ಆಕ್ಲೆಂಡ್, ಜ 27 ಕಳೆದ ಐಸಿಸಿ ಏಕದಿನ ವಿಶ್ವಕಪ್ ವೇಳೆ ಭಾರಿ ಸುದ್ದಿಯಾಗಿದ್ದ ಭಾರತ ತಂಡದ ಮಾಜಿ ಆಟಗಾರ ಹಾಗೂ ಪಂದ್ಯ ವಿಶ್ಲೇಷಕ ಸಂಜಯ್ ಮಂಜ್ರೇಕರ್ ಹಾಗೂ ಆಲ್ರೌಂಡರ್ ರವೀಂದ್ರ ಜಡೇಜಾ ಇದೀಗ ಮತ್ತೊಂದು ಬಾರಿ ಟ್ವಿಟರ್ ವಿನೋದದಲ್ಲಿ ಭಾಗಿಯಾಗುವ ಮೂಲಕ ಸುದ್ದಿಯಾಗಿದ್ದಾರೆ.ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ-20 ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಏಳು ವಿಕೆಟ್ ಗಳಿಂದ ಜಯ ಸಾಧಿಸಿತ್ತು. ರವೀಂದ್ರ ಜಡೇಜಾ ಕೇವಲ 18 ರನ್ ನೀಡಿ ಎರಡು ವಿಕೆಟ್ ಪಡೆದಿದ್ದರು. ಇವರ ಸ್ಪಿನ್ ಮೋಡಿಯ ನೆರವಿನಿಂದ ನ್ಯೂಜಿಲೆಂಡ್ ತಂಡವನ್ನು 132 ರನ್ ಗಳಿಗೆ ಕಟ್ಟಿಹಾಕಲಾಗಿತ್ತು. ಜಸ್ಪ್ರಿತ್ ಬುಮ್ರಾ ಕೂಡ 21 ರನ್ ನೀಡಿ ಒಂದು ವಿಕೆಟ್ ಪಡೆದಿದ್ದರು. ಇವರು ಡೆತ್ ಓವರ್ ಗಳಲ್ಲಿ ನ್ಯೂಜಿಲೆಂಡ್ ತಂಡವನ್ನು ನಿಯಂತ್ರಿಸಿದ್ದರು.
ನಂತರ, ಗುರಿ ಹಿಂಬಾಲಿಸಿದ್ದ ಟೀಮ್ ಇಂಡಿಯಾ ಇನ್ನೂ 15 ಎಸೆತಗಳು ಬಾಕಿ ಇರುವಾಗಲೇ ಗುರಿ ಮುಟ್ಟಿತ್ತು. ಕೆ.ಎಲ್ ರಾಹುಲ್ ಅಜೇಯ ಅರ್ಧಶತಕ ಹಾಗೂ ಶ್ರೇಯಸ್ ಅಯ್ಯರ್ ಮತ್ತೊಮ್ಮೆ 44 ರನ್ ಸಿಡಿಸಿ ಫಿನಿಷರ್ ಆಟವಾಡಿ ಎಲ್ಲರ ಗಮನ ಸೆಳೆದಿದ್ದರು. 57 ರನ್ ಗಳಿಸಿದ್ದ ರಾಹುಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.ಪಂದ್ಯದ ಬಳಿಕ ಪಂದ್ಯ ಶ್ರೇಷ್ಠ ಪ್ರಶಸ್ತಿ ರಾಹುಲ್ ಗೆ ನೀಡಿದ್ದರ ಬಗ್ಗೆ ಮಂಜ್ರೇಕರ್ ಅಸಮಾಧಾನ ವ್ಯಕ್ತಪಡಿಸಿದ್ದರು. "ಪಂದ್ಯ ಶ್ರೇಷ್ಠ ಪ್ರಶಸ್ತಿ ಬೌಲರ್ ಗೆ ನೀಡಬೇಕಾಗಿತ್ತು,'' ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ರವೀಂದ್ರ ಜಡೇಜಾ, " ಆ ಬೌಲರ್ ಹೆಸರೇನು?? ದಯವಿಟ್ಟು ಉಲ್ಲೇಖಿಸಿ,'' ಎಂದಿದ್ದಾರೆ.
ಜಡೇಜಾ ಪ್ರಶ್ನೆಗೆ ಉತ್ತಿರಿಸಿದ ಮಾಜಿ ಬ್ಯಾಟ್ಸ್‌ಮನ್: "ಹ ಹ... ನೀವು ಅಥವಾ ಬುಮ್ರಾ. ಬುಮ್ರಾ, ಏಕೆಂದರೆ ಅವರ ಬೌಲಿಂಗ್ ಎಕಾನಾಮಿಕ್ 3, 10, 18 ಹಾಗೂ 20 ಉತ್ತಮವಾಗಿದೆ." ಇದಕ್ಕೂ ಮುನ್ನ ಕಳೆದ ವರ್ಷ ಇಂಗ್ಲೆಂಡ್ ಹಾಗೂ ವೇಲ್ಸ್ ಆತಿಥ್ಯದಲ್ಲಿ ನಡೆದಿದ್ದ ಐಸಿಸಿ ಏಕದಿನ ವಿಶ್ವಕಪ್ ವೇಳೆ ಮಂಜ್ರೇಕರ್ ಹಾಗೂ ರವೀಂದ್ರ ಜಡೇಜಾ ಅವರ ನಡುವೆ ಟ್ವಿಟರ್ ನಲ್ಲಿ ಜಟಾಪಟಿ ನಡೆದಿತ್ತು. ನ್ಯೂಜಿಲೆಂಡ್ ವಿರುದ್ಧದ ಸೆಮಿಪೈನಲ್ ಪಂದ್ಯಕ್ಕೂ ಮುನ್ನ ಮಂಜ್ರೇಕರ್, ಉಪಾಂತ್ಯದ ಪಂದ್ಯದ ಭಾರತ ಅಂತಿಮ 11ರ ಆಟಗಾರರ ಬಗ್ಗೆ ಚರ್ಚಿಸುವಾಗ ರವಿಂದ್ರ ಜಡೇಜಾ ಅವರು ಹಾಸು ಪಾಸಿನ ಆಟಗಾರ ಎಂದು ಜರಿದಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೆ ಗುರಿಯಾಗಿತ್ತು.
ಇದಕ್ಕೆ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿದ್ದ ರವಿಂದ್ರ ಜಡೇಜಾ," ನೀವು ಆಡಿರುವ ಪಂದ್ಯಗಳಿಗಿಂತ ನಾನು ಭಾರತದ ಪರ ಹೆಚ್ಚು ಪಂದ್ಯಗಳಾಡಿದ್ದೇನೆ. ಈಗಲೂ ಆಡುತ್ತಿದ್ದೇನೆ. ಸಾಧಕರನ್ನು ಗೌರವಿಸುವುದು ಕಲಿಯಿರಿ. ನಿಮ್ಮ ಅತೀವಸಾರ ಕೇಳಿ ಸಾಕಾಗಿದೆ ಸಂಜಯ್ ಮಂಜ್ರೇಕರ್,'' ಎಂದು ತಿರುಗೇಟು ನೀಡಿದ್ದರು. ಅಲ್ಲದೇ, ನ್ಯೂಜಿಲೆಂಡ್ ವಿರುದ್ಧ ಸೆಮಿಪೈನಲ್ ಪಂದ್ಯದಲ್ಲಿ ಜಡೇಜಾ ಅರ್ಧಶತಕ ಸಿಡಿಸಿ ಮಂಜ್ರೇಕರ್ ಬ್ಯಾಟಿಂಗ್ ಮೂಲಕವೂ ಉತ್ತರ ನೀಡಿದ್ದರು. ನಂತರ, ಸಂಜಯ್ ಮಂಜ್ರೇಕರ್ ಕ್ಷಮೆಯಾಚಿಸಿದ್ದರು.