ಹೆಚ್ಚುತ್ತಿರುವ ಕೋಮುವಾದವನ್ನು ವಿರೋಧಿಸಿ ಎಸ್‌ಯುಸಿಐ ಕಮ್ಯುನಿಸ್ಟ್‌ ಪಕ್ಷದ ಪ್ರತಿಭಟನೆ

SUCI Communist Party protests against rising communalism

ಬಳ್ಳಾರಿ 06: ಬಾಂಗ್ಲಾದೇಶ ಮತ್ತು ಭಾರತದಲ್ಲಿ ಹೆಚ್ಚುತ್ತಿರುವ ಕೋಮುವಾದವನ್ನು ವಿರೋಧಿಸಿ ಅಖಿಲ ಭಾರತ ಪ್ರತಿರೋಧ ದಿನದ ಅಂಗವಾಗಿ ಇಂದು ಬಳ್ಳಾರಿಯ ಹಳೆಯ ತಾಲ್ಲೂಕು ಕಛೇರಿ ವೃತ್ತದ ಬಳಿ ಎಸ್‌ಯುಸಿಐ ಕಮ್ಯುನಿಸ್ಟ್‌ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.  

ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಯುಸಿಐ(ಸಿ) ಜಿಲ್ಲಾ ಸಮಿತಿ ಸದಸ್ಯರಾದ ಎ.ದೇವದಾಸ್ ಅವರು "1971ರ ಬಾಂಗ್ಲಾದೇಶ ವಿಮೋಚನಾ ಚಳವಳಿಯಲ್ಲಿ ಮತ್ತು ಶೇಖ್ ಹಸೀನಾರನ್ನು ಪದಚ್ಯುತಗೊಳಿಸಿದ ಇತ್ತೀಚಿನ ಐತಿಹಾಸಿಕ ವಿದ್ಯಾರ್ಥಿ ಬಂಡಾಯದಲ್ಲಿ ಮುಸಲ್ಮಾನರು ಮತ್ತು ಹಿಂದೂಗಳು ಪರಸ್ಪರ ಜೀವಕೊಟ್ಟು ಹೋರಾಡಿದ್ದರು. ಆದರೆ ಈಗ ಅಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿಯಂತಹ ಘಟನೆಗಳು ವರದಿಯಾಗುತ್ತಿವೆ. ಅಲ್ಲಿನ ರಾಜಕೀಯ ಪರಿಸ್ಥಿತಿಯನ್ನು ಕೋಮುವಾದಿ ಶಕ್ತಿಗಳು ದುರುಪಯೋಗ ಪಡಿಸಿಕೊಳ್ಳುತ್ತಿವೆ" ಎಂದರು. 

ಮುಂದುವರೆಯುತ್ತಾ, "ಇನ್ನೊಂದೆಡೆ, ಭಾರತದಲ್ಲಿ ಕೂಡ ಅಲ್ಪಸಂಖ್ಯಾತರ ಮೇಲೆ ಪದೇ ಪದೇ ದಾಳಿ, ಹಲ್ಲೆಗಳು ನಡೆಯುತ್ತಿವೆ. 1992ರ ಡಿಸೆಂಬರ್ 6 ರಂದು, ಸುಪ್ರೀಂಕೋರ್ಟಿನಲ್ಲಿ ಮೊಕದ್ದಮೆ ನಡೆಯುತ್ತಿದ್ದ ವಿವಾದಿತ ಮಸೀದಿಯ ಕಟ್ಟಡವನ್ನು ಕೆಡವಿ, ತನ್ನ ರಾಜಕೀಯ ಲಾಭಕ್ಕಾಗಿ ಇಡೀ ದೇಶದಲ್ಲಿ ಕೋಮುವಾದವನ್ನು ಹರಡುವ ಪಿತೂರಿಯನ್ನು ಬಿಜೆಪಿ, ಸಂಘ ಪರಿವಾರ ಮಾಡಿತು. ಈಗ ಮತ್ತೆ ಇತರ ಮಸೀದಿಗಳಲ್ಲಿ ಇಂತಹ ವಿವಾದವನ್ನು ಹುಟ್ಟು ಹಾಕುತ್ತಿದೆ. ಎನ್‌ಡಿಎ ಮಿತ್ರ ಪಕ್ಷ ಅಧಿಕಾರದಲ್ಲಿರುವ ಮಣಿಪುರದಲ್ಲಿ ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಜನಾಂಗೀಯ ಕಲಹದಲ್ಲಿ ನೂರಾರು ಮಂದಿ ಜೀವ ಕಳೆದುಕೊಂಡಿದ್ದಾರೆ. ಹೀಗೆ ಬಾಂಗ್ಲಾದೇಶ ಮತ್ತು ಭಾರತ ಎರಡೂ ದೇಶಗಳ ಆಳ್ವಿಕರಿಗೂ ಕೂಡ ಜನರನ್ನು ಒಡೆದು ಆಳಲು ಕೋಮುವಾದ, ಜನಾಂಗೀಯವಾದ ಬೇಕಾಗಿದೆ" ಎಂದರು. 

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಸಮಿತಿ ಸದಸ್ಯರಾದ ಡಾ.ಪ್ರಮೋದ್‌.ಎನ್ ಅವರು "ಎರಡೂ ದೇಶಗಳಲ್ಲಿ ಸಾಮಾನ್ಯ ಜನತೆ ಬೆಲೆ ಏರಿಕೆ, ನಿರುದ್ಯೋಗ, ಕೃಷಿ ಬಿಕ್ಕಟ್ಟು ಮುಂತಾದ ಸಮಸ್ಯೆಗಳಿಂದ ಹೈರಾಣಾಗಿದ್ದಾರೆ. ಶೋಷಣೆ ಆಧಾರಿತ ಬಂಡವಾಳಶಾಹಿ ವ್ಯವಸ್ಥೆಯೇ ಇದಕ್ಕೆ ಕಾರಣ. ಇಂತಹ ಸಮಸ್ಯೆಗಳ ವಿರುದ್ಧ ಜನರ ಆಕ್ರೋಶವನ್ನು ದಿಕ್ಕು ತಪ್ಪಿಸಲು ಆಳುವ ಬಂಡವಾಳಶಾಹಿ ಪಕ್ಷಗಳು ಕೋಮು ವಿಷಬೀಜವನ್ನು ಎಲ್ಲ ಧರ್ಮಗಳ ಜನರ ಮನಸ್ಸಿನಲ್ಲಿ ಬಿತ್ತುತ್ತಿವೆ. ದುಡಿಯುವ ಜನತೆ ಈ ಪಿತೂರಿಯನ್ನು ಅರ್ಥ ಮಾಡಿಕೊಂಡು ತಮ್ಮ ಒಗ್ಗಟ್ಟನ್ನು ಕಾಪಾಡಿಕೊಳ್ಳಬೇಕು ಮತ್ತು ಜೀವನದ ನೈಜ ಸಮಸ್ಯೆಗಳ ವಿರುದ್ಧ ಒಗ್ಗಟ್ಟಾಗಿ ಹೋರಾಡಲು ಮುಂದೆ ಬರಬೇಕೆಂದು" ಎಂದು ಕರೆ ನೀಡಿದರು. 

ಈ ಪ್ರತಿಭಟನೆಯಲ್ಲಿ ಎಸ್‌ಯುಸಿಐ ಕಮ್ಯುನಿಸ್ಟ್‌ ಪಕ್ಷದ  ಜಿಲ್ಲಾ ಸಮಿತಿ ಸದಸ್ಯರಾದ ಸೋಮಶೇಖರ ಗೌಡ, ಎ.ಶಾಂತಾ, ಗೋವಿಂದ್, ಮುಖಂಡರಾದ ಹನುಮಪ್ಪ, ಸುರೇಶ್, ಜಗದೀಶ್, ಈಶ್ವರಿ, ರವಿಕಿರಣ್, ಮಂಜುನಾಥ ಮುಂತಾದವರು ಉಪಸ್ಥಿತರಿದ್ದರು.