗಿ ಮಂಗಳವಾರ ಬೆಳಿಗ್ಗೆ ಗಾಂಧಿಜೀ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 

     ಗಾಂಧಿಜೀ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಸ್ವಾತಂತ್ರ್ಯ ಯೋಧರಿಗೆ ಈ ವೇಳೆ ಸನ್ಮಾನಕ್ಕಾಗಿ ಆಹ್ವಾನವನ್ನು ನೀಡಲಾಗಿತ್ತು. ಆದರೆ ಈ ಕಾರ್ಯಕ್ರಮಕ್ಕೆ ಕೆಲ ಸ್ವಾತಂತ್ರ್ಯ ಯೋಧರಿಗೆ ಪ್ರವೇಶ ಪಾಸ್ ನೀಡಲಾಗಿತ್ತು. ಇನ್ನು ಕೆಲ ಸ್ವಾತಂತ್ರ್ಯ ಯೋಧರಿಗೆ ಪ್ರವೇಶ ಪಾಸ್ ನೀಡದೆ ಇರುವದರಿಂದ ಅವರಿಗೆ ಕಳಿಸಲಾದ ಪತ್ರಗಳೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. 

    ಆದರೆ ಈ ಕಾರ್ಯಕ್ರಮ ಬಂದೋಬಸ್ತ್ ಗಾಗಿ ನಿಯೋಜನೆ ಮಾಡಲಾದ ಪೊಲೀಸರು ಸ್ವಾತಂತ್ರ್ಯ ಯೋಧರ ಬಳಿ ಪಾಸ್ ಇಲ್ಲದ ಕಾರಣ ಕಾರ್ಯಕ್ರಮಕ್ಕೆ ಒಳಗೆ ಬಿಡದೆ ತಡೆ ಹಿಡಿದು ಗೇಟ್ ಬಳಿ ನಿಲ್ಲಿಸುವ ಮೂಲಕ ಅವಮಾನ ಮಾಡಲಾಗಿದೆ.

   ಅಲ್ಲದೆ ಸುಮಾರು 90-95 ವರ್ಷದ ಸ್ವಾತಂತ್ರ್ಯ ಯೋಧರು ನಡೆಯಲು ಆಗದ ಕಾರಣ ತಮ್ಮ ಕುಟುಂಬಸ್ಥರ ಓರ್ವ ಸದಸ್ಯರ ಕೈ ಹಿಡಿದು ಒಳಬರುತ್ತಿದ್ದಂತೆ ಪೊಲೀಸರು ಅವರನ್ನು ತಡೆಹಿಡಿಯುವ ಮೂಲಕ ಅವಮಾನಿಸಿದ್ದಾರೆ. 

   ಅದೇ ರೀತಿ ಪ್ರತಿಮೆ ಅನಾವರಣ ವೇಳೆ ಸ್ವಾತಂತ್ರ್ಯ ಯೋಧರಿಗೆ ಒಂದು ನೆರಳಿನ ವ್ಯವಸ್ಥೆ ಮಾಡದೆ ಎಳೆ ಬಿಸಿಲಿನಲ್ಲಿ ಬೆಂದುಹೋಗುವ ರೀತಿ ಕುಡ್ರಿಸಲಾಯಿತು. ಈ ಘಟನೆಯ ವಿರುದ್ದ ಸ್ವಾತಂತ್ರ್ಯ ಯೋಧರ ಕುಟುಂಬಸ್ಥರು ಸರಕಾರ ಮತ್ತು ಪೊಲೀಸ ಇಲಾಖೆಯ ವಿರುದ್ದ ಆಕ್ರೋಶ ಹೊರಹಾಕಿದರು. 

ಮಾಧ್ಯಮದವರಿಗೆ ಧೂಳು, ತುಕ್ಕು ಹಿಡಿದ ಖುರ್ಚಿಗಳು : 

ಬೆಳಗಾವಿಯ ಸುವರ್ಣ ವಿಧಾನ ಸೌಧದ ಮುಂಭಾಗದಲ್ಲಿ ನಡೆದ ಗಾಂಧಿಜೀ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾಧ್ಯಮ ದವರಿಗೆ ಧೂಳು ತಿನ್ನುತಿದ್ದ ಹಾಗೂ ತುಕ್ಕು ಹಿಡಿದಿದ್ದ ಖುರ್ಚಿಗಳ ವ್ಯವಸ್ಥೆ ಮಾಡಲಾಗಿತ್ತು. 

   ಇದರ ವಿರುದ್ದವಾಗಿ ಮಾಧ್ಯಮದವರು ಧ್ವನಿ ಎತ್ತಿದಾಗ ಕಾಂಗ್ರೆಸ್ ನ ರಾಷ್ಟ್ರೀಯ ಹಿರಿಯ ಮುಖಂಡ ಜಯರಾಂ ರಮೇಶ, ಪವನ ಖೇರಾ ಅವರು ಆಗಮಿಸಿ ಮಾಧ್ಯಮದವರಿಗೆ ಆಗಿದ್ದ ಅವ್ಯವಸ್ಥೆ ಸರಿ ಪಡಿಸುವ ಕಾರ್ಯ ಮಾಡಿದರು.