ಲಾಭವಿರದ ಉದ್ಯಮದಲ್ಲಿ ಆತ್ಮತೃಪ್ತಿಯ ಹುಡುಕಾಟ...!

ನಿಜಕ್ಕೂ ಮನುಷ್ಯ ಆಧುನಿಕತೆ ಎಡೆಗೆ ಮುಖ ಮಾಡಿ ನಿಂತ ಮೇಲೆ ಒಳ್ಳೆಯದರ ಮೌಲ್ಯವನ್ನೇ ಮರೆತುಬಿಟ್ಟಿದ್ದಾನೆ. ಯಾವುದು ಅವನಿಗೆ ಆನಂದ ನೀಡುತ್ತಿತ್ತೋ ಅದನ್ನು ದೂರ ಮಾಡಿಕೊಂಡು ಇನ್ಯಾವುದರಲ್ಲಿಯೋ ಆನಂದವನ್ನು ಹುಡುಕುವ ಯತ್ನ ಮಾಡುತ್ತಿದ್ದಾನೆ. ಇತ್ತ ಮೊದಲಿನದನ್ನು ಪೂರ್ಣವಾಗಿ ತ್ಯಜಿಸಲೂ ಸಾಧ್ಯವಾಗದೆ, ಹೊಸದನ್ನು ಸಂಪೂರ್ಣವಾಗಿ ಹಿಡಿದುಕೊಳ್ಳಲೂ ಆಗದೇ ತ್ರಿಶಂಖು ಸ್ಥಿತಿಯಲ್ಲಿ ಬದುಕುವುದನ್ನು ನಾವಿಂದೂ ಕಣ್ಣಾರೆ ಕಾಣುತ್ತಿದ್ದೇವೆ. ಇದು ಕೇವಲ ಒಂದೇ ಕ್ಷೇತ್ರವೆಂದಲ್ಲ ಪ್ರತಿ ಹೆಜ್ಜೆಯಲ್ಲೂ ಮಾನವ ಎದುರಿಸುತ್ತಿರುವ ಮುಖ್ಯವಾದ ಸವಾಲೇ ಅದು. ನಾನು ಯಾವುದನ್ನು ಆಯ್ದುಕೊಳ್ಳಲಿ? ಮತ್ತು ನಾನು ಯಾವುದನ್ನು ಒಪ್ಪಿಕೊಳ್ಳಲಿ? ಎನ್ನುವ ಪ್ರಶ್ನೆಗಳಿಗೆ ಉತ್ತರ ಹುಡುಕುವ ಜಿಜ್ಞಾಸೆಯಲ್ಲಿಯೇ ಬದುಕು ಸಾಗಿಸುತ್ತಿದ್ದಾನೆ. ವಿಜ್ಞಾನ ಬೆಳೆಯಿತು. ತಂತ್ರಜ್ಞಾನ ಅಭಿವೃದ್ಧಿಯಾಯಿತು. ಅದರೊಂದಿಗೆ ಮಾನವನಿಗಿದ್ದಂತ ಒಳ್ಳೆಯ ಅಭಿರುಚಿಗಳು ಕೂಡ ಹಾಳಾಗಿ ಹೋಯಿತು. ಪುಸ್ತಕವನ್ನೋದಿಕೊಂಡು ಮಸ್ತಕವನ್ನು ತುಂಬಿಕೊಳ್ಳುತ್ತಿದ್ದ ಜಾಗದಲ್ಲಿ ಮೊಬೈಲ್ ಎನ್ನುವ ಮಾಯಾಲೋಕ ಹುಟ್ಟಿಕೊಂಡಿತು. "ತಲೆ ಬಗ್ಗಿಸಿ ನನ್ನನ್ನು ನೋಡು ನಿನ್ನನ್ನು ಜಗತ್ತಿನೆದುರು ತಲೆ ಎತ್ತಿ ನಿಲ್ಲುವಂತೆ ಮಾಡುತ್ತೇನೆ" ಎಂದು ಹೇಳುತ್ತಿದ್ದ ಪುಸ್ತಕಗಳನ್ನು ಬದಿಗೊತ್ತಿ ಮುಂದೆ ಬಂದ ಮೊಬೈಲ್ ಪೋನ್ಗಳು "ತಲೆ ತಗ್ಗಿಸಿ ನನ್ನನ್ನು ನೋಡುತ್ತಲೇ ಇರು ನಾನು ನಿನ್ನನ್ನು ಯಾವತ್ತು ತಲೆ ಎತ್ತದಂತೆಯೇ ಮಾಡಿ ಬಿಡುತ್ತೇನೆ" ಎಂದು ಹೇಳಿದ್ದರ ಪರಿಣಾಮವಾಗಿಯೇ ಪುಸ್ತಕ ಪ್ರಪಂಚ ಮೆಲ್ಲ ಮೆಲ್ಲನೇ ನೇಪಥ್ಯಕ್ಕೆ  ಸರಿಯಲು ಪ್ರಾರಂಭಿಸಿತು. ಓದುಗರ ಕೊರತೆ ಆಗುತ್ತಿದ್ದಂತೆ ಮುದ್ರಣವಾಗುತ್ತಿದ್ದ ಪುಸ್ತಕಗಳ ಪ್ರಮಾಣವೂ ಕಡಿಮೆಯಾಗುವುದಕ್ಕೆ ಶುರುವಿಟ್ಟುಕೊಂಡಿತು. ಹಂತ ಹಂತವಾಗಿ ಇಳಿಮುಖದ ದಾರಿಯಲ್ಲಿ ಸಾಗುವ ಪುಸ್ತಕ, ಓದುಗರ ಕೊರತೆಯ ಪರಿಣಾಮವನ್ನು ಮುದ್ರಣ ಲೋಕ ಎದುರಿಸಲಾರಂಭಿಸಿತು. ಹೇಗೆ ಹುಟ್ಟು ಕುರುಡರಿರುವ ಊರಿನಲ್ಲಿ ಕನ್ನಡಕ ಮಾರುವವನಿಗೆ ಹೇಗೆ ಕೆಲಸವಿರುವುದಿಲ್ಲವೋ ಹಾಗೆ ಕೊಳ್ಳುವವರೇ ಇಲ್ಲದ ಮೇಲೆ ಪ್ರಕಾಶಕರಿಗೇನು ಕೆಲಸ ಎಂದು ಪುಸ್ತಕ ಪ್ರಕಾಶನ ಸಂಸ್ಥೆಗಳು ಶಾಶ್ವತವಾಗಿ ಬಾಗಿಲು ಹಾಕಿಕೊಳ್ಳಲು ಪ್ರಾರಂಭಿಸಿದವು. ಹಾಗೂ ಹೀಗೂ ಕೆಲವು ಜನ ಪ್ರಕಾಶಕರು ಜಿದ್ದು ಬಿಡದೇ ಪುಸ್ತಕ ಪ್ರಕಾಶನದಲ್ಲಿ ತೊಡಗಿಕೊಂಡು ಮುಂದೆ ಹೆಜ್ಜೆ ಇಟ್ಟರೆ ಕೆಲವು ಜನ ಅದಕ್ಕಾಗಿ ಹಣ ಹಾಕಿ ಕೈ ಸುಟ್ಟುಕೊಂಡರು. ಇದರಿಂದಾಗಿ ಇಂದು ಪುಸ್ತಕ ಪ್ರಕಾಶನ ಎನ್ನುವುದು ದೊಡ್ಡ ಸಾಹಸದಂತೆ ಕಾಣುತ್ತಿದೆ. ಲಾಭವಿಲ್ಲದ ಉದ್ಯಮಕ್ಕೆ ಹಣ ಹೂಡುವುದೆಂದರೆ ಮೂರ್ಖತನವೇ ಸರಿ ಎಂದುಕೊಂಡು ಹಿಂದೆ ಸರಿಯುತ್ತಿರುವ ಜನಗಳ ಮಧ್ಯದಲ್ಲಿ ಆದರ್ಶವನ್ನಿಟ್ಟುಕೊಂಡು ಕೆಲವು ಪ್ರಕಾಶನ ಸಂಸ್ಥೆಗಳು ಇನ್ನೂ ಉಸಿರಾಡುತ್ತಿವೆ. ಏನಾದರು ಸರಿಯೇ ನಾನು ಪ್ರಕಾಶನ ಕಾರ್ಯವನ್ನು ನಿಲ್ಲಿಸುವುದಿಲ್ಲ ಎಂದ ಕೆಲವು ಸಂಸ್ಥೆಗಳು ಈಗಲು ತಮ್ಮ ಕಾರ್ಯವನ್ನು ಮಾಡುತ್ತಿವೆ. ಅದರ ಜೊತೆಗೆ ನಾವೂ ಒಂದು ಕೈ ನೋಡೆ ಬಿಡೋಣ ಎಂದು ಹೊಸ ಸಂಸ್ಥೆಗಳು ಕೂಡ ಕಣ್ಣು ತೆರೆದಿವೆ. ಒಟ್ಟಿನಲ್ಲಿ ನೆಪಥ್ಯದ ಹಾದಿಯಲ್ಲಿ ಸಾಗುತ್ತಿದ್ದ ಪ್ರಕಾಶನದ ಕಾಯಕ ಇಂದು ಹೊಸತನದೊಂದಿಗೆ ಮತ್ತೆ ನಮ್ಮೆದುರು ರಾರಾಜಿಸುತ್ತಿದೆ ಎನ್ನುವುದಂತೂ ಸತ್ಯ. ಇಂಥಹ ಸಂದರ್ಭದಲ್ಲಿ ನಾನೂ ಕೂಡ ಜೊತೆಯಾಗಿ ನಿಲ್ಲುತ್ತೇನೆ ಹಾಗೂ ಹೊಸತನಕ್ಕೆ ತೆರೆದುಕೊಂಡು ಈ ಸ್ಪಧರ್ಾ ಪ್ರಪಂಚದಲ್ಲಿ ನನ್ನತನವನ್ನು ಸಾಬೀತು ಮಾಡಿ ಗೆಲ್ಲುತ್ತೇನೆ ಎಂದು ಹೊರಟ ಹೊಸ ಪ್ರಕಾಶನ ಸಂಸ್ಥೆಯೊಂದು ಇಂದು ಯಶಸ್ಸಿನ ದಾರಿಯಲ್ಲಿ ಸಾಗುತ್ತಿರುವುದೇ ಈ ಲೇಖನದ ಜೀವಾಳವಾಗಿದೆ.

"ಮೈ ಮೇಲೆ ಹರಿದ ಬಟ್ಟೆ ಇದ್ದರೂ ಪರವಾಗಿಲ್ಲ. ಆದರೆ ಕೈ ಯಲ್ಲಿ ಒಂದು ಪುಸ್ತಕವಿರಲಿ" ಎಂದು ಹಿರಿಯರು ಹೇಳುತ್ತಿದ್ದ ಮಾತು ನಿಜಕ್ಕೂ ಅದ್ಭುತವಾದುದು. ಕಾರಣ ಬಟ್ಟೆ ಹರಿದರೂ ಮೆದಳು ಮಾತ್ರ ಸದಾ ಕ್ರೀಯಾಶೀಲವಾಗಿರಲಿ ಎನ್ನುವುದು ಅವರ ಉದ್ದೇಶ. ಜ್ಞಾನರ್ಜನೆಯ ಏಕೈಕ ಅಸ್ತ್ರವೇ ಪುಸ್ತಕ. ಇದನ್ನು ಅರಿತ ಮಹಿಳೆಯೊಬ್ಬರು ಇಂದು ತಮ್ಮ ಪತಿ ಜೊತೆ ಸೇರಿ ಅದ್ಭುತ ಕಾರ್ಯಕ್ಕೆ ಕೈ ಹಾಕಿ ಯಶಸ್ವಿಯಾಗಿರುವುದು ಇತರರಿಗೆ ಮಾದರಿಯಾಗಿದೆ. ಉತ್ತರ ಕನರ್ಾಟಕದ ವಿಜಯಪುರ ಜಿಲ್ಲೆ ಎಂದರೆ ಐತಿಹಾಸಿಕವಾಗಿಯೂ ಜನಪ್ರೀಯ ರಕ್ತಸಿಕ್ತವಾಗಿಯೂ ಪ್ರಸಿದ್ಧ. ಚಿಂತಕರೇ ತುಂಬಿದ್ದ ಭೀಮಾ ತೀರದ ಸುತ್ತಮುತ್ತ ಕೆಲವು ಜನಗಳು ಮಾಡಿದ ರಕ್ತಪಿಪಾಸುತನದ ಕಾರ್ಯದಿಂದಾಗೀ ಇಂದು ಭೀಮಾತೀರ ಚಿಂತಕರ ನಾಡಿನ ಬದಲಾಗಿ ಹಂತಕರ ನಾಡಾಗಿ ಗುರುತಿಸುವಂತಾಯಿತು. ಹೇಗಾದರೂ ಮಾಡಿ ಅದನ್ನು ಹೋಗಲಾಡಿಸಿ, ಚಿಂತಕರ ನಾಡನ್ನು ಚಿಂತಕರ ನಾಡಾಗಿಯೇ ಗುರುತಿಸುವಂತೆ ಮಾಡುವ ಛಲದಿಂದ ಶ್ರೀಮತಿ ವಿಜಯಲಕ್ಷ್ಮೀ ಕತ್ತಿ ಹಾಗೂ ರಮೇಶ ಕತ್ತಿ ದಂಪತಿಗಳು ಬೆರಗು ಎನ್ನುವ ಹೆಸರಿನಲ್ಲಿ ಪ್ರಕಾಶನ ಸಂಸ್ಥೆಯನ್ನು ಹುಟ್ಟು ಹಾಕಿ ಕೇವಲ 5 ವರ್ಷದಲ್ಲಿ ಅಸಾಮಾನ್ಯ ಪುಸ್ತಕಗಳನ್ನು ಪ್ರಟಿಸುವ ಮೂಲಕ ಬೆರುಗು ಮೂಡಿಸಿದ್ದಾರೆ. ಆಲಮೇಲ ತಾಲೂಕಿನ ಕಡಣಿ ಎನ್ನುವ ಕುಗ್ರಾಮದಲ್ಲಿ 2017 ರಲ್ಲಿ ಪ್ರಾರಂಭಗೊಂಡ ಪ್ರಕಾಶನ ಸಂಸ್ಥೆಯು ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ 48 ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಹಲವು ವರ್ಷಗಳಿಂದ ಪ್ರಕಾಶನ ಮಾಡುತ್ತಿರುವ ಸಂಸ್ಥೆಗಳು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದಾರೆ. ಅದರಲ್ಲೂ ವಿಪರೀತವಾಗಿ ಏರಿರುವ ಕಾಗದದ ಬೆಲೆಯಿಂದಾಗಿ ಪುಸ್ತಕಗಳನ್ನು ಮುದ್ರಿಸುವುದು ಒಂದು ಹುಚ್ಚು ಸಾಹಸದಂತೆ ಕಾಣುತ್ತಿದೆ. ಕೈಸುಟ್ಟುಕೊಳ್ಳುವುದಕ್ಕೆ ಪ್ರಕಾಶನ ಸಂಸ್ಥೆಯನ್ನು ಹುಟ್ಟು ಹಾಕುತ್ತಿದ್ದಾರೆ ಎಂದು ಜನರು ಆಡಿಕೊಂಡು ನಗುವಂತ ಕಾಲಘಟ್ಟದಲ್ಲಿ ಒಂದೇ ಬಾರಿಗೆ ಹತ್ತಿಪ್ಪತ್ತು ಪುಸ್ತಕಗಳನ್ನು ಹೊರತರುವ ಖ್ಯಾತಿ ಬೆರುಗು ಪ್ರಕಾಶನ ಸಂಸ್ಥೆಗೆ ಸಲ್ಲುತ್ತದೆ. ಮಹಿಳೆಯರು ಪ್ರಕಾಶರಾಗುವುದು ಅಷ್ಟು ಸುಲಭದ ಕೆಲಸವಲ್ಲ. ಅಂತದರಲ್ಲಿ ಒಂದು ಸಣ್ಣ ಹಳ್ಳಿಯಲ್ಲಿದ್ದುಕೊಂಡು ಇಡೀ ರಾಜ್ಯವೇ ಈಕಡೆಗೆ ತಿರುಗಿ ನೋಡುವಂತ ಕಾರ್ಯ ಮಾಡಿದ ವಿಜಯಲಕ್ಷ್ಮೀ ಕತ್ತಿಯವರ ಕಾರ್ಯ ಶ್ಲಾಘನೆಗೆ ಅರ್ಹವಾಗಿದೆ. ಮಾತ್ರವಲ್ಲ ಇದು ಇತರ ಮಹಿಳೆಯರಿಗೆ ಸ್ಪೂತರ್ಿ ನೀಡುತ್ತಿದೆ.

ನಾನೇಕೆ ಇವರನ್ನು ಇಷ್ಟು ಹೊಗಳುತ್ತಿದ್ದೇನೆ ಎಂದು ಕೆಲವರಿಗೆ ಅನ್ನಿಸಬಹುದು. ಆದರೆ ಇದು ಹೊಗಳಿಕೆಯಲ್ಲ. ಬದಲಿಗೆ ವಾಸ್ತವಕ್ಕೆ ಕನ್ನಡಿ ಹಿಡಿಯುವ ಕಾರ್ಯ ಮಾಡುತ್ತಿದ್ದೇನೆ ಅಷ್ಟೆ. ಪುಸ್ತಕಗಳು ಈ ದೇಶದ ಆಸ್ತಿ. ಇಂದು ನಮ್ಮ ಭಾಷೆ, ನಮ್ಮ ಪರಂಪರೆಯನ್ನು ತಿಳಿದುಕೊಂಡು ಹೆಮ್ಮೆ ಪಡುವುದಕ್ಕೆ ನೆರವಾಗಿದ್ದೇ ಈ ಹೊತ್ತಿಗೆಗಳು. ಅದರಲ್ಲೂ ಕನ್ನಡ ಎನ್ನುವುದು ಹೆಜ್ಜೆನ ಭಾಷೆಯಾಗಿ ನಮ್ಮೆದೆಯ ಭಾವ ಲಹರಿಯಲ್ಲಿ ಕುಣಿಯುವುದಕ್ಕೆ ಕಾರಣವಾಗಿದ್ದು ಕನ್ನಡ ಸಾಹಿತ್ಯ. "ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು" ಎನ್ನುವ ಕವಿಭಾವವನ್ನು ಅರಿಯುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದು ಆ ಕವಿತೆಯು ಪುಸ್ತಕದಲ್ಲಿ ನಮೂದಾದಾಗಲೇ. "ನರಕಕ್ ಇಳ್ಸಿ, ನಾಲ್ಗೆನ್ ಸೀಳ್ಸಿ ಬಾಯ್ ಹೊಲ್ಸಾಕದ್ರೂನು ಮೂಗನಲ್ ಕನ್ನಡ ಪದವಾಡ್ತಿವಿ" ಎಂದು ಹೇಳಿದ ರಾಜರತ್ನಂ ಅವರನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗಿದ್ದೆ ಅವರು ಬರೆದ ಕೃತಿಗಳಿಂದ. ಕುವೆಂಪುರವರ ಮಲೆಗಳಲ್ಲಿ ಮದುಮಗಳು, ತೇಜಸ್ವಿಯವರ ಕವರ್ಾಲೊ, ಬೇಂದ್ರೆಯವರ ನವಿಲುಗರಿ, ನಿಸಾರ ಅಹ್ಮದರ ನಿತ್ಯೋತ್ಸವ, ಕೆಎಸ್ಎನ್ರ ಮೈಸೂರು ಮಲ್ಲಿಗೆ, ಕಾನರ್ಾಡರ ತಲೆದಂಡ, ಕಲಬುಗರ್ಿಯವರ ಮಾರ್ಗ, ಬೈರಪ್ಪನವರ ಉತ್ತರಕಾಂಡ, ಡಿವಿಜಿಯವರ ಮಂಕುತಿಮ್ಮನ ಕಗ್ಗ, ಅನಕೃ ಅವರ ಸಂಧ್ಯಾರಾಗ, ಗೋಕಾಕರ ಭಾರತ ಸಿಂಧೂರಶ್ಮಿ, ಮಾಸ್ತಿಯವರ ಚಿಕ್ಕವೀರ ರಾಜೇಂದ್ರ, ಕಡಲತೀರ ಭಾರ್ಗವನ ಮೂಕಜ್ಜಿಯ ಕನಸುಗಳು ಸೇರಿದಂತೆ ಹಳೆಯ ಬರಹಗಾರರಿಂದ ಆಧುನಿಕ ಬರಹಗಾರರವರೆಗೂ ಹಲವಾರು ಕೃತಿಗಳಿಂದ ನಮ್ಮ ಸಾಹಿತ್ಯ ಕ್ಷೇತ್ರ ಸಂಪನ್ನವಾಯಿತು. ಇದಕ್ಕೆ ಕಾರಣವಾಗಿದ್ದು ಪ್ರಕಾಶನ ಎನ್ನುವ ಸಾಹಸವನ್ನು ಪ್ರಕಾಶಕರು ಮಾಡಿದ್ದು. ಇದರಿಂದಾಗಿ ಕನ್ನಡಕ್ಕೆ ಜ್ಞಾನಪೀಠಗಳ ಸುರಿಮಳೆಯಾಯಿತು. ಸರಸ್ವತಿ ಸಮ್ಮಾನ್ ಹುಡುಕಿಕೊಂಡಿ ಬಂದಿತು. ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳು ಸಾಕಷ್ಟು ಸಂದಿತು. ಕುಮಾರವ್ಯಾಸ ಭಾರತವಾಗಲಿ, ವಿಕ್ರಮಾಜರ್ುನ ವಿಜಯವಾಗಲಿ, ಕವಿರಾಜಮಾರ್ಗವಾಗಿರಲಿ ಎಲ್ಲವನ್ನು ನಾವಿಂದು ಸವಿಯುತ್ತಿದ್ದೇವೆಂದರೆ ಅಂದು ಬರೆದಿಟ್ಟ ಪುಸ್ತಕಗಳಿಂದಲೇ ಹೊರತು ಅನ್ಯದರಿಂದಲ್ಲ. ಹೀಗಾಗಿ ಪುಸ್ತಕ ಪ್ರಕಟಣೆಯ ಹಿಂದೆ ಒಂದು ಸಾಹಸ ಇರುತ್ತದೆ ಎನ್ನುವ ಕಾರಣಕ್ಕಾಗಿಯೇ ನಾನು ಅವರ ಬಗ್ಗೆ ಅಭಿಮಾನ ತೋರುತ್ತಿದ್ದೆನೆ. ನನಗೆ ತಿಳಿದಂತೆ ಪುಸ್ತಕ ಬರೆಯುವುದು ಎಷ್ಟು ಕಷ್ಟದ ಕೆಲಸವೋ ಅದನ್ನು ಓದುಗರ ಕೈಗೆ ತಲುಪಿಸುವುದು ಕೂಡ ಅಷ್ಟೇ ಮುಖ್ಯವಾಗುತ್ತದೆ. ಹೀಗಾಗಿ ಬರಹಗಾರ ಮತ್ತು ಓದುಗನ ಮಧ್ಯದಲ್ಲಿ ಸಂಬಂಧ ಕಲ್ಪಸುವ ಸಂಪರ್ಕ ಸೇತುವೆ ಎಂದರೆ ಅದು ಪ್ರಕಾಶಕ. ಆ ಗುರುತರವಾದ ಜವಾಬ್ದಾರಿಯನ್ನು ನಿಭಾಯಿಸುವುದೆಂದರೆ ಕತ್ತಿಯ ಅಲಗಿನ ಮೇಲೆ ನಡೆದ ಅನುಭವವಾಗುತ್ತದೆ. ಮೊದಲಾದರೆ ಹೊಸ ಪುಸ್ತಕಗಳ ಬರುವಿಕೆಗಾಗಿ ಕಾಯುತ್ತ ಕೂರುವ ಸಾಹಿತ್ಯಾಸಕ್ತರು ಬಹಳಷ್ಟಿದ್ದರು. ಆದರೆ ಈಗ ಸಾಹಿತ್ಯವೆಂದರೆ ಮೂಗು ಮುರಿಯುವ ಜನಗಳು ಅಧಿಕವಾಗಿದ್ದಾರೆ. ಕುಳಿತು ಓದುವ ವ್ಯವಧಾನವೂ ಕೂಡ ನಮ್ಮಲ್ಲಿ ಉಳಿದಿಲ್ಲ. ಹೀಗಾಗಿ ಬರಹಗಾರರು ಅಧಿಕವಾದರೂ ಕೂಡ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ಉತ್ತಮ ಪುಸ್ತಕಗಳನ್ನು ಓದುಗರಿಗೆ ತಲುಪಿಸಿ ಓದುವ ಗುಣವನ್ನು ಹುಟ್ಟುಹಾಕುವುದಕ್ಕೆಂದು ಲೇಖಕ ಹಪಹಪಿಸುತ್ತಾನೆ. ಹೀಗಿರುವಾಗ ಲೇಖಕನ ಬೆಂಬಲಕ್ಕೆ ಪ್ರಕಾಶಕ ನಿಂತಾಗ ಮಾತ್ರ ಮಾಡುವ ಕಾರ್ಯ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಬೆರಗು ಪ್ರಕಾಶನ ಉತ್ತಮ ಕಾರ್ಯ ಮಾಡುತ್ತಿದೆ ಎನ್ನುವುದು ಹೆಮ್ಮೆಯ ಸಂಗತಿ.

ಒಂದು ಕಾಲದಲ್ಲಿ ಗಳಗನಾಥರು ಹೆಗಲ ಮೇಲೆ ಪುಸ್ತಕ ಹೊತ್ತು, ಮನೆ ಮನೆಗೂ ತಲುಪಿಸಿ, ಕನ್ನಡ ಸಾಹಿತ್ಯದ ಕಂಪನ್ನು ಮನ ಮನಗಳಿಗೂ ಹಬ್ಬಿಸುವ ಕಾರ್ಯ ಮಾಡುತ್ತಿದ್ದರು. ಜಿ.ಪಿ.ರಾಜರತ್ನಂ ತಾವು ಹೋದ ಕಾರ್ಯಕ್ರಮಗಳಲ್ಲೆಲ್ಲ "ನನಗೆ ಹಾರ ತುರಾಯಿ ಯಾವುದೂ ಬೇಡ. ಬದಲಿಗೆ ನಾ ತಂದಿರುವ ಪುಸ್ತಕಗಳನ್ನು ಕೊಂಡುಕೊಳ್ಳಿ ಎಂದು ಹೇಳುತ್ತಿದ್ದುದ್ದನ್ನು ಕೇಳಿದರೇ ನಿಜಕ್ಕೂ ಕನ್ನಡ ಸಾಹಿತ್ಯದ ಉಳಿಕೆಗಾಗಿ ಅವರೆಲ್ಲ ಅದೆಷ್ಟು ಶ್ರಮಿಸುತ್ತಿದ್ದರು ಎನ್ನುವುದು ಗೊತ್ತಾಗುತ್ತದೆ. ಅದರಲ್ಲೂ ವಿಶೇಷವೆಂದರೆ ಅವರು ತಾವು ಬರೆದ ಪುಸ್ತಕಗಳನ್ನು ಮಾತ್ರ ತೆಗೆದುಕೊಳ್ಳಿ ಎಂದು ಹೇಳುತ್ತಿರಲಿಲ್ಲ. ಬದಲಿಗೆ ಹೊಸ ಲೇಖಕರ ಪುಸ್ತಕಗಳನ್ನು ಕೂಡ ಪರಿಚಯ ಮಾಡುವ ಮಹತ್ತರ ಕಾರ್ಯ ಮಾಡುತ್ತಿದ್ದರು. ಅದರ ಪರಿಣಾಮವಾಗಿಯೇ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಪರೂಪದ ಬರಹಗಾರರು ನೆಲೆ ಕಂಡುಕೊಳ್ಳುವುದಕ್ಕೆ ಸಾಧ್ಯವಾಯಿತು. ಇಂದು ಬೆರಗು ಸಂಸ್ಥೆಯು ಕೂಡ ಅದೇ ಕಾರ್ಯವನ್ನು ಮಾಡುತ್ತಿದೆ. "ಕವನ ಹುಟ್ಟುವುದಿಲ್ಲ ಖಾಲಿ ಮನದೊಳಗೆ" ಎನ್ನುವಂತೆ ಲೇಖನಗಳು ಸುಮ್ಮನೆ ಬರೆಯುತ್ತೇನೆಂದರೆ ಸಾಧ್ಯವಿಲ್ಲ. ಚಟದ ರೂಪದಲ್ಲಿ ಬರವಣಿಗೆಯನ್ನು ಮಾಡಿದರೆ ಅದೂ ಸಾಹಿತ್ಯವೂ ಆಗುವುದಿಲ್ಲ. ದಡವನ್ನೂ ತಲುಪುವುದಿಲ್ಲ. ಭಾವನೆಗಳನ್ನು, ವಿಚಾರಗಳನ್ನು, ಅಲೋಚನೆಗಳನ್ನು ಹೊರ ಹಾಕುವುದಕ್ಕೆ ಬರವಣಿಗೆಯೊಂದೇ ಕೊನೆಯ ಮಾರ್ಗ ಎಂದು ನಂಬಿ ಯಾರು ಬರೆಯುವದಕ್ಕೆ ಮುಂದಾಗುತ್ತಾರೋ ಅವರಿಂದ ಮಾತ್ರ ಸುಂದರವಾದ ಕೃತಿಗಳ ರಚನೆ ಸಾಧ್ಯವಾಗುತ್ತದೆ. ಲೇಖಕ ಬರೆದ ಬರೆಹವನ್ನು ಓದುಗನಿಗೆ ತಲುಪಿಸುವ ಕಾರ್ಯ ಪ್ರಕಾಶಕನದಾಗುತ್ತದೆ. ಹೇಗೆ, ಮೊದಲ ಹೆಜ್ಜೆ ಇಡುವಾಗ ಕೈ ಹಿಡಿದು ನಡೆಸುವವರು ಜೊತೆಗಿರಬೇಕು ಎನ್ನುತ್ತಾರಲ್ಲ. ಹಾಗೆ ಹೊಸ ಲೇಖಕರಾಗಿ ಪರಿಚಿತರಾಗಲು ಬಯಸುವವರಿಗೆ ಪ್ರಕಾಶಕರು ಬೆಂಬಲಕ್ಕೆ ನಿಲ್ಲಬೇಕಾಗುತ್ತದೆ. ಇಂದು ಆ ಕಾರ್ಯವನ್ನು ಬೆರಗು ಸಂಸ್ಥೆ ಮಾಡುತ್ತಿದೆ. ಕೇವಲ ಜನಪ್ರೀಯ ಲೇಖಕರನ್ನು, ಸಾಹಿತಿಗಳನ್ನು, ಕಾಡಿ ಬೇಡಿ ಅವರಿಂದ ಕೃತಿಗಳನ್ನು ಬರೆಸಿ ಮಾರಾಟ ಮಾಡುವ ಇರಾದೆಯಿಂದ ಮುಕ್ತವಾಗಿರುವ ಬೆರಗು ಪ್ರಕಾಶನ ಸಂಸ್ಥೆಯು ಯುವಬರಹಗಾರರಿಗೆ ಮೊದಲ ಆಧ್ಯತೆ ನೀಡುತ್ತಿದೆ. ಹೊಸ ಉತ್ಪನ್ನ ಎಂದಾಗ ಅನುಮಾನದಿಂದ ನೋಡುವ ಜನಗಳ ಮನಸ್ಸಿಗೆ ಒಬ್ಬ ಹೊಸ ಲೇಖಕನ ಕೃತಿಯನ್ನು ತಲುಪಿಸುವುದು ಸುಲಭ ಸಾಧ್ಯವಲ್ಲ. ಆದರೂ ಅದನ್ನು ಮಾಡಿಯೇ ತೀರುತ್ತೇನೆ ಎನ್ನುವ ಹಠಕ್ಕೆ ಬಿದ್ದಿರುವ ಬೆರಗು ಸಂಸ್ಥೆ ಇಂದು ಹೊಸ ವಿಷಯ ಹಾಗೂ ವಿಚಾರಗಳಿಂದ ಹೊಸತನದಲ್ಲಿ ಮುನ್ನುಗ್ಗುತ್ತಿದೆ. ಇದು ಕನ್ನಡ ಸಾಹಿತ್ಯದ ದೊಡ್ಡ ಸೇವೆ ಎಂದೇ ಕರೆಯಬಹುದು. ತನ್ನ ಪ್ರಯತ್ನದಲ್ಲಿ ಯಶಸ್ಸು ಕಂಡಿರುವ ಬೆರಗು ಪ್ರಕಾಶನವನ್ನು ಇಂದು ಓದುಗರು ಕೂಡ ಬೆರಗುಗಣ್ಣಿನಿಂದ ನೋಡುವಂತಾಗಿದೆ.

ವಿಜಯಲಕ್ಷ್ಮೀಯವರ ಪತಿ ರಮೇಶ ಕತ್ತಿ ಸ್ವತಃ ಲೇಖಕರಾಗಿದ್ದು ತಮ್ಮ ಪುಸ್ತಕಗಳನ್ನು ಪ್ರಕಟಿಸುವುದಕ್ಕಾಗಿ ಇನ್ನೊಬ್ಬರ ಬಳಿ ತೆರಳಿದರೆ ಏನಾಗಬಹುದು ಎನ್ನುವುದನ್ನು ಅನುಭವಿಸಿದವರು. ಅಷ್ಟು ಮಾತ್ರವಲ್ಲ ತಾನು ಅನುಭವಿಸಿದಂತೆ ಹೊಸ ತಲೆಮಾರಿನ ಒಳ್ಳೆಯ ಬರಹಗಾರರು ಅನುಭವಿಸಬಾರದು ಎನ್ನುವ ಇಂಗಿತವನ್ನು ಮಡದಿಗೆ ತಿಳಿಸಿದಾಗ 5 ಲಕ್ಷ ರೂಪಾಯಿಗಳ ಮೂಲ ಬಂಡವಾಳದೊಂದಿಗೆ ಬೆರಗು ಸಂಸ್ಥೆಯನ್ನು ಹುಟ್ಟುಹಾಕಿ ಮುನ್ನಡೆಸುವುದಕ್ಕೆ ವಿಜಯಲಕ್ಷ್ಮೀ ಸಿದ್ಧವಾದರು. ಕೇವಲ ತೋರಿಕೆಗಾಗಿ ಸಂಸ್ಥೆ ಮಾಡುವುದರಲ್ಲಿ ಅರ್ಥವಿಲ್ಲ. ಮಾಡಿದರೆ ಜನರೇ ಆ ಸಂಸ್ಥೆಯನ್ನು ಜಗತ್ತಿಗೆ ತೋರಿಸುವಂತೆ ಮಾಡಬೇಕು ಎಂದು ನಿಧರ್ಾರ ಮಾಡಿ ಹೆಜ್ಜೆ ಹಾಕಿದ್ದರ ಪ್ರತಿಫಲವಾಗಿ 'ಬೆರಗು' ಇಂದು ಇಷ್ಟು ಎತ್ತರಕ್ಕೆ ಬೆಳೆಸಲು ಸಾಧ್ಯವಾಗಿದೆ. ಇವರ ಪ್ರಕಾಶನದಲ್ಲಿ ಹೊರಬಂದ ಅನೇಕ ಕೃತಿಗಳಿಗೆ ವಿವಿಧ ಸಂಘಟನೆಗಳ, ಸಂಸ್ಥೆಗಳ ಪುರಸ್ಕಾರಗಳು ದೊರೆತಿವೆ ಎಂದರೆ ಅವರ ಆಯ್ಕೆ ಹೇಗಿರಬೇಕು ಎನ್ನುವುದನ್ನು ನೀವೇ ಊಹಿಸಬಹುದಾಗಿದೆ. ಕವನ ಸಂಕಲನಗಳು, ಕಾದಂಬರಿಗಳು, ಲೇಖನ ಮಾಲಿಕೆಗಳು, ಅಂಕಣಬರಹಗಳು, ನಾಟಕಗಳು, ವಿಮಾಶರ್ಾ ಸಾಹಿತ್ಯ ಬರಹಗಳು, ವೈಚಾರಿಕ ಲೇಖನ ಮಾಲಿಕೆಗಳು ಸೇರಿದಂತೆ ಹಲವು ಪ್ರಕಾರದ ವಿಭಿನ್ನ ಕೃತಿಗಳನ್ನು ಪ್ರಕಾಶಿಸುವ ಸಾಹಸದಲ್ಲಿ ಗೆದ್ದು ಬೀಗುತ್ತಿರುವ ಈ ಸಂಸ್ಥೆ ಇಂದು ಉತ್ತರ ಕನರ್ಾಟಕ ಭಾಗದಲ್ಲಿ ಅದರಲ್ಲೂ ಭೀಮಾ ತೀರದ ದಂಡೆಯಲ್ಲಿ ನೆಲೆನಿಂತು ಈ ಭಾಗದಲ್ಲಿ ರಕ್ತ ಚರಿತ್ರೆಗಿಂತ ಸಾಹಿತ್ಯ ಚಿಂತನೆಯೇ ದೊಡ್ಡದಿದೆ. ಅನುಭಾವಿಗಳಿಂದ ಆವೃತವಾಗಿರುವ ಈ ಮಣ್ಣಿನ ಕಣ ಕಣದಲ್ಲಿ ಸಾಹಿತ್ಯ ಕಂಪು ಸೂಸುತ್ತಿದೆ. ಅದನ್ನು ನಾಡಿಗೆ ಮತ್ತಷ್ಟು ಹಂಚುವುದಕ್ಕೆಂದೆ ಈ ಪ್ರಕಾಶನ ಸಂಸ್ಥೆಯನ್ನು ಹುಟ್ಟು ಹಾಕಲಾಗಿದೆ ಎನ್ನುವ ಪ್ರಕಾಶಕರ ಮಾತು ನಿಜಕ್ಕೂ ಈ ಮಣ್ಣಿನ ಮೇಲೆ ಅವರಿಗಿರುವ ಪ್ರೀತಿಯನ್ನು ತೋರಿಸುತ್ತದೆ.

ಇಂದು ಪುಸ್ತಕ ಪ್ರಕಾಶನ ಎಂದಾಕ್ಷಣ ಬೆಂಗಳೂರಿನ ಕಡೆಗೆ ಮುಖ ಮಾಡಬೇಕು. ಆದರೆ ಎಲ್ಲರಿಗೂ ಅಲ್ಲಿ ಅವಕಾಶವಿದೆಯೇ ಎನ್ನುವ ಪ್ರಶ್ನೆ ಎದುರಾದಾಗ ಆ ಕಡೆ ಮಾಡಿದ ಮುಖವನ್ನು ಕೆಳ ಹಾಕಬೇಕು. ಕಾರಣ ಉತ್ತರ ಕನರ್ಾಟಕ ಭಾಗದ ಲೇಖಕರಿಗೆ ಬೆಂಗಳೂರಿಗರು ಬೆಳೆಸುವುದೂ ಬಹಳ ಕಡಿಮೆ. ಅದರಲ್ಲೂ ಹೊಸ ಬರಹಗಾರರು ಎಂದರೆ ಮುಗಿದೇ ಹೋಯಿತು. ಹೀಗಾಗಿ ಇಂದಿನ ದಿನಗಳಲ್ಲಿ ಲೇಖಕರೆ ಪುಸ್ತಕಗಳನ್ನು ಮುದ್ರಿಸಿ ಮಾರುವುದಕ್ಕೆ ಹರಸಾಹಸ ಪಡುತ್ತಿದ್ದಾರೆ. ಕೆಲವೊಮ್ಮೆ ಇದರಿಂದ ಆಗುವ ಬೇಸರದಿಂದಾಗಿ ಬರವಣಿಗೆಯಿಂದ ವಿಮುಖವಾಗುತ್ತಿದ್ದಾರೆ. ಇದು ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ನಷ್ಟ ಉಂಟು ಮಾಡುತ್ತದೆ. ಇದನ್ನರಿತ ಮೇಲೆ ಹುಟ್ಟಿಕೊಂಡಿರುವ ಬೆರಗು ಎನ್ನುವ ಈ ಸಂಸ್ಥೆ ಮುಂದೊಂದು ದಿನ ಬೆಂಗಳೂರಿನ ದೊಡ್ಡ ದೊಡ್ಡ ಪ್ರಕಾಶನ ಸಂಸ್ಥೆಗಳಿಗೆ ಸರಿ ಸಮನಾಗಿ ಕಾರ್ಯ ಮಾಡುತ್ತದೆ ಎನ್ನುವುದಯ ಸ್ಪಷ್ಟವಾಗುತ್ತದೆ. ಕತ್ತಿ ದಂಪತಿಗಳ ಈ ಕಾರ್ಯಕ್ಕೆ ಸಾಹಿತ್ಯ ಪೋಷಕರು ದೇಣಿಗೆ ರೂಪದಲ್ಲಿ ನೆರವು ನಿಡುತ್ತಿದ್ದಾರೆ. ಅದರೊಂದಿಗೆ ಸಾಹಿತ್ಯದ ಬೇರುಗಳು ಸಡಿಲವಾಗದಂತ ಕಾಯಕ ಮಾಡುತ್ತಿದ್ದಾರೆ. ಒಂದೇ ದಿನ 28 ಪುಸ್ತಕಗಳು ಲೋಕಾರ್ಪಣೆಗೊಳ್ಳುತ್ತಿರುವುದು ಅದಕ್ಕೆ ಉದಾಹರಣೆಯಾಗಿ ನಿಲ್ಲುತ್ತದೆ. ಇದನ್ನು ಗಮನಸಿದರೆ ಇನ್ನೂ ನಮ್ಮ ನಾಡಿನಲ್ಲಿ ಓದುಗರು ಇದ್ದಾರೆ. ಸಾಹಿತ್ಯ ಪೋಷಕರು ಅವರ ಜೊತೆಗಿದ್ದಾರೆ ಎನ್ನುವುದು ಅರ್ಥವಾಗುತ್ತದೆ. ಮುಂದಿನ ದಿನಗಳಲ್ಲಿ ಮನೋಹರ ಗ್ರಂಥಮಾಲೆ, ಸಪ್ನಾ ಪ್ರಕಾಶನ, ಸಾಹಿತ್ಯ ಭಂಡಾರ, ವಸಂತ ಪ್ರಕಾಶನ, ಅಂಕಿತ ಪ್ರಕಾಶನ, ಗೀತಾಂಜಲಿ ಪ್ರಕಾಶನ, ಸಾವಣ್ಣ ಪ್ರಕಾಶನದಂತೆ ಬೆರಗು ಪ್ರಕಾಶನವು ಕೂಡ ರಾಜ್ಯದ ಮನೆ ಮಾತಾಗುವುದರಲ್ಲಿ ಎರಡು ಮಾತಿಲ್ಲ. ಆ ನಿಟ್ಟಿನಲ್ಲಿ ಹಳ್ಳಿಯಲ್ಲಿ ಹುಟ್ಟಿದ ಪ್ರಕಾಶನ ಸಂಸ್ಥೆಯೊಂದು ದಿಲ್ಲಿ ವರೆಗೂ ಸುದ್ದಿಯಾಗುವಂತಾಗಲಿ ಅದರ ಜೊತೆಗೆ ಸಾಹಿತ್ಯವು ಸದ್ದು ಮಾಡುತ್ತಿರಲಿ ಎನ್ನುವುದು ಓದುಗನ ಆಶಯ. ಅವರ ಕಾರ್ಯಕ್ಕೆ ನಾವೊಂದು ಸಲಾಂ ಹೇಳೋಣ. ಸಾಹಿತ್ಯದ ಬೆಳವಣಿಗೆಗೆ ಕೈ ಜೋಡಿಸೋಣ. ಅದರ ಜೊತೆಗೆ ಪುಸ್ತಕಗಳನ್ನು ಕೊಂಡು ಓದುವ ಹಾಗೂ ಪ್ರಕಾಶನ ಸಂಸ್ಥೆಗಳನ್ನು ಉಳಿಸುವ ಮತ್ತು ಲೇಖಕರನ್ನು ಬೆಳೆಸುವ ನಿಧರ್ಾರಕ್ಕೆ ಬದ್ಧವಾಗೋಣ. ಪುಸ್ತಕಗಳಿಲ್ಲದ ಮನೆ ಆತ್ಮವಿಲ್ಲದ ದೇಹವಿದ್ದಂತೆ ಎನ್ನುವ ಮಾತನ್ನು ಅಥರ್ೈಸಿಕೊಂಡು ಮನೆ ಮನೆಗಳಲ್ಲಿಯೂ ಪುಸ್ತಕ ಸಂಸ್ಕೃತಿ ಹುಟ್ಟಿಕೊಳ್ಳುವುದಕ್ಕೆ ನೆರವಾಗೋಣ ಅಲ್ಲವೇ .