ಎಸ್.ಎಸ್.ಎಲ್.ಸಿ ಪರೀಕ್ಷೆ-ವಿದ್ಯಾರ್ಥಿಗಳಿಗೆ ಆತಂಕ ಬೇಡ : ವಿಜಯ ಮಹಾಂತೇಶ ದಾನಮ್ಮನವರ
ಹಾವೇರಿ 19: ಮಾರ್ಚ್ 21 ರಿಂದ ಏಪ್ರಿಲ್ 4ರವರೆಗೆ ಜರುಗುವ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆ ಜರುಗಲಿದ್ದು, ಜಿಲ್ಲೆಯಲ್ಲಿ ಸುಗಮ, ಸರಳ ಹಾಗೂ ಪಾರದರ್ಶಕ ಪರೀಕ್ಷೆ ನಡೆಸಲು ಜಿಲ್ಲಾಡಳಿತದಿಂದ ಸಕ್ಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಯಾವುದೇ ಆಂತಕ ಪಡದೇ ಧೈರ್ಯವಾಗಿ ಪರೀಕ್ಷೆ ಬರೆಯಬೇಕು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಎಸ್.ಎಸ್.ಎಲ್.ಸಿ. ಪರೀಕ್ಷೆ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರದ ಕಾಲಘಟ್ಟವಾಗಿದ್ದರಿಂದ, ಪಾಲಕರ, ಶಿಕ್ಷಕರ ನೀರೀಕ್ಷೆ ಹುಸಿ ಆಗದಂತೆ ಉತ್ತಮ ಫಲಿತಾಂಶ ತರಲು ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಹಾಗೂ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದು ತಿಳಿಸಿದರು.
ಶೇ.80 ಫಲಿತಾಂಶದ ಗುರಿ: ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ ಪೈಕಿ ಹಾವೇರಿ ಜಿಲ್ಲೆ 10ನೇ ಸ್ಥಾನದೊಳಗೆ ಬರಬೇಕು ಹಾಗೂ ಶೇ.80ರ ಫಲಿತಾಂಶದ ಗುರಿ ಹಾಕಿಕೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಮೊದಲೇ ನಿರ್ಣಯಿಸಿದಂತೆ ಡಿಸೆಂಬರ್ 31ರೊಳಗೆ ಎಲ್ಲ ವಿಷಯಗಳ ಪಾಠಗಳನ್ನು ಮಾಡಿಮುಗಿಸಲಾಗಿದೆ. ವಿದ್ಯಾರ್ಥಿಗಳಿಗೆ ರಜೆ ದಿನಗಳಲ್ಲಿ, ಬೆಳಿಗ್ಗೆ ಹಾಗೂ ಸಾಯಂಕಾಲ ವಿಶೇಷ ತರಗತಿಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳ ವರ್ಗೀಕರಣ: ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕ್ಲಸ್ಟರ್ ಹಂತದಲ್ಲಿ ನಿಧಾನ, ಸಾಧಾರಣ ಹಾಗೂ ಪ್ರತಿಭಾವಂತ ಮಕ್ಕಳನ್ನು ವರ್ಗೀಕರಿಸಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಒತ್ತು ನೀಡಿ ಪಾಠಮಾಡಲಾಗಿದೆ. ಜೊತೆಗೆ ಮಕ್ಕಳ ಗುಂಪು ಚರ್ಚೆಗೆ ಅವಕಾಶ ಕಲ್ಪಿಸಲಾಗಿತ್ತು. ದಾನಿಗಳ ಸಹಾಯ ಪಡೆದು “ಆಸರೆ’ ಎಂಬ ಪುಸ್ತಕ ಹೊರತರಲಾಗಿದೆ. ಕಲಿಕೆಯಲ್ಲಿ ನಿಧಾನವಾಗಿರುವ ಮಕ್ಕಳ ಮೇಲೆ ನಿಗಾವಹಿಸಲು ಶಿಕ್ಷಕರ ತಂಡ ರಚಿಸಲಾಗಿದೆ, ಪ್ರತಿ ಶನಿವಾರ ರಸಪ್ರಶ್ನೆ ಆಯೋಜನೆ ಮೂಲಕ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಕ್ರಮವಹಿಸಲಾಗಿದೆ ಎಂದರು. ಅಧಿಕಾರಿಗಳ ನಿಯೋಜನೆ: ಕಳೆದ ಸಾಲಿನಲ್ಲಿ ಶೇ.40ಕ್ಕಿಂತ ಕಡಿಮೆ ಫಲಿತಾಂಶ ಬಂದ ಶಾಲೆಗಳ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ, ಅಂತಹ ಶಾಲೆಗಳಿಗೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ನಾನು ನಗರದ ಸರ್ಕಾರಿ ಪ್ರೌಢಶಾಲೆ ನಂ.2ಕ್ಕೆ ಭೇಟಿ ನೀಡಿದ್ದೇನೆ. ಪ್ರತಿ ಶಿಕ್ಷಕರಿಗೆ 4 ಮಕ್ಕಳನ್ನು ದತ್ತು ನೀಡಲಾಗಿದೆ. ಜಿ.ಪಂ.ಮುಖ್ಯನಿರ್ವಾಹಣಾಧಿಕಾರಿಗಳು ಸಹ ಒಂದು ಶಾಲೆ ದತ್ತು ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು. ವಿಶೇಷ ತಜ್ಞರೊಂದಿಗೆ ಸಂವಾದ: ವಿದ್ಯಾರ್ಥಿಗಳಿಗೆ ಪರೀಕ್ಷೆ ಭಯ ಹೋಗಲಾಡಿಸಲು ಹಾಗೂ ಆತ್ಮಸ್ಥೈರ್ಯ ತುಂಬಲು ಗುರುರಾಜ ಪಾಟೀಲ ಹಾಗೂ ಆನಂದ ಪಾಂಡುರಂಗಿ ಅವರಂತಹ ವಿಶೇಷ ತಜ್ಞರೊಂದಿಗೆ ವಿದ್ಯಾರ್ಥಿಗಳ ಸಂವಾದ ಆಯೋಜಿಸುವ ಮೂಲಕ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಕೆಲಸಮಾಡಲಾಗಿದೆ ಎಂದರು. ಫಲಿತಾಂಶದಲ್ಲಿ ಸುಧಾರಣೆ: ವಿದ್ಯಾರ್ಥಿಗಳಿಗೆ ನಡೆಸಲಾದ ಮೊದಲ ಕಿರು ಪರೀಕ್ಷೆಯಲ್ಲಿ ಶೇ.62, ಎರಡನೇ ಕಿರು ಪರೀಕ್ಷೆಯಲ್ಲಿ ಶೇ.72, ಪ್ರಥಮ ಸಂಕಲನ ಪರೀಕ್ಷೆಯಲ್ಲಿ ಶೇ.69 ಹಾಗೂ ರಾಜ್ಯದಾದ್ಯಂತ ನಡೆಯುವ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಶೇ.76 ರಷ್ಟು ಫಲಿತಾಂಶ ಬಂದಿದೆ. ಒಟ್ಟಾರೆ ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಾಗಿರುವುದು ಕಂಡುಬಂದಿದೆ ಎಂದು ತಿಳಿಸಿದರು. ಗ್ರೇಸ್ ಅಂಕ ಇಲ್ಲ: ಕಳೆದ ಸಾಲಿನ ಪರೀಕ್ಷೆಯಲ್ಲಿ ಗ್ರೆಸ್ ಅಂಕದಲ್ಲಿ ಉಂಟಾದ ಗೊಂದಲ ಹಿನ್ನಲೆಯಲ್ಲಿ ಯಾವುದೇ ಕಾರಣಕ್ಕೂ ಈ ಪರೀಕ್ಷೆಯಲ್ಲಿ ಗ್ರೇಸ್ ಅಂಕ ನೀಡಲಾಗುವುದಿಲ್ಲ ಎಂದು ಮಾನ್ಯ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಹಾಗಾಗಿ ನೂರಕ್ಕೆ ನೂರರಷ್ಟು ಪಾರದರ್ಶಕ ಪರೀಕ್ಷೆ ನಡೆಸಲಾಗುತ್ತಿದೆ ಎಂದರು.
24,736 ವಿದ್ಯಾರ್ಥಿಗಳು: ಜಿಲ್ಲೆಯಲ್ಲಿ 12,585 ಗಂಡು ಹಾಗೂ 12,151 ಹೆಣ್ಣು ಮಕ್ಕಳು ಸೇರಿ ಒಟ್ಟು 24,736 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ರೆಗ್ಯೂಲರ್ ವಿದ್ಯಾರ್ಥಿಗಳು 23,594 ಹಾಗೂ ಖಾಸಗಿ 287 ಮತ್ತು 757 ಪುನಾವರ್ತಿತ ಹಾಗೂ 98 ಖಾಸಗಿ ಪುನಾವರ್ತಿತ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.
1089 ಪರೀಕ್ಷಾ ಕೊಠಡಿ: ಜಿಲ್ಲೆಯಲ್ಲಿ 200 ಸರ್ಕಾರಿ, 157 ಅನುದಾನಿತ ಹಾಗೂ 102 ಅನುದಾನ ರಹಿತ ಸೇರಿ 459 ಪ್ರೌಢಶಾಲೆಗಳಿದ್ದು, ಈ ಪೈಕಿ 32 ಸರ್ಕಾರಿ, 36 ಅನುದಾನಿತ ಹಾಗೂ 12 ಅನುದಾನ ರಹಿತ ಸೇರಿ 80 ಶಾಲೆಗಳಲ್ಲಿ 1089 ಪರೀಕ್ಷಾ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಗಾಳಿ, ಬೆಳಕು, ಡೆಸ್ಕ್, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಎಲ್ಲ ಮೂಲ ಭೂತ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.
1869 ಅಧಿಕಾರಿ-ಸಿಬ್ಬಂದಿಗಳ ನೇಮಕ: ಸುಗಮ ಪರೀಕ್ಷೆ ನಡೆಸಲು ಮುಖ್ಯ ಅಧೀಕ್ಷಕರು-80, ಉಪ ಮುಖ್ಯ ಅಧೀಕ್ಷಕರು-14, ಕಸ್ಟೋಡಿಯನ್-80, ಸ್ಥಾನಿಕ ಜಾಗೃತ ದಳ-80, ಮಾರ್ಗಾಧಿಕಾರಿಗಳು-32, ಕೊಠಡಿ ಮೇಲ್ವಿಚಾರಕರು-1089, ಮೋಬೈಲ್ ಸ್ವಾಧಿನಾಧಿಕಾರಿಗಳು-80, ಕಚೇರಿ ಸಹಾಯಕರು-80, ಸಿಸಿ ಟಿಸಿ ತಾಂತ್ರಿಕರು -80, ಸಿಸಿಟಿವಿ ವೆಬ್ ಕಾಸ್ಟಿಂಗ್ ತಂಡ 14 ಹಾಗೂ ಡಿ ಗ್ರೂಪ್240 ಸೇರಿದಂತೆ ಒಟ್ಟು 1869 ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು. ವೆಬ್‌ಕಾಸ್ಟಿಂಗ್: ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಸಿಸಿ ಟಿವಿ ಅಳವಡಿಸಲಾಗಿದೆ. ವೆಬ್‌ಕಾಸ್ಟಿಂಗ್ ವೀಕ್ಷಣೆ ಮಾಡಲು ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ವ್ಯವಸ್ಥೆ ಮಾಡಲಾಗಿದೆ, 17 ಜನ ವೆಬ್ ಕಾಸ್ಟಿಂಗ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
200 ಮೀಟರ್ ಪ್ರದೇಶ ನಿಷೇಧ: ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್‌ವರೆಗೆ ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ. ನಿಷೇಧಿತ ವಲಯದಲ್ಲಿ ಝರಾಕ್ಸ್ ಹಾಗೂ ಸೈಬರ್ ಕೆಫೆಗಳನ್ನು ಮುಚ್ಚಿಸಲು ಆದೇಶಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಫೋನ್ ನಿಷೇಧಿಸಲಾಗಿದೆ ಎಂದು ತಿಳಿಸಿದರು. ವೈದ್ಯಕೀಯ ಸೌಲಭ್ಯ: ಬೇಸಿಗೆ ಸಮಯವಾಗಿರುವುದರಿಂದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಸಿಬ್ಬಂದಿ ಯೋಜನೆಗೆ ಕ್ರಮವಾಗಿಸಲಾಗಿದೆ. ಅಗತ್ಯ ಓಷಧೋಪಚಾರ ಹಾಗೂ ಅಂಬ್ಯುಲನ್ಸ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಾಲ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆ ಅತ್ಯಂತ ಅಚ್ಚುಕಟ್ಟಾಗಿ ಹಾಗೂ ವ್ಯವಸ್ಥಿತವಾಗಿ ನಡೆಸಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲ್ಲ ತಾಲೂಕು ಖಜಾನೆಯಿಂದ ಪ್ರಶ್ನೆ ಪತ್ರಿಕೆಗಳು ಪೊಲೀಸ್ ಬಂದೋಬಸ್ತ್‌ನಲ್ಲಿ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು ಕ್ರಮವಹಿಸಲಾಗಿದೆ. ಪರೀಕ್ಷಾ ಗೌಪ್ಯತೆ ಕಾಪಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಮಾಧ್ಯಮಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ್ ಎಲ್ ಹಾಗೂ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ ಉಪಸ್ಥಿತರಿದ್ದರು.