ರಾಜ್ ಕೋಟ್, ನ.6: ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಂಗಳದಲ್ಲಿ ನಡೆಯಲಿರುವ ಭಾರತ ಹಾಗೂ ಬಾಂಗ್ಲಾದೇಶ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಆತಿಥೇಯ ತಂಡ ಗೆಲುವಿನ ಕನಸು ಕಾಣುತ್ತಿದೆ. ಮೊದಲ ಟಿ-20 ಪಂದ್ಯ ಗೆದ್ದು ಬೀಗಿರುವ ಬಾಂಗ್ಲಾದೇಶ ತಂಡ, ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಪಂದ್ಯ ಗೆದ್ದು ಸರಣಿಯಲ್ಲಿ ಪುಟಿದೇಳುವ ವಿಶ್ವಾಸವನ್ನು ಟೀಮ್ ಇಂಡಿಯಾ ಹೊಂದಿದೆ. ಎರಡನೇ ಪಂದ್ಯಕ್ಕೆ ಚಂಡಮಾರುತ ಭೀತಿ ಎದುರಾಗಿದೆ. ಟೀಮ್ ಇಂಡಿಯಾ ಮೊದಲ ಪಂದ್ಯದ ಎಲ್ಲ ವಿಭಾಗಗಳಲ್ಲೂ ನೀರಾಶಾದಯಕ ಪ್ರದರ್ಶನ ನೀಡಿದೆ. ಬ್ಯಾಟಿಂಗ್ ನಲ್ಲಿ ಸ್ಟಾರ್ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಹಾಗೂ ಆರಂಭಿಕ ಶಿಖರ್ ಧವನ್ ದೊಡ್ಡ ಇನ್ನಿಂಗ್ಸ್ ಕಟ್ಟುವ ಅನಿವಾರ್ಯತೆ ಇದೆ. ಮೊದಲ ಪಂದ್ಯದಲ್ಲಿ ಮಾಡಿದ ತಪ್ಪಿನಿಂದ ಪಾಠ ಕಲಿತು ಈ ಆಟಗಾರರು ಬ್ಯಾಟ್ ಮಾಡಬೇಕಿದೆ. ಸಿಕ್ಕ ಅವಕಾಶವನ್ನು ಬಳಸಿಕೊಂಡು ತಂಡದ ಗೆಲುವಿನಲ್ಲಿ ಮಿಂಚಲು ಯುವ ಆಟಗಾರರು ಯೋಜನೆ ರೂಪಿಸಿಕೊಂಡಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿರುವ ಕೆ.ಎಲ್ ರಾಹುಲ್ ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಶ್ರೇಯಸ್ ಅಯ್ಯರ್ ಸಮಯೋಚಿತ ಬ್ಯಾಟಿಂಗ್ ನಡೆಸಬೇಕಿದೆ. ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಕಳೆದ ಪಂದ್ಯದಲ್ಲಿ ನೀರಸ ಪ್ರದರ್ಶನ ಟೀಕಾಕಾರರ ಟೀಕೆಗೆ ಗುರಿಯಾಗಿದೆ. ಅಲ್ಲದೆ ಪಂತ್ ಡಿ ಆರ್ ಎಸ್ ಪಡೆಯುವಲ್ಲಿ ವಿಫಲರಾಗಿದ್ದರು. ಎರಡನೇ ಪಂದ್ಯದಲ್ಲಿ ಪಂತ್ ತಂಡದ ಪರ ಅಮೋಘ ಇನ್ನಿಂಗ್ಸ್ ಕಟ್ಟುವ ಅನಿವಾರ್ಯತೆ ಇದೆ. ಬೌಲಿಂಗ್ ನಲ್ಲಿ ಖಲೀಲ್ ಅಹ್ಮದ್ ಹಾಗೂ ದೀಪಕ್ ಚಹಾರ್ ಸರಿಯಾದ ಲೈನ್ ಹಾಗೂ ಲೆಂಥ್ ನಲ್ಲಿ ದಾಳಿ ನಡೆಸಬೇಕಿದೆ. ಇನ್ನು ಖಲೀಲ್ ಕೊನೆಯ ಓವರ್ ನಲ್ಲಿ ಬೌಲಿಂಗ್ ಮಾಡುವ ಕಲೆಯನ್ನು ಕರಗತವನ್ನು ಮಾಡಿಕೊಳ್ಳಬೇಕಿದೆ. ಕೃನಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಾಲ್ ಅವರು ಸ್ಪಿನ್ ಮೋಡಿ ನಡೆಸಬೇಕಿದೆ. ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಭರ್ಜರಿ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿತ್ತು. ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಸಮಯೋಚಿತ ಪ್ರದರ್ಶನ ನೀಡಿತ್ತು. ಬೌಲಿಂಗ್ ನಲ್ಲಿ ಶಫೀಉಲ್ಲ ಇಸ್ಲಾಂ ಹಾಗೂ ಅಮಿನುಲ್ ಇಸ್ಲಾಂ ಅವರು ವಿಕೆಟ್ ಬೇಟೆ ನಡೆಸಿ ಅಬ್ಬರಿಸಿದ್ದಾರೆ. ಇನ್ನು ಮುಷ್ತಾಫಿಜುರ್ ರಹಮಾನ್ ಶಿಸ್ತು ಬದ್ಧ ದಾಳಿ ನಡೆಸಿ ತಂಡದ ಜಯದಲ್ಲಿ ಮಿಂಚಬೇಕಿದೆ. ಬಾಂಗ್ಲಾ ತಂಡದ ಸ್ಟಾರ್ ಆಟಗಾರ ಮುಷ್ಫೀಕರ್ ರಹೀಮ್ ಮೊದಲ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದರು. ಅಲ್ಲದೆ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಉಳಿದಂತೆ ಲಿಟನ್ ದಾಸ್, ಮೊಹಮ್ಮದ್ ನೈಮ್, ಸೌಮ್ಯ ಸರ್ಕಾರ್ ಹಾಗೂ ಮಹಮುದುಲ್ಲ ದೊಡ್ಡ ಇನ್ನಿಂಗ್ಸ್ ಕಟ್ಟಬೇಕಿದೆ. ಸಂಭಾವ್ಯ ಆಟಗಾರರು ಭಾರತ: ರೋಹಿತ್ ಶರ್ಮಾ(ನಾಯಕ), ಶಿಖರ್ ಧವನ್, ಕೆ.ಎಲ್ ರಾಹುಲ್/ ಸಂಜು ಸ್ಯಾಮ್ಸನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಶಿವಂ ದುಬೆ, ಕೃನಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್/ ರಾಹುಲ್ ಚಾಹರ್, ದೀಪಕ್ ಚಾಹರ್, ಶಾದರ್ೂಲ್ ಠಾಕೂರ್/ ಖಲೀಲ್ ಅಹಮದ್ ಬಾಂಗ್ಲಾದೇಶ: ಲಿಟಾನ್ ದಾಸ್, ಸೌಮ್ಯಾ ಸರ್ಕಾರ್, ಮೊಹಮ್ಮದ್ ನೈಮ್/ ಮೊಹಮ್ಮದ್ ಮಿಥುನ್, ಮುಷ್ಪಿಕ್ಯೂರ್ ರಹೀಮ್, ಮಹ್ಮುದುಲ್ಹಾ (ನಾಯಕ), ಮೊಸಾಡೆಕ್ ಹುಸೇನ್, ಆಫೀಫ್ ಹುಸೇನ್, ಅರಾಫತ್ ಸನ್ನಿ, ಮುಸ್ತಾಪಿಜುರ್ ರಹಮನ್, ಅಲ್ ಅಮೀನ್ ಹುಸೇನ್, ಅಬು ಹೈದರ್/ ತೈಜುಲ್ ಇಸ್ಲಾಮ್ ಸಮಯ: ನಾಳೆ ಸಂಜೆ 07:00.