ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ಮಕ್ಕಳ ಸುರಕ್ಷತೆ, ಆತ್ಮವಿಶ್ವಾಸಕ್ಕೆ ಆದ್ಯತೆ: ಸುರೇಶ್‌ಕುಮಾರ್

ತುಮಕೂರು, ಮೇ 31,ಕೊರೊನಾ ಸಂಕಷ್ಟದ ನಡುವೆಯು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ಮಕ್ಕಳ ಸುರಕ್ಷತೆ ಮತ್ತು ಆತ್ಮವಿಶ್ವಾಸಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ತಿಳಿಸಿದ್ದಾರೆ.ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪೂರ್ವ ಸಿದ್ಧತೆ ಕುರಿತಂತೆ ಡಿಡಿಪಿಐ ಮತ್ತು ಬಿಇಓಗಳೊಂದಿಗೆ ಪ್ರಗತಿ ಪರೀಶೀಲನಾ ಸಭೆ ನಡೆಸಿ ಅನಂತರ ಸುದ್ದಿಗೋಷ್ಠಿಯಲ್ಲಿ  ಅವರು ಮಾತನಾಡಿದರು.

ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಕುಡಿಯಲು ಮನೆಯಿಂದಲೇ ಬಿಸಿ ನೀರನ್ನು ತರುವಂತೆ ಸೂಚಿಸಬೇಕು. ಜೊತೆಗೆ ಪರೀಕ್ಷಾ ಕೇಂದ್ರಗಳಲ್ಲಿ ವ್ಯವಸ್ಥಿತವಾಗಿ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದರಲ್ಲದೇ ಕೇಂದ್ರಗಳಲ್ಲಿ ಶೌಚಾಲಯದ ಸ್ವಚ್ಛತೆಯ ಬಗ್ಗೆ ಗಮನಹರಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳ ಮನಸ್ಥಿತಿ ಕೆಡದಂತೆ ಎಚ್ಚರವಹಿಸಬೇಕು ಎಂದರು.

ಪರೀಕ್ಷಾ ಕೇಂದ್ರದಿಂದ ಮನೆ ದೂರವಿದ್ದು, ಯಾವುದೇ ಸಂಚಾರ ವ್ಯವಸ್ಥೆ ಇಲ್ಲದಿದ್ದರೆ, ಅಂತಹ ವಿದ್ಯಾರ್ಥಿಗಳ ವಿವರ ಪಡೆದು ಶಾಲೆಯ ಮುಖ್ಯೋಪಾದ್ಯಾಯರು ರೂಟ್ ಮ್ಯಾಪ್ ಸಿದ್ಧಪಡಿಸಬೇಕು.  ಅವರ ಬಳಿ ಇರುವ ಪ್ರವೇಶ ಪತ್ರವನ್ನು ಉಚಿತ ಬಸ್‌ಪಾಸ್‌ಗಳ ಪರಿಗಣಿಸಲು ನಿರ್ಧರಿಸಲಾಗಿದೆ ಹಾಗೂ ಖಾಸಗಿ ಶಾಲೆಯ ಬಸ್ಸುಗಳನ್ನು ಬಳಸಿಕೊಂಡು ಸುರಕ್ಷಿತವಾಗಿ ಪರೀಕ್ಷಾ ಕೇಂದ್ರಕ್ಕೆ ಮಕ್ಕಳನ್ನು ಕರೆತರಬೇಕು ಎಂದು ಸೂಚಿಸಲಾಗಿದೆ. ಮಕ್ಕಳ ಜೊತೆ ಬರುವ ಪೋಷಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಪರೀಕ್ಷಾ ಕೇಂದ್ರದ ಸುತ್ತಮುತ್ತ 500 ಮೀಟರ್ ವ್ಯಾಪ್ತಿ 144 ಸೆಕ್ಷನ್ ಜಾರಿಯಲ್ಲಿರುತ್ತದೆ ಎಂದರು. 

ಸ್ಕೌಟ್ಸ್ ಅಂಡ್ ಗೈಡ್ಸ್ ಮಕ್ಕಳು ತಯಾರಿಸಿರುವ  8.50 ಲಕ್ಷ ಮಾಸ್ಕ್‌ಗಳನ್ನು ಪರೀಕ್ಷೆಗೆ ಬರೆಯುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಪರೀಕ್ಷಾ ಕೇಂದ್ರಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್‌ ವ್ಯವಸ್ಥೆ ಮಾಡಲಾಗುವುದು. ಅನಾರೋಗ್ಯದ ಸೂಚನೆ ಕಂಡು ಬರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು. ಕೊಠಡಿ ಮೇಲ್ವಿಚಾರಕರು ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಜರ್ ಬಳಸಬೇಕು ಎಂದು ಅವರು ತಿಳಿಸಿದರು.

ಚಂದನ ವಾಹಿನಿಯಲ್ಲಿ ಈಗಾಗಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ವಿದ್ಯಾರ್ಥಿಗಳಿಗೆ ಪುನರ್‌ಮನನ ಪಾಠಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ತಿಳಿಸಿದ ಸಚಿವರು, ಶಿಕ್ಷಣ ಇಲಾಖೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಸಿದ್ಧವಾಗಿ ನಿಂತಿದೆ. ಮುಂದೆ ಅನೇಕ ವರ್ಷಗಳು  ನೆನಪಿನಲ್ಲಿಟ್ಟುಕೊಳ್ಳುವಂತೆ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಬೇಕು. ತಾಲೂಕುಗಳಲ್ಲಿ ಪರೀಕ್ಷೆಗೆ ಯಾವುದೇ ತೊಂದರೆಯಾಗದಂತೆ ಆಯಾ ತಾಲೂಕು ಬಿಇಓಗಳು ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿ ಆರೋಗ್ಯಕರವಾಗಿ, ಮಕ್ಕಳು ಲವಲವಿಕೆಯಿಂದ ಪರೀಕ್ಷೆ ಬರೆಯುವಂತಾಗಬೇಕು ಎಂದು ಅವರು ತಿಳಿಸಿದರು.

ಮುಂದಿನ ವರ್ಷಗಳಲ್ಲಿ ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸುವುದು ನಮ್ಮ ಜವಾಬ್ದಾರಿಯಾಗಿದೆ. ಯಾಕೆಂದರೆ ಕೂಲಿಕನು ಸಹ ತನ್ನ ಮಗುವನ್ನು ಖಾಸಗಿ ಶಾಲೆಗೆ ಸೇರಿಸುತ್ತಿದ್ದೇನೆ, ಇದಕ್ಕಾಗಿ ಅವನು ತನ್ನ ದುಡಿಮೆಯ ಶೇ.೪೦ರಷ್ಟು ಹಣವನ್ನು ಮಗುವಿನ ಶಿಕ್ಷಣಕ್ಕೆ ನೀಡುತ್ತಿದ್ದಾನೆ.  ಸರ್ಕಾರಿ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಿದಾಗ  ಅಂತಹ ಕುಟುಂಬಗಳ ಆದಾಯ ಉಳಿಯುತ್ತೇ ಇದರಿಂದ ಆರೋಗ್ಯವಾಗಿ ಬದುಕನ್ನು ನಡೆಸಬಹುದಾಗಿದೆ ಎಂದು ಅವರು ತಿಳಿಸಿದರು. 

ಜಿಲ್ಲೆಯಲ್ಲಿ ಕಂಟೈನ್‌ಮೆಂಟ್ ಜೋನ್‌ನಲ್ಲಿ ಯಾವುದೇ ಪರೀಕ್ಷಾ ಕೇಂದ್ರವು ಇರುವುದಿಲ್ಲ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರವನ್ನು ಪಾಲಿಸುವಲ್ಲಿ ಪರೀಕ್ಷಾ ಕೊಠಡಿಯಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.  ಸಾಮಾಜಿಕ ಅಂತರದೊಂದಿಗೆ ಪ್ರತಿ ಕೊಠಡಿಗೆ 18 ರಿಂದ 20 ವಿದ್ಯಾರ್ಥಿಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಪ್ರತಿ ಕೇಂದ್ರದಲ್ಲೂ ಎರಡು ಮೀಸಲು ಕೊಠಡಿಗಳನ್ನು ಇರಿಸಲಾಗಿದೆ. ಕೊಠಡಿಗಳು ಕೊರತೆ ಬಂದಲ್ಲಿ, ಆ ಆವರಣದಲ್ಲಿರುವ ಪ್ರಾಥಮಿಕ ಶಾಲಾ ಕಟ್ಟಡಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದರು.

ವಲಸೆ ಕಾರ್ಮಿಕರ ಮಕ್ಕಳು ಪರೀಕ್ಷೆಯಿಂದ ತಪ್ಪಿಸಿಕೊಂಡರೆ ಜುಲೈನಲ್ಲಿ ಪರೀಕ್ಷೆ ನಡೆಸಲಾಗುವುದು. ಅಂತಹವರನ್ನು ಫ್ರೆರ್ಸ್‌ ವಿದ್ಯಾರ್ಥಿಗಳು ಎಂದು ಪರಿಗಣಿಸಲಾಗುವುದು. ಪಠ್ಯಪುಸ್ತಕವನ್ನು ಶಾಲೆ ಆರಂಭಿಸಿದ ಮೊದಲ ವಾರದಲ್ಲಿ ವಿತರಿಸಲಾಗುವುದು ಎಂದು ಅವರು ತಿಳಿಸಿದರು.

 ಪರೀಕ್ಷಾ ಕೇಂದ್ರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಪ್ರವೇಶದಲ್ಲಿ ಬಾಕ್ಸ್‌ಗಳನ್ನು ಬರೆಯಲಾಗುವುದು. ಒಂದು ಡೆಸ್ಕ್‌ ಇಬ್ಬರು ವಿದ್ಯಾರ್ಥಿಗಳನ್ನು ಮಾತ್ರ ಹಾಕಲಾಗುವುದು. ಒಂದು ಡೆಸ್ಕ್‌ನಿಂದ ಮತ್ತೊಂದು ಡೆಸ್ಕ್‌ ಅಂತರ 1 ಮೀಟರ್ ಕಾಯ್ದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಎಸ್.ಎಸ್.ಎಲ್.ಸಿ ಪರೀಕ್ಷೆ ಹಿನ್ನಲೆಯಲ್ಲಿ ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡುತ್ತಿದ್ದೇನೆ ಏಕೆಂದರೆ ಒಂದು ವಿಶೇಷ ಸಂದರ್ಭದಲ್ಲಿ ಹಾಗೂ ವಾತಾವರಣದಲ್ಲಿ ಪರೀಕೆ ನಡೆಯುತ್ತಿದೆ. ನಮ್ಮ ರಾಜ್ಯದಲ್ಲಿ ಸುಮಾರು 8,48,200 ಮಕ್ಕಳು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆ ನಡೆಸುವ  ಬಗ್ಗೆ ಸಾಕಷ್ಟು ಜನ ಶಿಕ್ಷಣ ಸಮಾಲೋಚಕರ ಜೊತೆ ಚರ್ಚೆ ಮಾಡಿ ಹಾಗೂ ಕೋರ್ಟ್ ಹಸಿರು ನಿಶಾನೆ ತೋರಿದ  ನಂತರ ನಾವು ಪರೀಕ್ಷೆ ನಡೆಸಲು ನಿರ್ಧಾರ ತೆಗೆದುಕೊಂಡೆವು ಎಂದು ಅವರು ಹೇಳಿದರು ರಾಷ್ಟçಕ್ಕೆ ಹೋಲಿಸಿದರೆ ನಮ್ಮ ರಾಜ್ಯ ಕೋರೊನಾ ನಿಯಂತ್ರಣದಲ್ಲಿ ಮುಂಚೂಣಿಯಲ್ಲಿದೆ. ಪ್ರತಿದಿನ ಸೋಂಕಿತರು, ಸಾಯುವವರು, ಸಂಖ್ಯೆ ಕಡಿಮೆಯಿದೆ.  ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ ಎಂದರು.ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಆಯಾ ಜಿಲ್ಲೆಯಲ್ಲಿ ನಡೆಸುವ ಬಗ್ಗೆ ಎರಡ್ಮೂರು ದಿನದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸಭೆಯಲ್ಲಿ ಶಾಸಕ ಜಿ.ಬಿ ಜ್ಯೋತಿಗಣೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್, ಉಪಕಾರ್ಯದರ್ಶಿ ಕೃಷ್ಣಮೂರ್ತಿ, ಡಯಟ್‌ನ ಪ್ರಾಂಶುಪಾಲ ಮಂಜುನಾಥ್, ಡಿಡಿಪಿಐಗಳಾದ ಎಂ.ಆರ್ ಕಾಮಾಕ್ಷಿ, ರೇವಣ ಸಿದ್ಧಪ್ಪ ಸೇರಿದಂತೆ ತಾಲೂಕು ಬಿ.ಇ.ಒಗಳು ಉಪಸ್ಥಿತರಿದ್ದರು.