ಬಿಸಿಯೂಟ ನೌಕರರ ವೇತನ ಹೆಚ್ಚಳಕ್ಕೆ ಸಚಿವ ಸುರೇಶ್ ಕುಮಾರ್ ಕೇಂದ್ರಕ್ಕೆ ಒತ್ತಾಯ

ಬೆಂಗಳೂರು,ಮಾರ್ಚ್ 9,ಮಧ್ಯಾಹ್ನ ಉಪಹಾರ ಯೋಜನೆಯ ಅಡುಗೆಯವರು ಮತ್ತು ಅಡುಗೆ ಸಹಾಯಕರಿಗೆ (ಬಿಸಿಯೂಟ ನೌಕರರ) ಕೇಂದ್ರ ಸರ್ಕಾರ ನೀಡುವ  ಸಂಭಾವನೆಯ ಪ್ರಮಾಣವನ್ನು ಹೆಚ್ಚಿಸಬೇಕೆಂದು  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್  ಪೋಕ್ರಿಯಾಲ್ ಅವರಿಗೆ ಪತ್ರ ಬರೆದಿರುವ ಸಚಿವರು, 2010ರಲ್ಲಿ ಈ ಯೋಜನೆಯಡಿ ಕೆಲಸ ಮಾಡುವ ಅಡುಗೆ ಸಿಬ್ಬಂದಿಗೆ ಕೇಂದ್ರ ಸರ್ಕಾರ ಮಾಸಿಕ 1000 ರೂ. ಸಂಭಾವನೆ ನಿಗದಿಪಡಿಸಿ ಅದರಲ್ಲಿ ಶೇ.75 ಭಾಗ ನೀಡುತ್ತಿತ್ತು. 25 ಭಾರ ರಾಜ್ಯ ಸರ್ಕಾರ ಭರಿಸಬೇಕಿತ್ತು. 2014ರಲ್ಲಿ ಕೇಂದ್ರವು ತನ್ನ ಪಾಲನ್ನು ಇದ್ದಕ್ಕಿದ್ದಂತೆ  ಶೇ.60ಕ್ಕೆ ಇಳಿಸಿತು. ರಾಜ್ಯ ಸರ್ಕಾರ ಶೇ. 40 ಭರಿಸಬೇಕಾಯಿತು. ಆದರೆ ಅಡುಗೆ ಸಿಬ್ಬಂದಿಯ ಸಂಕಷ್ಟವನ್ನು ಆಯಾ ಕಾಲದ ಜೀವನವೆಚ್ಚ ಪರಿಗಣಿಸಿ ರಾಜ್ಯ ಸರ್ಕಾರ ಅಡುಗೆಯವರಿಗೆ ಮಾಸಿಕ 2,700 ರೂ. ಮತ್ತು ಸಹಾಯಕರಿಗೆ 2600 ರೂ.ಗಳಿಗೆ ಹೆಚ್ಚಿಸಿತು. ಆದರೆ ಕೇಂದ್ರ ಸರ್ಕಾರ ಅಂದಿನಿಂದಲೂ ತನ್ನ ಪಾಲನ್ನು ಕೇವಲ 600 ರೂ.ಗಳನ್ನು ಮಾತ್ರವೇ ನೀಡುತ್ತಿದೆ ಎಂದು ಸಚಿವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ 46768 ಅಡುಗೆಯವರು ಮತ್ತು 71159 ಸಹಾಯಕರು ಸೇರಿ ಒಟ್ಟು 1,17,927 ಮಂದಿ ಮಧ್ಯಾಹ್ನ ಉಪಹಾರ ಯೋಜನೆಯಡಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಸರ್ಕಾರ ನೀಡುವ ಸಂಭಾವನೆಯಲ್ಲಿ  ಜೀವನ ಸಾಗಿಸುವುದಕ್ಕೆ ತೊಂದರೆಯಾಗುತ್ತಿರುವುದರಿಂದ ತಮ್ಮ ವೇತನವನ್ನು ಕ್ರಮವಾಗಿ 6000 ಮತ್ತು 5000ಕ್ಕೆ ಹೆಚ್ಚಿಸಬೇಕೆಂದು ಈ ಕೆಲಸಗಾರರು ಹಲವಾರು ಬಾರಿ ಕೆಲಸ ಸ್ಥಗಿತ ಮುಷ್ಕರ ಮಾಡುವ ಮೂಲಕ ಒತ್ತಾಯಿಸುತ್ತಿದ್ದಾರೆ. ಅವರ ಬೇಡಿಕೆಗಳು ನಿಜಕ್ಕೂ ಸಮ್ಮತವಾಗಿರುವುದರಿಂದ ಅವರು ಒತ್ತಾಯಿಸುತ್ತಿರುವ ಕ್ರಮವಾಗಿ 6000 ಮತ್ತು 5000 ರೂ.ಗಳಿಗೆ ನಿಗದಿ ಪಡಿಸಿಪರಿಷ್ಕೃತ ವೇತನಕ್ಕೆ  ಅನುಗುಣವಾಗಿ ಕೇಂದ್ರದ ಪಾಲನ್ನು ಶೇ. 60ರಷ್ಟು ಒದಗಿಸಬೇಕೆಂದು ಸುರೇಶ್ ಕುಮಾರ್ ಕೋರಿದ್ದಾರೆ.