ಮುಂಬೈ, ಅ.19: ಮುಂದಿನ ಎರಡು ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಮಹಾರಾಷ್ಟ್ರದಲ್ಲಿ ಆಸಕ್ತಿದಾಯಕ ಬೆಳವಣಿಗೆಗಳು ಘಟಿಸುತ್ತಿವೆ. ಶನಿವಾರ ಸಂಜೆ ಬಹಿರಂಗ ಚುನಾವಣಾ ಪ್ರಚಾರ ಅಂತ್ಯಗೊಳ್ಳಲಿದ್ದು, ಇದರಿಂದಾಗಿ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ಕೊನೆಗಳಿಗೆ ಆಸ್ತ್ರಗಳನ್ನು ಪ್ರಯೋಗಿಸಲು ಮುಂದಾಗಿವೆ. ಈ ನಿಟ್ಟಿನಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರೊಂದಿಗೆ ದೀರ್ಘಕಾಲ ಕಾರ್ಯನಿರ್ವಹಿಸಿದ್ದ ಅಂಗರಕ್ಷಕ ಹಾಗೂ ಪ್ರಮುಖ ಸಹವರ್ತಿ ಗುರ್ಮಿತ್ ಸಿಂಗ್ ಅಲಿಯಾಸ್ ಷಿರಾ ಶುಕ್ರವಾರ ಶಿವಸೇನೆ ಸೇರಿದರು. ಗುರ್ಮಿತ್ ಸಿಂಗ್ ಅವರಿಗೆ ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಪಕ್ಷದ ಧ್ವಜ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು. ಈ ಸಮಾರಂಭದಲ್ಲಿ ಪಕ್ಷದ ಯುವ ಘಟಕದ ಅಧ್ಯಕ್ಷ ಆದಿತ್ಯ ಠಾಕ್ರೆ ಕೂಡ ಉಪಸ್ಥಿತರಿದ್ದರು. ಚುನಾವಣಾ ಮತದಾನಕ್ಕೆ ಕೆಲವೇ ಗಂಟೆಗಳಿಗೆ ಮುನ್ನ ಸಲ್ಮಾನ್ ಖಾನ್ ಅವರ ಸಹಚರ ಶಿವಸೇನೆ ಸೇರಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಗುರ್ಮಿತ್ ಸಿಂಗ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಉದ್ಧವ್ ಠಾಕ್ರೆ ಮತ್ತು ಆದಿತ್ಯ ಠಾಕ್ರೆ ಇಬ್ಬರೂ ಭಾಗಿಯಾಗಿರುವುದು ಅನುಮಾನಗಳನ್ನು ಮತ್ತಷ್ಟು ಬಲಗೊಳಿಸಿದೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಸೋಮವಾರ (ಅಕ್ಟೋಬರ್ 21) ನಡೆಯಲಿದೆ. ಅಕ್ಟೋಬರ್ 24 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.