ಎಸ್ಸೆಸ್ಸೆಲ್ಸಿ ಶೈಕ್ಷಣಿಕ ಬದುಕಿಗೆ ದಾರಿ: ಸುರೇಶ ಅಂಗಡಿ
ಹೂವಿನ ಹಡಗಲಿ 19: ಎಸ್ಸೆಸ್ಸೆಲ್ಸಿ ಶೈಕ್ಷಣಿಕ ಬದುಕಿಗೆ ದಾರಿ ಎಂದು ಮುಖ್ಯ ಗುರುಗಳಾದ ಸುರೇಶ ಅಂಗಡಿ ಹೇಳಿದರು. ಪಟ್ಟಣದ ವಿನಾಯಕ ನಗರದಲ್ಲಿ ಮಂಗಳವಾರ ಬೆಸ್ಟ್ ಕೋಚಿಂಗ್ ಸೆಂಟರ್‌ನ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಕೌಶಲ್ಯಗಳ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಪಠ್ಯಪುಸ್ತಕ: ಎಲ್ಲಾ ವಿಷಯಗಳ ಬಗ್ಗೆ ಪ್ರಶ್ನೆಗಳು ಪಠ್ಯಧಾರಿತ ಆಗಿರುತ್ತವೆ. ಹೆಚ್ಚು ಪಠ್ಯ ಪುಸ್ತಕ ಓದಿದರೆ ಅನುಕೂಲ. ಪಠ್ಯದಲ್ಲಿರುವ ಅಭ್ಯಾಸದ ಪ್ರಶ್ನೆಗಳು ಚಟುವಟಿಕೆಗಳು ತಪ್ಪದೇ ಓದಬೇಕು ಎಂದರು.ಪುನರಾವರ್ತನೆ: ಪ್ರತಿ ವಿಷಯದ ಪರೀಕ್ಷೆಗೆ ಒಂದೆರಡು ದಿನ ಅಭ್ಯಾಸ ಮಾಡಲು ಮಂಡಳಿ ಅವಕಾಶ ಕಲ್ಪಿಸಿದ್ದಾರೆ.ಆ ದಿನಗಳಲ್ಲಿ ಸಮಯ ವ್ಯರ್ಥ ಮಾಡಬೇಡಿ. ನಿರಂತರವಾಗಿ ಪುನರಾವರ್ತನೆ ಮಾಡಿರಿ ಎಂದು ಹೇಳಿದರು.ಶುದ್ಧ ಬರಹ: ಗಣಿತ ವಿಷಯಕ್ಕೆ 36 ಹಾಗೂ ಉಳಿದ ವಿಷಯಗಳಿಗೆ 28 ಪುಟಗಳ ಉತ್ತರ ಬರೆಯಲು ನೀಡುತ್ತಾರೆ.ಪ್ರತಿ ಪುಟದಲ್ಲಿ ಅಕ್ಷರಗಳನ್ನು ಅಂದವಾಗಿ ಶುದ್ಧವಾಗಿ ಬರೆಯಬೇಕು. ಪ್ರತಿ ಉತ್ತರದ ಕೆಳಗೆ ಪೆನ್ಸಿಲ್ ನಿಂದ ಅಡ್ಡಗೆರೆ ಎಳೆದರೆ ಹೆಚ್ಚು ಆಕರ್ಷಕವಾಗಿ ಕಾಣುವುದು ಎಂದರು.ಸಮಾಜ ನಕ್ಷೆ: ಸಮಾಜ ವಿಜ್ಞಾನದ ನಕ್ಷೆಯನ್ನು ಮಂಡಳಿಯಿಂದ ಪ್ರಶ್ನೆ ಪತ್ರಿಕೆ ಜೊತೆಗೆ ನೀಡುವರು. ಭಾಗಗಳನ್ನು ಗುರುತಿಸಿ ಸುಲಭವಾಗಿ 5 ಅಂಕ ಗಳಿಸಬಹುದು ಎಂದರು.ಡಿಸ್ಟಿಂಕ್ಷನ್ : 563 ಕ್ಕೂ ಅಧಿಕ ಅಂಕ ಗಳಿಸಿದರೆ ಡಿಸ್ಟಿಂಕ್ಷನ್ ಬರುವುದು.ಕನ್ನಡ ಸಮಾಜ ವಿಜ್ಞಾನ, ಹಿಂದಿ ವಿಷಯಗಳಲ್ಲಿ ಸಾಧ್ಯವಾದಷ್ಟು ಹೆಚ್ಚು ಅಂಕ ಗಳಿಸಲು ಪ್ರಯತ್ನಿಸಿರಿ. ಉಳಿದ ಗಣಿತ ವಿಜ್ಞಾನ ಇಂಗ್ಲಿಷ್ ವಿಷಯಗಳಿಗೂ ಆದ್ಯತೆ ನೀಡಬೇಕು.600 ಕ್ಕೂ ಅಧಿಕ ಅಂಕ ಗಳಿಸಲು ಸತತ ಅಧ್ಯಯನ ಅಗತ್ಯ ಎಂದು ಹೇಳಿದರು.ಸಾಧಕರು ಸ್ಪೂರ್ತಿ: ಕಳೆದ ವರ್ಷಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿರುವ ಸಾಧಕರ ಪಡೆದ ಅಂಕಗಳಿಗಿಂತ ಹೆಚ್ಚು ಅಂಕ ಗಳಿಸುವ ಮೂಲಕ ಸಾಧಕರಾಗಿ ಹೊರಹೊಮ್ಮಿರಿ.ಅವರ ಓದು ಬರಹ ವಿಧಾನಗಳನ್ನು ಅನುಸರಿಸಿದರೆ ಉತ್ತಮ ಎಂದು ಅಭಿಪ್ರಾಯಪಟ್ಟರು.
ಬಿಸಿಲು ಆರೋಗ್ಯ: ಬಿಸಿಲು ಹೆಚ್ಚಾಗಲಿದೆ. ನೀರು ಅಧಿಕ ಕುಡಿಯಿರಿ. ಆರೋಗ್ಯದ ಕಡೆ ಗಮನವಿರಲಿ. ಹಣ್ಣು ತರಕಾರಿ ಹೆಚ್ಚು ದ್ರವ ರೂಪದ ಆಹಾರ ಸೇವಿಸಿದರೆ ಒಳ್ಳೆಯದು ಎಂದರು.ಬೆಸ್ಟ್ ಕೋಚಿಂಗ್ ಸೆಂಟರ್ ನ ಪ್ರಾಂಶುಪಾಲ ಎಂ ಮುರ್ತುಜಾ ಕೋಚಿಂಗ್ ಸೆಂಟರ್ ಬೆಳೆದು ಬಂದ ಹಾದಿಯ ಕುರಿತು ಮಾಹಿತಿ ಹಂಚಿಕೊಂಡರು.ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಗಳಲ್ಲಿ ಅವಿರತವಾಗಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಧ್ಯೇಯೋದ್ದೇಶ ಹೊಂದಿದ್ದೇವೆ ಎಂದು ತಿಳಿಸಿದರು.
ಕೋಚಿಂಗ್ ಸೆಂಟರ್ ನ ಮಾರ್ಗದರ್ಶಿ ಶಿಕ್ಷಕ ಎಂ ಇಕ್ಬಾಲ್ ಉಪಸ್ಥಿತರಿದ್ದರು.ಇದೇ ವೇಳೆ ಪುನೀತ್ ರಾಜ್ ಕುಮಾರ್ ಅವರ ಜನ್ಮದಿನ ನಿಮಿತ್ತ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಲೇಖನಿ ವಿತರಿಸಲಾಯಿತು.ಸಿಂಚನ ಪ್ರಕಾಶನದ ವತಿಯಿಂದ ಸಮಾಜ ವಿಜ್ಞಾನ ವಿಷಯದ ಉತ್ತರಗಳ ಪ್ರತಿಗಳನ್ನು ಹಂಚಲಾಯಿತು.