ಬೆಂಗಳೂರು,ಆ 05 ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರ ರೈತರಿಗೆ ಎರಡು ಕಂತಿನಲ್ಲಿ 4000ರೂ ಗಳನ್ನು ನೀಡುವ ಘೋಷಣೆ ಮಾಡಿದೆ. ಆದರೆ ಯೋಜನೆ ಜಾರಿಗೆ ಹಣಕಾಸಿನ ಸಮಸ್ಯೆ ಎದುರಾಗಿದೆ. ಈ ಕೊರತೆ ನೀಗಿಸಲು ಕಾಂಗ್ರೆಸ್ ಹಾಗೂ ಮೈತ್ರಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಎಳ್ಳು ನೀರು ಬಿಡಲು ಬಿಜೆಪಿ ಸರ್ಕಾರ ಮುಂದಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರ 4 ಸಾವಿರ ರೂಗಳನ್ನು ನೀಡುವುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ ದಿನವೇ ಘೋಷಿಸಿದ್ದಾರೆ. ಆದರೆ ಯೋಜನೆ ಜಾರಿಗಾಗಿ 2200 ಕೋಟಿ ರೂಗಳ ಅನುದಾನದ ಅಗತ್ಯವಿದೆ. ಮಧ್ಯಂತರ ಆರ್ಥಿಕ ವರ್ಷದಲ್ಲಿ ದೊಡ್ಡ ಮೊತ್ತದ ಅನುದಾನ ಕ್ರೋಢೀಕರಣ ಕಷ್ಟಸಾಧ್ಯವಾಗಿದೆ ಎಂದು ಅರ್ಥಿಕ ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿ ಅವರಿಗೆ ಸಲಹೆ ನೀಡಿದ್ದಾರೆ. ಆರ್ಥಿಕ ಇಲಾಖೆ ಅಧಿಕಾರಿಗಳ ಸಲಹೆಯನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಹೇಗಾದರೂ ಮಾಡಿ ಅನುದಾನ ಹೊಂದಿಸುವಂತೆ ಆರ್ಥಿಕ ಹಾಗೂ ಇತರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿ ಅವರ ಸಲಹೆಯ ಮೇರೆಗೆ ಪರಿಶೀಲನೆ ನಡೆಸಿರು ಅಧಿಕಾರಿಗಳು ಕಾಂಗ್ರೆಸ್ ಸರ್ಕಾರ ಹಾಗೂ ಮೈತ್ರಿ ಸರ್ಕಾರ ಘೋಷಿಸಿದ ಹಾಗೂ ಅನುಷ್ಟಾನವಾಗದೆ ಇರುವ ಯೋಜನೆಗಳಿಗೆ ಬ್ರೇಕ್ ಹಾಕಿ ಆ ಅನುದಾನವನ್ನು ಕಿಸಾನ್ ಸಮ್ಮಾನ್ ಯೋಜನೆಗೆ ಬಳಸಿಕೊಳ್ಳಲು ಚಿಂತನೆ ನಡೆಸಿದ್ದಾರೆಂದು ಸರ್ಕಾರದ ಉನ್ನತ ಮೂಲಗಳು ಖಚಿತಪಡಿಸಿವೆ. ಸಾಲಮನ್ನಾ ಯೋಜನೆಗಾಗಿ ಮೀಸಲಿಟ್ಟಿರುವ ಅನುದಾನದಲ್ಲಿ ಅನರ್ಹ ಸಾಲಗಳಿಂದ ಅಂದಾಜು 5000 ಕೋಟಿ ರೂ, ಸಹಕಾರಿ ಬ್ಯಾಂಕ್ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಎರಡೂ ಕಡೆಗಳಲ್ಲಿ ಸಾಲ ಪಡೆದ ಅನರ್ಹಗೊಂಡಿರುವ ರೈತರ ಖಾತೆಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 3000 ಕೋಟಿ ರೂ ಉಳಿತಾಯವಾಗಲಿದೆ. ಅಲ್ಲದೆ ಅಸ್ಥಿತ್ವದಲ್ಲಿರದ ರೈತರ ಸಾಲಗಳನ್ನು ಹೊರತುಪಡಿಸುವುದರಿಂದ ಆರ್ಥಿಕ ಇಲಾಖೆಗೆ 1500 ಕೋಟಿ ರೂ ಉಳಿತಾಯವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ವಿಪರ್ಯಾಸವೆಂದರೆ ಸಾಲಮನ್ನಾ,ರೈತರ ದಾಖಲೆಗಳ ಪರಿಶೀಲನೆ ಹಾಗೂ ಪ್ರತೀ ತಿಂಗಳು ಇಂತಿಷ್ಟು ಅನುದಾನವನ್ನು ಸಾಲಮನ್ನಾ ಬಾಬ್ತಿಗಾಗಿ ಬ್ಯಾಂಕ್ ಗಳಿಗೆ ಸಕರ್ಾರ ಪಾವತಿಸಬೇಕಾಗಿರುವುದರಿಂದ ಸಾಲಮನ್ನಾ ಹಣವನ್ನು ಏಕಾಏಕಿ ಬಳಸಿಕೊಳ್ಳುವುದು ಸರ್ಕಾರಕ್ಕೆ ಕಷ್ಟಸಾಧ್ಯವಾಗಿದೆ.ಹೀಗಾಗಿ ಪರ್ಯಾಯ ಯೋಜನೆಗಳ ಅನುದಾನಕ್ಕೆ ಕತ್ತರಿ ಪ್ರಯೋಗಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಮುಂದಿನ 10 ದಿನಗಳ ಒಳಗಾಗಿ ರೈತರು ಖಾತೆಗೆ 2000 ರೂಗಳ ಹಣನ್ನು ಜಮಾ ಮಾಡುವುದಾಗಿ ಮುಖ್ಯಮಂತ್ರಿ ಪ್ರಕಟಿಸಿದ್ದಾರೆ. ಹೀಗಾಗಿ 8 ದಿನಗಳ ಒಳಗಾಗಿ 1100 ಕೋಟಿ ರೂ ಅನುದಾನದ ಅವಶ್ಯಕತೆ ಇದೆ. ಹಣಕಾಸಿನ ಕೊರತೆ ಸರಿದೂಗಿಸಲು ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದ ಜನಪ್ರಿಯ ಕಾರ್ಯಕ್ರಮ,ಹಾಗೂ ಮೈತ್ರಿ ಸರ್ಕಾರದ ಘೋಷಿಸಿ ಅನುಷ್ಟಾನಗೊಳಿಸದಿರುವ ಯೋಜನೆಗಳ ಅನುದಾನವನ್ನು ಬಳಸಿಕೊಳ್ಳಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಜುಲೈ 26ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಇತರ ಇಲಾಖೆಗಳ ಯೋಜನೆ ಕಡಿತಗೊಳಿಸಿ ಅನುದಾನವನ್ನು ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಆರ್ಥಿಕ ಇಲಾಖೆ ಅಭಿಪ್ರಾಯ ಪಡೆದು ಮುಂದಿನ ಸಚಿವ ಸಂಪುಟ ಸಭೆಗೆ ಪ್ರಸ್ತಾವನೆ ಮಂಡಿಸುವಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೂಚಿಸಿದ್ದಾರೆ ಎನ್ನಲಾಗಿದೆ. ಆ ಮೂಲಕ ಬಿಜೆಪಿ ಸರ್ಕಾರದ ಜನಪ್ರಿಯ ಕಿಸಾನ್ ಸಮ್ಮಾನ್ ಯೋಜನೆಗಾಗಿ ಕಾಂಗ್ರೆಸ್ ಹಾಗೂ ಮೈತ್ರಿ ಸರ್ಕಾರದ ಜನಪ್ರಿಯ ಯೋಜನೆಗಳಿಗೆ ಎಳ್ಳು ನೀರು ಬಿಡುವ ತೀರ್ಮಾನಕ್ಕೆ ಬಂದಿದೆ ಎನ್ನಲಾಗಿದೆ.