ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿ.ವಿ.ಯಲ್ಲಿ ಜರುಗಿದ ವಿಚಾರ ಸಂಕಿಣದಲ್ಲಿ ಶ್ರೀಶೈಲ ಜಗದ್ಗುರುಗಳ ಪ್ರತಿಪಾದನೆ
ಧಾರವಾಡ 04: ಭಾರತದ ಧಾರ್ಮಿಕ ಪರಂಪರೆಯ ಮೇರು ಸೈದ್ಧಾಂತಿಕ ವಿಚಾರಗಳಲ್ಲಿ ವೀರಶೈವ ಧರ್ಮದ ಸನಾತನವಾದ ಮತ್ತು ಸಮನ್ವಯ ಪರವಾದ ದರ್ಶನವೇ ಶಕ್ತಿವಿಶಿಷ್ಟಾದ್ವೈತ ಸಿದ್ಧಾಂತವಾಗಿದೆ ಎಂದು ಶ್ರೀಶೈಲ ಸೂರ್ಯ ಪೀಠದ ಶ್ರೀಜಗದ್ಗುರು ಡಾ. ಚೆನ್ನ ಸಿದ್ಧರಾಮ ಪಂಡಿತರಾಧ್ಯ ಶಿವಾಚಾರ್ಯ ಭಗವತ್ಪಾದರು ಪ್ರತಿಪಾದಿಸಿದರು.
ಅವರು ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ‘ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತ’ ಕುರಿತು ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದ ಸಾನಿಧ್ಯವನ್ನುವಹಿಸಿ ಮಾತನಾಡುತ್ತಿದ್ದರು. ಈಶ್ವರ, ಶಕ್ತಿ, ಜೀವ, ಜಗತ್ತು, ಬಂಧ, ಮೋಕ್ಷ ಮತ್ತು ಮೋಕ್ಷೋಪಾಯಗಳ ಕುರಿತಾಗಿ ಮಾಡುವ ಚಿಂತನೆಯನ್ನು ದರ್ಶನವೆಂದು ಕರೆಯಲಾಗುತ್ತದೆ. ಈ ಎಲ್ಲ ದಾರ್ಶನಿಕ ಸಂಗತಿಗಳ ಬಗ್ಗೆ ದಾರ್ಶನಿಕ ಲೋಕದಲ್ಲಿ ಹಲವಾರು ವಿಭಿನ್ನ ವಾದಗಳಿವೆ. ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತವು ಆ ಎಲ್ಲ ವಾದ-ವಿವಾದಗಳನ್ನು ಶೃತಿ ಸಮ್ಮತವಾಗಿ ಮತ್ತು ಯುಕ್ತಿಯುಕ್ತವಾಗಿ ಸಮನ್ವಯಗೊಳಿಸಿದ ಉತ್ಕೃಷ್ಟ ದರ್ಶನವಾಗಿದೆ. ಜಾತಿ, ವರ್ಣ, ವರ್ಗ ಮತ್ತು ಲಿಂಗ ಭೇದಗಳನ್ನು ನಿರಾಕರಿಸಿ ಧಾರ್ಮಿಕ ಆಚರಣೆಯಲ್ಲಿ ಸರ್ವರಿಗೂ ಸಮಾನ ಅವಕಾಶಗಳನ್ನು ನೀಡುವ ಮೂಲಕ ಸರ್ವ ಸಮಾನತೆಯನ್ನು ಈ ಸಿದ್ಧಾಂತವು ಪ್ರತಿಪಾದಿಸಿದೆ. ಶ್ರೀಜಗದ್ಗುರು ಪಂಚಾಚಾರ್ಯರು ಯುಗಯುಗಗಳಿಂದಲೂ ಉಪದೇಶ ಮಾಡುತ್ತ ಬಂದಿರುವುದರಿಂದ ಇದು ವೇದಾಗಮ ಸಮ್ಮತವಾದ ಸನಾತನ ದರ್ಶನವಾಗಿದೆ ಎಂದರು.
ಕಾಶಿ ಜ್ಞಾನ ಪೀಠದ ಕಿರಿಯ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ಮಾತನಾಡಿ, ಬೆಂಗಳೂರು ಮತ್ತು ಕಾಶಿಯ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯ ಸೇರಿದಂತೆ ಭಾರತದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತದ ಅಧ್ಯಯನ ವಿಭಾಗಗಳು ಸ್ಥಾಪನೆಯಾಗಿ, ಅಲ್ಲಿ ಅಧ್ಯಯನ-ಆಧ್ಯಾಪನ ಕಾರ್ಯಗಳು ನಡೆದುಕೊಂಡು ಬರುತ್ತಿವೆ. ಸಾವಿರಾರು ವಿದ್ಯಾರ್ಥಿಗಳು, ವಿದ್ವಾಂಸರು, ಮಠಾಧೀಶರು ಈ ಸಿದ್ಧಾಂತದ ಅಧ್ಯಯನ ಮಾಡಿ ವಿಭಿನ್ನ ಪದವಿ ಮತ್ತು ಉಪಾಧಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಪ್ರಸ್ತುತ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿಯೂ ಸಹ ನೂರಾರು ಜನ ವಿದ್ಯಾರ್ಥಿಗಳು ಈ ಸಿದ್ಧಾಂತವನ್ನು ಅಧ್ಯಯನ ಮಾಡಲು ತವಕಿಸುತ್ತಿದ್ದಾರೆ. ಆದರೆ ಇಲ್ಲಿ ಆ ವಿಭಾಗ ಇಲ್ಲದಿರುವುದರಿಂದ ಅವರಿಗೆ ಅವಕಾಶ ದೊರೆಯುತ್ತಿಲ್ಲ. ಹಾಗಾಗಿ ಈ ವಿಶ್ವವಿದ್ಯಾಲಯದ ವೇದಾಂತ ಸಂಕಾಯದಲ್ಲಿ ಶೀಘ್ರವೇ ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತದ ಅಧ್ಯಯನ ವಿಭಾಗವನ್ನು ಪ್ರಾರಂಭಿಸಿ ಎಲ್ಲ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಜಿ.ಎಸ್.ಆರ್.ಕೃಷ್ಣಮೂರ್ತಿ ಮಾತನಾಡಿ, ನಮ್ಮ ವಿಶ್ವವಿದ್ಯಾಲಯದಲ್ಲಿ ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತದ ಅಧ್ಯಯನ ವಿಭಾಗವನ್ನು ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು.
ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿ.ವಿ. ಪ್ರೊ. ರಜನೀಕಾಂತ ಶುಕ್ಲ ವಿಚಾರ ಸಂಕಿರಣ ಉದ್ಘಾಟಿಸಿದರು. ತಿರುಪತಿ ಸಂಸ್ಕೃತ ವಿ.ವಿ. ವೇದಾಂತ ವಿಭಾಗದ ಅಧ್ಯಕ್ಷ ಪ್ರೊ. ಕೆ ಗಣಪತಿ ಭಟ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಕಾಶಿಯ ಮೂರ್ಧನ್ಯ ವಿದ್ವಾಂಸ ಆರ್. ಕೃಷ್ಣಮೂರ್ತಿ ಶಾಸ್ತ್ರೀ ಅವರಿಗೆ ‘ವೇದಾಂತ ಭಾಸ್ಕರ’, ಚೆನ್ನೈನ ಶ್ರೇಷ್ಠ ವಿದ್ವಾಂಸ ಮಣಿದ್ರಾವಿಡ ಶಾಸ್ತ್ರೀ ಅವರಿಗೆ ‘ದರ್ಶನ ಸುಧಾಕರ’, ತಿರುಪತಿಯ ಫ್ರೊ. ಕೆ. ಗಣಪತಿ ಭಟ್‌ಗೆ ‘ದರ್ಶನವಾರಿಧಿ’, ನಂದ್ಯಾಲದ ಆಚಾರ್ಯ ರೇವಣಸಿದ್ಧಾಂತಿ ಅವರಿಗೆ ‘ಶಿವಾಗಮ ಸುಧಾಕರ’ ಎಂಬ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಬೆಳಗಾವಿ ಹುಕ್ಕೇರಿಮಠದ ಚಂದ್ರಶೇಖರ ಶ್ರೀಗಳು, ಕಡಗಂಚಿಯ ವೀರಭದ್ರ ಶ್ರೀಗಳು, ಸಿಂದಗಿಯ ಪ್ರಭು ಸಾರಂಗದೇವ ಶ್ರೀಗಳು, ಬೆಂಗಳೂರಿನ ಡಾ. ಮಹಾಂತಲಿಂಗ ಶ್ರೀಗಳು, ಕೆರೂರಿನ ಡಾ. ಶಿವಕುಮಾರ ಶ್ರೀಗಳು, ಶಹಾಪುರದ ಸೂಗುರೇಶ್ವರ ಶ್ರೀಗಳು, ಮಹಿಷಾಳದ ಡಾ. ಶಿವಯೋಗಿ ಶ್ರೀಗಳು, ಕೊಣ್ಣೂರಿನ ಡಾ. ವಿಶ್ವಪ್ರಭುದೇವ ಶ್ರೀಗಳು, ನೀಲಗಲ್ಲದ ರೇಣುಕ ಶಾಂತಮಲ್ಲ ಶ್ರೀಗಳ ಜೊತೆಗೆ ತಿರುಪತಿ ವಿಶ್ವವಿದ್ಯಾಲಯದ ವಿಭಾಗಗಳ ಪ್ರಾಚಾರ್ಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿವಿಧ ರಾಜ್ಯಗಳ ಹಲವಾರು ವಿದ್ವಾಂಸರು ತಮ್ಮ ವಿದ್ವತ್ಪೂರ್ಣ ಪ್ರಬಂಧಗಳನ್ನು ಮಂಡಿಸಿದರು.