ಕೋಲ್ಕತ್ತಾ, ಫೆ.28 : ದೇಶಿಯ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿ ಕುತೂಹಲ ಘಟ್ಟದತ್ತ ಮುಖ ಮಾಡಿದ್ದು, ಸೆಮಿಫೈನಲ್ಸ್ ಪಂದ್ಯದಲ್ಲಿ ಕರ್ನಾಟಕ ಹಾಗೂ ಬಂಗಾಳ ತಂಡಗಳು ಕಾದಾಟ ನಡೆಸಲಿವೆ.
ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಕರ್ನಾಟಕ ಕ್ವಾರ್ಟರ್ ಫೈನಲ್ಸ್ ಕಾದಾಟದಲ್ಲಿ ಜಮ್ಮು-ಕಾಶ್ಮೀರ್ ತಂಡವನ್ನು ಮಣಿಸಿ ಉಪಾಂತ್ಯ ಪ್ರವೇಶಿಸಿತ್ತು. ಇನ್ನು ಒಡಿಶಾವನ್ನು ಎಂಟರ ಘಟ್ಟದಲ್ಲಿ ಮಣಿಸಿರುವ ಬಂಗಾಳ ತಂಡ ನಾಲ್ಕರ ಘಟ್ಟಕ್ಕೆ ಪ್ರವೇಶ ಪಡೆದಿದೆ. ಕರ್ನಾಟಕ ಹಾಗೂ ಬಂಗಾಳ ತಂಡದ ಹಿಂದಿನ ಐದು ಮುಖಾಮುಖಿಯನ್ನು ಗಮನಿಸಿದರೆ, ಮೂರು ಡ್ರಾದಲ್ಲಿ ಅಂತ್ಯವಾಗಿದ್ದು, ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದಿವೆ.
ತವರಿನಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಬಂಗಾಳ ಪ್ರಶಸ್ತಿ ಸುತ್ತು ಪ್ರವೇಶಿಸುವ ಕನಸು ಹೊಂದಿದೆ. ಆದರೆ, ಬಂಗಾಳ ಕನಸಿಗೆ ಬ್ರೇಕ್ ಹಾಕಿ ಮತ್ತೊಮ್ಮೆ ಫೈನಲ್ ಗೆ ಅರ್ಹತೆ ಪಡೆಯುವ ಹಂಬಲದೊಂದಿಗೆ ಕರುಣ್ ಪಡೆ ಚಿತ್ತ ನೆಟ್ಟಿದೆ.
ರಾಹುಲ್ ಬಲ
ನ್ಯೂಜಿಲೆಂಡ್ ಪ್ರವಾಸದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಕರ್ನಾಟಕದ ಸ್ಟಾರ್ ಆಟಗಾರ ಕೆ.ಎಲ್ ರಾಹುಲ್ ತಂಡ ಸೇರಿಕೊಂಡಿದ್ದು, ಬ್ಯಾಟಿಂಗ್ ವಿಭಾಗಕ್ಕೆ ಬಲ ನೀಡಿದೆ. ರಾಹುಲ್ ಮಹತ್ವದ ಪಂದ್ಯಗಳಲ್ಲಿ ದೊಡ್ಡ ಇನ್ನಿಂಗ್ಸ್ ಕಟ್ಟುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಕೆ.ಎಲ್ ಬಂಗಾಳ ಬೌಲರ್ ಗಳ ರಣ ತಂತ್ರ ಬೇಧಿಸಲು ಯೋಜನೆ ರೂಪಿಸಿಕೊಂಡಿದ್ದಾರೆ.
ಇನ್ನು ಕರುಣ್ ನಾಯರ್ ಸಹ ಒತ್ತಡವನ್ನು ಮೆಟ್ಟಿ ನಿಂತು ಬ್ಯಾಟ್ ಮಾಡಬಲ್ಲರು. ಅಲ್ಲದೆ ಇವರಿಗೆ ಮನೀಷ್ ಪಾಂಡೆ ಉತ್ತಮ ಸಾಥ್ ನೀಡಿದರೆ, ಕರ್ನಾಟಕದ ಗೆಲುವು ಸಲಭವಾಗುತ್ತದೆ. ಪ್ರಸಕ್ತ ರಣಜಿ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ತಂಡದಲ್ಲಿ ಸ್ಥಾನ ಪಡೆದಿರುವ ಯುವ ಆಟಗಾರ ದೇವದತ್ ಪಡಿಕ್ಕಲ್ ಹಾಗೂ ಭರವಸೆಯ ಆಟಗಾರ ಆರ್.ಸಮರ್ಥ್ ತಂಡಕ್ಕೆ ನೆರವಾಗುವ ಅವಶ್ಯಕತೆ ಇದೆ.
ಆಲ್ ರೌಂಡರ್ ರೂಪದಲ್ಲಿ ಕಾಣಿಸಿಕೊಳ್ಳುವ ಆಫ್ ಸ್ಪಿನ್ ಬೌಲರ್ ಕೆ.ಗೌತಮ್ ಹಾಗೂ ಲೆಗ್ ಸ್ಪಿನ್ ಬೌಲರ್ ಶ್ರೇಯಸ್ ಗೋಪಾಲ್ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ತಂಡಕ್ಕೆ ನೆರವಾಗಬಲ್ಲರು. ಗೌತಮ್ 231 ರನ್ ಬಾರಿಸಿದ್ದು, 29 ವಿಕೆಟ್ ಕಬಳಿಸಿದ್ದಾರೆ. ಶ್ರೇಯಸ್ 243 ರನ್ ಸಿಡಿಸಿದ್ದು, 7 ವಿಕೆಟ್ ಉರುಳಿಸಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಸ್ಟಾರ್ ಬೌಲರ್ ಗಳು ಎದುರಾಳಿಗಳನ್ನು ಕಾಡಬಲ್ಲರು. ಅಭಿಮನ್ಯು ಮಿಥುನ್ ತಮ್ಮ ಅನುಭವ ಧಾರೆ ಎರೆದು ತಂಡಕ್ಕೆ ನೆರವಾಗಬೇಕಿದೆ. ಇವರಿಗೆ ಯುವ ವೇಗಿ ಪ್ರಸಿದ್ಧ ಕೃಷ್ಣ, ರೋನಿತ್ ಮೊರೆ, ಉತ್ತಮ ಸಾಥ್ ನೀಡಿದಲ್ಲಿ ಎದುರಾಳಿಗಳನ್ನು ಕಾಡಬಲ್ಲರು. ಇನ್ನು ಸ್ಪಿನ್ ವಿಭಾಗದಲ್ಲಿ ಶ್ರೇಯಸ್, ಗೌತಮ್ ಮೋಡಿ ಮಾಡಬೇಕಿದೆ.
ಬಂಗಾಳ ತಂಡದ ಮನೋಜ್ ತಿವಾರಿ (651), ಅನ್ಶುತುಪ್ ಮುಂಜುಮ್ದಾರ್ (451), ಶಹಬಾಜ್ ಅಹ್ಮದ್ (427), ಶ್ರೀವತ್ಸ್ ಗೋಸ್ವಾಮಿ (421), ಅಭಿಷೇಕ್ ರಾಮನ್ (405) ರನ್ ಕಲೆ ಹಾಕಿ ಎದುರಾಳಿಗಳನ್ನು ಕಾಡಬಲ್ಲರು. ಬೌಲಿಂಗ್ ವಿಭಾಗದಲ್ಲಿ ಶಹಬಾಜ್ ಅಹ್ಮದ್ (30), ಆಕಾಶ್ ದೀಪ್ (25), ಮುಕೇಶ್ ಕುಮಾರ್ (22) ವಿಕೆಟ್ ಬೇಟೆಯಲ್ಲಿ ಮುಂಚೂಣಿಯಲ್ಲಿದ್ದಾರೆ.
ಗುಜರಾತ್ ಹಾಗೂ ಸೌರಾಷ್ಟ್ರ ತಂಡಗಳು ಇನ್ನೊಂದು ಸೆಮಿಫೈನಲ್ಸ್ ಪಂದ್ಯದಲ್ಲಿ ಕಾದಾಟ ನಡೆಸಲಿವೆ.