ಮುಂಬೈ, ನ 5: ಶಿವಸೇನೆಯ ಹೋರಾಟಕ್ಕೆ ನ್ಯಾಯ ಸಿಗಲಿದೆ, ನಮಗೆ ಜಯವಾಗಲಿದೆ ಎಂದು ಪಕ್ಷದ ಹಿರಿಯ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ. ಮುಂಬೈನಲ್ಲಿ ಮಂಗಳವಾರ ಈ ವಿಷಯ ತಿಳಿಸಿದ ಅವರು, ಏನೇ ಆಗಲಿ ಶಿವಸೇನೆ ನೇತೃತ್ವದ ಮೈತ್ರಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ಮಾಜಿ ಮುಖ್ಯಮಂತ್ರಿ, ಎನ್ ಸಿ ಪಿ ಯ ಅಧ್ಯಕ್ಷ ಶರದ್ ಪವಾರ್ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಬಿಜೆಪಿಯ ಕೆಲವು ನಾಯಕರೇ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. ಯಾರ ಬೆಂಬಲದಿಂದ ಶಿವಸೇನೆ ಸರ್ಕಾರ ಮಾಡುತ್ತದೆ ಎಂಬ ಪ್ರಶ್ನೆಗೆ ಮುಂದಿನ ಬೆಳವಣಿಗೆಗಳನ್ನು ಕಾದು ನೋಡಿ ಎಂದಷ್ಟೇ ಚುಟುಕು ಉತ್ತರ ನೀಡಿದರು. ಹೊಸ ಸರ್ಕಾರ ರಚನೆ ಸಂಬಂಧ ಈಗ ರಾಜಕೀಯ ಪಕ್ಷಗಳು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗುತ್ತಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.