ಎರಡನೇ ಏಕದಿನ ಪಂದ್ಯ ನಾಳೆ : ಮಾಡು ಇಲ್ಲವೆ ಮಡಿ ಸ್ಥಿತಿಯಲ್ಲಿ ಭಾರತ

ಆಕ್ಲೆಂಡ್, ಫೆ 7 ,ಮೊದಲನೇ ಹಣಾಹಣಿಯಲ್ಲಿ ಸೋತಿರುವ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ನಾಳೆ ಇಲ್ಲಿನ ಈಡನ್ ಪಾರ್ಕ್‌ನಲ್ಲಿ ನಡೆಯುವ ಎರಡನೇ ಪಂದ್ಯವನ್ನು ಗೆದ್ದು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಜೀವಂತವಾಗಿರಿಸಿಕೊಳ್ಳುವ ಒತ್ತಡಕ್ಕೆ ಸಿಲುಕಿದೆ. ಕಳೆದ ಬುಧವಾರ 348 ರನ್‌ಗಳಿಗೆ ಆತಿಥೇಯ ನ್ಯೂಜಿಲೆಂಡ್‌ ತಂಡವನ್ನು ನಿಯಂತ್ರಿಸುವಲ್ಲಿ ಭಾರತ ವಿಫಲವಾಗಿತ್ತು. ರಾಸ್‌ ಟೇಲರ್ ಸ್ಪೋಟಕ ಶತಕ ಸಿಡಿಸಿ ಕಿವೀಸ್ ತಂಡದ ಗೆಲುವಿನಲ್ಲಿ ಪ್ರಧಾನ ಪಾತ್ರವಹಿಸಿದ್ದರು. 

ಸೋಲಿನ ಹೊರತಾಗಿಯೂ ವಿರಾಟ್ ಕೊಹ್ಲಿ ಬಳಗ, ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ತೋರಿದ ಪ್ರದರ್ಶನವನ್ನು ಮತ್ತೊಮ್ಮೆ ಕಿವೀಸ್ ವಿರುದ್ಧ ಸಾಬೀತು ಪಡಿಸಲು ಎದುರು ನೋಡುತ್ತಿದೆ. ಆಸೀಸ್‌ ವಿರುದ್ಧ ಭಾರತ ಮೊದಲನೇ ಪಂದ್ಯದಲ್ಲಿ 10 ವಿಕೆಟ್‌ಗಳ ಸೋಲು ಅನುಭವಿಸಿತ್ತು. ನಂತರ ಎರಡು ಪಂದ್ಯಗಳನ್ನು ಸತತವಾಗಿ ಗೆದ್ದು 2-1 ಅಂತರದಲ್ಲಿ ಏಕದಿನ ಸರಣಿ ತನ್ನದಾಗಿಸಿಕೊಂಡಿತ್ತು. ಕಳೆದ ಪಂದ್ಯದಲ್ಲಿ ಬೌಲಿಂಗ್‌ ವಿಭಾಗ ವಿಫಲವಾಗಿತ್ತು. ಅದರಲ್ಲಿಯೂ  ಸ್ಪಿನ್ನರ್‌ಗಳಾದ ಕುಲ್ದೀಪ್‌ ಯಾದವ್‌ ಹಾಗೂ ರವಿಂದ್ರ ಜಡೇಜಶ ಕಿವೀಸ್‌ ಬ್ಯಾಟರ್‌ಗಳ ಎದುರು ದುಬಾರಿಯಾಗಿದ್ದರು. ಜಸ್ಪ್ರಿತ್‌ ಬುಮ್ರಾ ಕೂಡ ನ್ಯೂಜಿಲೆಂಡ್‌ ಮೇಲೆ ಒತ್ತಡ ಹೇರುವಲ್ಲಿ ವಿಫಲರಾಗಿದ್ದರು. ಈ ಬಗ್ಗೆ ನಾಯಕ ಕೊಹ್ಲಿ ನಾಳೆ ಗಮನ ಹರಿಸುವ ಸಾಧ್ಯತೆ ಇದೆ.

ಆರಂಭಿಕ ಪಂದ್ಯದ ಸೋಲಿನ ಹೊರತಾಗಿಯೂ ಪ್ರವಾಸಿ ತಂಡ ಡೆತ್‌ ಹಂತದಲ್ಲಿ ಆತಿಥೇಯರಿಗೆ ತಿರುಗೇಟು ನೀಡಬಲ್ಲ ಸಾಮರ್ಥ್ಯವಿದೆ. ಇನಿಂಗ್ಸ್ ಅವಧಿಯಲ್ಲಿ ತೀವ್ರತೆಯನ್ನು ಹೆಚ್ಚು ಏಕರೂಪವಾಗಿ ಕಾಪಾಡಿಕೊಂಡರೆ ಬ್ಲೂ ಬಾಯ್ಸ್‌ಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ.ಸೆಡಾನ್ ಪಾರ್ಕ್‌ನಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಪೃಥ್ವಿ  ಶಾ ಹಾಗೂ ಮಯಾಂಕ್ ಅಗರ್ವಾಲ್‌ ಜೋಡಿ ತಂಡಕ್ಕೆ ಯೋಗ್ಯ ಆರಂಭ ನೀಡಿತ್ತು. ಇವರ ಅನುಭವದ ಕೊರೆತೆಯಿಂದ ದೊಡ್ಡ ಜತೆಯಾಟವಾಡುವಲ್ಲಿ ವಿಫಲವಾಗಿತ್ತು. ಆದಾಗ್ಯೂ, ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ಮೂಡಿಬಂದಿತ್ತು.

ನಾಯಕ ವಿರಾಟ್‌ ಕೊಹ್ಲಿ ಅರ್ಧಶತಕ, ಶ್ರೇಯಸ್‌ ಅಯ್ಯರ್‌ ಚೊಚ್ಚಲ ಶತಕ ಹಾಗೂ ಕೆ.ಎಲ್‌ ರಾಹುಲ್‌ ಮಿಂಚಿನ ಬ್ಯಾಟಿಂಗ್‌ ಭಾರತ ತಂಡ ಆತಿಥೇಯರಿಗೆ ಸವಾಲಿನ ಗುರಿ ನೀಡುವಲ್ಲಿ ಯಶಸ್ವಿಯಾಗಿತ್ತು. ಆದರೆ, ಬೌಲಿಂಗ್‌ ವಿಭಾಗ ವಿಫಲವಾಗಿತ್ತು. ನಾಳಿನ ಪಂದ್ಯದಲ್ಲಿ ಬೌಲರ್‌ಗಳು ಸುಧಾರಣೆ ಕಂಡುಕೊಂಡು ಸರಣಿ ಸಮಬಲ ಸಾಧಿಸಲು ನೆರವಾಗುವ ಅನಿವಾರ್ಯತೆ ಇದೆ.ಆದರೆ, ನ್ಯೂಜಿಲೆಂಡ್‌ ತಂಡಕ್ಕೆ ಕಳೆದ ಆರು ವರ್ಷಗಳ ಬಳಿಕ ಭಾರತದ ವಿರುದ್ಧ ದ್ವಿಪಕ್ಷೀಯ ಏಕದಿನ ಸರಣಿ ಗೆಲ್ಲಲು ಉತ್ತಮ ಅವಕಾಶವಿದೆ. 2014 ಜನವರಿಯಲ್ಲಿ ಕೊನೆಯ ಬಾರಿ ಭಾರತದ ವಿರುದ್ಧ ಗೆಲುವು ಸಾಧಿಸಿತ್ತು. ಐದು ಪಂದ್ಯಗಳ ಸರಣಿಯಲ್ಲಿ ಕಿವೀಸ್‌ 4-0 ಅಂತರದಲ್ಲಿ ಗೆದ್ದು ಬೀಗಿತ್ತು.

ಕಳೆದ ಪಂದ್ಯದಲ್ಲಿಆರಂಭಿಕರಾದ ಹೆನ್ರಿ ನಿಕೋಲ್ಸ್‌ ಹಾಗೂ ಮಾರ್ಟಿನ್ ಗುಪ್ಟಿಲ್ ಅತ್ಯುತ್ತಮ ಬ್ಯಾಟಿಂಗ್ ಮಾಡಿದ್ದರು. ಜತೆಗೆ, ಮಧ್ಯಮ ಕ್ರಮಾಂಕದಲ್ಲಿ ರಾಸ್‌ ಟೇಲರ್‌ ಮತ್ತು ನಾಯಕ ಟಾಮ್‌ ಲಥಾನ್ ಮಿಮಚಿನ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು.ಸರಣಿಯ ನಿರ್ಣಾಯಕ ಹಂತದಲ್ಲಿ ಕೀವೀಸ್‌ನ ಎಲ್ಲ ಆಟಗಾರರು ತಳಮಳ ಬಿಟ್ಟು ಬಹಳ ಎಚ್ಚರಿಕೆಯಿಂದ ಆಡಬೇಕಾದ ಅನಿವಾರ್ಯತೆ ಇದೆ. ಇದು ಸಕಾರವಾಗಿದ್ದಲ್ಲಿ ನ್ಯೂಜಿಲೆಂಡ್‌ ಸರಣಿ ತನ್ನದಾಗಿಸಿಕೊಳ್ಳಲಿದೆ. ಇಲ್ಲಿನ ಈಡನ್‌ ಪಾರ್ಕ್ ಅಂಗಳದಲ್ಲಿ ಬೌಂಡರಿಗಳು ಕಿರಿದಾಗಿದ್ದು, ಮತ್ತೊಮ್ಮೆ ಕ್ರಿಕೆಟ್‌ ಅಭಿಮಾನಿಗಳಿಗೆ ಉಭಯ ತಂಡಗಳು ರಸದೌತಣ ಉಣಬಡಿಸಲಿವೆ.

ತಂಡಗಳು: ಭಾರತ: ಕೆ.ಎಲ್ ರಾಹುಲ್ (ವಿಕೆಟ್ ಕೀಪರ್), ಮಯಾಂಕ್ ಅಗರ್ವಾಲ್, ವಿರಾಟ್ ಕೊಹ್ಲಿ(ನಾಯಕ), ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಶಿವಂ ದುಬೆ, ರವೀಂದ್ರ ಜಡೇಜಾ, ನವದೀಪ್ ಸೈನಿ, ಮೊಹಮ್ಮದ್ ಶಮಿ, ಯಜ್ವೇಂದ್ರ ಚಾಹಲ್, ಜಸ್ಪ್ರಿತ್ ಬುಮ್ರಾ, ಪೃಥ್ವಿ ಶಾ, ಕುಲ್ದೀಪ್ ಯಾದವ್, ರಿಷಭ್ ಪಂತ್ (ವಿ.ಕೀ), ಕೇದಾರ್ ಜಾಧವ್, ಶಾರ್ದೂಲ್ ಠಾಕೂರ್.

ನ್ಯೂಜಿಲೆಂಡ್: ಮಾರ್ಟಿನ್ ಗುಪ್ಟಿಲ್, ಹೆನ್ರಿ ನಿಕೋಲ್ಸ್, ರಾಸ್ ಟೇಲರ್, ಟಾಮ್ ಲಥಾಮ್ (ನಾಯಕ/ ವಿ.ಕೀ), ಮಾರ್ಕ್ ಚಾಪ್ಮನ್, ಜೇಮ್ಸ್ ನೀಶಾಮ್‌, ಕಾಲಿನ್ ಡಿ ಗ್ರಾಡ್ಹೋಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಹಾಮಿಶ್ ಬೆನೆಟ್, ಇಶ್‌ ಸೋಧಿ, ಟಾಮ್ ಬ್ಲಂಡೆಲ್, ಕೈಲ್ ಜಾಮಿಸನ್, ಸ್ಕಾಟ್ ಕುಗ್ಲೇಯಿನ್. ಸಮಯ: ನಾಳೆ ಬೆಳಗ್ಗೆ 07:30 ಸ್ಥಳ: ಈಡಾನ್ ಪಾರ್ಕ್, ಆಕ್ಲೆಂಡ್