ಗಾಯದಿಂದ ಬಳಲಿದ ಸಾನಿಯಾ ಟೂರ್ನಿಯಿಂದ ಹೊರಕ್ಕೆ

ಮೆಲ್ಬೊರ್ನ್, ಜ.23 :        ತಾಯಿಯಾದ ಬಳಿಕ ಇದೇ ಮೊದಲ ಬಾರಿಗೆ ಟೆನಿಸ್ ಅಂಗಳಕ್ಕೆ ಕಾಲಿಟ್ಟಿರುವ ಸಾನಿಯಾ ಮಿರ್ಜಾ ಅವರು ಆರಂಭದಲ್ಲೇ ನಿರಾಸೆ ಅನುಭವಿಸಿದ್ದಾರೆ. ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲ್ಯಾಮ್ ಟೂರ್ನಿಯಲ್ಲಿ ಸಾನಿಯಾ ಗಾಯದ ಸಮಸ್ಯೆಯಿಂದ ಹೊರ ನಡೆದರು.

ಮಹಿಳಾ ಡಬಲ್ಸ್ ಪಂದ್ಯದಲ್ಲಿ ಕಳೆದ ವಾರವಷ್ಟೇ ಸಾನಿಯಾ ಹಾಗೂ ಉಕ್ರೇನ್ ನ ನಾದಿಯಾ ಕಿಚೇನೊಕ್ ಜೋಡಿ ಡಬ್ಲ್ಯುಟಿ ಇಂಟರ್ ನ್ಯಾಷನಲ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಈ ಜೋಡಿ ವರ್ಷದ ಮೊದಲ ಗ್ರ್ಯಾನ್ ಸ್ಲ್ಯಾಮ್ ಟೂರ್ನಿಯಲ್ಲಿ ಬುಧವಾರ ಗೆಲುವಿನ ಅಭಿಯಾನ ಆರಂಭಿಸುವ ಕನಸಿನೊಂದಿಗೆ ಕಣಕ್ಕೆ ಇಳಿಯಿತು. ಆದರೆ ಚೀನಾದ ಶಿಂಯುಆನ್ ಹಾನ್ ಹಾಗೂ ಲಿನ್ ಜು ಅವರ ವಿರುದ್ಧದ ಪಂದ್ಯದಲ್ಲಿ ಅಂಕಗಳಿಕೆಯಲ್ಲಿ ಹಿನ್ನಡೆ ಅನುಭವಿಸಿತು. ಸಾನಿಯಾ ಜೋಡಿ 2-6, 0-1 ರಿಂದ ಹಿನ್ನಡೆ ಅನುಭವಿಸುತ್ತಿದ್ದಾಗ ಭಾರತದ ಆಟಗಾರ್ತಿ ಗಾಯದಿಂದ ಬಳಲಿ ಮೈದಾನದಿಂದ ಹೊರ ನಡೆದರು.

ಮಿಶ್ರ ಡಬಲ್ಸ್ ನಿಂದಲೂ ಸಾನಿಯಾ ತಮ್ಮ ಹೆಸರನ್ನು ಹಿಂದಕ್ಕೆ ತೆಗೆದುಕೊಂಡಿದ್ದಾರೆ. ಇವರು ರೋಹನ್ ಬೋಪಣ್ಣ ಅವರೊಂದಿಗೆ ಅದೃಷ್ಟ ಪರೀಕ್ಷೆ ನಡೆಸುವ ಪ್ಲಾನ್ ಮಾಡಿಕೊಂಡಿದ್ದರು. ಹೀಗಾಗಿ ಲಿಯಾಂಡರ್ ಪೇಸ್ ಮಿಶ್ರ ಡಬಲ್ಸ್ ನಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ.