ಕ್ರೈಸ್ಟ್‌ಚರ್ಚ್, ಫೆ 28 : ಮೊದಲ ಪಂದ್ಯದಲ್ಲಿ 10 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿದ್ದ ಭಾರತ ತಂಡ ನಾಳೆ ನ್ಯೂಜಿಲೆಂಡ್ ವಿರುದ್ಧ ಎರಡನೇ ಹಾಗೂ ಅಂತಿಮ ಹಣಾಹಣಿಯಲ್ಲಿ ಸೆಣಸಲು ಸಜ್ಜಾಗಿದೆ. ಈಗಾಗಲೇ 0-1 ಹಿನ್ನಡೆ ಅನುಭವಿಸಿರುವ ಕೊಹ್ಲಿ ಪಡೆ ನಾಳೆಯಿಂದ ಆರಂಭವಾಗುವ ಪಂದ್ಯದಲ್ಲಿ ಗೆದ್ದು ಸರಣಿ ಡ್ರಾ ಮಾಡಿಕೊಳ್ಳುವ ಒತ್ತಡಕ್ಕೆ ಸಿಲುಕಿದೆ.
ವಿಶ್ವದ ಶ್ರೇಷ್ಠ ಬ್ಯಾಟಿಂಗ್ ಲೈನ್ ಅಪ್ ಹೊಂದಿರುವ ಭಾರತ ತಂಡ ವೆಲ್ಲಿಂಗ್ಟನ್ ಕಠಿಣ ಪರಿಸ್ಥಿತಿಗಳಲ್ಲಿ ಕಿವೀಸ್ ಮಾರಕ ದಾಳಿಯ ಎದುರು ಸಂಪೂರ್ಣ ನೆಲಕಚ್ಚಿತ್ತು. ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ ಹಾಗೂ ಅಜಿಂಕ್ಯಾ ರಹಾನೆ ಹೆಗ್ಲೆ ಓವಲ್ ಹಸಿರು ಹೊದಿಕೆಯ ಪಿಚ್‌ನಲ್ಲಿ ಮತ್ತೊಮ್ಮೆ ಕಠಿಣ ಸವಾಲು ಎದುರಾಗಲಿದೆ. ಈ ಅಂಗಳದಲ್ಲಿ ಕಿವೀಸ್ ಉತ್ತಮ ದಾಖಲೆಯನ್ನು ಹೊಂದಿದೆ.
ಶಾರ್ಟ್ ಬಾಲ್ ಪರಿಣಿತ ವೇಗಿ ನೀಲ್ ವ್ಯಾಗ್ನರ್ ಅವರು ಟಿಮ್ ಸೌಥಿ, ಟ್ರೆಂಟ್ ಬೌಲ್ಟ್ ಹಾಗೂ ಕೈಲ್ ಜಾಮಿಸನ್ ಅವರ ಬೌಲಿಂಗ್ ವಿಭಾಗದೊಂದಿಗೆ ವಿಕೆಟ್ ಹಿಂದೆ ಸುತ್ತಲು ಸಿದ್ದರಾಗಿದ್ದಾರೆ. ಮುಂದಿನ ಐದು ದಿನಗಳಲ್ಲಿ ವಿಕೆಟ್ ಹೇಗೆ ವರ್ತಿಸುತ್ತದೆ ಎಂಬ ಪ್ರಶ್ನೆ ಎದುರಾಗಿದೆ.
ಭಾರತ ತಂಡದ ಪರ ಶುಭಸುದ್ದಿಎಂದರೆ, ಪೃಥ್ವಿ ಶಾ ಇಂದು ನಡೆದ ಅಂಭ್ಯಾಸದಲ್ಲಿ ಭಾಗವಹಿಸಿದ್ದರು. ಮುಖ್ಯ ಕೋಚ್ ರವಿಶಾಸ್ತ್ರಿ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರ ಸಮ್ಮುಖದಲ್ಲಿ ನೆಟ್ಸ್ ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡಿದ ಪೃಥ್ವಿ ಹಲವು ಉಪಯುಕ್ತ ಸಲಹೆಗಳನ್ನು ಪಡೆದುಕೊಂಡಿದ್ದಾರೆ.
ಅಜಿಂಕ್ಯಾ ರಹಾನೆ, ಹನುಮ ವಿಹಾರಿ ಹಾಗೂ ಚೇತೇಶ್ವರ ಪೂಜಾರ ನಾಳಿನ ಪಂದ್ಯದಲ್ಲಿ ಧನಾತ್ಮಕ ಮನೋಭಾವದೊಂದಿಗೆ ಬ್ಯಾಟಿಂಗ್ ಮಾಡುವ ಮೂಲಕ ನಾಯಕ ವಿರಾಟ್ ಕೊಹ್ಲಿಯ ಮೇಲಿನ ಒತ್ತಡವನ್ನು ಕಡಿಮೆ ಮಾಡಬೇಕು. ಪ್ರವಾಸಿ ತಂಡದಲ್ಲಿ ಒಂದೇ ಒಂದು ಬದಲಾವಣೆ ಮಾಡುವ ಸಾಧ್ಯತೆ ಇದೆ. ಕಳೆದ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ವಿಫಲರಾಗಿದ್ದ ಆರ್. ಅಶ್ವಿನ್ ಬದಲಿಗೆ ರವೀಂದ್ರ ಜಡೇಜಾ ಅವರಿಗೆ ಮಣೆ ಹಾಕಬಹುದು.
ಈ ಬಗ್ಗೆ ಪ್ರತಿಕ್ರಿಯಿಸಿದ ರವಿ ಶಾಸ್ತ್ರಿ,” ರವೀಂದ್ರ ಜಡೇಜಾ ಹಾಗೂ ಅಶ್ವಿನ್ ಅವರ ಬಗ್ಗೆ ನಾಳೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಅಶ್ವಿನ್ ವಿಶ್ವ ದರ್ಜೆಯ ಬೌಲರ್ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ನಾಳಿನ ಪರಿಸ್ಥಿತಿಗಳನ್ನು ಆಧರಿಸಿ ಅಂತಿಮ 11 ನಿರ್ಧರಿಸುತ್ತೇವೆ. ಅವರು ಕಳೆದ ವರ್ಷಗಳಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿದ್ದಾರೆ. ಆದರೆ, ಅವರ ಬ್ಯಾಟಿಂಗ್‌ನಿಂದ ನಮಗೆ ಬೇಸರವಾಗಿದೆ. ಅವರು ಬ್ಯಾಟಿಂಗ್‌ನಲ್ಲಿ ಸುಧಾರಣೆ ಕಂಡುಕೊಳ್ಳಬೇಕು,’’ ಎಂದು ಸಲಹೆ ನೀಡಿದರು.
ಮತ್ತೊಂದೆಡೆ ನ್ಯೂಜಿಲೆಂಡ್ ಪಾಳಯದಲ್ಲಿ ವೇಗಿಗಳದ್ದೇ ಮಾತು. ಕಳೆದ ಪಂದ್ಯದಲ್ಲಿ ಅಲಭ್ಯರಾಗಿದ್ದ ನೀಲ್ ವ್ಯಾಗ್ನರ್ ಅಂತಿಮ 11ಕ್ಕೆ ಲಗ್ಗೆ ಇಡಲಿದ್ದಾರೆ. ಆ ಮೂಲಕ ಕಿವೀಸ್ ಬೌಲಿಂಗ್ ವಿಭಾಗ ಇನ್ನಷ್ಟು ಬಲಿಷ್ಠವಾಗಲಿದೆ. ಚೊಚ್ಚಲ ಪಂದ್ಯದಲ್ಲಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಕೈಲ್ ಜಾಮಿಸನ್ ಅವರನ್ನು ಬೆಂಚ್ ಕಾಯುವಂತೆ ಸೂಚಿಸಿ ವ್ಯಾಗ್ನರ್ ಸ್ಥಾನ ನೀಡುವ ನಿರ್ಧಾರ ಟೀಮ್ ಮ್ಯಾನೇಜ್ ಮೆಂಟ್ ಗೆ ಕಠಿಣವಾಗಲಿದೆ.
ಹೆಗ್ಲೆ ಓವಲ್ ಪಿಚ್ ಮೇಲೆ ಹಸಿರು ಹುಲ್ಲು ಬೆಳೆದಿರುವ ಕಾರಣ ಬೌನ್ಸಿಯಾಗಿರಲಿದೆ ಎಂದು ಕ್ಯೂರೇಟರ್ ತಿಳಿಸಿದ್ದಾರೆ. ಭಾರತ ತಂಡದ ಪಾಲಿಗೆ ಬ್ಯಾಟಿಂಗ್ ನದ್ದೇ ಸಮಸ್ಯೆಯಲ್ಲ. ಮೊಹಮ್ಮದ್ ಶಮಿ ಹಾಗೂ ಜಸ್ಪ್ರಿತ್ ಬುಮ್ರಾ ಅವರು ಕಿವೀಸ್ ಬ್ಯಾಟ್ಸ್ ಮನ್ ಗಳ ಮೇಲೆ ಒತ್ತಡ ಹೇರುವಲ್ಲಿ ವಿಫಲರಾಗಿದ್ದರು. ಅದರಲ್ಲೂ ಬುಮ್ರಾ ಅವರು ಅವರ ನಾಲ್ಕು ವರ್ಷದ ವೃತ್ತಿ ಜೀವನದಲ್ಲಿ ಇದೇ ಮೊದಲ ಪ್ರವಾಸದಲ್ಲಿ ಅವರು ವಿಫಲರಾಗಿದ್ದಾರೆ. ಆದರೆ, ಮುಖ್ಯ ಕೋಚ್ ರವಿ ಶಾಸ್ತ್ರಿ ಅವರ ಮೇಲೆ ನಂಬಿಕೆಯನ್ನು ಇಟ್ಟಿದ್ದಾರೆ.
ಸಂಭಾವ್ಯ ಆಟಗಾರರು
ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಬ್ಲಂಡೆಲ್, ಟಾಮ್ ಲಥಾಮ್, ಹೆನ್ರಿ ನಿಕೋಲ್ಸ್, ರಾಸ್ ಟೇಲರ್, ಕಾಲಿನ ಡಿ ಗ್ರಾಂಡ್ಹೋಮ್, ಬಿ.ಜೆ ವ್ಯಾಟ್ಲಿಂಗ್(ವಿ.ಕೀ), ಕೈಲ್ ಜಾಮಿಸನ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ನೀಲ್ ವ್ಯಾಗ್ನರ್, ಅಜಾಝ್ ಪಾಟೀಲ್.
ಭಾರತ: ಪೃಥ್ವಿ ಶಾ, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯಾ ರಹಾನೆ, ಹನುಮ ವಿಹಾರಿ, ರಿಷಭ್ ಪಂತ್(ವಿ.ಕೀ), ರವೀಂದ್ರ ಜಡೇಜಾ, ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ, ಶುಭಮನ್ ಗಿಲ್