ಭಾರತ ಸಂಜಾತ ಅಮೆರಿಕದ ಮಣ್ಣಿನ ವಿಜ್ಞಾನಿ ರತ್ತನ್ ಲಾಲ್ ಅವರನ್ನು ಈ ವರ್ಷದ ವಿಶ್ವ ಆಹಾರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಆಹಾರ ಉತ್ಪಾದನೆ ಹೆಚ್ಚಳಕ್ಕೆ ಪಾಕೃತಿ ಸಂಪನ್ಮೂಲಗಳ ರಕ್ಷಣೆಯ ಜತೆಗೆ ಹವಾಮಾನ ಬದಲಾವಣೆ ತಗ್ಗಿಸುವಲ್ಲಿ ಮಣ್ಣಿನ ಪ್ರಾಮುಖ್ಯತೆಯ ಬಗ್ಗೆ ಇವರ ಪ್ರಮುಖ ಸಂಶೋಧನೆಗೆ ಈ ಪ್ರಶಸ್ತಿ ನೀಡಲಾಗಿದೆ. ಐದು ದಶಕಗಳಿಗೂ ಹೆಚ್ಚು ಕಾಲ ನಾಲ್ಕು ಖಂಡಗಳಲ್ಲಿನ ಇವರ ಕೊಡುಗೆ ಗುರುತಿಸಿ ನೀಡಲಾಗಿರುವ ಈ ಪ್ರಶಸ್ತಿ 2.5 ಲಕ್ಷ ಡಾಲರ್ ಮೊತ್ತದ್ದಾಗಿದೆ. ಭಾರತ ಮೂಲದ ಲಾಲ್, ಅಮೆರಿಕದ ಪ್ರಜೆಯಾಗಿದ್ದಾರೆ.
ಮಣ್ಣಿನ ಸಂರಕ್ಷಣಾ ವಿಧಾನಗಳ ಮೂಲಕ 50 ಕೋಟಿ ರೈತರ ಜೀವನ ಸುಧಾರಿಸಬಹುದಾಗಿದೆ, 2 ಶತಕೋಟಿಗೂ ಹೆಚ್ಚು ಜನರಿಗೆ ಆಹಾರ ಮತ್ತು ಪೌಷ್ಠಿಕಾಂಶ ಭದ್ರತೆ ಒದಗಿಸುವ ಜೊತೆಗೆ ಲಕ್ಷಾಂತರ ಹೆಕ್ಟೇರ್ ಪ್ರದೇಶದ ಫಲವತ್ತತೆ ಕಾಪಾಡಿಕೊಳ್ಳಬಹುದಾಗಿದೆ ಎಂದು ಅವರು ತೋರಿಸಿಕೊಟ್ಟಿದ್ದರು.ಪ್ರಸ್ತುತ ಲಾಲ್ ಅವರು ಓಹಿಯೋ ವಿಶ್ವವಿದ್ಯಾಲಯದ ಇಂಗಾಲ ನಿರ್ವಹಣೆ ಕೇಂದ್ರದ ಸಂಸ್ಥಾಪಕರು ಮತ್ತು ಮಣ್ಣು ವಿಜ್ಞಾನದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.