ಅತ್ಯಾಧುನಿಕ ಸೌಕರ್ಯಗಳೊಡನೆ ಬಹುಮುಖೀ ಶಿಕ್ಷಣವನ್ನು ಪಡೆಯುವ ಒಂದು ವಿಶಿಷ್ಟ ಕಾಲಘಟ್ಟದಲ್ಲಿ ನಾವಿದ್ದೇವೆ. ಮಕ್ಕಳು ಶಿಕ್ಷಣ ಪಡೆಯದಿದ್ದರೂ ನಡೆಯುತ್ತದೆ, ಹೇಗಾದರೂ ದುಡಿದು ತಿನ್ನುವ ಶಕ್ತಿ ಪಡೆದರಾಯಿತು ಎಂದು ಭಾವಿಸುತ್ತಿದ್ದ ಕಾಲವನ್ನು ದಾಟಿ ಬಂದಿದ್ದೇವೆ. ಮಕ್ಕಳಿಗೆ ಕಾಲಕ್ಕೆ ತಕ್ಕ ಶಿಕ್ಷಣ ಕೊಡಿಸುವದು ಅನಿವಾರ್ಯ ಎಂಬ ಭಾವನೆ ಹಿರಿಯರಲ್ಲಿ ಬೆಳೆದಿದೆ. ಅದರಲ್ಲೂ ಮಹಿಳೆಯರ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ದೊರಕುತ್ತಿದೆ. ಉಚಿತ ಶಿಕ್ಷಣದ ಸೌಲಭ್ಯವನ್ನೂ ನೀಡಲಾಗುತ್ತಿದೆ. ಜಗತ್ತಿನ ಬೆಳವಣಿಗೆ ಮತ್ತು ಜನರ ಬೆಳವಣಿಗೆ ಬೇರೆಬೇರೆ ಅಲ್ಲ ಎಂಬ ತಿಳಿವಳಿಕೆ ಬೆಳೆಯತೊಡಗಿದೆ. ಅದಕ್ಕೆ ತಕ್ಕಂತೆ ಬದುಕಿನ ವಿವಿಧ ಮಗ್ಗುಲುಗಳನ್ನು ಸ್ಪರ್ಶಿಸುವ ವೈವಿಧ್ಯಮಯ ಶಿಕ್ಷಣದ ಅವಕಾಶಗಳು ಇಂದು ಜನರ ಎದುರಿಗಿವೆ.
ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಶಿಕ್ಷಣ ಕ್ಷೇತ್ರ ಇಂದು ಅಗಾಧ ಸ್ವರೂಪ ಪಡೆದುಕೊಂಡಿದ್ದು ಇಲ್ಲಿ ಎಲ್ಲ ಬಗೆಯ ಶಿಕ್ಷಣವನ್ನೂ ಪಡೆಯುವ ಅವಕಾಶಗಳ ಬಾಗಿಲು ತೆರೆದುಕೊಂಡಿದೆ. ಆಧುನಿಕ ಶಿಕ್ಷಣ ವ್ಯವಸ್ಥೆ ಬೆಳಗಾವಿಯಲ್ಲಿ ಆರಂಭವಾದದ್ದು ಸುಮಾರು 150 ವರ್ಷಗಳ ಹಿಂದೆ. ಅದಕ್ಕೂ ಮೊದಲು ಬೆಳಗಾವಿ ಜಿಲ್ಲೆಯ ಶೈಕ್ಷಣಿಕ ಇತಿಹಾಸದತ್ತ ಕಣ್ಣು ಹೊರಳಿಸಿದರೆ ಅದು ಸಾವಿರ ವರುಷಗಳ ಹಿಂದಿನ ಅಗ್ರಹಾರ ಸಂಸ್ಕೃತಿಯ ಕಡೆ ಹೊರಳುತ್ತದೆ. ಒಂದು ಹಂತದಲ್ಲಿ ಮಠಮಂದಿರಗಳೇ ಮಕ್ಕಳ ಶಿಕ್ಷಣ ಕೇಂದ್ರಗಳಾಗಿದ್ದವು. ಶಾಲೆಗಳಿಗೆ ಮಠ ಎಂದೇ ಕರೆಯಲಾಗುತ್ತಿತ್ತು. 1865ರಲ್ಲಿ ಬೆಳಗಾವಿಯಲ್ಲಿ "ಮಠಪತ್ರಿಕೆ" ಎಂಬ ಹೆಸರಿನ ಶೈಕ್ಷಣಿಕ ಪತ್ರಿಕೆ ಹುಟ್ಟಿಕೊಂಡಿತ್ತು. ಮುಂದೆ ಅದು "ಜೀವನ ಶಿಕ್ಷಣ" ಎಂಬ ಹೆಸರಿನಲ್ಲಿ ಬದಲಾಗಿ ಇಂದಿಗೂ ಧಾರವಾಡದಲ್ಲಿ ಮುಂದುವರಿದಿದೆ.
ಬೆಳಗಾವಿ ಜಿಲ್ಲೆಯಲ್ಲಿ ಶಾಲೆಗಳು ಆರಂಭವಾದದ್ದು ಬ್ರಿಟಿಷರ ಆಡಳಿತಾವಧಿಯಲ್ಲಿ. 1830ರಲ್ಲಿ ಮೊದಲ ಮರಾಠೀ ಶಾಲೆಯನ್ನು ಸ್ಥಾಪಿಸಲಾಯಿತು. ಮರಾಠಾ ಪೇಶ್ವೆ ಆಡಳಿತದ ಪರಿಣಾಮವಾಗಿ ಅಂದು ಬೆಳಗಾವಿಯ ಮೇಲೆ ಮರಾಠಿ ಭಾಷೆಯ ದಟ್ಟ ಪ್ರಭಾವ ಹರಡಿಕೊಂಡಿತ್ತು. ಮುಂದೆ ಕನ್ನಡ ಹಾಗೂ ಉರ್ದು ಪ್ರಾಥಮಿಕ ಶಾಲೆಗಳೂ ಆರಂಭವಾದವು. ಶತಮಾನದ ಇತಿಹಾಸ ಹೊಂದಿದ ಸರ್ದಾರ್ಸ್ ಶಿಕ್ಷಣ ಸಂಸ್ಥೆ, ಸೇಂಟಪಾಲ್ಸ್ ಹೈಸ್ಕೂಲ್, ಬೆನನ್ ಸ್ಮಿತ್ ಹೈಸ್ಕೂಲು ಗಳು ನಗರದ ಶೈಕ್ಷಣಿಕ ಬೆಳವಣಿಗೆಗೆ ತಳಹದಿ ಹಾಕಿಕೊಟ್ಟವು. ಈ ತಳಹದಿ ಭದ್ರಗೊಳಿಸಲು ಕಾರಣವಾದದ್ದು 1916ರಲ್ಲಿ ಪ್ರಾರಂಭವಾದ ಕರ್ನಾಟಕ ಲಿಂಗಾಯತ ಎಜ್ಯುಕೇಶನ್ ಸೊಸೈಟಿ (ಕೆ.ಎಲ್.ಇ. ಸೊಸೈಟಿ). ಶಿಕ್ಷಣ ರಂಗದ ಸಪ್ತರ್ಷಿಗಳೆಂದೇ ಕರೆಯಲ್ಪಡುವ ಏಳು ಜನ ಶಿಕ್ಷಕರು ಸೇರಿ ಜಿ.ಎ. ಹೈಸ್ಕೂಲ್ (ಗಿಲಗಿಂಚಿ ಅರಟಾಳ) ಸ್ಥಾಪಿಸಿದರು. ಕೆಲಕಾಲ ಈ ಸಂಸ್ಥೆ ಕರ್ನಾಟಕ ಲಿಬರಲ್ ಎಜ್ಯುಕೇಶನ್ ಸೊಸೈಟಿ ಎಂಬ ಹೆಸರನ್ನೂ ಪಡೆದುಕೊಂಡಿತ್ತು. ಮುಂದೆ ಲಿಬರಲ್ ಎಂಬ ಶಬ್ದದ ಬದಲು ಲಿಂಗಾಯತ ಎಂಬ ಶಬ್ದ ಬಳಕೆಗೆ ತರಲಾಯಿತು. ಇಂದು ಈ ಸಂಸ್ಥೆಯಡಿ 200ಕ್ಕೂ ಹೆಚ್ಚು ವೈವಿಧ್ಯಮಯ ಶಿಕ್ಷಣ ನೀಡುವ ಶಾಲೆ ಕಾಲೇಜುಗಳು ನಡೆದಿವೆಯಲ್ಲದೆ ಇದು ಸ್ವಾಯತ್ತ ವಿಶ್ವವಿದ್ಯಾಲಯದ ಸ್ಥಾನಮಾನವನ್ನೂ ಪಡೆದುಕೊಂಡು ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲೊಂದಾಗಿದೆ. ಬೆಳಗಾವಿ ಜಿಲ್ಲೆಯಲ್ಲಷ್ಟೇ ಅಲ್ಲ, ಬೆಂಗಳೂರು, ದಿಲ್ಲಿ ಸಹಿತ ಹಲವೆಡೆ ತನ್ನ ರೆಂಬೆಕೊಂಬೆಗಳನ್ನು ಚಾಚಿ ಬೆಳೆದಿದೆ. 1933ರಲ್ಲಿ ಆರಂಭಗೊಂಡ ಲಿಂಗರಾಜ ಕಾಲೇಜು, ಆರ್.ಎಲ್.ಎಸ್. ಕಾಲೇಜು, ಜೆಎನ್‌ಎಂಸಿ ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್, ತಾಂತ್ರಿಕ, ವಾಣಿಜ್ಯ, ಕೃಷಿ, ಆಯುರ್ವೇದಿಕ ಸಹಿತ ಹಲವು ಬಗೆಯ ಶಿಕ್ಷಣ ಸಂಸ್ಥೆಗಳನ್ನು ಕೆಎಲ್‌ಇ ಸ್ಥಾಪಿಸಿದೆ.
1930 ರ ದಶಕದವರೆಗೂ ದಕ್ಷಿಣ ಭಾರತದಲ್ಲಿ ಕಾನೂನು ಶಿಕ್ಷಣ ಪಡೆಯಲು ಅವಕಾಶವಿರಲಿಲ್ಲ. ಮುಂಬಯಿ ಮದ್ರಾಸುಗಳಿಗೆ ಹೋಗಬೇಕಿತ್ತು. ಆಗ ಕೆಲವು ಶಿಕ್ಷಣ ಪ್ರೇಮಿಗಳು ಒಂದಾಗಿ ಶ್ರೀಮಂತ ರಾಜಾ ಲಖಮನಗೌಡರ ನೆರವು ಪಡೆದುಕೊಂಡು ಕರ್ನಾಟಕ ಕಾನೂನು ಸಂಸ್ಥೆ ಕಟ್ಟಿ (ಕೆಎಲ್‌ಎಸ್) 1939ರಲ್ಲಿ ಆರ್.ಎಲ್. ಲಾ ಕಾಲೇಜ್ ಆರಂಭಿಸಿದರು. ಈ ಕಾಲೇಜಿನಲ್ಲಿ ಉನ್ನತ ಕಾನೂನು ಶಿಕ್ಷಣ ಪಡೆದ ಹಲವರು ಸುಪ್ರೀಂ ಕೊರ್ಟ, ಹೈಕೋರ್ಟ್ ಮುಖ್ಯ ನ್ಯಾಯಾಧೀಶರುಗಳಾಗಿ, ನ್ಯಾಯಾಧೀಶರುಗಳಾಗಿ ಖ್ಯಾತಿವೆತ್ತಿದ್ದಾರೆ. ಇದೇ ಸಂಸ್ಥೆ ನಂತರ ಗೋಗಟೆ ಕಾಮರ್ಸ್ ಕಾಲೇಜು ಮತ್ತು ತಾಂತ್ರಿಕ ಕಾಲೇಜುಗಳನ್ನೂ ಆರಂಭಿಸಿತು.
1939ರಲ್ಲೇ ಆದ ಇನ್ನೊಂದು ಬೇವಣಿಗೆಯಲ್ಲಿ ಅಂದಿನ ಮುಂಬಯಿ ಸರಕಾರದಿಂದ ಮಾಧ್ಯಮಿಕ ಶಿಕ್ಷಕರ ತರಬೇತಿ ಸಂಸ್ಥೆ ಸ್ಥಾಪಿಸಲ್ಪಟ್ಟಿತು. ಅದೇ ಇಂದಿನ ಗವರ್ನಮೆಂಟ್ ಕಾಲೇಜ್ ಆಫ್ ಎಜ್ಯುಕೇಶನ್. ಸ್ವಾತಂತ್ರ್ಯದ ನಂತರ ಬೆಳಗಾವಿಯ ಶೈಕ್ಷಣಿಕ ಕ್ಷೇತ್ರ ಇನ್ನಷ್ಟು ರಭಸದ ಬೆಳವಣಿಗೆ ಕಂಡಿತು. ದಕ್ಷಿಣ ಕೊಂಕಣ ಶಿಕ್ಷಣ ಸಂಸ್ಥೆಯಿಂದ 1948ರಲ್ಲಿ ರಾಣಿ ಪಾರ್ವತಿದೇವಿ ಕಾಲೇಜು ಸಾವಂತವಾಡಿಯಿಂದ ಬೆಳಗಾವಿಗೆ ವರ್ಗಾಯಿಸಲ್ಪಟ್ಟಿತು. (ಆರ್.ಪಿ.ಡಿ. ಕಾಲೇಜು.) ಅದೇ ಸಂಸ್ಥೆ ಜಿ.ಎಸ್. ಸಾಯಿನ್ಸ್ ಕಾಲೇಜನ್ನೂ ಆರಂಭಿಸಿತು.
ಶಿಕ್ಷಣ ಸಂಸ್ಥೆಗಳ ಸ್ಥಾಪನೆಯಲ್ಲಿ ಕ್ರಿಶ್ಚಿಯನ್ ಮಿಶನರಿಗಳ ಪಾತ್ರವೂ ಬಹಳ ದೊಡ್ಡದು. ಸೇಂಟ್ ಪಾಲ್ಸ್, ಸೇಂಟ್ ಝೇವಿಯರ್, ಸೇಂಟ್ ಜೊಸೆಫ್ಸ್, ಸೇಂಟ್ ಮೇರಿ, ಬೆನನ್ ಸ್ಮಿತ್, ಡಿವೈನ್ ಪ್ರೊವಿಡೆನ್ಸ್ ಮೊದಲಾದವುಗಳನ್ನಿಲ್ಲಿ ಉದಾಹರಿಸಬಹುದು. ಇವೆಲ್ಲ ಆಂಗ್ಲ ಮಾಧ್ಯಮ ಶಾಲೆಗಳೇ.
1931ರಲ್ಲಿ ಕರ್ನಾಟಕ ಆಯುರ್ವೇದ ವಿದ್ಯಾಪೀಠದವರು ಶಹಾಪುರ ಭಾಗದಲ್ಲಿ ಬಿ. ಎಂ. ಕಂಕಣವಾಡಿ ಆಯುರ್ವೇದ ಕಾಲೆಜು ಮತ್ತು ಆಸ್ಪತ್ರೆ ಆರಂಭಿಸಿದರು. ಅದು ಇತ್ತೀಚೆಗೆ ಕೆಎಲ್‌ಇ. ಸಂಸ್ಥೆಯ ಆಧೀನಕ್ಕೊಳಪಟ್ಟಿದೆ. 1932ರಲ್ಲಿ ನಾಗನೂರು ಸ್ವಾಮೀಜಿ ಬೋರ್ಡಿಂಗ್ ತಲೆಯಿತ್ಗಿತು. ಬೆಳಗಾವಿಯಲ್ಲಿ ನಾಗನೂರು ಮಠದ ಈ ಉಚಿತ ಪ್ರಸಾದ ನಿಲಯ ಅಸಂಖ್ಯಾತ ಬಡ ಗ್ರಾಮೀಣ ಮಕ್ಕಳಿಗೆ ಶಿಕ್ಷಣ ಪಡೆಯಲು ನೆರವಾಗಿದೆ. ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯ (ಜೆಎನ್ ಎಂಸಿ.) 1963ರಲ್ಲಿ ಆರಂಭವಾಗಿ ಇಂದು ಅದು ಬೃಹತ್ಪ್ರಮಾಣದ ಸುಸಜ್ಜಿತ ಆಸ್ಪತ್ರೆಯೊಂದಿಗೆ ಹೆಸರು ಗಳಿಸಿದೆ.
ಐವತ್ತರ ದಶಕದಿಂದ ರಭಸದ ಬೆಳವಣಿಗೆ ಕಾಣುತ್ತ ಬಂದ ಬೆಳಗಾವಿಯಲ್ಲಿ ಇಂದು ಎಲ್ಲ ಬಗೆಯ ಶಿಕ್ಷಣ ಸೌಲಭ್ಯವೂ ಇದೆ. ಅನೇಕ ಹೊಸ ಹೊಸ ಶಿಕ್ಷಣ ಸಂಸ್ಥೆಗಳು ಶಿಶುವಿಹಾರದಿಂದ ಕಲಾ ವಿಜ್ಞಾನ ವಾಣಿಜ್ಯ, ಕಾನೂನು ಮೆಡಿಕಲ್, ಇಂಜನಿಯರಿಂಗ್, ಕಾಲೇಜುಗಳನ್ನು ಹೊಂದಿವೆ. ನಾಗನೂರು ಮಠದ ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆ, ಶೇಖ್ ಹೋಮಿಯೋಪಥಿ ಶಿಕ್ಷಣ ಸಂಸ್ಥೆ, ಗೊಮ್ಮಟೇಶ ವಿದ್ಯಾಪೀಠ, ಮರಾಠಾ ಮಂಡಳ, ಭರತೇಶ ಶಿಕ್ಷಣ ಸಂಸ್ಥೆ, ಬಿಕೆ ಮಾಡೆಲ್ ಹೈಸ್ಕೂಲ್, ಚಿಂತಾಮಣರಾವ್ ಸರಕಾರಿ ಜ್ಯೂ. ಕಾಲೇಜು, ಸರಸ್ವತಿ ಹೈಸ್ಕೂಲು, ಮಹಿಳಾ ವಿದ್ಯಾಲಯ, ವನಿತಾ ವಿದ್ಯಾಲಯ, ಜ್ಯೋತಿಬಾ ಫುಲೆ ಜ್ಯೂ. ಕಾಲೇಜು, ಭಾವುರಾವ್ ಕಾಕತಕರ ವಾಣಿಜ್ಯ ಕಾಲೇಜು, ಸನ್ಮತಿ ಶಿಕ್ಷಣ ಸಂಸ್ಥೆಯ ಕಾಮರ್ಸ್ ಕಾಲೇಜು, ಶೆರ್ಮನ್ ಪ್ರಾಥಮಿಕ ಶಾಲೆಗಳು, ಕೆ.ಎಸ್.ಎಸ್. ಸಂಸ್ಥೆಯ ಅರವಿಂದರಾವ್ ಜೋಶಿ ಶಿಕ್ಷಕರ ತರಬೇತಿ ಕಾಲೇಜು, ವಿಶ್ವಭಾರತ ಸೇವಾ ಸಮಿತಿಯ ರಜಪೂತ ಬಂಧು ಹೈಸ್ಕೂಲು, ಪಂಡಿತ ನೆಹರೂ ಮಾಧ್ಯಮಿಕ ಶಾಲೆ, ಇಸ್ಲಾಮಿಕ್ ಸಂಸ್ಥೆಯ ಜ್ಯೂ. ಕಾಲೇಜು, ಅಂಜುಮನ್ ಶಿಕ್ಷಣ ಸಂಸ್ಥೆಯ ಕಾಲೇಜು, ಆದರ್ಶ ವಿದ್ಯಾಲಯ, ಹಿಂದಮಾತಾ ವಿದ್ಯಾಲಯ, ರಂಗುಬಾಯಿ ಭೋಸಲೆ ಹೈಸ್ಕೂಲು, ಕ್ರಾಂತೀವೀರ ಸಂಗ್ಳೊ ರಾಯಣ್ಣ ಶಿಕ್ಷಣ ಸಂಸ್ಥೆಗಳು, ಜೀಜಾಮಾತಾ ಹೆಣ್ಣುಮಕ್ಕಳ ಹೈಸ್ಕೂಲ್, ಹಲವು ಡೆಂಟಲ್, ಪಾರ್ಮಸಿ, ನರ್ಸಿಂಗ್ ಕಾಲೇಜುಗಳು ಇವೆಲ್ಲ ಬೆಳಗಾವಿಯ ಶಿಕ್ಷಣ ಕ್ಷೇತ್ರವನ್ನು ಶ್ರೀಮಂತಗೊಳಿಸಿವೆ, ಸಮೃದ್ಧಗೊಳಿಸಿವೆ. ಇನ್ನೂ ಹೊಸ ಹೊಸ ಶಿಕ್ಷಣ ಸಂಸ್ಥೆಗಳು ತಲೆಯೆತ್ತುತ್ತಲೇಇವೆ.
ಜಿಲ್ಲೆಯ ಗೋಕಾಕ, ಚಿಕ್ಕೋಡಿ, ಸವದತ್ತಿ, ಸಂಕೇಶ್ವರ, ಹುಕ್ಕೇರಿ, ಖಾನಾಪುರ, ನಂದಗಡ, ಬೈಲಹೊಂಗಲ, ರಾಮದುರ್ಗ, ರಾಯಬಾಗ, ಅಥಣಿ, ನಿಪ್ಪಾಣಿ ಮೊದಲಾದ ತಾಲೂಕು ಪ್ರದೇಶಗಳಲ್ಲಿಯೂ ಕಳೆದ ಅರ್ಧ ಶತಮಾನದ ಅವಧಿಯಲ್ಲಿ ಅಸಂಖ್ಯಾತ ಶಿಕ್ಷಣ ಸಂಸ್ಥೆಗಳು ಹುಟ್ಟಿ ಶಾಲೆಕಾಲೇಜುಗಳನ್ನು ಸ್ಥಾಪಿಸಿ ಗ್ರಾಮೀಣ ಪ್ರದೇಶದ ಮಕ್ಕಳ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಹಾದಿ ಮಾಡಿಕೊಟ್ಟಿವೆ. ಇದರ ಪರಿಣಾಮವಾಗಿ ಜಿಲ್ಲೆಯಲ್ಲಿ ಸಾಕ್ಷರತೆಯ ಪ್ರಮಾಣ ಬಹಳ ದೊಡ್ಡ ಮಟ್ಟದಲ್ಲಿ ಏರಿಕೆ ಕಂಡಿದೆ. ಕೆಲವು ದಶಕಗಳ ಹಿಂದೆ ಪ್ರಾಥಮಿಕ ಮಾಧ್ಯಮಿಕ ಶಿಕ್ಷಣ ಪಡೆಯುವದೂ ಬಹಳ ಕಷ್ಟವೆನಿಸುತ್ತಿದ್ದ ಗ್ರಾಮೀಣ ಭಾಗಗಳ ಮಕ್ಕಳಿಗೆ ಇಂದು ತಮ್ಮ ತಮ್ಮ ಊರಿನಲ್ಲೇ ಶಿಕ್ಷಣ ಪಡೆಯುವ ಅವಕಾಶ ಒದಗಿಬಂದಿದೆ. ಇದು ಶೈಕ್ಷಣಿಕ ಪ್ರಗತಿಗೆ ಹಾದಿ ಮಾಡಿಕೊಟ್ಟಿದೆ.
ಬೆಳಗಾವಿ ಜಿಲ್ಲೆ ಮೂರು ವಿಶ್ವವಿದ್ಯಾಲಯಗಳನ್ನು ಪಡೆದ ಹಿರಿಮೆ ಹೊಂದಿದೆ. ಭೂತರಾಮನಹಟ್ಟಿ ಭಾಗದಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ನೆಲೆಸಿದೆ. ರಾಜ್ಯದಲ್ಲೇ ಏಕೈಕವೆನಿಸಿದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿ.ಟಿ.ಯು.) ಮತ್ತು ಕೆ.ಎಲ್.ಇ. ಡೀನ್ಡ್ ಯುನಿವರ್ಸಿಟಿಗಳು ಸಹ ಬೆಳಗಾವಿಯ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡುತ್ತಿವೆ.
ಬೆಳಗಾವಿ ಬೆಳೆಯುತ್ತಲೇ ಇರುವ ನಗರ. ಕೇಂದ್ರ ಸರಕಾರದ ಸ್ಮಾರ್ಟ್ ಸಿಟಿ ಯೋಜನೆಯನ್ನು ಅಳವಡಿಸಿಕೊಂಡು ತನ್ನ ಬಾಹ್ಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವ ಈ ನಗರದ ಜನರ ಅಂತ:ಸತ್ವವನ್ನು ಹೆಚ್ಚಿಸಲು ವಿವಿಧ ಶಿಕ್ಷಣ ಸಂಸ್ಥೆಗಳು ನೆರವಾಗುತ್ತಿವೆ. ಜ್ಞಾನದ ಬಾಗಿಲನ್ನು ತೆರೆದಿಟ್ಟು ಆಧುನಿಕ ಬದುಕಿನೊಡನೆ ಸಾಗಬೇಕಾದ ಯುವಜನಾಂಗವನ್ನು ವೈಚಾರಿಕವಾಗಿ, ಬೌದ್ಧಿಕವಾಗಿ ಬೆಳೆಸುವ ಕೆಲಸವನ್ನು ಮಾಡುತ್ತಿರುವ ಶಿಕ್ಷಣ ಸಂಸ್ಥೆಗಳು ಜನಜೀವನದ ಅನಿವಾರ್ಯ ಮತ್ತು ಅವಿಭಾಜ್ಯ ಅಂಗಗಳು. ಅವುಗಳ ಬೆಳವಣಿಗೆಯೆಂದರೆ ಸಮಾಜದ ಬೆಳವಣಿಗೆ. ಆದ್ದರಿಂದಲೇ ನಾಗರಿಕ ಸಮಾಜ ಯಾವತ್ತೂ ಈ ಶಿಕ್ಷಣ ಸಂಸ್ಥೆಗಳಿಗೆ ಋಣಿಯಾಗಿರಬೇಕಾಗುತ್ತದೆ.
- * * * -