ಢಾಕಾ, ನ 11 : ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಎರಡು ವರ್ಷ ನಿಷೇಧ ಶಿಕ್ಷಗೆ ಒಳಗಾಗಿರುವ ಬಾಂಗ್ಲಾದೇಶ ಆಲ್ರೌಂಡರ್ ಶಕಿಬ್ ಅಲ್ ಹಸನ್ ಅವರು ಇದೀಗ ಫುಟ್ಬಾಲ್ ತಂಡವೊಂದನ್ನು ಪ್ರತಿನಿಧಿಸುವ ಮೂಲಕ ಸುದ್ದಿಯಾಗಿದ್ದಾರೆ. ಬಾಂಗ್ಲಾದೇಶ ಆರ್ಮಿ ಕ್ರೀಡಾಂಗಣದಲ್ಲಿ ನಡೆದ ಫುಟ್ಬಾಲ್ ಪಂದ್ಯದಲ್ಲಿ ಶಕಿಬ್, ದಿ ಕೊರಿಯನ್ ಎಕ್ಸ್ ಪ್ಯಾಟ್ ತಂಡದ ವಿರುದ್ಧ ಫೂಟಿ ಹ್ಯಾಗ್ಸ್ ತಂಡದ ಪರ ಜೆರ್ಸ್ ತೊಟ್ಟಿದ್ದರು. ಈ ಪಂದ್ಯದಲ್ಲಿ ಶಕೀಬ್ ಪ್ರತಿನಿಧಿಸಿದ ತಂಡ ಫೂಟಿ ಹ್ಯಾಗ್ಸ್ ಜಯ ಸಾಧಿಸಿತ್ತು. ಪಂದ್ಯದ ಬಳಿಕ ತಂಡ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಆಟಗಾರರನ್ನೊಳಗೊಂಡ ಫೋಟೊವನ್ನು ಪ್ರಕಟಿಸಿದೆ. "ಭಾನುವಾರ ಇಲ್ಲಿನ ಬಾಂಗ್ಲಾದೇಶ ಆರ್ಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಫುಟ್ಬಾಲ್ ಪಂದ್ಯದಲ್ಲಿ ಕೊರಿಯನ್ ಎಕ್ಸ್ ಪ್ಯಾಟ್ ವಿರುದ್ಧ ಜಯ ಸಾಧಿಸಿದ್ದೇವೆ. ಶಕಿಬ್ ಅಲ್ ಹಸನ್ ಒಳಗೊಂಡ ಫೂಟಿ ಹ್ಯಾಗ್ಸ್ ತಂಡ 3-2 ಅಂತರದಲ್ಲಿ ಎದುರಾಳಿ ತಂಡವನ್ನು ಮಣಿಸಿತ್ತು" ಎಂಬ ಶೀರ್ಷಿಕೆಯೊಂದಿಗೆ ಫೂಟಿ ಹ್ಯಾಗ್ಸ್ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದೆ. ಮ್ಯಾಚ್ ಫಿಕ್ಸಿಂಗ್ ಪ್ರಕರಣ ಸಂಬಂಧ ಶಕಿಬ್ ಅಲ್ ಹಸನ್ ಅವರು ಎರಡು ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿಷೇಧ ಶಿಕ್ಷೆಗೆ ಒಳಗಾಗಿದ್ದಾರೆ. ಸದ್ಯ ಅವರು ಶಿಕ್ಷೆಯಲ್ಲಿದ್ದು, ಫುಟ್ಬಾಲ್ ಆಡುವ ಮೂಲಕ ಸುದ್ದಿಯಾಗಿದ್ದಾರೆ. ಬಾಂಗ್ಲಾದೇಶದ ಭಾರತ ಪ್ರವಾಸಕ್ಕೂ ಮುನ್ನ ಅವರು ಶಿಕ್ಷಗೆ ಗುರಿಯಾಗಿದ್ದರು. ಜುಲೈ 14 ರಂದು ಮುಕ್ತಾಯವಾಗಿದ್ದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶಕಿಬ್, ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದರು. ಎಂಟು ಪಂದ್ಯಗಳಾಡಿದ್ದ ಶಕಿಬ್, 606 ರನ್ ದಾಖಲಿಸಿದ್ದರು. ಅತಿ ಹೆಚ್ಚು ರನ್ ಗಳಿಸಿದ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದರು. ಮೊದಲೆರಡು ಸ್ಥಾನಗಳಲ್ಲಿ ರೋಹಿತ್ ಶರ್ಮಾ (648) ಹಾಗೂ ಡೇವಿಡ್ ವಾರ್ನರ್(647) ಇದ್ದರು.