ಕೊರೊನಾ ಭೀತಿ: ಮದುವೆಯಲ್ಲಿ ಏಳು ಜನ ಭಾಗಿ

ಮಡಿಕೇರಿ,  ಮಾ.26, ಕೊರೊನಾ ವೈರಸ್ ಸೋಂಕು ತಡೆಗಟ್ಟಲು ದೇಶವೇ ಲಾಕ್ ಡೌನ್ ಆದ  ಹಿನ್ನೆಲೆಯಲ್ಲಿ ಮದುವೆಯೊಂದರಲ್ಲಿ ವಧು-ವರ ಸೇರಿ ಕೇವಲ ಏಳು ಜನ ಮಾತ್ರ  ಭಾಗಿಯಾಗಿರುವುದು ವರದಿ ಆಗಿದೆ.ಮಡಿಕೇರಿಯ ರಂಜಿತ್ ಮತ್ತು ಕಾಸರಗೋಡು ತಾಲೂಕಿನ ಗ್ರಾಮವೊಂದರ ಹುಡುಗಿ ಅನುಷಾಗೆ ಗುರುವಾರ ಮದುವೆ ಸುಳ್ಯದ ಪುರಭವನದಲ್ಲಿ ಮದುವೆ ನಿಶ್ಚಯವಾಗಿತ್ತು. ಅದಾಗಲೇ ಮದುವೆಗಾಗಿ ಐದುನೂರು ಜನರಿಗೆ ಆಮಂತ್ರಣ ಪತ್ರಿಕೆ ಹಂಚಲಾಗಿತ್ತಲ್ಲದೇ, ಪುರಭವನಕ್ಕೂ ಮುಂಗಡ ಹಣ ನೀಡಲಾಗಿತ್ತು.
ಆದರೆ  ಕೊರೊನಾ ವೈರಸ್‍ನಿಂದಾಗಿ ದೇಶವನ್ನು ಲಾಕ್‍ಡೌನ್ ಮಾಡಿರುವುದರಿಂದ ಮದುವೆಯ ಸ್ಥಳವನ್ನು  ಮಡಿಕೇರಿಗೆ ಬದಲಾಯಿಸಿ ನಗರದ ಹೊರವಲಯದಲ್ಲಿರುವ ರಾಜರಾಜೇಶ್ವರಿ ದೇವಾಲಯದಲ್ಲಿ ಮದುವೆ  ನಿಶ್ಚಯಿಸಲಾಗಿತ್ತು. ಈ ಮದುವೆಯಲ್ಲಿ ವಧು-ವರರ ತಂದೆ,ತಾಯಿ ಮತ್ತು ಅರ್ಚಕರು ಮಾತ್ರವೇ  ಭಾಗಿಯಾಗಿದ್ದರು.ಈ ಕುರಿತು  ವರ ರಂಜಿತ್ ಸುದ್ದಿಗಾರರೊಂದಿಗೆ ಮಾತನಾಡಿ, ಅದ್ಧೂರಿಯಾಗಿ ಮದುವೆ ಆಗಬೇಕು ಎಂದು ಸುಮಾರು  500 ಮದುವೆ ಆಮಂತ್ರಣ ಪತ್ರಿಕೆಯನ್ನು ಹಂಚಲಾಗಿತ್ತು. ಆದರೆ,  ಕೊರೊನಾ ವೈರಸ್‍ನಿಂದ  ಇಡೀ ಜಗತ್ತು ಆಂತಕಕ್ಕೆ ಒಳಗಾಗಿದ್ದ ರಿಂದ ಸರಳವಾಗಿ ಮದುವೆ ಆಗಿದ್ದೇವೆ ಎಂದು ತಿಳಿಸಿದರು.