ಬೆಳಗಾವಿ 21: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಅಂಗವಾಗಿ ಸುವರ್ಣ ವಿಧಾನಸೌಧ ಮುಂದೆ 25 ಅಡಿ ಎತ್ತರದ ಮಹಾತ್ಮ ಗಾಂಧೀಜಿ ಕಂಚಿನ ಪುತ್ಥಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಖರ್ಗೆ, ನನ್ನ ಜೀವನವೇ ನನ್ನ ಸಂದೇಶ ಎಂದು ಸಾರುವ ಗಾಂಧೀಜಿ ಮೂರ್ತಿ ಇಡೀ ದೇಶಕ್ಕೆ ಗೌರವ. ಇಡೀ ಜಗತ್ತು ಗಾಂಧೀಜಿ ಅವರನ್ನು ಗೌರವಿಸುತ್ತದೆ. ಬೆಳಗಾವಿ ಇಡೀ ದೇಶಕ್ಕೆ ಗೌರವ ತಂದುಕೊಡುವ ಸ್ಥಳ. ಯಾಕೆಂದರೆ ಗಾಂಧೀಜಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದು ಬೆಳಗಾವಿಯಲ್ಲಿ ಮಾತ್ರ. ಅಂತಹ ಮಹಾತ್ಮನ ಪುತ್ಥಳಿ ಉದ್ಘಾಟನೆ ನನ್ನ ಕೈಯಿಂದ ಆಗಿದ್ದಕ್ಕೆ ನನ್ನ ಜೀವನ ಧನ್ಯವಾಯಿತು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ರಾಮ ಭಕ್ತರಾಗಿದ್ದ, ಶುದ್ಧಆತ್ಮದ ಹಿಂದೂ ಆಗಿದ್ದ ಮಹಾತ್ಮ ಗಾಂಧಿಯನ್ನು ಬಿಜೆಪಿ ಪರಿವಾರದ ಗೋಡ್ಸೆ ಹತ್ಯೆ ಮಾಡಿದ. ನಾವು ಮಹಾತ್ಮಗಾಂಧಿ ಅವರ ಹಿಂದುತ್ವದಲ್ಲಿ ನಂಬಿಕೆ ಇಟ್ಟಿದ್ದೇವೆ. ಬಿಜೆಪಿ ಪರಿವಾರ ಗೋಡ್ಸೆಯ ಕೊಲೆಗಡುಕ ಸಿದ್ಧಾಂತವನ್ನು ಪಾಲಿಸುತ್ತಿದೆ. ಗಾಂಧೀಜಿಯವರು ಹೇಳಿದ ಹಿಂದುತ್ವದ ದ್ವೇಷಿಯಾಗಿರುವ, ಗಾಂಧಿ ತತ್ವದ ವಿರೋಧಿಯಾಗಿರುವ ಬಿಜೆಪಿ ಪರಿವಾರ ಸಂವಿಧಾನ ವಿರೋಧಿ ಮತ್ತು ಅಂಬೇಡ್ಕರ್ ದ್ವೇಷಿ ಆಗಿದೆ ಎಂದು ಟೀಕಿಸಿದರು.
ನಾವು ಮಹಾತ್ಮಗಾಂಧಿಯವರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಇನ್ನಷ್ಟು ಅರ್ಥಪೂರ್ಣವಾಗಿ ತಲುಪಿಸುವ, ಗಾಂಧಿಯವರ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡುವ ಗುರಿಯೊಂದಿಗೆ ಜೈ ಭಾಪು-ಜೈ ಭೀಮ್-ಜೈ ಸಂವಿಧಾನ ಅಭಿಯಾನಯನ್ನು ಮುನ್ನಡೆಸುತ್ತೇವೆ ಎಂದರು.
ಈ ವೇಳೆ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್, ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಡಿಸಿಎಂ ಡಿ.ಕೆ. ಶಿವಕುಮಾರ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಣದೀಪ ಸಿಂಗ್ ಸುರ್ಜೇವಾಲ, ಸಚಿವರಾದ ಹೆಚ್.ಕೆ. ಪಾಟೀಲ, ಡಾ. ಜಿ. ಪರಮೇಶ್ವರ, ಸತೀಶ ಜಾರಕಿಹೊಳಿ ಸೇರಿ ಮತ್ತಿತರರು ಉಪಸ್ಥಿತರಿದ್ದರು.