ಬೆಂಗಳೂರು, ಮೇ 18,ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದೆರಡು ತಿಂಗಳಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಕುರಿತು ವಿದ್ಯಾರ್ಥಿಗಳು, ಪೋಷಕರ ಮನದ ಗೊಂದಲಗಳಿಗೆ ಕೊನೆಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅಂತ್ಯ ಹಾಡಿದ್ದಾರೆ.ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಜೂನ್ 25ರಿಂದ ಜುಲೈ 4ರ ವರೆಗೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಸುರೇಶ್ ಕುಮಾರ್ ಪ್ರಕಟಿಸಿದ್ದಾರೆ. ವಿಧಾನಸೌಧದಲ್ಲಿ ಸೋಮವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 2,879 ಪರೀಕ್ಷಾ ಕೇಂದ್ರಗಳ 43,720 ಕೊಠಡಿಗಳಲ್ಲಿ 8.48.196 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪ್ರತಿ ಕೊಠಡಿಯಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಆಸನದ ವ್ಯವಸ್ಥೆ ಮಾಡಲಾಗುವುದು ಎಂದರು.ಈ ಹಿಂದೆ ಮಾರ್ಚ್ 27 - ಏ.9 ವರೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ನಿಗದಿಯಾಗಿತ್ತು. ಲಾಕ್‌ಡೌನ್ ಹಿನ್ನೆಲೆ ಪರೀಕ್ಷೆ ಮಾಡಲು ಸಾಧ್ಯವಾಗಿಲ್ಲ. ಪಿಯುಸಿಯ ಮಾ.23ಕ್ಕೆ ನಿಗದಿಯಾಗಿದ್ದ ಇಂಗ್ಲೀಷ್ ಪರೀಕ್ಷೆ ಕೂಡ ನಡೆಸಲಾಗಲಿಲ್ಲ. ಈ ಸಂಬಂಧ ಅನೇಕ ಶಿಕ್ಷಣ ತಜ್ಞರು ಹಾಗೂ ಹಿರಿಯರ ಜೊತೆ ಚರ್ಚೆ ನಡೆಸಿ, ವಿಧಾನಪರಿಷತ್ ಸದಸ್ಯರ ಜೊತೆಗೆ ಸಮಾಲೋಚನೆ ನಡೆಸಿ, ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಪಿಯುಸಿ ಇಂಗ್ಲಿಷ್ ಪತ್ರಿಕೆ ಮತ್ತು ಎಸ್ ಎಸ್‌ಎಲ್‌ಸಿ ಪರೀಕ್ಷೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನವರು ಪ್ರತಿ ವಿದ್ಯಾರ್ಥಿಗೆ ತಲಾ ಒಂದು, ರಾಮಕೃಷ್ಣ ಮಿಶನ್ ಒಟ್ಟು 2 ಲಕ್ಷ ಮುಖಗವಸು ವಿತರಿಸಲಿದೆ. ಪ್ರತಿ ವಿದ್ಯಾರ್ಥಿಗೆ ಎರಡು ಮಾಸ್ಕ್ ವಿತರಿಸಲಾಗುವುದು. ಎಂಬೆಸಿ ಗ್ರೂಪ್ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಸ್ಯಾನಿಟೈಸರ್ ಒದಗಿಸಲಿದೆ. ಥರ್ಮಲ್ ಸ್ಕಾನರ್ ಮೂಲಕ ವಿದ್ಯಾರ್ಥಿಗಳ ತಪಾಸಣೆ ಮಾಡಲಾಗುತ್ತದೆ. ಜ್ವರದ ಲಕ್ಷಣ ಇರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಚಂದನ ವಾಹಿನಿ ಮೂಲಕ ನಡೆಸಲಾಗುತ್ತಿರುವ ಪುನರ್ ಮನನ ಕಾರ್ಯಕ್ರಮ ಈ ತಿಂಗಳ ಅಂತ್ಯದವರೆಗೆ ಮುಂದುವರೆಯಲಿದೆ ಎಂದರುಜೂ.18ರಂದು ದ್ವಿತೀಯ ಪಿಯುಸಿ ಪರೀಕ್ಷೆ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಜೂನ್ 18 ರಂದು ನಡೆಸಲಾಗುವುದು ಎಂದು ಮಾಹಿತಿ ನೀಡಿದರು.