ಕಂಬಳ ವೀರ ಶ್ರೀನಿವಾಸಗೌಡ ಭಾರತದ ಉಸೇನ್ ಬೋಲ್ಟ್: ಕೇಂದ್ರ ಕ್ರೀಡಾ ಸಚಿವರಿಂದ ಶ್ಲಾಘನೆ

ನವದೆಹಲಿ, ಫೆ 15:   ಕಂಬಳ ಕ್ರೀಡೆಯಲ್ಲಿ 100 ಮೀ. ಅನ್ನು ಕೇವಲ 9.55 ಸೆಕಂಡ್ನಲ್ಲಿ ಓಡುವ ಮೂಲಕ ಭಾರಿ ಸದ್ದು ಮಾಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ 28 ವರ್ಷದ ಶ್ರೀನಿವಾಸಗೌಡ ಅವರ ಸುದ್ದಿ ರಾಜಧಾನಿಯವರೆಗೂ ಹಬ್ಬಿದೆ. ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಶ್ರೀನಿವಾಸಗೌಡ ಅವರನ್ನು ಭಾರತದ ಉಸೇನ್ ಬೌಲ್ಟ್ ಎಂದು ಬಣ್ಣಿಸಿದ್ದಾರೆ.ಫೆಬ್ರುವರಿ 1ರಂದು ಮಂಗಳೂರು ಸಮೀಪದ ಐಕಳ ಎಂಬಲ್ಲಿ ನಡೆದ ಕಂಬಳ ಗದ್ದೆ ಓಟ ಕ್ರೀಡೆಯಲ್ಲಿ ಪಾಲ್ಗೊಂಡಿದ್ದ ಶ್ರೀನಿವಾಸಗೌಡ ಅವರು 142.50 ಮೀಟರ್ ಉದ್ದದ ಕಂಬಳದ ಗದ್ದೆಯಲ್ಲಿ ಕೇವಲ 13.62 ಸೆಕೆಂಡುಗಳಲ್ಲಿ ಕೋಣಗಳನ್ನು ಓಡಿಸಿಕೊಂಡು ಗುರಿ ತಲುಪಿದ್ದರು. ಇದನ್ನು 100 ಮೀಟರ್ ಇಳಿಸಿದರೆ 9.55  ಸೆಕೆಂಡುಗಳು. ಅಂದರೆ ಉಸೇನ್ ಬೋಲ್ಟ್ ನಿರ್ಮಿಸಿದ ದಾಖಲೆಗಿಂತ 0.3 ಸೆಕೆಂಡ್ ಕಡಿಮೆ ಅವಧಿಯಲ್ಲೇ ತಲುಪಿದ್ದರು. ಜಮೈಕಾದ ಉಸೇನ್ ಬೋಲ್ಟ್ 100 ಮೀ. ಅನ್ನು 2009ರಲ್ಲಿ 9.58 ಸೆಕೆಂಡುಗಳಲ್ಲಿ ಕ್ರಮಿಸಿ ವಿಶ್ವ ದಾಖಲೆ ಮಾಡಿದ್ದರು. ಇದುವರೆಗೂ ಈ ದಾಖಲೆಯನ್ನು ಯಾರೂ ಮುರಿದಿರಲಿಲ್ಲ. ಆದರೆ ಒಂದರ್ಥದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಮೀಯಾರಿನ ಯುವಕ ಶ್ರೀನಿವಾಸಗೌಡ ಬೋಲ್ಟ್ ಸಾಧನೆಯನ್ನು ಮುರಿದಿದ್ದಾರೆ!  ಬೋಲ್ಟ್ ಒಲಿಂಪಿಕ್ನ ಟ್ರ್ಯಾಕ್ ಮೇಲೆ ದಾಖಲೆ ಬರೆದಿದ್ದರೆ, ಶ್ರೀನಿವಾಸಗೌಡ ಕಂಬಳದ ಗದ್ದೆಯಲ್ಲಿ ನೂತನ ದಾಖಲೆ ನಿರ್ಮಿಸಿದ್ದಾರೆ. ಕಂಬಳದ ಕೋಣಗಳನ್ನು ಓಡಿಸುವವನ ಓಟದ ವೇಗಕ್ಕೆ ಆ ಕೋಣಗಳು ಓಡುವ ರಭಸವೂ ಸೇರಿ ಮತ್ತಷ್ಟು ವೇಗವಾಗಿ ಪರಿವರ್ತನೆಗೊಂಡಿರುತ್ತದೆ. ಹಾಗಾಗಿ ಶ್ರೀನಿವಾಸಗೌಡರಿಂದ 9.55 ಸೆಕೆಂಡ್ನಲ್ಲಿ 100 ಮೀಟರ್ ಓಡಲು ಸಾಧ್ಯವಾಯಿತು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಈ ಬಗ್ಗೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಪ್ರತಿಕ್ರಿಯಿಸಿ, " ಶ್ರೀನಿವಾಸ ಗೌಡ ಅವರಿಗೆ ಭಾರತೀಯ ಕ್ರೀಡಾ ಪ್ರಾಧಿಕಾರದ ತರಬೇತುದಾರರಿಂದ ತರಬೇತಿ ಕೊಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಜತೆಗೆ, ಒಲಿಂಪಿಕ್ಸ್ನ ಮಾನದಂಡಗಳ ಬಗ್ಗೆ ಜನಸಾಮಾನ್ಯರಲ್ಲಿ ಜ್ಞಾನದ ಕೊರತೆಯಿದೆ. ವಿಶೇಷವಾಗಿ ಅಥ್ಲೆಟಿಕ್ಸ್ನಲ್ಲಿ ಮಾನವನ ಸಾಮರ್ಥ್ಯ ಮತ್ತು ಶಕ್ತಿಯ ಅಂತಿಮಘಟ್ಟವನ್ನು ಮೀರಿಸಲಾಗುತ್ತದೆ. ಭಾರತದಲ್ಲಿ ಯಾವುದೇ ಪ್ರತಿಭೆಗಳನ್ನು ಪರೀಕ್ಷಿಸದೆ ಬಿಡುವುದಿಲ್ಲ ಎಂಬುದನ್ನು ನಾನು ಖಾತರಿಪಡಿಸುತ್ತೇನೆ," ಎಂದು ಅವರು ಹೇಳಿದ್ದಾರೆ."ಕರ್ನಾಟಕದ ಶ್ರೀನಿವಾಸಗೌಡ ಕಂಬಳ ಕ್ರೀಡೆಯಲ್ಲಿ ಕೋಣಗಳೊಂದಿಗೆ 100ಮೀ. ಅಂತರವನ್ನು ಕೇವಲ 9.55 ಸೆಕೆಂಡುಗಳಲ್ಲಿ ಕ್ರಮಿಸಿದ್ದಾರೆ. ಆ ಮೂಲಕ ಉಸೇನ್ ಬೋಲ್ಟ್ ಅವರ 9.58 ದಾಖಲೆಯನ್ನು ಮೀರಿಸಿದ್ದಾರೆ. ಹಾಗಾಗಿ, ಶ್ರೀನಿವಾಸಗೌಡ್ ಭಾರತದ ಉಸೇನ್ ಬೋಲ್ಟ್,'' ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಮತ್ತೊಂದು ಟ್ವೀಟ್ನಲ್ಲಿ ಕೊಂಡಾಡಿದ್ದಾರೆ.ಇದಕ್ಕೂ ಮುನ್ನ ಕಾಂಗ್ರೆಸ್ ಸಂಸದ ಶಶಿ ತರೂರ್," ಉಸೇನ್ ಬೋಲ್ಟ್ಗಿಂತಲೂ ವೇಗ? ಕರ್ನಾಟಕದ ಯುವಕ ಕೋಣಗಳ ಜತೆ 100 ಮೀ. ಪೂರ್ಣಗೊಳಿಸಲು  9.55 ಸೆಕೆಂಡುಗಳನ್ನು ತೆಗೆದುಕೊಂಡಿದ್ದಾರೆ. ಪ್ರತಿಭಾವಂತ ಶ್ರೀನಿವಾಸಗೌಡ ಅವರಗೆ ಸೂಕ್ತ ತರಬೇತಿ ನೀಡಿ ಒಲಿಂಪಿಕ್ಸ್ ಚಾಂಪಿಯನ್ ಮಾಡುವಂತೆ ಭಾರತ ಅಥ್ಲೆಟಿಕ್ಸ್ ಒಕ್ಕೂಟವನ್ನು ಒತ್ತಾಯಿಸುತ್ತೇನೆ. ನಮ್ಮಲ್ಲಿ ಇನ್ನೂ ಎಂಥ ಪ್ರತಿಭೆಗಳಿದ್ದಾರೆ ಎಂಬುದು ಆಶ್ಚರ್ಯ.!" ಎಂದು ಟ್ವೀಟ್ ಮಾಡಿದ್ದರು.ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಕರಾವಳಿ ಜಿಲ್ಲೆಗಳಲ್ಲಿ ವರ್ಷಕ್ಕೊಮ್ಮೆ  142ಮೀ. ಉದ್ದದ ಕೆಸರು ಗದ್ದೆಯಲ್ಲಿ ಕೋಣಗಳೊಂದಿಗೆ ಕಂಬಳ ಕ್ರೀಡೆ ನಡೆಯುತ್ತದೆ. ಎಂದಿನಂತೆ ತುಳುವ ಲ್ಯಾಂಡ್ಲಾರ್ಡ್ಸ್ ಹಾಗೂ ಇಲ್ಲಿನ ಸ್ಥಳೀಯರ ಪ್ರಾಯೋಜಕತ್ವದಲ್ಲಿ ನಡೆದಿತ್ತು.