ಸರ್ಕಾರಿ ವೈದ್ಯ ವಿದ್ಯಾರ್ಥಿಗಳ ವೇತನ ಹೆಚ್ಚಳ: ಡಾ.ಕೆ.ಸುಧಾಕರ್

ಬೆಂಗಳೂರು, ಮೇ 18, ಸರ್ಕಾರಿ ವೈದ್ಯ ವಿದ್ಯಾರ್ಥಿಗಳ ವೇತನ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ.ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ನೀಡಿದ್ದ  ಭರವಸೆಯಂತೆ ವೈದ್ಯ ವಿದ್ಯಾರ್ಥಿಗಳ ಶಿಷ್ಯವೇತನವನ್ನು ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶ  ಹೊರಡಿಸಿದೆ. ಇದರೊಂದಿಗೆ ಕಳೆದ ಐದು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪರಿಷ್ಕರಣೆ  ಪ್ರಸ್ತಾವಕ್ಕೆ ಕೊನೆಗೂ ಮುಕ್ತಿ ದೊರಕಿದಂತಾಗಿದೆ. ಕೋವಿಡ್ ಸಂಕಷ್ಟದಿಂದಾಗಿ ಉಂಟಾಗಿರುವ  ಆರ್ಥಿಕ ಬಿಕ್ಕಟ್ಟಿನಿಂದಾಗಿ ಹಲವಾರು ರಾಜ್ಯಗಳು ವೈದ್ಯರ ವೇತನ ಕಡಿತಗೊಳಿಸಿರುವ  ಸಂದರ್ಭದಲ್ಲಿ ವೈದ್ಯರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ ವೇತನ  ಪರಿಷ್ಕರಣೆ ಮಾಡಲಾಗಿದೆ.
ಕಳೆದ  ಫೆಬ್ರವರಿ 26 ರಂದು "ಕರ್ನಾಟಕ ಅಸೋಸಿಯೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್' ಸಂಘಟನೆ  ಪ್ರತಿನಿಧಿಗಳ ನಿಯೋಗ ಸಚಿವ ಸುಧಾಕರ್ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ  ಸಲ್ಲಿಸಿತ್ತು. ಮನವಿ ಸ್ವೀಕರಿಸಿದ್ದ ಸಚಿವ ಸುಧಾಕರ್ ಅವರು, "ಮೂರ್ನಾಲ್ಕು ತಿಂಗಳಲ್ಲಿ ಈ  ಕುರಿತು ಖಚಿತ ತೀರ್ಮಾನ ಕೈಗೊಳ್ಳುತ್ತೇನೆ” ಎಂದು ಭರವಸೆ ನೀಡಿದ್ದರು. ಬಳಿಕ ಇಲಾಖೆಯ  ಅಧಿಕಾರಿಗಳಿಗೆ ಈ ಕುರಿತು ಪ್ರಸ್ತಾವನೆ ಸಿದ್ಧಪಡಿಸುವಂತೆ ಸೂಚನೆ ನೀಡಿದ್ದರು.
ಕೊರೋನಾ  ಸೋಂಕಿತ ಮಾಧ್ಯಮ ಪ್ರತಿನಿಧಿಯೊಬ್ಬರ ಸಂಪರ್ಕದಿಂದ ಕ್ವಾರಂಟೈನ್ ನಲ್ಲಿದ್ದ ಸಂದರ್ಭದಲ್ಲಿ  ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ರಾಜೀವ್ ಗಾಂಧಿ ಆರೋಗ್ಯ  ವಿಶ್ವವಿದ್ಯಾಲಯದ ಕುಲಪತಿ ಡಾ. ಸಚ್ಚಿದಾನಂದ ಮತ್ತು ಇಲಾಖೆ ನಿರ್ದೇಶಕ ಡಾ. ಗಿರೀಶ್  ಅವರೊಂದಿಗೆ ವಿಡಿಯೋ ಸಂವಾದ ನಡೆಸಿ ಶಿಷ್ಯ ವೇತನ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ  ಕಳುಹಿಸಿಕೊಡುವಂತೆ ಸಚಿವರು ಸೂಚಿಸಿದ್ದರು. ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಅವರನ್ನು  ಕ್ವಾರಂಟೈನ್ ಬಳಿಕ ಭೇಟಿ ಮಾಡಿ ಹಣಕಾಸು ಇಲಾಖೆಯ ಸಮ್ಮತಿ ದೊರಕಿಸುವಂತೆ  ಸಚಿವರು ಮನವೊಲಿಸಿದ್ದರು.
ಪರಿಷ್ಕೃತಗೊಂಡಿರುವ  ಶಿಷ್ಯವೇತನದ ಅನ್ವಯ ಗೃಹ ವೈದ್ಯರಿಗೆ - 30000, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ  ಮೊದಲ ವರ್ಷ - 45000, ಎರಡನೇ ವರ್ಷ - 50000, ಮೂರನೇ ವರ್ಷ- 55000, ಸೂಪರ್  ಸ್ಪೆಷಾಲಿಟಿ ಮೊದಲ ವರ್ಷದ ವಿದ್ಯಾರ್ಥಿಗಳಿಗೆ - 55000, ಎರಡನೇ ವರ್ಷ - 60000, ಮೂರನೇ  ವರ್ಷ- 65000, ಸೀನಿಯರ್ ರೆಸಿಡೆಂಟ್ಸ್ (ಕಡ್ಡಾಯ ಸರ್ಕಾರಿ ಸೇವೆ) - 60000 ಮತ್ತು  ಫೆಲೋಶಿಫ್ ವಿದ್ಯಾರ್ಥಿಗಳಿಗೆ - 60000 ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ. ಸರ್ಕಾರದ ಈ  ನಿರ್ಧಾರದಿಂದ ಆರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ಕೋವಿಡ್  ವಿರುದ್ಧ ಸರ್ಕಾರ ನಡೆಸಿರುವ ಹೋರಾಟದಲ್ಲಿ ವೈದ್ಯ ವಿದ್ಯಾರ್ಥಿಗಳ ಕೊಡುಗೆ  ಮಹತ್ತರವಾಗಿದೆ. ಅಧಿಸೂಚಿತ ಕೋವಿಡ್ ಆಸ್ಪತ್ರೆಗಳಲ್ಲಿ ಮುಂಚೂಣಿಯಲ್ಲಿ ಕಾರ್ಯ  ನಿರ್ವಹಿಸುತ್ತಿರುವ ಇವರಿಗೆ ಇದೇ ಸಂದರ್ಭದಲ್ಲಿ ಶಿಷ್ಯ ವೇತನ ಪರಿಷ್ಕರಿಸಿದರೆ ಅವರನ್ನು  ಪ್ರೋತ್ಸಾಹಿಸಿದಂತಾಗುತ್ತದೆ ಹಾಗೂ ಇನ್ನೂ ಹೆಚ್ಚು ಕ್ರಿಯಾಶೀಲರಾಗಿ ಕಾರ್ಯ  ನಿರ್ವಹಿಸುವಂತೆ ಅವರನ್ನು ಪ್ರೇರೇಪಿಸಿದಂತಾಗುತ್ತದೆ ಎಂದು ಸಚಿವ ಸುಧಾಕರ್  ಹೇಳಿದ್ದಾರೆ.
 ಐದು  ವರ್ಷಗಳಿಂದ ಸರ್ಕಾರದ ಪರಿಶೀಲನೆ ಹಂತದಲ್ಲಿದ್ದ ಪ್ರಸ್ತಾವನೆಗೆ ಸಮ್ಮತಿ ನೀಡಿದ  ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಹಿಂದಿನ  ಸರ್ಕಾರ ಪ್ರವೇಶ ಶುಲ್ಕವನ್ನು ಐದು ಪಟ್ಟು ಹೆಚ್ಚಿಸಿದ್ದು ವಿದ್ಯಾರ್ಥಿಗಳಿಗೆ  ಹೊರೆಯಾಗಿತ್ತು. ಜೊತೆಗೆ ಇತರೆ ರಾಜ್ಯಗಳಿಗಿಂತ ಕಡಿಮೆ ಶಿಷ್ಯವೇತನ ನೀಡಲಾಗುತ್ತಿತ್ತು.  ಎಲ್ಲಕ್ಕಿಂತ ಮಿಗಿಲಾಗಿ ಕೋವಿಡ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ಕಾರ್ಯ  ನಿರ್ವಹಿಸುತ್ತಿರುವ ಈ ಸಂದರ್ಭದಲ್ಲಿ ಅವರ ಬೇಡಿಕೆ ಈಡೇರಿಸುವುದು ನಮ್ಮ  ಕರ್ತವ್ಯವಾಗಿತ್ತು, ಇದು ನಿಜಕ್ಕೂ ನನಗೆ ಸಮಾಧಾನ ತಂದಿದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಅನೇಕ ಇಲಾಖೆಗಳ ಸಿಬ್ಬಂದಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ವೈದ್ಯರು, ಆಶಾ ಕಾರ್ಯಕರ್ತೆಯರು ಮೊದಲ ಸಾಲಿನ ವಾರಿಯರ್ಸ್‌ಗಳಾಗಿದ್ದಾರೆ. ಕಳೆದ ತಿಂಗಳು‌ 2500  ವೈದ್ಯಕೀಯ ಬೋಧಕ ಸಿಬ್ಬಂದಿಗೆ ಏಳನೇ ವೇತನ ಆಯೋಗದ ಶಿಫಾರಸು ಅನ್ವಯಿಸಿರಲಿಲ್ಲ. ಅವರಿಗೆ ಏಳನೇ ವೇತನ ಆಯೋಗದ ಪ್ರಕಾರ ವೇತನ ಹೆಚ್ಚಳ ಆಗಿರಲಿಲ್ಲ.  ಈ ಬಗ್ಗೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಲಾಗಿತ್ತು. ಆರ್ಥಿಕ ಸಂಕಷ್ಟ ಇದ್ದರೂ ವೈದ್ಯರಿಗೆ ವೇತನ ಹೆಚ್ಚಳ ಮಾಡಲಾಗಿದೆ. ವೇತನಕ್ಕಾಗಿ 1404 ಕೋಟಿ ರೂ. ಖರ್ಚಾಗುತ್ತದೆ. ವಾರ್ಷಿಕ 137 ಕೋಟಿ ಹೊರೆ ಆದರೂ ವೈದ್ಯರು ಸಂಬಳ ಏರಿಕೆ ಮಾಡಲು ತೀರ್ಮಾನ ಮಾಡಲಾಗಿದೆ. ಕಳೆದ ಐದು ವರ್ಷಗಳಿಂದ ವೇತನ ಪರಿಷ್ಕರಣೆ ಮಾಡಿರಲಿಲ್ಲ. ಹೆಚ್ಚುವರಿಯಾಗಿ ವೇತನ ಪರಿಷ್ಕರಣೆ ಮಾಡಿದರೆ 270 ಕೋಟಿ ಹೆಚ್ಚಾಗುತ್ತದೆ ಎಂದರು.
ಡೆಂಟಲ್ ಕ್ಲಿನಿಕ್ ಗಳನ್ನು ತೆರೆಯಲು ಅವಕಾಶ ಕೊಡಲಾಗಿದೆ. ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ ಸಂಸ್ಥೆಯಿಂದ ಮಾರ್ಗಸೂಚಿ ಪ್ರಕಟಿಸಲಾಗಿದೆ. ನಿರ್ದಿಷ್ಟ ಸೇವೆಗಳಿಗೆ ಡೆಂಟಿಸ್ಟ್ ಗಳಿಗೆ ಅವಕಾಶ ಕೊಡಲಾಗಿದೆ ಎಂದರು.
ಆಶಾ ಕಾರ್ಯಕರ್ತೆಯರಿಗೆ ಒಂದು ಬಾರಿ 3 ಸಾವಿರ ರೂ ಪರಿಹಾರ ಕೊಡಲಾಗಿದ್ದು ಇದಕ್ಕಾಗಿ 12 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದರು.
ರಾಜ್ಯದಲ್ಲಿ ಕೊರೋನಾ ಹತೋಟಿಯಲ್ಲಿದೆ. ಆದರೆ ಜನ ಅವರ ಆರೋಗ್ಯದ ಬಗ್ಗೆ ಅವರೇ ಹೆಚ್ಚು ಕಾಳಜಿ ವಹಿಸಬೇಕು. ಕೊರೋನಾ ತಡೆಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ನಿಯಮಗಳ ಜಾರಿಯಾಗಲಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಪ್ರತ್ಯೇಕ‌ ನಿಯಮಗಳನ್ನು ತರಲಾಗುತ್ತದೆ ಎಂದು ಸುಧಾಕರ್ ಹೇಳಿದರು.
ಈಗ ವಲಯಗಳ ಹಂಚಿಕೆ ಮಾಡಲಾಗಿಲ್ಲ. ಕಂಟೈನ್ಮೆಂಟ್ ವಲಯ ಮಾತ್ರ ಇರುತ್ತವೆ. ರೆಡ್, ಆರೇಂಜ್ ಮತ್ತು ಗ್ರೀನ್ ಝೋನ್ ಗಳ ವರ್ಗೀಕರಣ ಕೈ ಬಿಡಲಾಗಿದೆ. ಹೊಸ ಮಾರ್ಗಸೂಚಿಗಳು ಜಾರಿಯಾಗಿವೆ. ಹಾಗಾಗಿ ರೆಡ್, ಆರೇಂಜ್, ಗ್ರೀನ್ ಝೋನ್ ಗಳಿಗೆ ಅರ್ಥ ಇಲ್ಲ. ಈ ವಲಯವಾರು ವರ್ಗೀಕರಣವನ್ನು ಇನ್ನು ಮುಂದೆ ಪರಿಗಣಿಸುವುದಿಲ್ಲ. ಕಂಟೈನ್ಮೆಂಟ್ ವಲಯ ಮಾತ್ರ ಪರಿಗಣನೆ ಮಾಡಿ ಅಲ್ಲಿ ಹೆಚ್ಚಿನ ನಿರ್ಬಂಧ ಹೇರಲಾಗುವುದು ಎಂದು ಸಚಿವ ಸುಧಾಕರ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೆದ್ ಅಖ್ತರ್ ಉಪಸ್ಥಿತರಿದ್ದರು.
ವೇತನ ಪರಿಷ್ಕರಣೆಯನ್ನು ವೈದ್ಯರು ಸ್ವಾಗತಿಸಿದ್ದಾರೆ.ಡಾ. ಎಲ್. ದಯಾನಂದ ಸಾಗರ್, ಕರ್ನಾಟಕ  ಅಸೋಸಿಯೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಪ್ರತಿಕ್ರಿಯಿಸಿ, ಆರ್ಥಿಕವಾಗಿ  ಸಂಕಷ್ಟ ಸ್ಥಿತಿಯಲ್ಲಿ ಇರುವ ಸಂದರ್ಭದಲ್ಲಿ ಸರ್ಕಾರ ನಮ್ಮ ಮನವಿ ಪುರಸ್ಕರಿಸಿ ಶೇಕಡಾ  40 ರಷ್ಟು ಹೆಚ್ಚಳ ಮಾಡಿರುವುದು ಸ್ವಾಗತಾರ್ಹ. ಕಳೆದ ಐದು ವರ್ಷಗಳಿಂದ ಸತತ ಮನವಿ  ಸಲ್ಲಿಸಿದ್ದರೂ ಪ್ರಯೋಜನ ಆಗಿರಲಿಲ್ಲ. ಮೂರು ತಿಂಗಳ ಹಿಂದಷ್ಟೇ ಸಚಿವ ಸುಧಾಕರ್ ಅವರಿಗೆ  ಮನವಿ ಸಲ್ಲಿಸಿದ್ದೆವು. ಸಚಿವರು ನಮ್ಮ ಪರಿಸ್ಥಿತಿ ಅರ್ಥ ಮಾಡಿಕೊಂಡು ಕೋವಿಡ್ ವಿರುದ್ಧದ  ಹೋರಾಟದಲ್ಲಿ ಮುಂಚೂಣಿಯಲ್ಲಿ ಸೇವೆ ಸಲ್ಲಿಸುತ್ತಿರುವ ನಮ್ಮ ಶಿಷ್ಯ ವೇತನ ಪರಿಷ್ಕರಿಸಿ  ಪ್ರೋತ್ಸಾಹಿಸಿರುವುದಕ್ಕೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.