ಸಾವರ್ಕರ್ ಜಯಂತಿ: ಮುಖ್ಯಮಂತ್ರಿ ಸೇರಿ ಗಣ್ಯರ ಗೌರವ ನಮನ

ಬೆಂಗಳೂರು, ಮೇ 28, ಸ್ವಾತಂತ್ರ್ಯ ಹೋರಾಟಗಾರ, ಅಖಂಡ ದೇಶಪ್ರೇಮದ ಅಸ್ಮಿತೆಯ ಸಂಕೇತ, ಪ್ರಖರ ವಾಗ್ಮಿ, ದಿವಂಗತ ವಿನಾಯಕ ದಾಮೋದರ ಸಾವರ್ಕರ್ ಅವರ ಜಯಂತಿಯಂದು  ಅವರಿಗೆ ನಮಿಸೋಣ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಬಿ.ಶ್ರೀರಾಮುಲು ಟ್ವೀಟ್ ಮಾಡಿ, ತಮ್ಮ ಜೀವನವನ್ನೇ ಭಾರತದ ದಾಸ್ಯ  ಮುಕ್ತಿಗಾಗಿ ಮುಡಿಪಾಗಿಟ್ಟ ಮಹಾನ್ ಕ್ರಾಂತಿಕಾರಿ, ಅದ್ಭುತ ವಾಗ್ಮಿ, ಕವಿ, ಸಮಾಜ ಸೇವಕ ದಿವಂಗತ ವಿನಾಯಕ ದಾಮೋದರ ಸಾವರ್ಕರ್ ಅವರ ಜನ್ಮದಿನದಂದು ದೇಶದ ಸ್ವಾತಂತ್ರ್ಯ ಹೋರಾಟದ ಅತಿ ದೊಡ್ಡ ಕ್ರಾಂತಿಕಾರಿಯ ತ್ಯಾಗಕ್ಕೆ, ಸಹನೆಗೆ ದೇಶಭಕ್ತಿಗೆ ಶತಕೋಟಿ ನಮನಗಳನ್ನು ಸಲ್ಲಿಸೋಣ ಎಂದು ತಿಳಿಸಿದ್ದಾರೆ.
ಸಾವರ್ಕರ್ ಅವರ ದೇಶಭಕ್ತಿ ಕೇವಲ ಭಾರತಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ ಮಾತ್ರ ಅಲ್ಲ, ಹಲವು ಸಾಮಾಜಿಕ ಪಿಡುಗುಗಳ ವಿರುದ್ಧದ ಹೋರಾಟದಲ್ಲಿ ಎದ್ದು ಕಾಣುತ್ತಿತ್ತು.  ಅಂಥಾ ಮಹಾತ್ಮನ ಜನ್ಮದಿನವಾದ ಇಂದು ಸಾವರ್ಕರ್ ನಮ್ಮ ದೇಶಕ್ಕೆ ಮತ್ತೊಮ್ಮೆ ಪ್ರೇರಣೆಯಾಗಲಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.ಬ್ರಿಟಿಷರು ತಮ್ಮ ಸರಕಾರಕ್ಕೆ ಯಾರಿಂದ ಅತಿ ಹೆಚ್ಚು ಅಪಾಯ ಇತ್ತೋ. ಅವರನ್ನು ಆಯ್ದು ಅಂಡಮಾನ್ ಜೈಲಿನ ಕಾಲಾಪಾನಿ ಶಿಕ್ಷೆಗೆ ಒಳಪಡಿಸುತ್ತಿದ್ದರು. ಅಂಥ ಶಿಕ್ಷೆಗೊಳಗಾದವರು ಸ್ವಾತಂತ್ರ್ಯವೀರ ಸಾವರ್ಕರ್ ಎಂದು ಬಣ್ಣಿಸಿದ್ದಾರೆ.ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಟ್ವೀಟ್ ಮಾಡಿ, ವೀರ ಸಾವರ್ಕರ್ ಅವರ ಜನ್ಮ ದಿನದ ಶುಭಾಶಯಗಳು. ಖ್ಯಾತ ಬರಹಗಾರ ಮತ್ತು ಸಮಾಜ ಸುಧಾಕರನಾಗಿ, ರಾಷ್ಟ್ರ ನಿರ್ಮಾಣ ಮತ್ತು ನಾಗರಿಕ ನೀತಿಗಳ ಬಗ್ಗೆ ಅವರ ಚಿಂತನೆಗಳು ತಲೆಮಾರುಗಳಿಗೆ ಸ್ಫೂರ್ತಿ ನೀಡುತ್ತಲೇ ಇವೆ ಎಂದು ಹೇಳಿದ್ದಾರೆ.ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿ, ಭಾರತವನ್ನು ದಾಸ್ಯದ ಸಂಕೋಲೆಗಳಿಂದ ಬಿಡುಗಡೆಗೊಳಿಸಲು ಕಗ್ಗತ್ತಲ ಕಾರಾಗೃಹ ವಾಸವನ್ನು ಕೆಚ್ಚೆದೆಯಿಂದ ಎದುರಿಸಿದ ವೀರಪುತ್ರ ಸಾವರ್ಕರ್! ತಮ್ಮ ರಾಷ್ಟ್ರೀಯವಾದಿ ಚಿಂತನೆಗಳಿಂದ ಬ್ರಿಟೀಶರ ಎದೆ ನಡುಗಿಸಿದ್ದ ವೀರ ಸಾವರ್ಕರ್ ರ ಜಯಂತಿಯಂದು ಅವರಿಗೆ ಕೋಟಿ ಕೋಟಿ ನಮನಗಳು ಎಂದು ತಿಳಿಸಿದ್ದಾರೆ.