ಧರ್ಮಶಾಲಾ, ಜ.27 : ಭರ್ಜರಿ ಫಾರ್ಮ್ ನಲ್ಲಿರುವ ಮುಂಬೈ ತಂಡದ ಭರವಸೆಯ ಆಟಗಾರ ಸರ್ಫರಾಜ್ ಖಾನ್ ಹಿಮಾಚಲ್ ಪ್ರದೇಶ ವಿರುದ್ಧ ರಣಜಿ ಟೂರ್ನಿಯ ಪಂದ್ಯದಲ್ಲೂ ಶತಕ ಬಾರಿಸಿ ಅಬ್ಬರಿಸಿದ್ದಾರೆ.
ಕಳೆದ ವಾರ ಉತ್ತರ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತ್ರಿ ಶತಕ ಬಾರಿಸಿದ್ದ ಸರ್ಫರಾಜ್, ತಮ್ಮ ಲಯವನ್ನು ಮುಂದುವರಿಸಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ 4 ವಿಕೆಟ್ ಗೆ 71 ರನ್ ಸೇರಿಸಿ ಸಂಕಷ್ಟದಲ್ಲಿತ್ತು. ತಂಡಕ್ಕೆ ಆಸರೆಯಾದರ ಆದಿತ್ಯ ತಾರೆ ಹಾಗೂ ಸರ್ಫರಾಜ್ ಜೋಡಿ ತಂಡಕ್ಕೆ 143 ರನ್ ಗಳ ಜೊತೆಯಾಟದ ಕಾಣಿಕೆ ನೀಡಿತು. ಕೆಟ್ಟ ಎಸೆತಗಳನ್ನು ದಂಡಿಸುತ್ತಾ ಸಾಗಿದ ಜೋಡಿ, ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿದರು.
ಚಹಾ ವಿರಾಮದ ವೇಳೆಗೆ ಮುಂಬೈ ಐದು ವಿಕೆಟ್ ಗೆ 260 ರನ್ ಕಲೆ ಹಾಕಿದೆ. ಆದಿತ್ಯ ತಾರೆ 8 ಬೌಂಡರಿ ಸೇರಿದಂತೆ 62 ರನ್ ಸಿಡಿಸಿದರು. ಸರ್ಫರಾಜ್ ಖಾನ್ 20 ಬೌಂಡರಿ ನೆರವಿನಿಂದ 132 ರನ್ ಬಾರಿಸಿ ಅಜೇಯರಾಗಿದ್ದಾರೆ.