ಶಹಜಹಾನ್ಪುರ, ನ6: ಕೇಂದ್ರದ ಮಾಜಿ ಸಚಿವ, ಬಿಜೆಪಿ ಮುಖಂಡ ಚಿನ್ಮಯಾನಂದ ವಿರುದ್ಧದ ಲೈಂಗಿಕ, ದೌರ್ಜನ್ಯ , ಕಿರುಕುಳ ಪ್ರಕರಣದ ಬಗ್ಗೆ ತನಿಖೆ ನಡೆಸಿದ ವಿಶೇಷ ತನಿಖಾ ತಂಡ ಉತ್ತರ ಪ್ರದೇಶ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಜೆಪಿಎಸ್ ರಾಥೋಡ್ ಸಹೋದರ ಸೇರಿ ಇಬ್ಬರು ಪ್ರಮುಖ ಮುಖಂಡರ ವಿರುದ್ಧ ಸುಲಿಗೆ ಪ್ರಕರಣ ಸಂಬಂಧ ಇಂದು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಿದೆ. ಸ್ಥಳೀಯ ಬಿಜೆಪಿಯ ಪ್ರಭಾವಿ ಮುಖಂಡ ಅಜಿತ್ ಸಿಂಗ್ ವಿರುದ್ಧವೂ ಚಿನ್ಮಯಾನಂದ ಸುಲಿಗೆ ಪ್ರಕರಣದ ಸಂಬಂಧ ಆರೋಪ ಹೊರಿಸಲಾಗಿದ್ದು ಇದರ ಮೂಲಕ ಶಹಜಹಾನ್ಪುರ ಬಿಜೆಪಿಯಲ್ಲಿನ ಆಂತರಿಕ ಸಂಘರ್ಷ ತಾರಕಕ್ಕೆ ಮುಟ್ಟಲಿದೆ ಎನ್ನಲಾಗಿದೆ. ತನಿಖೆಯ ಆರಂಭದಲ್ಲಿ ಅಪರಿಚಿತರ ವಿರುದ್ಧ ಸುಲಿಗೆ ಪ್ರಕರಣ ದಾಖಲಿಸಲಾಗಿತ್ತು. ಆದರೆ ಎಸ್ಐಟಿ ತನಿಖೆ ಮಾಡಿದ ನಂತರ ಕಾನೂನು ವಿದ್ಯಾರ್ಥಿನಿ ಹಾಗೂ ಆಕೆಯ ಸ್ನೇಹಿತರ ವಿರುದ್ಧ ಆರೋಪ ಹೊರಿಸಲಾಗಿತ್ತು. ಎಸ್ಐಟಿ ಇಂದು ಚಿನ್ಮಯಾನಂದ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಬಗ್ಗೆಯೂ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಿದೆ. ಪ್ರಕರಣದ ತನಿಖೆ ಮುಗಿದಿದ್ದು, ಬುಧವಾರ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗುವುದು ಎಂದು ಎಸ್ಐಟಿ ಮುಖ್ಯಸ್ಥ ನವೀನ್ ಅರೋರಾ ಹೇಳಿದ್ದಾರೆ.