ಸೋತವರಿಗೆ ಸಚಿವ ಸ್ಥಾನ ಕೊಟ್ಟಿದ್ದಕ್ಕೆ ಬೇಸರವಿದೆ: ಬಿಜೆಪಿ ಶಾಸಕರು

ಬೆಂಗಳೂರು, ಆ 21      ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ  ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಅವಶ್ಯಕತೆ ಬಿದ್ದರೆ ಯಡಿಯೂರಪ್ಪ ಅವರ ಮನೆ ಬಾಗಿಲಿಗೆ  ಹೋಗುತ್ತೇನೆಯೇ ಹೊರತು ಬೇರೆ ಯಾರ ಮನೆಗೂ ಹೋಗುವುದಿಲ್ಲ, ಅಗತ್ಯ ಬಿದ್ದರೆ ರಾಜಕೀಯ ನಿವೃತ್ತಿ  ಪಡೆಯುತ್ತೇನೆ ಎಂದು ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಹೇಳಿದ್ದಾರೆ. 

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿರುವುದಕ್ಕೆ ತಮಗೆಲ್ಲಾ ಬೇಸರವಾಗಿದೆ. ಆರು  ಬಾರಿ ಗೆದ್ದ ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ನೀಡಿಲ್ಲ, ದಾವಣಗೆರೆ ಜಿಲ್ಲೆಯಲ್ಲಿ ನಾಲ್ಕು ಬಾರಿ ಗೆದ್ದ  ಆರು ಜನ ಶಾಸಕರಿದ್ದಾರೆ, ಅವರಲ್ಲಿ ಒಬ್ಬರಿಗೂ  ಸಚಿವ ಸ್ಥಾನ  ಏಕೆ ನೀಡಿಲ್ಲ ? ಎಂದು ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಪ್ರಶ್ನಿಸಿದ್ದಾರೆ. 

ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರನ್ನು ತಾವು ಭೇಟಿ ಮಾಡಿದ್ದೇನೆಂದು ಮಾಧ್ಯಮ ಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿ ಸುಳ್ಳು, ಅವರು ಮುಖ್ಯಮಂತ್ರಿ ಆಗಿದ್ದಾಗ ಕ್ಷೇತ್ರದ ಅಭಿವೃದ್ಧಿ, ಅನುದಾನ ವಿಚಾರಕ್ಕೆ ಭೇಟಿಯಾಗಿರಬಹುದೇ ಹೊರತು ಯಾವುದೇ  ಕಾರಣಕ್ಕೂ ಪಕ್ಷಕ್ಕೆ ಹಾಗೂ  ಯಡಿಯೂರಪ್ಪನವರಿಗೆ ದ್ರೋಹ ಬಗೆಯುವವನಲ್ಲ. ನನಗೆ ಯಡಿಯೂರಪ್ಪ ಮತ್ತು  ಅಟಲ್ ಬಿಹಾರಿ ವಾಜಪೇಯಿ ಅವರು ಆದರ್ಶ ವ್ಯಕ್ತಿಗಳು. ತಾವು ಸಚಿವ ಸ್ಥಾನಕ್ಕೆ ಲಾಬಿ ಮಾಡಿರುವುದು ಸಾಬೀತುಪಡಿಸಿದರೆ ರಾಜಕೀಯ  ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು. 

 ವಿಧಾನ ಸಭಾ ಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ನೀಡಿರುವುದಕ್ಕೆ ಬೇಸರವಿದೆ. ಕಳ್ಳ ಸಭೆ, ರಹಸ್ಯ ಭೇಟಿ ಮಾಡಿದವನು ತಾವಲ್ಲ. ತಮಗೆ ಮುಖ್ಯಮಂತ್ರಿ ಹಾಗೂ ಪಕ್ಷದ ಬಗ್ಗೆ ಬೇಸರವಿಲ್ಲ, ಬೇಸರ ಇರುವುದು ಸೋತವರಿಗೆ ಸಚಿವ ಸ್ಥಾನ ಕೊಟ್ಟ ಬಗ್ಗೆ ಮಾತ್ರ, ತಮಗೆ ಸಚಿವ ಸ್ಥಾನ ಸಿಗಬೇಕಿತ್ತು, ಸಿಕ್ಕಿಲ್ಲ ಅದಕ್ಕಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ. 

ರಾಮಪ್ಪ ಲಮಾಣಿ ಮಾತನಾಡಿ, ಸೋತವರಿಗೆ ಸಚಿವ ಸ್ಥಾನ ಕೊಡುತ್ತಾರೆ ಎಂದರೆ ನಾಲ್ಕು ಬಾರಿ ಗೆದ್ದವರು ನಾವೇನು ಮಾಡಬೇಕು ? ಕಳೆದ ಬಾರಿ ಸಚಿವ ಸಂಪುಟದಲ್ಲೂ ಅವರಿಗೇ ಸ್ಥಾನ ನೀಡಲಾಗಿತ್ತು.  ಈಗಲೂ ಅವರಿಗೇ ಸ್ಥಾನ ನೀಡುವುದು ಎಂದರೆ ಏನರ್ಥ ? ತಮಗೆ ಸಚಿವ ಸ್ಥಾನ ಕೊಡದೇ ಇದ್ದುದಕ್ಕೆ ತಮಗೆ ಬೇಸರವಿಲ್ಲ. ತಾವು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಯಡಿಯೂರಪ್ಪ ಜತೆ ಕೆಜೆಪಿಗೂ ಹೋಗಿರುವ ತಮಗೇ ಈಗ ಅನ್ಯಾಯ ಮಾಡಿದ್ದಾರೆ, ಇವೆಲ್ಲಾ ಹೇಗೆ ಸಾಧ್ಯ? ಎಂದು ತಮ್ಮ ನೋವು ತೋಡಿಕೊಂಡರು. 

ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಉಮೇಶ್ ಕತ್ತಿ, ಮಾಜಿ  ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ತಾವು ಭೇಟಿ ಮಾಡಿಲ್ಲ, ಸಚಿವ ಸ್ಥಾನ ಕೊಟ್ಟರೆ ನಿರ್ವಹಿಸುತ್ತೇನೆ. ಕೊಡದಿದ್ದರೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿಕೊಂಡು ಇರುತ್ತೇನೆ. ತಮಗೆ ಸಕರ್ಾರದ ಬಗ್ಗೆ ಯಾವ ಅತೃಪ್ತಿಯೂ ಇಲ್ಲ, ಅಸಮಾಧಾನನೂ ಇಲ್ಲ. ಸಚಿವ ಸ್ಥಾನ ನೀಡದಿದ್ದಕ್ಕೆ ಅಸಮಾಧಾನವಿತ್ತು ಅದನ್ನು ಮುಖ್ಯಮಂತ್ರಿ ಬಳಿ ಹೇಳಿಕೊಂಡಿದ್ದೇನೆ. ಅದಕ್ಕೆ ಅವರು ಸೂಕ್ತ ಸಲಹೆ, ಕಾರಣಗಳನ್ನು ನೀಡಿದ್ದಾರೆ ಎಂದು ಅವರು ತಿಳಿಸಿದರು. 

ಮುಖ್ಯಮಂತ್ರಿ ಭೇಟಿ ವೇಳೆ ತಮಗೆ ನೀಡಿದ ಭರವಸೆಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಅವರಿಗೆ ಏನು ಹೇಳಬೇಕೆಂದುಕೊಂಡಿದ್ದೆನೋ ಅವೆಲ್ಲವನ್ನೂ ಅವರಿಗೆ ತಿಳಿಸಿದ್ದೇನೆ. ಮುಖ್ಯಮಂತ್ರಿ ಅವರನ್ನು ಹೊರತುಪಡಿಸಿ ಮತ್ಯಾರನ್ನೂ ತಾವು ಭೇಟಿ ಮಾಡಿಲ್ಲ, ಮಾಡುವುದೂ ಇಲ್ಲ ಎಂದು ಉಮೇಶ್ ಕತ್ತಿ ಸ್ಪಷ್ಟಪಡಿಸಿದ್ದಾರೆ.