ಸರ್ವಜ್ಞನ ವಚನಗಳ ಕಂಠಪಾಠ, ಅರ್ಥ ವಿವರಣೆ ಸ್ಪರ್ಧೆ

Sarvajna Vachana Memorization, Meaning Explanation Competition

ಸರ್ವಜ್ಞನ ವಚನಗಳ ಕಂಠಪಾಠ, ಅರ್ಥ ವಿವರಣೆ ಸ್ಪರ್ಧೆ  

ಧಾರವಾಡ 15: ಅರಮನೆ, ಗುರಮನೆಯ ಆಶ್ರಯವಿಲ್ಲದೆ ಬೆಳೆದ ಸರ್ವಜ್ಞ ಯೋಗಿಯಾಗಿ, ಸರ್ವಸಂಚಾರಿಯಾಗಿ ಸಮುದಾಯವನ್ನು ತಿಳಿಗೊಳಿಸುವ ಪ್ರಯತ್ನ ಮಾಡಿದ ನಿಜವಾದ ಜಂಗಮ ಎಂದು ಬ್ಯಾಡಗಿ ಬಿ.ವಿ.ಎಸ್‌.ಎಂ. ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಡಾ. ಪ್ರೇಮಾನಂದ ತಿ. ಲಕ್ಕಣ್ಣವರ ಹೇಳಿದರು.  

ಕರ್ನಾಟಕ ವಿದ್ಯಾವರ್ಧಕ ಸಂಘವು ಪಾರ್ವತೆವ್ವಾ ಮಲ್ಲಯ್ಯ ರಾಚಯ್ಯನವರ ದತ್ತಿ ಅಂಗವಾಗಿ  ಪದವಿ ಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳಾಗಿ ಆಯೋಜಿಸಿದ್ದ ಸರ್ವಜ್ಞನ ವಚನಗಳ ಕಂಠಪಾಠ ಮತ್ತು ಅರ್ಥವಿವರಣೆ ಸ್ಪರ್ಧೆ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಲೋಕ ಸಂಚಾರಿ ಸರ್ವಜ್ಞ ವಿಷಯ ಕುರಿತು ಮಾತನಾಡುತ್ತಿದ್ದರು. 

ಸಮಾಜದಲ್ಲಿಯ ಮೌಢ್ಯವನ್ನು, ಜಾತಿ ವ್ಯವಸ್ಥೆಯನ್ನು ಹೊಡೆದೊಡಿಸಲು ಪ್ರಯತ್ನ ಮಾಡಿದವನು. ತಂದೆ, ತಾಯಿಯಿಂದ ತಿರಸ್ಕೃತಗೊಂಡು ಸಮಾಜದ ಹರಿಕಾರನಾಗಿ ತ್ರಿಪದಿಗಳ ಮೂಲಕ ದಾನಧರ್ಮದ ವಿಚಾರಗಳನ್ನು ತಿಳಿಸಲು ಪ್ರಯತ್ನಪಟ್ಟವನು. ಅಂತೆಯೇ ಇರುವುದೊಂದೆ ಭೂಮಿ, ಸುಡುವುದೊಂದೆ ಅಗ್ನಿ, ಕುಡಿಯುವ ನೀರು ಒಂದೇ ಇರಲು ನಡುವೆ ಜಾತಿ ಎತ್ತನದು ಸರ್ವಜ್ಞ ಎಂಬ ತ್ರಿಪದಿ ಈ ಮೇಲಿನ ಮಾತಿಗೆ ಸಾಕ್ಷಿಯಾಗುತ್ತದೆ. ಬತ್ತಿ, ಎಣ್ಣಿ ಹೊತ್ತಿ ಉರಿದು ಬೆಳಕು ಕೊಡುವ ಹಾಗೆ ಸತ್ಯ, ನೀತಿ, ಜೀವನವೆಂಬ ಬದುಕಿಗೆ ಬೆಳಕು ನೀಡುತ್ತದೆ ಎಂದು ಹೇಳಿದ ಸರ್ವಜ್ಞ ಅರಿವಿನ ಮನೆಯಲ್ಲಿ ಗುರುತನವು ಮೂಡುವಂತೆ ತಿಳಿ ಹೇಳಿದವನು.  

ಜೊತೆಗೆ ಸರ್ವ ಧರ್ಮಗಳಲ್ಲಿಯ ಲೋಪ ದೋಷಗಳನ್ನು, ಒಳಿತುಗಳನ್ನು ನೇರವಾಗಿ ವಿಡಂಬಣೆ ಮಾಡಿರುವಂಥವನು. ಸಾಮಾನ್ಯರಿಗೂ ಅರ್ಥವಾಗುವ ಭಾಷೆಯ ಬಳಕೆಯಿಂದ ಸರ್ವಜ್ಞ ಸರ್ವ ಜನಾಂಗದವರಿಗೂ ಹತ್ತಿರದವನಾಗುತ್ತಾನೆ. ರೈತ ಜನಾಂಗವನ್ನು ಕುರಿತು ಹೇಳಿದ ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು ಎಂಬ ಮಾತು ಇವತ್ತಿನ ವ್ಯವಸ್ಥೆಯಲ್ಲಿ ತನ್ನ ಅರ್ಥವಂತಿಕೆಯಿಂದ ದೂರ ಉಳಿಯುತ್ತಿದೆ ಎಂದು ಡಾ. ಪ್ರೇಮಾನಂದ ಲಕ್ಕಣ್ಣವರ ಹೇಳಿದರು.  

ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ತಜ್ಞ ಹಾಗೂ ಡೈಯಟ್‌ನ ವಿಶ್ರಾಂತ ಪ್ರಾಚಾರ್ಯ ಪ್ರಿ. ಶಿವಶಂಕರ ಹಿರೇಮಠ ಮಾತನಾಡುತ್ತಾ, ಸಾಮಾಜಿಕ ಬದಲಾವಣೆಯ ಹರಿಕಾರ ಹಾಗೂ ತತ್ವಶಾಸ್ತ್ರಜ್ಞನಾಗಿದ್ದ ಸರ್ವಜ್ಞನು ಜಗತ್ತಿನ ಹಿತವನ್ನು ಸಾಧಿಸಲು ಬದುಕಬೇಕೆ ವಿನಃ, ಸ್ವಾರ್ಥಕ್ಕಾಗಿ ಬದುಕಬಾರದು ಎಂದು ಸಾರಿದವನು. ಸರ್ವಜ್ಞನ ವಚನಗಳ ಮುಖಾಂತರ ನಾವಿಂದು ಸಮಕಾಲೀನ ಸಮಾಜವನ್ನು ನೆನಪಿಸಿಕೊಳ್ಳುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ದತ್ತಿ ದಾನಿಗಳ ಶ್ರಮ ಸಾರ್ಥವಾಗಿದೆ ಎಂದರು.  

ಪದವಿ ಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಸರ್ವಜ್ಞನ ವಚನಗಳ ಕಂಠಪಾಠ ಮತ್ತು ಅರ್ಥವಿವರಣೆ ಸ್ಪರ್ಧೆಯಲ್ಲಿ ರಾಮಲಿಂಗ ಬೆಳಹಾರ ಪ್ರಥಮ, ಅಂಜನಾ ಪಿ. ತೋಟನ್ನವರ ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪ್ರಗತಿ ಕುಲಕರ್ಣಿ ಪಡೆದರು. ಜಾನಕಿ ಕಾಳಿ, ಸುಪ್ರಿಯಾ ಜನಗೌಡ್ರ ಮತ್ತು ಭೂಮಿಕಾ ಪವಾರ ಸಮಾಧಾನಕರ ಬಹುಮಾನ ಪಡೆದರು. ಸ್ಪರ್ಧೆಯ ನಿರ್ಣಾಯಕರಾಗಿ ವೀರಣ್ಣ ಒಡ್ಡೀನ, ಡಾ. ಜಿನದತ್ತ ಹಡಗಲಿ ಮತ್ತು ಡಾ. ಚಿದಾನಂದ ಮಾಸನಕಟ್ಟಿ ಭಾಗವಹಿಸಿದ್ದರು.  

ದತ್ತಿ ಆಶಯ ಕುರಿತು ಶಿವಪುತ್ರ ರಾಚಯ್ಯನವರ ಮಾತನಾಡಿದರು. ಕಲ್ಲಪ್ಪ ಚಂದನಮಟ್ಟಿ ಭಕ್ತಿಗೀತೆ ಪ್ರಸ್ತುತಪಡಿಸಿದರು. 

ನಂದಾ ರಾಚಯ್ಯನವರ ಪ್ರಾರ್ಥಿಸಿದರು. ಡಾ. ಮಹೇಶ ಧ. ಹೊರಕೇರಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಡಾ. ಜಿನದತ್ತ ಅ. ಹಡಗಲಿ ವಂದಿಸಿದರು.  

ಸತೀಶ ತುರಮರಿ, ಗುರು ಹಿರೇಮಠ, ಡಾ. ಧನವಂತ ಹಾಜವಗೋಳ, ಸಂಗಯ್ಯ ಶಿವಪ್ಪಯ್ಯನಮಠ, ಜಿ.ಎಲ್‌. ಪಾಟೀಲ, ಡಾ. ಜಿ.ಎಸ್‌. ತೊರಗಲ್ಲಮಠ, ಡಿ.ಎಂ. ಸಿಂಧಗಿ, ಅಶೋಕ ಪಟಾತ, ಶಂಕರಲಿಂಗ ಶಿವಳ್ಳಿ, ನಿಂಗಣ್ಣ ಕುಂಟಿ, ಎಸ್‌.ಜಿ. ದೇಸಾಯಿ, ಬಿ.ಎಸ್‌. ಶಿರೋಳ, ಸಿ.ಯು. ಬೆಳ್ಳಕ್ಕಿ, ರಾಜೇಂದ್ರ ಸಾವಳಗಿ, ಬಿ.ಕೆ. ಹೊಂಗಲ, ರಾಮಚಂದ್ರ ಧೋಂಗಡೆ, ಎಚ್‌.ಡಿ. ನದಾಫ್ ಸೇರಿದಂತೆ ರಾಚಯ್ಯನವರ ಪರಿವಾರದವರು ಉಪಸ್ಥಿತರಿದ್ದರು.