ಕರ್ನಾಟಕದಲ್ಲಿನ ಹಿಂದೂಸ್ತಾನಿ ಸಂಗೀತ ಪರಂಪರೆಯಲ್ಲಿ ಎರಡು ಪ್ರಮುಖ ಧಾರೆಗಳಿವೆ. ಗದುಗಿನ ಗಾನಯೋಗಿ ಪಂಚಾಕ್ಷರಿ ಗವಾಯಿಗಳಿಂದ ಆರಂಭವಾಗುವ ಗ್ವಾಲಿಯರ್ ಘರಾಣೆಯ ಧಾರೆ ಮತ್ತು ಇನ್ನೊಂದು ಕುಂದಗೋಳದ ಪಂ. ಸವಾಯಿ ಗಂಧರ್ವರಿಂದ ಆರಂಭವಾಗುವ ಕಿರಾಣಾ ಘರಾಣೆಯ ಧಾರೆ. ಈ ಎರಡೂ ಧಾರೆಗಳಲ್ಲಿ ಮಿಂದೆದ್ದು ಸಮನ್ವಯ ಸಾಧಿಸಿಕೊಂಡ ಏಕೈಕ ಕಲಾವಿದರು ಪಂ.ಬಸವರಾಜ ರಾಜಗುರು. ಗಾನಯೋಗಿ ಪಂಚಾಕ್ಷರಿ ಗವಾಯಿಗಳಿಂದ ಸ್ವರದೀಕ್ಷೆಯನ್ನು ಪಡೆದುಕೊಂಡ ರಾಜಗುರುಗಳು ತಮ್ಮ ಹೆಸರಿಗೆ ಅನ್ವರ್ಥಕವಾಗಿ ಬದುಕಿ ನಾಡಿನಾದ್ಯಂತವಲ್ಲದೇ ದೇಶ ವಿದೇಶಗಳಲ್ಲಿ ಕೂಡ ಇಂದು ತಮ್ಮನ್ನು ಜೀವಂತವಿಡುವಂಥ ಶಿಷ್ಯಪರಂಪರೆಯನ್ನು ಬೆಳೆಸಿದರು. ಇದು ಭಾರತೀಯ ಸಂಗೀತಕ್ಕೆ ಅವರ ಅತ್ಯಂತ ಮಹತ್ವದ ಕೊಡುಗೆ.
ಪಂ.ಬಸವರಾಜ ರಾಜಗುರು ಅವರು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಎಲಿವಾಳ ಗ್ರಾಮದಲ್ಲಿ 1920ರ ಆಗಸ್ಟ್ 24ರಂದು ಜನಿಸಿದರು. ತಂದೆ ಮಹಾಂತಸ್ವಾಮಿ, ತಾಯಿ ರಾಚವ್ವ. ಅವರ ತಂದೆಯವರು ಒಳ್ಳೆಯ ಪೀಟೀಲು ವಾದಕರಾಗಿದ್ದು, ತಮಿಳುನಾಡಿನ ತಂಜಾವೂರಿನಲ್ಲಿ ಸಂಗೀತ ಕಲಿತಿದ್ದರು. ಬಸವರಾಜ ಆರು ವರ್ಷದವರಿರುವಾಗಲೇ ತಾಯಿ ತೀರಿಕೊಂಡರು. ಬಸವರಾಜರು ತಂದೆಯವರಲ್ಲಿ ಸಂಗೀತ ಪಾಠ ಕಲಿಯುತ್ತಿದ್ದರು. ಕೆಲವು ವರ್ಷಗಳಲ್ಲಿ ಅವರ ತಂದೆಯವರು ತೀರಿಕೊಂಡರು. ಈ ಸಂದರ್ಭದಲ್ಲಿ ಅವರ ದೊಡ್ಡಪ್ಪನ ಮಗ ಕೆಳದಿ ಸಂಸ್ಥಾನದ ಮಠಾಧಿಪತಿಗಳಾದ ಶ್ರೀ ರೇವಣ್ಣಸಿದ್ಧ ಶಿವಾಚಾರ್ಯರು ಬಸವರಾಜರಿಗೆ ಸಂಸ್ಕೃತ ಶಿಕ್ಷಣ ಕೊಡಿಸಲು ಹುಬ್ಬಳ್ಳಿಯ ಮೂರುಸಾವಿರಮಠಕ್ಕೆ ಸೇರಿಸಿದರು. 1930ರಲ್ಲಿ ಮಠಕ್ಕೆ ಪಂಚಾಕ್ಷರಿ ಗವಾಯಿಗಳು ಆಗಮಿಸಿದ್ದರು. ಬಸವರಾಜರು ಅವರ ಸಮ್ಮುಖದಲ್ಲಿ ‘ಭಕ್ತ ಜೀವನ ರಾಮಾ ಸುಜನ ಜೀವನ’ ಎಂಬ ಪದವನ್ನು ಹಾಡಿದರು. ಗವಾಯಿಗಳು ಬಸವರಾಜರ ಹಾಡನ್ನು ಮೆಚ್ಚಿ ಶಿಷ್ಯನನ್ನಾಗಿ ಸ್ವೀಕರಿಸಿದರು. ಬಸವರಾಜ ಪಂಚಾಕ್ಷರಿ ಗವಾಯಿಗಳ ಜೊತೆ ಪಯಣಿಸುತ್ತ ಸ್ವರದ ಅಭ್ಯಾಸ, ರಾಗಬಂಧೀಶಗಳ ಅಧ್ಯಯನ, ಚೀಜುಗಳನ್ನು ಶೃದ್ಧೆಯಿಂದ ಕಲಿತರು.
ಬಸವರಾಜರು ಪಂಚಾಕ್ಷ ಗವಾಯಿಗಳ ನಾಟಕ ಕಂಪನಿಯಲ್ಲಿ ಅನೇಕ ವರ್ಷಗಳವರೆಗೆ ಹಾಡಿ ಸಂಗೀತದಲ್ಲಿ ದಕ್ಷತೆಯನ್ನು ಗಳಿಸಿಕೊಂಡರು. ಅವರು ನೀಲಕಂಠ ಬುವಾ, ಸುರೇಶ ಬಾಬು ಮಾನೆ, ಗೋವಿಂದರಾವ್ ಠೆಂಬೆ, ವಹಿದಖಾನರಿಂದ ಕಿರಾಣಾ ಹಾಗೂ ಪತಿಯಾಲಾ ಫರಾಣಿಗಳನ್ನು ಕರಗತ ಮಾಡಿಕೊಂಡರು. ಬಸವರಾಜ ರಾಜಗುರು ಅವರ ಸಂಗೀತ ಸಾಧನೆ ಅಷ್ಟಕ್ಕೆ ನಿಲ್ಲಲಿಲ್ಲ. ಅವರು ಹೆಚ್ಚಿನ ಸಂಗೀತ ಅಧ್ಯಯನಕ್ಕಾಗಿ ಕಿರಾಣಾ ಫರಾಣಾದ ಸುಪ್ರಸಿದ್ಧ ಗಾಯಕರಾದ ಸವಾಯಿ ಗಂಧರ್ವರಿಂದ ಮುರ್ಕಿಮೀಂಠ ಕಿರಾಣಾ ಫರಾಣಿಯ ಅಂಶಗಳನ್ನು ಕಲಿತರು. ಅಚ್ಚರಿಯೆಂದರೆ ಪಂ.ಬಸವರಾಜ ರಾಜಗುರು ಗಾಯನ ನೀಡುತ್ತಿದ್ದಾಗ ಪಂಚಾಕ್ಷರಿ ಗವಾಯಿಗಳು ತಬಲಾ ಬಾರಿಸುತ್ತಿದ್ದರೆ, ಪುಟ್ಟರಾಜ ಗವಾಯಿಗಳು ಹಾರ್ಮೋನಿಯಂ ಸಾಥ್ ನೀಡುತ್ತಿದ್ದರು. ಪಂ.ಬಸವರಾಜ ಅವರು ದೇಶ ವಿದೇಶಗಳಲ್ಲಿ ಸಂಚಾರ ಮಾಡುತ್ತಿರವಾಗ, ಅಲ್ಲಿಯ ಗಾಯಕರಿಂದ ಹೊಸದನ್ನು ಕಲಿತು ತಮ್ಮ ಸಂಗೀತವನ್ನು ಶ್ರೀಮಂತಗೊಳಿಸಿದರು.
1938ರಲ್ಲಿ ಬಸವರಾಜರು ಮುಂಬೈ ಆಕಾಶವಾಣಿಯಲ್ಲಿ ಮೊಟ್ಟಮೊದಲ ಕಾರ್ಯಕ್ರಮ ನೀಡಿದರು. ಅವರು ಬಿಲಾವಗಲ ಮತ್ತು ಗೌಡಮಲ್ಹಾರ ರಾಗಗಳಿಂದ ಖ್ಯಾತಿ ಪಡೆದರು. ನಂತರ ಅವರ ಹಲವಾರು ಧ್ವನಿಮುದ್ರಿಕೆಗಳು ಹೊರಬಂದವು. ಶಾಮಕಲ್ಯಾಣ, ಚಾಂದನಿ, ಕೇದಾರ, ಹನ್ನೆರಡು ವಚನಗಳು, ಪರಚಿಂತೆ ಎಮಗೆ ಏಕೆ ಅಯ್ಯಾ, ವಚನದಲ್ಲಿ ನಾಮಾಮೃತ ತುಂಬಿ, ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ, ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ ಇತ್ಯಾದಿ ಧ್ವನಿ ಮುದ್ರಿಕೆಗಳು ನಾಡಿನ ಹಳ್ಳಿಹಳ್ಳಿಗಳಲ್ಲಿ ಜನಪ್ರಿಯಗೊಂಡವು. ವಚನಗಾಯವನ್ನು ಜನಪ್ರಿಯಗೊಳಿಸುವಲ್ಲಿ ಬಸವರಾಜ ರಾಜಗುರು ಅವರ ಪಾತ್ರ ಬಹಳ ಮಹತ್ವದ್ದು. 1941ರಿಂದ ಅವರ ಸಂಗೀತ ಯಶೋಯಾತ್ರೆ ಆರಂಭಗೊಂಡಿತು. ಮುಂಬೈ, ನಾಗಪುರ, ಲಾಹೋರ, ಕರಾಚಿ, ದೆಹಲಿ, ನಾಂದೇಡ ಮುಂತಾದೆಡೆ ಹಾಡಿ ಶ್ರೋತೃಗಳನ್ನು ಮಂತ್ರ ಮುಗ್ಧಗೊಳಿಸಿದರು. ಪಂ.ಬಸವರಾಜ ರಾಜಗುರುಗಳು ಹಾಡದ ಸಮ್ಮೇಳನಗಳಿಲ್ಲ, ಆಕಾಶವಾಣಿ ಕೇಂದ್ರಗಳಿಲ್ಲ, ಗುರುಗಳನ್ನರಸಿ ತಿರುಗಾಡದ ಊರುಗಳಿಲ್ಲ, ಅವರ ಸಂಗೀತ ಜ್ಞಾನದಾಹ ಅಂಥದು. ಬಸವರಾಜ ರಾಜಗುರು ಚೀಜುಗಳ ಭಂಡಾರವೇ ಆಗಿದ್ದರು. ಒಂದೊಂದು ರಾಗದಲ್ಲೂ 40 ಚೀಜುಗಳನ್ನು ಹಾಡಬಲ್ಲವರಾಗಿದ್ದರು. ಧ್ರುಪದ, ಧಮಾರ್, ಖ್ಯಾಲ, ಠುಮರಿ, ಗಝಲ್, ವಚನಗಳು, ಕನ್ನಡ ಮರಾಠಿ ರಂಗಗೀತೆಗಳು, ಕನ್ನಡ-ಮರಾಠಿ ಭಾವಗೀತೆಗಳು, ದಾಸರ ಪದಗಳನ್ನು ಹಾಡಿ ಸಭಿಕರನ್ನು ಮಂತ್ರ ಮುಗ್ಧಗೊಳಿಸುತ್ತಿದ್ದರು.
ಪಂಡಿತ ರಾಜಗುರು ಅವರು ಪಂಡಿತ ಪಂಚಾಕ್ಷರಿ ಗವಾಯಿಗಳ ಶ್ರೀ ಕುಮಾರೇಶ್ವರ ನಾಟಕ ಸಂಘದಲ್ಲಿ ಅನೇಕ ಸ್ತ್ರೀ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದರು. ಅವರದು ಮೋಹಕವಾದ ಮುಖ ಹಾಗೂ ಮಧುರವಾದ ಧ್ವನಿ. ಹೀಗಾಗಿ ಅವರು ನಟನೆ ಮಾಡುತ್ತಿದ್ದ ಸ್ತ್ರೀ ಪಾತ್ರಗಳಿಗೆ ಕಳೆ ತುಂಬುತ್ತಿತ್ತು. ಅಲ್ಲದೇ ಅವರು ಯೋಗಿಗಳ ಪಾತ್ರವನ್ನು ವಹಿಸುತ್ತಿದ್ದರು. ಸತಿ ಸುಕನ್ಯಾ, ರಾಜಶೇಖರ ವಿಳಾಸ ಹಾಗೂ ಸಿದ್ಧರಾಮೇಶ್ವರ ನಾಟಕಗಳಲ್ಲಿ ವಹಿಸಿದ ಪಾತ್ರದಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ಬಸವರಾಜರು ರಂಗಗೀತೆಗಳನ್ನು ಹಾಡುವಲ್ಲಿ ನಿಸ್ಸೀಮರು. ಅವರು ಕನ್ನಡ ರಂಗಗೀತೆಗಳಲ್ಲದೇ ಮರಾಠಿ ರಂಗಗೀತೆಗಳನ್ನು ಹಾಡುತ್ತಿದ್ದರು. ಹಾನಗಲ್ಲ ಕುಮಾರ ಸ್ವಾಮಿಗಳ ಪ್ರೇರಣೆಯಿಂದ ಪಂಚಾಕ್ಷರಿ ಗವಾಯಿಗಳು ಆರಂಭಿಸಿದ ಶ್ರೀಕುಮಾರೇಶ್ವರ ನಾಟಕ ಮಂಡಳಿಯಲ್ಲಿ ಪ್ರಮುಖ ನಾಯಕ ನಟ ಗಾಯಕರಾಗಿದ್ದ ರಾಜಗುರು ಅವರು ನಾಟ್ಯಗೀತೆಗಳನ್ನು ಬಳಸಿಕೊಳ್ಳುವುದರ ಮೂಲಕ ತಮ್ಮ ಹಿಂದೂಸ್ತಾನಿ ಸಂಗೀತವನ್ನು ಗಟ್ಟಿ ಮಾಡಿಕೊಂಡರು. ಪಂ.ಬಸವರಾಜ ರಾಜಗುರು ಅವರು ಧಾರವಾಡದಲ್ಲಿ ನೆಲೆನಿಂತ ಮೇಲೆ ಮುರುಘಾಮಠದಲ್ಲಿ ಮೇಲಿಂದ ಮೇಲೆ ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ಪೂಜ್ಯಶ್ರೀ ಮೃತ್ಯುಂಜಯಪ್ಪಗಳವರು ರಾಜಗುರು ಅವರನ್ನು ಬಹಳ ಪ್ರೀತಿಯಿಂದ ಕಾಣುತ್ತಿದ್ದರು.
ಪಂ.ರಾಜಗುರು ಅವರನ್ನು ವರಕವಿ ದ.ರಾ.ಬೇಂದ್ರೆಯವರು ಅಭಿಮಾನದಿಂದ ಕಾಣುತ್ತಿದ್ದರು. ಅವರು ಬೇಂದ್ರೆಯವರ ಸಮಾರಂಭಗಳಿಗೆ ತಪ್ಪದೇ ಹಾಜರಾಗುತ್ತಿದ್ದರು. ರಾಜಗುರು ಅವರು ಧ್ವನಿ ಮುದ್ರಣಕ್ಕಾಗಿ ಕುವೆಂಪುರವರ ಕೆಲವು ಭಾವಗೀತೆಗಳನ್ನು ಬಳಸಿಕೊಂಡಿದ್ದರು. ಕುವೆಂಪುರವರ ಎದುರಿಗೆ ‘ವಿಶ್ವದ ಕೇಂದ್ರ ವೃಂದಾವನದಲಿ’ ಎಂಬ ಹಾಡನ್ನು ಹಾಡಿ, ಅವರಿಂದನಾಲ್ಕು ಪುಸ್ತಕಗಳನ್ನು ಪ್ರೀತಿಯ ಕಾಣಿಕೆಯಾಗಿ ಪಡೆದುಕೊಂಡಿದ್ದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಂಗೀತ ವಿಭಾಗದಲ್ಲಿ ಅವರು ಕೆಲವು ವರ್ಷಗಳವರೆಗೆ ಸಂಗೀತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಸಿದರು. ಅವರು 1987ರಿಂದ 1990ರವರೆಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. 1936ರಿಂದ 1943ರವರೆಗೆ ಮುಂಬೈ ಆಕಾಶವಾಣಿ ಹಾಗೂ ಎಚ್.ಎಮ್.ವಿ ಕಂಪನಿಯವರಿಗಾಗಿ ಬಸವರಾಜ ರಾಗುರು ಅನೇಕ ರಾಗಗಳನ್ನು ಹಾಡಿದರು. ಅವರಿ ತಮ್ಮ ಗುರು ಪಂಚಾಕ್ಷರಿ ಗವಾಯಿಗಳಿಗೆ ಕೊಟ್ಟ ಮಾತಿನಂತೆ, ಸಂಗೀತ ವಿದ್ಯೆಯನ್ನು ಅನೇಕ ಶಿಷ್ಯಂದರಿಗೆ ಧಾರೆಯೆರೆದರು. ಗಣಪತಿಭಟ್ಟ, ಶಾಂತಾ ರಾಮ ಹೆಗಡೆ, ನಚಿಕೇತಶರ್ಮಾ, ಪರಮೇಶ್ವರ ಹೆಗಡೆ, ವೆಂಕಟೇಶಕುಮಾರ, ಸಂಗೀತಾ ಕಟ್ಟಿ, ಪೂರ್ಣಿಮಾ ಭಟ್ಟ, ಸೋಮನಾಥ ಮರಡೂರ, ರೋಹಿಣಿ ದೇಶಪಾಂಡೆ ಮುಂತಾದವರು ಪ್ರಸಿದ್ಧ ಗಾಯಕರಾಗಿದ್ದು ಗುರುಪರಂಪರೆಯನ್ನು ಮುಂದುವರೆಸಿದ್ದಾರೆ. ಇಷ್ಟೊಂದು ದೊಡ್ಡ ಶಿಷ್ಯ ಪರಿವಾರ ಹೊಂದಿದ್ದ ಸಂಗೀತಗಾರರು ಅಪರೂಪವೆಂದೇ ಹೇಳಬೇಕು.
ಪಂ.ರಾಜಗುರು ಅವರು ಧಾರ್ಮಿಕ ಸ್ವಭಾವದವರಾಗಿದ್ದರು. ಬಾಲ್ಯದಿಂದಲೂ ಶಿವಯೋಗ ಮಂದಿರದ ಪ್ರಭಾವದಲ್ಲಿ ಬೆಳೆದ ಅವರಿಗೆ ಗುರುಗಳ ಬಗ್ಗೆ ಗೌರವ ಹೆಚ್ಚು. ಬಸವರಾಜರು 1952ರಲ್ಲಿ ವಿಜಯಪುರ ಜಿಲ್ಲೆಯ ಬೋಳೆಗಾಂವದ ಬೋಳೆಗಾಂವಮಠರವರ ಮಗಳು ಮಹಾದೇವಿಯೊಂದಿಗೆ ಮದುವೆಯಾದರು. ಅವರಿಗೆ ರಾಜಶೇಖರ, ಹೇಮಾ ಮತ್ತು ಸರ್ವಮಂಗಳಾ ಎಂಬ ಮೂವರು ಮಕ್ಕಳು. ಮಹಾದೇವಿಯವರು 1962ರಲ್ಲಿ ನಿಧನರಾದರು. ನಂತರ ಪಂ.ಬಸವರಾಜರು ಮಹಾದೇವಿಯವರ ತಂಗಿ ಭಾರತಿದೇವಿ ಅವರನ್ನು ಅದೇ ವರ್ಷವೇ ಮದುವೆಯಾದರು. ಅವರಿಗೆ ಶಿವಾನಂದ, ಜಯಾ ಹಾಗೂ ನಿಜಗುಣ ಎಂಬ ಮೂವರು ಮಕ್ಕಳು. ಪಂ.ರಾಜಗುರು ಅವರಿಗೆ ಮದುವೆಯಿಂದಾಗಿ ಸಂಗೀತ ವೃತ್ತಿಗೆ ತೊಂದರೆಯಾಗಲಿಲ್ಲ. ಅವರು ಎಂದಿನಂತೆ ಸಂಗೀತ ಕಛೇರಿಗಳಿಗೆ ತಪ್ಪದೇ ಭಾಗವಹಿಸುತ್ತಿದ್ದರು. ಅವರು ಸಂಪೂರ್ಣ ಶಾಖಾಹಾರಿಗಳಾಗಿದ್ದರು. ಅವರು ಸಂಗೀತ ಕಛೇರಿಗಳಿಗಾಗಿ ಎಲ್ಲಿಯೇ ಹೋಗಲಿ, ತಮ್ಮ ಭೋಜನ ಸಾಮಗ್ರಿಗಳನ್ನು ಜೊತೆಗೆ ತೆಗೆದುಕೊಂಡು ಹೋಗುತ್ತಿದ್ದರು. ಅಚ್ಚರಿಯೆಂದರೇ ಧಾರವಾಡದಿಂದಲೇ ಕಾದಾರಿಸಿದ ನೀರನ್ನು ಕುಡಿಯುವುದಕ್ಕಾಗಿ ಒಯ್ಯುತ್ತಿದ್ದರು. ಅವರ ಹಾಗೆಯೇ ಧ್ವನಿ ಕಾಯ್ದುಕೊಂಡು ಬಂದವರು ಬಹಳ ವಿರಳ. ಅವರು ನಿರ್ಭಿಡೆಯ ದಿಟ್ಟ ಸ್ವಭಾವವನ್ನು ಹೊಂದಿದ್ದರು.
ಅವರಿಗೆ ದೊರೆತ ಪ್ರಶಸ್ತಿ ಪುರಸ್ಕಾರಗಳಿಗೆ ಲೆಕ್ಕವಿಲ್ಲ. ಸಂಗೀತ ರತ್ನ, ಸಂಗೀತ ಸರ್ದಾರ, ಗಾನಗಂಧರ್ವ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಪ್ರಶಸ್ತಿ, ಕೇಂದ್ರ ಸರ್ಕಾರದ ಪದ್ಮಶ್ರೀ, ಪದ್ಮಭೂಷಣ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಗಾನಕೋಗಿಲೆ, ಸ್ವರವಿಲಾಸ, ಸಂಗೀತ ಶಿರೋಮಣಿ, ಅಭಿನವ ಗಂಧರ್ವ ಮೊದಲಾದ ಪ್ರಶಸ್ತಿ-ಪುರಸ್ಕಾರಗಳು ಅವರನ್ನರಸಿಕೊಂಡು ಬಂದಿವೆ. ರಾಜಗುರುಗಳ 70ನೇ ವರ್ಷದ ಸಮಾರಂಭವನ್ನು ಅವರ ಶಿಷ್ಯವೃಂದ ಹಾಗೂ ಸಂಗೀತಾಭಿಮಾನಿಗಳು ಅದ್ದೂರಿಯಾಗಿ ಏರಿ್ಡಸಿದ್ದರು. 1983ರಲ್ಲಿ ಏರಿ್ಡಸಿದ ಪಂ.ಬಸವರಾಜರ ಪಷ್ಠಿಪೂರ್ತಿ ಸಮಾರಂಭದಲ್ಲಿ ಇಂಚರ ಅಭಿನಂದನಾ ಗ್ರಂಥವನ್ನು ಡಾ.ಬಸವರಾಜ ಮಲಶೆಟ್ಟಿಯವರು ಸಂಪಾದಿಸಿ ಅರ್ಿಸಿದರು. ಕನಾಟಕ ವಿಶ್ವವಿದ್ಯಾಲಯದಲ್ಲಿ ರಾಜಗುರು ಅವರ ಶಿಷ್ಯೆಯಾಗಿದ್ದ ಸವಿತಾ ಗುತ್ತಲರವರ ಸ್ಮರಣಾರ್ಥವಾಗಿ ಸಂಗೀತ ವಿಷಯದಲ್ಲಿ ಪ್ರಥಮವಾಗಿ ತೇರ್ಗಡೆಯಾಗುವ ವಿದ್ಯಾರ್ಥಿಗಳಿಗೆ ಪಂ.ಬಸವರಾಜ ರಾಜಗುರು ಸುವರ್ಣ ಪದಕವನ್ನು ನೀಡಲಾಗುತ್ತಿದೆ. ಅವರ ಶಿಷ್ಯ ಪರಮೇಶ್ವರ ಹೆಗಡೆಯವರು ‘ರಾಜಗುರು ಸ್ಮೃತಿ’ಯನ್ನು ಸ್ಥಾಪಿಸಿ, ಹಲವಾರು ಕಾರ್ಯಕ್ರಮಗಳನ್ನು ಏರಿ್ಡಸಿರುವರು. ಗಣಪತಿಭಟ್ಟ ಹಾಸಣಗಿಯವರು ಪಂ.ರಾಜಗುರು ಅವರ ಸ್ಮರಣಾರ್ಥ ಸಂಗೀತ ಅಕಾಡೆಮಿಯನ್ನು ಸ್ಥಾಪಿಸಿ, ಸಂಗೀತ ವಿಷಯದಲ್ಲಿ ವಿಚಾರಸಂಕಿರಣ ಮತ್ತು ಸಂಗೀತ ಕಛೇರಿಗಳನ್ನು ನಡೆಸುವುದಲ್ಲದೇ ಅನೇಕ ಪುಸ್ತಕಗಳನ್ನು ಧ್ವನಿಸುರುಳಿಗಳನ್ನು ಹೊರತಂದಿರುವರು.
ಪಂ.ಬಸವರಾಜರು ಅಮೇರಿಕಾದಲ್ಲಿ ಸಂಗೀತ ಕಛೇರಿ ನಡೆಯಿಸಿಕೊಡುವ ಸಲುವಾಗಿ ವೀಸಾಗಾಗಿ ಮದ್ರಾಸಗೆ ತೆರಳಿದ್ದರು. ಅಲ್ಲಿಂದ ಧಾರವಾಡಕ್ಕೆ ಮರಳಿ ಬರುವಾಗ, ಬೆಂಗಳೂರಿನಲ್ಲಿ ಹೃದಯಾಘಾತಕ್ಕೆ ಒಳಪಟ್ಟರು. ಅವರ ಶಿಷ್ಯ ನಚಿಕೇತ ಶರ್ಮಾ ಪಂ.ರಾಜಗುರು ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿದರು. ಆಸ್ಪತ್ರೆಯಲ್ಲಿ ಪಂ.ಬಸವರಾಜರು ಅರೆ ಪ್ರಜ್ಞಾವಸ್ಥೆಯಲ್ಲಿ ಶಿಷ್ಯನಿಗೆ ತಂಬೂರಿ ತೆಗೆದುಕೊ, ಸಾ ಆಲಾಪ್ ಮಾಡು ಎಂದು ಸೂಚಿಸಿದರು. ಆಗ ರಾತ್ರಿ 11 ಗಂಟೆಯಾಗಿತ್ತು. ಅದು ರಾಗ ಬಿಹಾಗದ ಸಮಯ. ಸಂಗೀತದೊಂದಿಗೆ ತಮ್ಮ ಜೀವನವನ್ನು ಸವೆಸಬೇಕು, ಸಂಗೀತದಲ್ಲಿಯೇ ಐಕ್ಯನಾಗಬೇಕು ಎಂಬ ಇಚ್ಛೆಯನ್ನು ಹೊಂದಿದ ಪಂ.ರಾಜಗುರು ಅವರು ಜುಲೈ 21, 1991ರಂದು ಹಾಡುತ್ತ, ಹಾಡುತ್ತ ಸ್ವರಲೋಕದಲ್ಲಿ ಲೀನವಾದರು. ಕರ್ನಾಟಕ ಸರ್ಕಾರವು ಧಾರವಾಡದಲ್ಲಿ ಪಂ.ರಾಜಗುರುರವರ ಹೆಸರಿನಲ್ಲಿ ಟ್ರಸ್ಟ್ ರಚಿಸಿದ್ದು, ಪ್ರತಿ ವರ್ಷ ಅವರ ಪುಣ್ಯತಿಥಿಯಂದು ಪಂ.ಬಸವರಾಜ ರಾಜಗುರು ಸಂಗೀತ ಪ್ರಶಸ್ತಿಯನ್ನು ಸಂಗೀತ ಕಲಾವಿದರಿಗೆ ನೀಡಲಾಗುತ್ತಿದೆ. ಅಲ್ಲದೇ ಸಂಗೀತ ಕಾರ್ಯಕ್ರಮದ ಮೂಲಕ ಸಂಗೀತ ಸಾಮ್ರಾಟ ಬಸವರಾಜ ರಾಜಗುರುಗಳ ಸೇವೆಯನ್ನು ಸ್ಮರಿಸಲಾಗುತ್ತಿದೆ.
- ಸುರೇಶ ಗುದಗನವರ
ಧಾರವಾಡ
9449294694
- * * * -