ಸೇವಾ ಸಪ್ತಾಹ: ಏಮ್ಸ್ ಆಸ್ಪತ್ರೆ ಸ್ವಚ್ಛಗೊಳಿಸಿದ ಅಮಿತ್ ಶಾ, ನಡ್ಡಾ

  ನವದೆಹಲಿ, ಸೆ 14   ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಕಾರ್ಯಾಧ್ಯಕ್ಷ ಜೆ ಪಿ ನಡ್ಡಾ ಅವರು ಶನಿವಾರ ರಾಷ್ಟ್ರ ರಾಜಧಾನಿಯಲ್ಲಿ ಏಮ್ಸ್ ಆಸ್ಪತ್ರೆಯ ನೆಲ ಸ್ವಚ್ಛಗೊಳಿಸುವ ಮೂಲಕ 'ಸೇವಾ ಸಪ್ತಾಹ'ಕ್ಕೆ ಚಾಲನೆ ನೀಡಿದರು.   ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟೆಂಬರ್ 17 ರಂದು 69 ವರ್ಷ ಪೂರೈಸಿ 70ನೇ ವಸಂತಕ್ಕೆ ಕಾಲಿಡಲಿದ್ದು, ಜನ್ಮೋತ್ಸವದ ಅಂಗವಾಗಿ 'ಸೇವಾ ಸಪ್ತಾಹ' ಕ್ಕೆ ಚಾಲನೆ ನೀಡಲಾಗಿದೆ.   ಸ್ವಚ್ಛತೆಯ ನಂತರ ಏಮ್ಸ್ ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳನ್ನು ಭೇಟಿ ಮಾಡಿದ  ಅಮಿತ್ ಶಾ, ಅವರ ಆರೋಗ್ಯದ ಬಗ್ಗೆ ವಿಚಾರಿಸಿ ಫಲ ವಿತರಿಸಿದರು, ಹಾಗೂ ಶೀಘ್ರ ಗುಣಮುಖರಾಗುವಂತೆ ಹಾರೈಸಿದರು.   ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಬಡವರು ಹಾಗೂ ದೇಶಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ.  ಹೀಗಾಗಿ 'ಸೇವಾ ಸಪ್ತಾಹ'ದ ಮೂಲಕವೇ ಅವರ ಜನ್ಮದಿನ ಆಚರಿಸುವುದು ಸೂಕ್ತವೆನಿಸಿತು.  ಬಿಜೆಪಿ ಕಾರ್ಯಕರ್ತರು ದೇಶದೆಲ್ಲೆಡೆ ಈ ಸ್ತಪಾಹಕ್ಕೆ ಚಾಲನೆ ನೀಡಲಿದ್ದಾರೆ ಎಂದು ಅಮಿತ್ ಶಾ ತಿಳಿಸಿದರು.   ಈ ಸಂದರ್ಭದಲ್ಲಿ ಏಮ್ಸ್ ನಿರ್ದೇಶಕ ಏಮ್ಸ್ ರಣ್ ದೀಪ್ ಸಿಂಗ್ ಗುಲೇರಿಯಾ, ರಾಜ್ಯಸಭಾ ಸಂಸದ ವಿಜಯ್ ಗೋಯೆಲ್ ಹಾಗೂ ಹಿರಿಯ ವೈದ್ಯರು ಉಪಸ್ಥಿತರಿದ್ದರು.   ಆಸಕ್ತಿಕರ ಸಂಗತಿಯೆಂದರೆ, 'ಸೇವಾ ಸಪ್ತಾಹ'ದ ಸಂದರ್ಭದಲ್ಲಿ 'ಸ್ವಚ್ಛತಾ ಅಭಿಯಾನ, ಏಕ-ಬಳಕೆಯ ಪ್ಲಾಸ್ಟಿಕ್ ನಿಷೇಧ ಮತ್ತು ನೀರು ಕೊಯ್ಲು' ಸೇರಿದಂತೆ ಮೂರು ನಿರ್ಣಯಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ.   ದೇಶಾದ್ಯಂತ ಸೇವಾ ಸಪ್ತಾಹ ಆಚರಣೆಯಾಗಲಿದ್ದು, ಈ ಸಮಯದಲ್ಲಿ ರಕ್ತದಾನ ಶಿಬಿರಗಳು, ಆರೋಗ್ಯ ಶಿಬಿರಗಳು, ಕಣ್ಣಿನ ಪರೀಕ್ಷೆ, ಅನಾಥಾಶ್ರಮ ಭೇಟಿ ಮತ್ತು ಇತರ ಕಾರ್ಯಕ್ರಮಗಳ ಆಯೋಜನೆಯಾಗಲಿದ್ದು, ಸೆಪ್ಟೆಂಬರ್ 20 ರಂದು ಮುಕ್ತಾಯವಾಗಲಿದೆ.